ಬಾಲಿವುಡ್ ನಟಿ ಭೂಮಿ ಪೆಡ್ನೇಕರ್ ಮತ್ತೊಮ್ಮೆ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್‌ಗೆ ಗುರಿಯಾಗಿದ್ದಾರೆ. ಈ ಬಾರಿ ಅವರು ಶಿವಲಿಂಗಕ್ಕೆ ಜಲಾಭಿಷೇಕ ಮಾಡುವ ವೇಳೆ ಧರಿಸಿದ್ದ ಕನ್ನಡಕ ಹಾಗೂ ಡ್ರೆಸ್ ಮಾಡಿರುವ ರೀತಿ ವಿವಾದಕ್ಕೆ ಕಾರಣವಾಗಿದೆ. ಈ ವಿಡಿಯೋ ವೈರಲ್ ಆದ ಬಳಿಕ ಹಲವರು ನಟಿಯ ನಡೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಸೋಶಿಯಲ್ ಮೀಡೀಯಾದಲ್ಲಿ ಮತ್ತೆ ಟ್ರೋಲ್ ಆದ ಭೂಮಿ ಪೆಡ್ನೇಕರ್
ಪವಿತ್ರ ಶ್ರಾವಣ ಮಾಸದಲ್ಲಿ ಶಿವಲಿಂಗಕ್ಕೆ ಪ್ರಾರ್ಥನೆ ಸಲ್ಲಿಸುವ ವೀಡಿಯೊವನ್ನು ಹಂಚಿಕೊಂಡ ನಂತರ ಬಾಲಿವುಡ್ ನಟಿ ಭೂಮಿ ಪೆಡ್ನೇಕರ್ ಸಾಮಾಜಿಕ ಮಾಧ್ಯಮದಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದ್ದಾರೆ. "ದಮ್ ಲಗಾ ಕೆ ಹೈಶಾ" ಚಿತ್ರದ ಮೂಲಕ ಬಾಲಿವುಡ್ ಗೆ ಎಂಟ್ರಿ ಕೊಟ್ಟ ನಟಿ ಭೂಮಿ ಪೆಡ್ನೇಕರ್, "ಬಾಲಾ", "ಶುಭ್ ಮಂಗಲ್ ಸಾವಧಾನ್" ಮತ್ತು "ಭುಜ್" ನಂತಹ ಚಿತ್ರಗಳಲ್ಲಿನ ನಟಿ ತಮ್ಮ ನೈಜ್ಯ ಅಭಿನಯದಿಂದ ಜನ ಮನ ಗೆದ್ದಿದ್ದರು. ಸ್ಕ್ರೀನ್ ಮೇಲೆ ಹೆಚ್ಚಾಗಿ ಸ್ಟ್ರಾಂಗ್ ಪಾತ್ರಗಳಲ್ಲಿ ನಟಿಸುವ ಭೂಮಿ ತಮ್ಮ ಜೀವನದ ಸಣ್ಣ ಮತ್ತು ದೊಡ್ಡ ಕ್ಷಣಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಾರೆ. ಜಿಮ್ ವೀಡಿಯೊಗಳಾಗಲಿ ಅಥವಾ ಅವರ ಕುಟುಂಬದೊಂದಿಗೆ ಫೋಟೋಗಳಾಗಲಿ, ಭೂಮಿ ಎಲ್ಲವನ್ನೂ ಬಹಿರಂಗವಾಗಿ ಪೋಸ್ಟ್ ಮಾಡುತ್ತಾರೆ.
ಶ್ರಾವಣ ಮಾಸದಲ್ಲಿ ಶಿವನನ್ನು ಪೂಜಿಸುತ್ತಿರುವ ಭೂಮಿ ಪೆಡ್ನೇಕರ್
ಇದೀಗ ಭೂಮಿ ಪೆಡ್ನೇಕರ್ ಅವರು ಇನ್ಸ್ಟಾಗ್ರಾಮ್ ನಲ್ಲಿ ಶಿವನನ್ನು ಪೂಜಿಸುತ್ತಿರುವ ಫೋಟೋಗಳು ಮತ್ತು ವೀಡಿಯೊವನ್ನು ಹಂಚಿಕೊಂಡಿದ್ದಾರೆ. ವೀಡಿಯೊದಲ್ಲಿ, ಭೂಮಿ ಶಿವಲಿಂಗಕ್ಕೆ ನೀರು ಅರ್ಪಿಸುತ್ತಿರುವುದು ಕಂಡುಬಂದಿದೆ. ಅವರು ಪೋಸ್ಟ್ ಗೆ "ಶ್ರಾವಣ ಪ್ರಾರಂಭವಾಗುತ್ತಿದ್ದಂತೆ, ನಾನು ಆರಾಮ ಜೀವನಕ್ಕಾಗಿ ಅಲ್ಲ, ಜೀವನವನ್ನು ಅತ್ಯುತ್ತಮವಾಗಿ ಬದುಕಲು ಶಕ್ತಿ ಕೊಡು ಎಂದು ಪ್ರಾರ್ಥಿಸುತ್ತೇನೆ. ಹರ್ ಹರ್ ಮಹಾದೇವ್" ಎಂದು ಶೀರ್ಷಿಕೆ ನೀಡಿದ್ದಾರೆ.
ಆದರೆ ಭೂಮಿ ಸೋಶಿಯಲ್ ಮೀಡಿಯಾದಲ್ಲಿ ಫೋಟೊ ಪೋಸ್ಟ್ ಮಾಡಿದ ನಂತರ ಸಿಕ್ಕಾಪಟ್ಟೆ ಟ್ರೋಲ್ ಗೆ ಒಳಗಾಗಿದ್ದಾರೆ. ಅದಕ್ಕೆ ಕಾರಣ, ಭೂಮಿ ಧರಿಸಿದ್ದ ಡ್ರೆಸ್, ಹಾಕಿಕೊಂಡಿದ್ದ ಕನ್ನಡಕ. ಭೂಮಿ ಶಿವನಿಗೆ ಅಭಿಷೇಕ ಮಾಡುವ ಸಮಯದಲ್ಲಿ ಟೈಟ್ ಆಗಿರುವ ಜೀನ್ಸ್, ಟೀ ಶರ್ಟ್ ಧರಿಸಿದ್ದರು, ಜೊತೆಗೆ ಸನ್ ಗ್ಲಾಸ್ ಕೂಡ ಧರಿಸಿದ್ದರು. ಪೂಜೆಯ ಸಮಯದಲ್ಲೂ ಅವರು ಕನ್ನಡಕ ಧರಿಸಿದ್ದನ್ನು ಗಮನಿಸಿದ ಕೆಲ ನೆಟ್ಟಿಗರು, "ದೇವರ ಮುಂದೆ ಕನ್ನಡಕ ತೆಗೆದು ಗೌರವ ತೋರಬೇಕಿತ್ತು" ಎಂದು ಟೀಕಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಹಲವರು ಈ ವಿಡಿಯೋಗೆ ಪ್ರತಿಕ್ರಿಯೆ ನೀಡಿದ್ದು, "ಪೂಜೆ ಕೂಡ ಪ್ರದರ್ಶನಕ್ಕಾಗಿ ಮಾಡುತ್ತಿದ್ದಾರಾ?", "ಭಕ್ತಿಗಿಂತ ಫ್ಯಾಷನ್‌ಗೆ ಹೆಚ್ಚು ಆದ್ಯತೆ ಕೊಟ್ಟಿದ್ದಾರೆ" ಎಂಬ ರೀತಿಯ ಕಾಮೆಂಟ್‌ಗಳು ಹರಿದಾಡುತ್ತಿವೆ. ಇನ್ನೂ ಕೆಲವರು, ವ್ಯಕ್ತಿಯ ಉಡುಗೆ ಅಥವಾ ಕನ್ನಡಕ ಧರಿಸಿರುವುದರ ಆಧಾರದಲ್ಲಿ ಅವರ ಭಕ್ತಿಯನ್ನು ಅಳೆಯಬಾರದು ಎಂದು ನಟಿಯ ಪರವಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಭೂಮಿ ಪೆಡ್ನೇಕರ್ ಇದುವರೆಗೆ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ. ಆದರೆ ವಿಡಿಯೋ ಮಾತ್ರ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿದೆ.


