ಎಂ.ಎಸ್. ಧೋನಿ ಅವರು ದೀಪಕ್ ಚಹರ್‌ಗೆ ಬೈದ ಪ್ರಸಂಗದ ಹಿಂದಿನ ಸ್ವಾರಸ್ಯಕರ ಸತ್ಯವನ್ನು ಇದೀಗ ಬಹಿರಂಗಪಡಿಸಿದ್ದಾರೆ. ಡೆತ್ ಓವರ್‌ಗಳಲ್ಲಿ 'ನಕುಲ್ ಬಾಲ್' ಹಾಕಬೇಡ ಎಂದು ಎಚ್ಚರಿಸಿದರೂ, ಚಹರ್ ಕೇಳದಿದ್ದಾಗ ತಾನು ಗರಂ ಆಗಿ ಕ್ಲಾಸ್ ತೆಗೆದುಕೊಂಡಿದ್ದೇಕೆ ಎಂಬುದನ್ನು ಧೋನಿ ವಿವರಿಸಿದ್ದಾರೆ.

ಟೀಮ್ ಇಂಡಿಯಾ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ (CSK) ಮಾಜಿ ನಾಯಕ ಎಂ.ಎಸ್. ಧೋನಿ (MS Dhoni) ಮೈದಾನದಲ್ಲಿ ಎಷ್ಟೇ 'ಕ್ಯಾಪ್ಟನ್ ಕೂಲ್' ಆಗಿದ್ದರೂ, ಸಂದರ್ಭ ಬಂದರೆ ಆಟಗಾರರಿಗೆ ತಮ್ಮದೇ ಶೈಲಿಯಲ್ಲಿ ಕ್ಲಾಸ್ ತೆಗೆದುಕೊಳ್ತಾರೆ ಅನ್ನೋು ಗೊತ್ತಿರುವ ವಿಚಾರ. ಇತ್ತೀಚೆಗೆ ವೇಗಿ ದೀಪಕ್ ಚಹರ್ (Deepak Chahar) ತಮ್ಮ ಸಂದರ್ಶನವೊಂದರಲ್ಲಿ ಧೋನಿಯಿಂದ ಬೈಗುಳ ತಿಂದ ಪ್ರಸಂಗವನ್ನು ನೆನಪಿಸಿಕೊಂಡಿದ್ದರು. ಇದೀಗ ಸ್ವತಃ ಧೋನಿಯವರೇ ಆ ಘಟನೆಯ ಹಿಂದಿನ ನೈಜ ಹಾಗೂ ಅತ್ಯಂತ ಸ್ವಾರಸ್ಯಕರ ಸತ್ಯವನ್ನು ಬಹಿರಂಗಪಡಿಸಿದ್ದಾರೆ. ಸ್ವತಃ ದೀಪಕ್ ಚಹರ್ ಈಗ ತನಗೆ ಬಿದ್ದ ಬೈಗುಳದ ಬಗ್ಗೆ ಮಾತಾಡಿದ್ದಾನೆ ಎಂದ ಮೇಲೆ ನಾನು ಕೂಡ ಈ ವಿಷಯವನ್ನು ಓಪನ್ ಆಗಿ ಹೇಳಲೇಬೇಕಿದೆ ಎಂದು ಧೋನಿ ತಮಾಷೆಯಾಗಿ ಮಾತು ಆರಂಭಿಸಿದ್ದಾರೆ.

ಡೆತ್ ಓವರ್ಸ್ ದೂರು ಮತ್ತು 'ನಕುಲ್ ಬಾಲ್' ಹಠ

ದೀಪಕ್ ಚಹರ್ ನಮ್ಮ ತಂಡಕ್ಕಾಗಿ ಅತ್ಯುತ್ತಮವಾಗಿ ಬೌಲಿಂಗ್ ಮಾಡಿದ್ದಾನೆ. ಆದರೆ ಆತನಿಗೆ ನನ್ನ ಮೇಲೆ ಸದಾ ಒಂದು ದೂರಿತ್ತು. 'ಮಾಹಿ ಭಾಯ್, ನೀವು ನನಗೆ ಡೆತ್ ಓವರ್‌ಗಳಲ್ಲಿ (ಕೊನೆಯ ಓವರ್‌ಗಳು) ಬೌಲಿಂಗ್ ಮಾಡಲು ಅವಕಾಶವೇ ಕೊಡುವುದಿಲ್ಲ' ಎಂದು ಕೇಳುತ್ತಿದ್ದ. ಅದಕ್ಕೆ ನಾನು 'ಆರಂಭಿಕ ಓವರ್‌ಗಳಲ್ಲೇ ನೀನು ವಿಕೆಟ್ ತೆಗೆದು ಚೆನ್ನಾಗಿ ಬೌಲಿಂಗ್ ಮಾಡುತ್ತಿರುವಾಗ, ಕೊನೆಯಲ್ಲಿ ಬೌಲಿಂಗ್ ಮಾಡುವ ಅಗತ್ಯವೇನಿದೆ?' ಎಂದು ತಿಳಿಹೇಳುತ್ತಿದ್ದೆ ಎಂದಿದ್ದಾರೆ.

"ಇನ್ನು ಆತನಿಗೆ ಹೊಸ ವಿಧದ ಬೌಲಿಂಗ್ ವೇರಿಯೇಷನ್ ಮಾಡುವುದೆಂದರೆ ವಿಪರೀತ ಕ್ರೇಜ್. ಜೊತೆಗೆ ಆತನಿಗೆ ಬೆವರು ಹರಿಯುವುದು ತುಂಬಾ ಜಾಸ್ತಿ. ಸುಮ್ಮನೆ ನಿಂತಿದ್ದರೂ ನೀರು ಸುರಿದಂತೆ ಬೆವರುತ್ತಾ ಇರುತ್ತಾನೆ. ಬೆವರುತ್ತಿರುವಾಗ ಕೈಯಲ್ಲಿ ಗ್ರಿಪ್ (ಫ್ರಿಕ್ಷನ್) ಸಿಗುವುದಿಲ್ಲ. ಹಾಗಾಗಿ 'ಬ್ರದರ್, ನಕುಲ್ ಬಾಲ್ (Knuckleball) ಹಾಕಬೇಡ, ಅದು ತುಂಬಾ ಕಷ್ಟದ ಎಸೆತ' ಎಂದು ಮೊದಲೇ ಎಚ್ಚರಿಕೆ ನೀಡುತ್ತಿದೆ ಎಂದು ಧೋನಿ ನೆನಪಿಸಿಕೊಂಡಿದ್ದಾರೆ.

ಬಿಸಿಲಿನಲ್ಲಿ ನಿಂತು ಗಡ್ಡ ನರೆತಿಲ್ಲಪ್ಪಾ!

ಧೋನಿ ಎಷ್ಟೇ ಬೇಡ ಎಂದರೂ ಚಹರ್ ಪಂದ್ಯದಲ್ಲಿ ನಕುಲ್ ಬಾಲ್ ಎಸೆದು ನೋ-ಬಾಲ್ ಮಾಡಿಕೊಂಡಿದ್ದರು. ಈ ಘಟನೆಯನ್ನು ನೆನಪಿಸಿಕೊಂಡ ಧೋನಿ, 'ಆತನಿಗೆ ಎಲ್ಲವೂ ಗೊತ್ತು ಎಂಬ ಭಾವನೆ. ನಾವಿಲ್ಲಿ ಇಷ್ಟೆಲ್ಲಾ ಅನುಭವ ಪಡೆದು ಗಡ್ಡ ಬಿಳಿ ಮಾಡಿಕೊಂಡಿದ್ದೇವೆ, ಆತನೇನೋ ಬಿಸಿಲಿನಲ್ಲಿ ನಿಂತು ಗಡ್ಡ ನರೆತಿದೆ ಎಂದುಕೊಂಡಿದ್ದಾನೆ. ನಾನು ಬೇಡ ಎಂದರೂ ಆತ ನಕುಲ್ ಬಾಲ್ ಎಸೆದು ಎಡವಟ್ಟು ಮಾಡಿದ. ತಕ್ಷಣ ನಾನು ಆತನ ಬಳಿ ಹೋಗಿದ್ದೆ' ಎಂದು ಧೋನಿ ವಿವರಿಸಿದ್ದಾರೆ.

'ವರ್ಣರಂಜಿತ' ಭಾಷೆಯಲ್ಲಿ ಕ್ಲಾಸ್!:

ಚಹರ್‌ಗೆ ಬುದ್ಧಿ ಕಲಿಸಿದ ಸಂದರ್ಭವನ್ನು ನೆನಪಿಸಿಕೊಂಡ ಧೋನಿ, "ನಾನು ಅಲ್ಲಿ ಬಳಸಿದ ನಿಖರವಾದ ಪದಗಳನ್ನು ಇಲ್ಲಿ ಹೇಳಲು ಸಾಧ್ಯವಿಲ್ಲ (ಸ್ವಲ್ಪ ಲೋಕಲ್ ಭಾಷೆ ಬಳಕೆಯಾಗಿತ್ತು!). ಆದರೆ ಸರಳವಾಗಿ ಒಂದು ಮಾತು ಹೇಳಿದೆ. ನೋಡು ದೀಪಕ್, 'ನಿನ್ನ ಬಾಣಲೆಯಲ್ಲಿರುವ ಎಲ್ಲಾ ಬಾಣಗಳನ್ನು (Variations) ನನಗೆ ತೋರಿಸುವ ಅಗತ್ಯವಿಲ್ಲ. ನಿನ್ನ ಹತ್ತಿರ ಏನೇನು ತಂತ್ರಗಳಿವೆ ಎಂದು ನನಗೆ ಚೆನ್ನಾಗಿ ಗೊತ್ತು. ವಾತಾವರಣ ಮತ್ತು ಪಂದ್ಯದ ಪರಿಸ್ಥಿತಿಗೆ ತಕ್ಕಂತೆ ಬೌಲಿಂಗ್ ಮಾಡು. ತಂಡಕ್ಕೆ ಏನು ಬೇಕೋ ಅದನ್ನು ಎಸೆ. ನಿನ್ನ ಬಾಣಗಳನ್ನು ಯಾವಾಗ ಎಸೆಯಬೇಕು ಎಂಬುದು ನನಗೆ ಗೊತ್ತು' ಎಂದು ಗರಂ ಆಗಿಯೇ ಹೇಳಿದ್ದೆ" ಎಂದಿದ್ದಾರೆ.

ಕೊನೆಯಲ್ಲಿ ಧೋನಿ ನಗುತ್ತಲೇ, "ಆ ದಿನ ನಾನು ಚಹರ್‌ಗೆ 'ನೀನು ತಪ್ಪು ಮಾಡಿಲ್ಲಪ್ಪಾ, ನಿನ್ನಿಂದ ಏನನ್ನೋ ನಿರೀಕ್ಷೆ ಮಾಡುತ್ತಿರುವುದೇ ನನ್ನ ತಪ್ಪು' ಎಂದು ಹೇಳಿದ್ದು ಹೌದು, ಅದು ಸತ್ಯ ಕೂಡ!" ಎಂದು ಹೇಳುವ ಮೂಲಕ ಮಾತು ಮುಗಿಸಿದ್ದಾರೆ.

ವಿಶೇಷವೆಂದರೆ, ಧೋನಿಯಿಂದ ಬೈಗುಳ ತಿಂದರೂ ದೀಪಕ್ ಚಹರ್ ಸೇರಿದಂತೆ ಅನೇಕ ಆಟಗಾರರು 'ಮಾಹಿ ಭಾಯ್ ಬೈದರೆ ನಮಗೆ ಬೇಸರವಾಗುವುದಿಲ್ಲ, ಬದಲಿಗೆ ಖುಷಿಯಾಗುತ್ತದೆ' ಎಂದು ಧನ್ಯತೆ ವ್ಯಕ್ತಪಡಿಸುವುದು ಧೋನಿಯ ನಾಯಕತ್ವದ ಶಕ್ತಿಗೆ ಹಿಡಿದ ಕನ್ನಡಿಯಾಗಿದೆ.

ಯಾವ ಪಂದ್ಯ ಇದು: 2019ರ ಐಪಿಎಲ್‌ನಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ಹಾಗೂ ಪಂಜಾಬ್‌ ಕಿಂಗ್ಸ್‌ ನಡುವಿನ ಪಂದ್ಯದ ವೇಳೆ ಈ ಘಟನೆ ನಡೆದಿತ್ತು. ಚೆನ್ನೈ ಈ ಪಂದ್ಯದಲ್ಲಿ 160 ರನ್‌ ಅನ್ನು ಯಶಸ್ವಿಯಾಗಿ ರಕ್ಷಣೆ ಮಾಡಿಕೊಂಡಿತ್ತು.