ಮಾರುತಿ ಸುಜುಕಿ ಬ್ರೆಜಾ ಫೇಸ್‌ಲಿಫ್ಟ್ ಕಾರು ಇತ್ತೀಚೆಗೆ ಬಿಡುಗಡೆಯಾಗಿದೆ. ಕೇವಲ 7.39 ಲಕ್ಷ ರೂಪಾಯಿಗೆ ಲಾಂಚ್ ಆದ ಈ ಕಾರು 6 ವಾರದಲ್ಲಿ 60 ಸಾವಿರ ಬುಕಿಂಗ್ ಪಡೆದು ದಾಖಲೆ ಬರೆದಿದೆ. ಈ ಕಾರಿನಲ್ಲಿ ಅಂತಾದ್ದೇನಿದೆ?

ನವದೆಹಲಿ (ಸೆ.07) ಮಾರುತಿ ಸುಜುಕಿ ಬ್ರೆಜಾ ಫೇಸ್‌ಲಿಫ್ಟ್ ಕಾರು ಹೊಸ ದಾಖಲೆ ಬರೆದಿದೆ. ಕೈಗೆಟುಕುವ ಬೆಲೆಯಲ್ಲಿ ಬಿಡುಗಡೆಯಾದ ಮಾರುತಿ ಸುಜುಕಿ ಬ್ರೆಜಾ ಇದೀಗ 6 ವಾರಗಳಲ್ಲಿ 60 ಸಾವಿರ ಬುಕಿಂಗ್ ಕಂಡಿದೆ. ಪ್ರತಿ ದಿನ 2000ಕ್ಕೂ ಅಧಿಕ ಬುಕಿಂಗ್ ಕಾಣುವ ಮೂಲಕ ಹೊಸ ಇತಿಹಾಸ ರಚಿಸಿದೆ. ಜುಲೈ 24ರಂದು ಹೊಸ ಬ್ರೆಜಾ ಫೇಸ್‌ಲಿಫ್ಟ್ ಕಾರು ಲಾಂಚ್ ಆಗಿತ್ತು. 1.0 ಲೀಟರ್ ಎಂಜಿನ್ ಮೂಲಕ ಮತ್ತಷ್ಟು ಕಡಿಮೆ ಬೆಲೆಯಲ್ಲಿ ಹೊಸ ಕಾರು ಮಾರುಕಟ್ಟೆ ಪ್ರವೇಶಿಸಿತ್ತು. ಸುರಕ್ಷತೆಯಲ್ಲೂ ಗಣನೀಯ ಸುಧಾರಣೆ ಮೂಲಕ ಬ್ರೆಜಾ ಇದೀಗ ಬೇಡಿಕೆ ಹೆಚ್ಚಿಸಿಕೊಳ್ಳುತ್ತಿದೆ.

7.39 ಲಕ್ಷ ರೂ ಆರಂಭಿಕ ಬೆಲೆ

ಹೊಸ ಮಾರುತಿ ಬ್ರೆಜಾ ಫೇಸ್‌ಲಿಫ್ಟ್ 1.0 ಲೀಟರ್ ಎಂಜಿನ್ ಹೊಂದಿದೆ. ಹೀಗಾಗಿ ಮಾರುಕಟ್ಟೆಯಲ್ಲಿದ್ದ ಬ್ರೆಜಾ ಕಾರಿಗಿಂತ ಬ್ರೇಜಾ ಫೇಸ್‌ಲಿಫ್ಟ್ ಅಗ್ಗವಾಗಿದೆ. ಕವಲ 7.39 ಲಕ್ಷ ರೂಪಾಯಿ (ಎಕ್ಸ್ ಶೋ ರೂಂ) ಬೆಲೆಯಿಂದ ಆರಂಭಗೊಳ್ಳುತ್ತಿದೆ. ಈ ಸೆಗ್ಮೆಂಟ್ ಪೈಕಿ ಕೈಗೆಟುಕುವ ದರದಲ್ಲಿ ಲಭ್ಯವಿರುವ ಕಾರು ಇದಾಗಿದೆ.

ಆಗಸ್ಟ್ ತಿಂಗಳಲ್ಲಿ 17 ಸಾವಿರ ಮಾರುತಿ ಸುಜುಕಿ ಬ್ರೆಜಾ ಕಾರು ಮಾರಾಟವಾಗಿದೆ. ಇದೀಗ ಬ್ರೆಜಾ ಫೇಸ್‌ಲಿಫ್ಟ್ ಸಬ್ ಕಾಂಪಾಕ್ಟ್ ಎಸ್‌ಯುವಿ ಕಾರಿನ ಬೇಡಿಕೆ ಹೆಚ್ಚಿಸುವಂತೆ ಮಾಡಿದೆ. 1.0 ಲೀಟರ್ ಎಂಜಿನ್ 109 hp ಪವರ್ ಹಾಗೂ 170 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಇನ್ನು 1.5 ಲೀಟರ್ K15C ಪೆಟ್ರೋಲ್ ಎಂಜಿನ್ ಆಯ್ಕೆ ಕೂಡ ಲಭ್ಯವಿದೆ. ಈ ಕಾರು 102 hp ಪವರ್ ಹಾಗೂ 139 Nm ಪೀಕ್ ಟಾರ್ಕ್ ಸಾಮರ್ಥ್ಯ ಹೊಂದಿದೆ. ಸಿಎನ್‌ಜಿ ವೇರಿಯೆಂಟ್ ಕಾರು 87 hp ಪವರ್ ಹಾಗೂ 121.5 Nm ಪೀಕ್ ಟಾರ್ಕ್ ಸಾಮರ್ಥ್ಯ ಹೊಂದಿದೆ.

21 ಕಿಲೋಮೀಟರ್ ಮೈಲೇಜ್

ಎಸ್‌ಯುವಿ ಕಾರೊಂದು 21 ಕಿಲೋಮೀಟರ್ ಮೈಲೇಜ್ ನೀಡುತ್ತಿದೆ. ಹೌದು ಬ್ರೇಜಾ ಫೇಸ್‌ಲಿಫ್ಟ್ ಆಟೋಮ್ಯಾಟಿಕ್ ಕಾರು ಒಂದು ಲೀಟರ್ ಪೆಟ್ರೋಲ್‌ಗೆ 21 ಕಿ.ಮೀ ಮೈಲೇಜ್ ನೀಡಲಿದೆ ಎಂದು ಕಂಪನಿ ಹೇಳಿದೆ. ಇನ್ನು ಮ್ಯಾನ್ಯುಯೆಲ್ ಕಾರು 20.47 ಕಿಲೋಮೀಟರ್ ಮೈಲೇಜ್ ನೀಡಲಿದೆ. ಸಿಎನ್‌ಜಿ ವೇರಿಯೆಂಟ್ ಕಾರು 26.9 ಕಿಲೋಮೀಟರ್ ಮೈಲೇಜ್ ನೀಡಲಿದೆ.

ಫೇಸ್‌ಲಿಫ್ಟ್ ಕಾರಿನ ಮುಂಭಾಗದ ಗ್ರಿಲ್ ಸೇರಿದಂತೆ ವಿನ್ಯಾಸದಲ್ಲಿ ಕೆಲ ಬದಲಾವಣೆ ಮಾಡಲಾಗಿದೆ. ಹೀಗಾಗಿ ಈ ಕಾರು ಹೆಚ್ಚು ಸ್ಪೋರ್ಟೀವ್ ಆಗಿ ಕಾಣಿಸುತ್ತಿದೆ. ಗ್ರಿಲ್, ಬುಲ್‌ಬಾರ್, ಸ್ಕಿಡ್ ಪ್ಲೇಟ್, ಸೈಡ್ ಕ್ಲಾಡಿಂಗ್, ಆಲೋಯ್ ವೀಲ್ ಸೇರಿದಂತೆ ಕೆಲ ಪ್ರಮುಖ ಬದಲಾವಣೆಗಳಿಂದ ಸ್ಟೈಲೀಶ್ ಲುಕ್ ಹೆಚ್ಚಾಗಿದೆ. ವೆಂಟಿಲೇಟೆಡ್ ಫ್ರಂಟ್ ಸೀಟ್, ವೈಯರ್‌ಲೆಸ್ ಚಾರ್ಜರ್, ಸ್ಮಾರ್ಟ್ ಪ್ಲೇ ಪ್ರೋ ಇನ್‌ಫೊಟೈನ್ಮೆಂಟ್ ಸಿಸ್ಟಮ್, 360 ಡಿಗ್ರಿ ಕ್ಯಾಮೆರಾ, ಕನೆಕ್ಟೆಡ್ ಫೀಚರ್ಸ್ ಸೇರಿದಂತೆ ಹಲವು ಸೌಲಭ್ಯಗಳು ಇದರಲ್ಲಿದೆ.

6 ಏರ್‌ಬ್ಯಾಗ್, ಹಿಲ್ ಹೋಲ್ಡ್ ಅಸಿಸ್ಟ್, ಫ್ರಂಟ್ ಹಾಗೂ ರೇರ್ ಪಾರ್ಕಿಂಗ್ ಸೆನ್ಸರ್, ಬ್ಲೈಂಡ್ ವೀವ್ ಮಾನಿಟರಿಂಗ್, ರೇರ್ ಕ್ರಾಸಿ ಟ್ರಾಫಿಕ್ ಅಲರ್ಟ್ ಸೇರಿದಂತೆ ಹಲವು ಸುರಕ್ಷತಾ ಫೀಚರ್ಸ್ ಈ ಕಾರಿನಲ್ಲಿದೆ. ಫೀಚರ್, ಬೆಲೆ, ಲುಕ್ ಸೇರಿದಂತೆ ಹಲವು ಕಾರಣಗಳಿಂದ ಬ್ರೇಜಾ ಫೇಸ್‌‌ಲಿಫ್ಟ್ ಇದೀಗ ಬುಕಿಂಗ್ ಹೆಚ್ಚಿಸಿಕೊಳ್ಳುತ್ತಿದೆ.