ಏಷ್ಯನ್ ಗೇಮ್ಸ್ ಮಹಿಳಾ ಕ್ರಿಕೆಟ್‌ನಲ್ಲಿ ಮಳೆಯಿಂದಾಗಿ ಚೀನಾ ಒಂದು ಎಸೆತವನ್ನೂ ಕಾಣದೆ ಟೂರ್ನಿಯಿಂದ ಹೊರಬಿದ್ದಿದ್ದು, ಪಾಕಿಸ್ತಾನ ರೋಚಕ ಜಯ ಸಾಧಿಸಿದೆ. ಮುಂಬರುವ ಭಾರತ-ಜಪಾನ್ ಪಂದ್ಯಕ್ಕಾಗಿ ಶ್ರೀಲಂಕಾದ ಮಣ್ಣು ಬಳಸಿ ವಿಶೇಷ ಪಿಚ್ ನಿರ್ಮಿಸಲಾಗುತ್ತಿದೆ.
ನಗೋಯ: 12 ವರ್ಷಗಳ ಬಳಿಕ ಏಷ್ಯನ್ ಗೇಮ್ಸ್ ಮಹಿಳಾ ಕ್ರಿಕೆಟ್‌ಗೆ ಕಂಬ್ಯಾಕ್ ಮಾಡಿದ್ದ ಚೀನಾ, ಒಂದು ಬಾಲ್ ಕೂಡ ಎಸೆಯದೆ ಟೂರ್ನಿಯಿಂದ ಹೊರಬಿದ್ದಿದೆ! ಮಳೆಯಿಂದಾಗಿ ಓವರ್ ಕಡಿತಗೊಂಡಿದ್ದ ಮತ್ತೊಂದು ರೋಚಕ ಪಂದ್ಯದಲ್ಲಿ ಪಾಕಿಸ್ತಾನ ಸೋಲಿನ ಸುಳಿಯಿಂದ ಕೂದಲೆಳೆ ಅಂತರದಲ್ಲಿ ಪಾರಾಗಿದೆ.
ಹವಾಮಾನ ಕೊಂಚ ಸುಧಾರಿಸಿದರೂ, ಕಳೆದ ಕೆಲವು ದಿನಗಳಿಂದ ಸುರಿದ ಮಳೆಗೆ ಕೊರೋಗಿ ಅಥ್ಲೆಟಿಕ್ ಪಾರ್ಕ್‌ನ ಔಟ್‌ಫೀಲ್ಡ್ ಒದ್ದೆಯಾಗಿತ್ತು. ಹೀಗಾಗಿ ಚೀನಾ ಮತ್ತು ಬಾಂಗ್ಲಾದೇಶ ನಡುವಿನ ಪಂದ್ಯವನ್ನು ರದ್ದುಗೊಳಿಸಲಾಯಿತು. ಏಷ್ಯನ್ ಗೇಮ್ಸ್ ನಿಯಮಗಳ ಪ್ರಕಾರ, ಉತ್ತಮ ಶ್ರೇಯಾಂಕ ಹೊಂದಿರುವ ಬಾಂಗ್ಲಾದೇಶ ನೇರವಾಗಿ ಸೆಮಿಫೈನಲ್‌ಗೆ ಎಂಟ್ರಿ ಕೊಟ್ಟಿದೆ. ಸೆಮಿಸ್‌ನಲ್ಲಿ ಬಾಂಗ್ಲಾ ತಂಡ ಪಾಕಿಸ್ತಾನವನ್ನು ಎದುರಿಸಲಿದೆ.
ಪಾಕಿಸ್ತಾನ ಮತ್ತು ಥಾಯ್ಲೆಂಡ್ ನಡುವಿನ ಪಂದ್ಯಕ್ಕೂ ಮಳೆ ಅಡ್ಡಿಯಾಗಿತ್ತು. ಹೀಗಾಗಿ ಪಂದ್ಯವನ್ನು 11 ಓವರ್‌ಗಳಿಗೆ ಇಳಿಸಲಾಯಿತು. ಮೊದಲು ಬ್ಯಾಟ್ ಮಾಡಿದ ಥಾಯ್ಲೆಂಡ್ 4 ವಿಕೆಟ್ ನಷ್ಟಕ್ಕೆ 91 ರನ್ ಕಲೆಹಾಕಿತು. ವಿಕೆಟ್ ಕೀಪರ್-ಬ್ಯಾಟರ್ ನನ್ನಪತ್ ಕೊಂಚರೋಯಿನ್ಕೆ ಬಾರಿಸಿದ 49 ರನ್‌ಗಳ ನೆರವಿನಿಂದ ಥಾಯ್ಲೆಂಡ್ ಸವಾಲಿನ ಮೊತ್ತ ಪೇರಿಸಿತು. 92 ರನ್‌ಗಳ ಟಾರ್ಗೆಟ್ ಬೆನ್ನತ್ತಿದ ಪಾಕಿಸ್ತಾನ ಅಕ್ಷರಶಃ ನಡುಗಿಹೋಯ್ತು. ಕೇವಲ 2 ಎಸೆತಗಳು ಬಾಕಿ ಇರುವಾಗ 7 ವಿಕೆಟ್ ಕಳೆದುಕೊಂಡು ಪಾಕಿಸ್ತಾನ ಪ್ರಯಾಸದ ಗೆಲುವು ದಾಖಲಿಸಿತು.
ಭಾರತ-ಜಪಾನ್ ನಡುವಿನ ಪಂದ್ಯಕ್ಕೆ ಕ್ಷಣಗಣನೆ:
ಶುಕ್ರವಾರ ನಡೆಯಲಿರುವ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಭಾರತ ತಂಡ ಜಪಾನ್ ವಿರುದ್ಧ ಕಣಕ್ಕಿಳಿಯಲಿದೆ. ಶ್ರೀಲಂಕಾ ಮತ್ತು ಮಲೇಷ್ಯಾ ನಡುವಿನ ಕ್ವಾರ್ಟರ್ ಫೈನಲ್ ಕೂಡ ಶುಕ್ರವಾರವೇ ನಡೆಯಲಿದೆ. ಶನಿವಾರ ಏಷ್ಯನ್ ಗೇಮ್ಸ್‌ಗೆ ಅಧಿಕೃತ ಚಾಲನೆ ಸಿಗಲಿದೆ.
ಪುರುಷರ ಕ್ರಿಕೆಟ್‌ನ ಪ್ರಾಥಮಿಕ ಸುತ್ತಿನ ಪಂದ್ಯಗಳು ಮುಂದಿನ ಗುರುವಾರದಿಂದ ಶುರುವಾಗಲಿವೆ. ಭಾರತ, ಶ್ರೀಲಂಕಾ, ಬಾಂಗ್ಲಾದೇಶ ಮತ್ತು ಪಾಕಿಸ್ತಾನ ತಂಡಗಳು ನೇರವಾಗಿ ಕ್ವಾರ್ಟರ್ ಫೈನಲ್ ಆಡಲಿವೆ. ಸದ್ಯ ಪ್ರತಿಕೂಲ ಹವಾಮಾನ ಏಷ್ಯನ್ ಗೇಮ್ಸ್‌ಗೆ ದೊಡ್ಡ ತಲೆನೋವಾಗಿದೆ. ಇಲ್ಲಿ ಒಂದು ವಾರದ ಹಿಂದೆ ಸುರಿದ ಭಾರಿ ಮಳೆಗೆ ನೀರು ನುಗ್ಗಿದ್ದು, ಗೇಮ್ಸ್‌ಗೆ ಬಂದಿದ್ದ ಕ್ರೀಡಾಪಟುಗಳನ್ನು ಬೇರೆಡೆಗೆ ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ.
ಭಾರತ-ಜಪಾನ್ ಟಿ20ಗೆ ಲಂಕಾ ಮಣ್ಣು, ಸಿಬ್ಬಂದಿ ಬಳಸಿ ಪಿಚ್ ನಿರ್ಮಾಣ
ಸಾನೊ(ಜಪಾನ್): ಭಾರತ ಹಾಗೂ ಜಪಾನ್ ನಡುವಿನ ರಾಜತಾಂತ್ರಿಕ ಸಂಬಂಧಕ್ಕೆ 75 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಸೆ.22ರಂದು ಉಭಯ ದೇಶಗಳ ತಂಡಗಳ ನಡುವೆ ಸಾನೊ ಕ್ರಿಕೆಟ್ ಮೈದಾನದಲ್ಲಿ ಟಿ20 ಪಂದ್ಯ ನಡೆಯಲಿದೆ. ಈ ಪಂದ್ಯಕ್ಕಾಗಿ ಶ್ರೀಲಂಕಾದ ಮಣ್ಣು ಹಾಗೂ ಅಲ್ಲಿನ ಮೈದಾನ ಸಿಬ್ಬಂದಿಯನ್ನು ಬಳಸಲಾಗುತ್ತದೆ. ಈಗಾಗಲೇ ಲಂಕಾ ಕ್ರಿಕೆಟ್ ಮಂಡಳಿಯು ಮೈದಾನ ಸಿಬ್ಬಂದಿ ಹಾಗೂ ಜೇಡಿ ಮಣ್ಣನ್ನು ಜಪಾನ್‌ಗೆ ಕಳುಹಿಸಿಕೊಟ್ಟಿದೆ.
ಈ ಬಗ್ಗೆ ಮಾತನಾಡಿರುವ ಜಪಾನ್ ಕ್ರಿಕೆಟ್ ಸಂಸ್ಥೆ(ಜೆಸಿಎ) ಸಿಇಒ ನವೋಕಿ ಅಲೆಕ್ಸ್ ಮಿಯಾಜಿ, ‘ಸಾನೊ ಮೈದಾನದಲ್ಲಿ ಹೊಸ ಪಿಚ್‌ಗಳನ್ನು ತಯಾರಿಸಲು ನಿರ್ಧರಿಸಿದ್ದೆವು. ಏಷ್ಯನ್ ಗೇಮ್ಸ್ ನಡೆಯುವ ಐಚಿಯಲ್ಲೂ ಇದೇ ರೀತಿ ಪಿಚ್ ತಯಾರಿಸುತ್ತೇವೆ. ಒಂದೇ ರೀತಿಯ ಮಣ್ಣಿನಿಂದ ಒಂದೇ ರೀತಿ ಪಿಚ್ ಬಳಸುವುದರಿಂದ, ಏಷ್ಯನ್ ಗೇಮ್ಸ್‌ನಲ್ಲಿ ಪಾಲ್ಗೊಳ್ಳುವ ತಂಡಗಳಿಗೆ ಸಾನೊ ನಗರದಲ್ಲೂ ಅಭ್ಯಾಸ ನಡೆಸಲು ಸಾಧ್ಯವಾಗುತ್ತದೆ’ ಎಂದಿದ್ದಾರೆ.


