ಕರ್ನಾಟಕದ ಸಣ್ಣ ಹಳ್ಳಿಯಿಂದ ಬಂದು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ ಕ್ಯಾಪ್ಟನ್ ಜಿ.ಆರ್. ಗೋಪಿನಾಥ್, 'ಏರ್ ಡೆಕ್ಕನ್' ಎಂಬ ಕಡಿಮೆ ವೆಚ್ಚದ ವಿಮಾನಯಾನ ಸಂಸ್ಥೆಯನ್ನು ಸ್ಥಾಪಿಸಿದರು. ಈ ಮೂಲಕ ಅವರು ಸಾಮಾನ್ಯ ಜನರಿಗೂ ವಿಮಾನ ಪ್ರಯಾಣದ ಕನಸನ್ನು ನನಸಾಗಿಸಿ, ಭಾರತದ ವಾಯುಯಾನ ಕ್ಷೇತ್ರದಲ್ಲಿ ಒಂದು ದೊಡ್ಡ ಕ್ರಾಂತಿಯನ್ನೇ ಮಾಡಿದರು.

ಬಾಲಿವುಡ್‌ನ "ಸರ್ಫಿರಾ" ಚಲನಚಿತ್ರವು ಸಣ್ಣ ಪಟ್ಟಣದ ಕನಸುಗಾರನೊಬ್ಬ ಉದ್ಯಮಶೀಲತೆಯಲ್ಲಿ ಯಶಸ್ಸು ಸಾಧಿಸಲು ಎದುರಿಸಿದ ಅಡೆತಡೆಗಳ ಕಥೆಯೊಂದಿಗೆ ಪ್ರೇಕ್ಷಕರನ್ನು ಆಕರ್ಷಿಸಿತು. ಈ ಸಿನಿಮೀಯ ಪ್ರಯಾಣವು ಭಾರತದ ಮೊದಲ ಕಡಿಮೆ ವೆಚ್ಚದ ವಿಮಾನಯಾನ ಸಂಸ್ಥೆಯಾದ ‘ಏರ್ ಡೆಕ್ಕನ್’ ಸ್ಥಾಪಕ ಕ್ಯಾಪ್ಟನ್ ಜಿ.ಆರ್. ಗೋಪಿನಾಥ್ ಅವರ ನೈಜ ಜೀವನವನ್ನು ಆಧರಿಸಿದೆ. ಕರ್ನಾಟಕದ ದೂರದ ಹಳ್ಳಿಯ ಯುವಕನೊಬ್ಬ ಭಾರತೀಯ ವಾಯುಯಾನ ಕ್ಷೇತ್ರದಲ್ಲಿ ಕ್ರಾಂತಿಯನ್ನುಂಟುಮಾಡಿ, ಸಾಮಾನ್ಯ ಜನರಿಗೂ ವಿಮಾನ ಪ್ರಯಾಣವನ್ನು ಕೈಗೆಟುಕುವಂತೆ ಮಾಡಿದ ಕಥೆ ಕೇವಲ ಉದ್ಯಮಕ್ಕೆ ಸೀಮಿತವಾಗಿರದೆ. ದೃಢ ನಿರ್ಣಯ, ಹೊಸ ಚಿಂತನೆ ಮತ್ತು ದೃಷ್ಟಿಕೋನದ ನಿರೂಪಣೆಯಾಗಿದೆ. ಇವರು ಭಾರತೀಯ ಮಾಜಿ ಸೈನಿಕ, ಉದ್ಯಮಿ, ರಾಜಕಾರಣಿಯೂ ಹೌದು.

ಭಾರತೀಯ ಸೇನೆಯ ಕ್ಯಾಪ್ಟನ್

ಗೊರೂರು ರಾಮಸ್ವಾಮಿ ಅಯ್ಯಂಗಾರ್ ಗೋಪಿನಾಥ್ (ಕ್ಯಾಪ್ಟನ್ ಜಿ.ಆರ್. ಗೋಪಿನಾಥ್) ಅವರು 1951 ರ ನವೆಂಬರ್ 13 ರಂದು ಮೇಲುಕೋಟೆಯಲ್ಲಿ ತಮಿಳು ಹಿಂದೂ ಕುಟುಂಬದಲ್ಲಿ ಜನಿಸಿದರು. ಇವರು ಕರ್ನಾಟಕ ರಾಜ್ಯದ ಹಾಸನ ಜಿಲ್ಲೆಯ ಗೊರೂರು ಎಂಬ ಸಣ್ಣ ಹಳ್ಳಿಯಲ್ಲಿ ಬೆಳೆದರು. ಇವರ ತಂದೆ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರು ಶಾಲಾ ಶಿಕ್ಷಕರಾಗಿದ್ದರು. ಶಾಲಾ ವ್ಯವಸ್ಥೆಯು ಮಕ್ಕಳನ್ನು ಕಟ್ಟುಪಾಡುಗೊಳಿಸುತ್ತದೆ ಎಂದು ನಂಬಿದ್ದ ಇವರ ತಂದೆ, ಗೋಪಿನಾಥ್ ಅವರಿಗೆ ಆರಂಭದಲ್ಲಿ ಮನೆಯಲ್ಲಿಯೇ ಶಿಕ್ಷಣ ನೀಡಲು ನಿರ್ಧರಿಸಿದರು.

ಗ್ರಾಮೀಣ ವಾತಾವರಣದಲ್ಲಿ ಬೆಳೆದ ಗೋಪಿನಾಥ್, ಸಾಮಾನ್ಯ ಜನರು ಎದುರಿಸುವ ಸವಾಲುಗಳನ್ನು ಹತ್ತಿರದಿಂದ ಕಂಡರು. ಶೈಕ್ಷಣಿಕವಾಗಿ ಅತ್ಯುತ್ತಮ ವಿದ್ಯಾರ್ಥಿಯಾಗಿದ್ದ ಇವರು ಬಿಜಾಪುರದ ಪ್ರತಿಷ್ಠಿತ ಸೈನಿಕ್ ಶಾಲೆಗೆ ಸೇರಿದರು. ತದನಂತರ ರಾಷ್ಟ್ರೀಯ ರಕ್ಷಣಾ ಅಕಾಡೆಮಿ (ಎನ್‌ಡಿಎ) ಪ್ರವೇಶಿಸಿ ಭಾರತೀಯ ಸೇನೆಯಲ್ಲಿ ಅಧಿಕಾರಿಯಾಗಲು ತರಬೇತಿ ಪಡೆದರು.

ತರಬೇತಿಯ ನಂತರ 8 ವರ್ಷಗಳ ಕಾಲ ಸೇನೆಯಲ್ಲಿ ಸೇವೆ ಸಲ್ಲಿಸಿದ ಗೋಪಿನಾಥ್, 1971 ರ ಇಂಡೋ-ಪಾಕ್ ಯುದ್ಧದಲ್ಲೂ ಪಾಲ್ಗೊಂಡು ಕ್ಯಾಪ್ಟನ್ ಹುದ್ದೆಗೆ ಏರಿದರು. ಸೇನಾದಿನಗಳಲ್ಲಿ ಗಳಿಸಿದ ಶಿಸ್ತು ಮತ್ತು ನಾಯಕತ್ವ ಗುಣಗಳು ಮುಂದೆ ಅವರ ಉದ್ಯಮಶೀಲತೆಗೆ ಪ್ರಮುಖ ತಡಿಪಾಯವಾದವು.

ಕೃಷಿಯಿಂದ ವಾಯುಯಾನ ರಂಗದತ್ತ ಸಾಹಸ

ಸೇನೆಯಿಂದ ನಿವೃತ್ತರಾಗಿ ಗೋಪಿನಾಥ್ ಅವರು ದನಗಳ ಸಾಕಣೆ, ಕೋಳಿ ಸಾಕಣೆ, ರೇಷ್ಮೆ ಹುಳು ಸಾಕಣೆ, ಮೋಟಾರ್ ಸೈಕಲ್ ವ್ಯಾಪಾರ, ಉಡುಪಿ ಹೋಟೆಲ್ ನಿರ್ವಹಣೆ, ಸ್ಟಾಕ್ ಬ್ರೋಕಿಂಗ್, ನೀರಾವರಿ ಉಪಕರಣಗಳ ವ್ಯಾಪಾರ, ಕೃಷಿ ಸಲಹೆಗಾರ ಹಾಗೂ ರಾಜಕಾರಣ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡರು.

ತಮ್ಮ ಆತ್ಮಚರಿತ್ರೆ "ಸಿಂಪ್ಲಿ ಫ್ಲೈ: ಎ ಡೆಕ್ಕನ್ ಒಡಿಸ್ಸಿ" ಯಲ್ಲಿ ಬರೆದಿರುವಂತೆ, ಅವರ ಜೀವನವು ಹೋರಾಟ, ಕುಸಿತ ಮತ್ತು ಮರಳಿ ಏಳುವಿಕೆಯ ನಿರಂತರ ಸರಣಿಯಾಗಿತ್ತು. ವಿಯೆಟ್ನಾಂ ಯುದ್ಧದ ನಂತರ ಹೆಲಿಕಾಪ್ಟರ್‌ಗಳನ್ನು ಹಾರಿಸಿ ತನ್ನ ದೇಶವನ್ನು ಪುನರ್ನಿರ್ಮಿಸಲು ಶ್ರಮಿಸಿದ ವಿಯೆಟ್ನಾಂನ ಅನಾಥ ಹುಡುಗಿಯ ಕಥೆಯಿಂದ ಪ್ರೇರಿತರಾಗಿ, ಅವರು ಕಡಿಮೆ ವೆಚ್ಚದ ವಿಮಾನಯಾನ ಸಂಸ್ಥೆಯನ್ನು ಪ್ರಾರಂಭಿಸಲು ನಿರ್ಧರಿಸಿದರು. "ನನ್ನ ಗ್ರಾಹಕರು ಗಣ್ಯರಷ್ಟೇ ಅಲ್ಲ; ಕಚೇರಿಯ ಶುಚಿಗೊಳಿಸುವ ಸಿಬ್ಬಂದಿ, ಆಟೋರಿಕ್ಷಾ ಚಾಲಕರು ಸಹ ವಿಮಾನ ಹಾರಾಟದ ಕನಸು ಕಾಣಬೇಕು ಮತ್ತು ಅದನ್ನು ನನಸಾಗಿಸಬೇಕು" ಎಂಬುದು ಅವರ ಮುಖ್ಯ ಧ್ಯೇಯವಾಗಿತ್ತು.

ಏರ್ ಡೆಕ್ಕನ್‌ನ ಜನನ ಮತ್ತು ಕಾರ್ಯಾಚರಣೆ

ವಿದೇಶ ಪ್ರವಾಸಗಳ ಸಮಯದಲ್ಲಿ ಯುನೈಟೆಡ್ ಸ್ಟೇಟ್ಸ್‌ನ 'ಸೌತ್‌ವೆಸ್ಟ್ ಏರ್‌ಲೈನ್ಸ್' ಮತ್ತು ಯುರೋಪಿನ 'ರಯಾನ್‌ಏರ್' ನಂತಹ ಬಜೆಟ್ ವಿಮಾನಯಾನ ಸಂಸ್ಥೆಗಳ ಯಶಸ್ಸನ್ನು ಗಮನಿಸಿದ ಗೋಪಿನಾಥ್, ಭಾರತದಲ್ಲೂ ಅಂತಹದೇ ಮಾದರಿಯನ್ನು ತರಲು ಬಯಸಿದರು.

2003 ರಲ್ಲಿ ಅಗತ್ಯ ಅನುಮೋದನೆಗಳನ್ನು ಪಡೆದು 'ಏರ್ ಡೆಕ್ಕನ್' ಸಂಸ್ಥೆಯನ್ನು ಪ್ರಾರಂಭಿಸಲಾಯಿತು. ಬೆಂಗಳೂರಿನಿಂದ ಹುಬ್ಬಳ್ಳಿಗೆ ಹೊರಟ ಮೊದಲ ವಿಮಾನವು ಭಾರತೀಯ ವಾಯುಯಾನದಲ್ಲಿ ಹೊಸ ಅಧ್ಯಾಯವನ್ನು ಆರಂಭಿಸಿತು. ಯಾವುದೇ ಅತಿಯಾದ ಅಲಂಕಾರಗಳಿಲ್ಲದ, ಕಡಿಮೆ ದರದ ಹಾಗೂ ದಕ್ಷ ಸೇವೆಯ ಈ ಮಾದರಿಯು ಸಾರ್ವಜನಿಕರಲ್ಲಿ ಶೀಘ್ರವಾಗಿ ಜನಪ್ರಿಯತೆ ಪಡೆಯಿತು.

ಸವಾಲುಗಳನ್ನು ಮೆಟ್ಟಿ ನಿಂತ ಹಾದಿ

ಭಾರತದಲ್ಲಿ ಕಡಿಮೆ ವೆಚ್ಚದ ವಿಮಾನಯಾನ ಸಂಸ್ಥೆಯ ಯಶಸ್ಸಿನ ಬಗ್ಗೆ ಉದ್ಯಮ ತಜ್ಞರು, ಹಣಕಾಸು ಸಂಸ್ಥೆಗಳು ಹಾಗೂ ಸಾರ್ವಜನಿಕರಲ್ಲಿ ಹಲವು ಅನುಮಾನಗಳಿದ್ದವು. ಹೆಚ್ಚಿನ ಕಾರ್ಯಾಚರಣೆಯ ವೆಚ್ಚ ಮತ್ತು ನಿಯಂತ್ರಕ ಅಡೆತಡೆಗಳ ನಡುವೆಯೂ ಗೋಪಿನಾಥ್ ಅವರು ವಿಮಾನಗಳನ್ನು ಪಡೆದುಕೊಳ್ಳಲು, ಲ್ಯಾಂಡಿಂಗ್ ಹಕ್ಕುಗಳನ್ನು ಮಾತುಕತೆ ಮಾಡಲು ದಣಿವರಿಯಿಲ್ಲದೆ ಶ್ರಮಿಸಿದರು.

ಅನಗತ್ಯ ವೆಚ್ಚಗಳನ್ನು ಕಡಿತಗೊಳಿಸುವುದು, ವಿಮಾನಗಳ ಬಳಕೆಯನ್ನು ಗರಿಷ್ಠಗೊಳಿಸುವುದು ಮತ್ತು ಸಣ್ಣ ನಗರಗಳಿಗೆ ಸೇವೆ ಒದಗಿಸುವುದು ಏರ್ ಡೆಕ್ಕನ್‌ನ ತಂತ್ರವಾಗಿತ್ತು. ಆರಂಭಿಕ ದಿನಗಳಲ್ಲಿ ವಿಳಂಬ, ತಾಂತ್ರಿಕ ದೋಷಗಳು ಮತ್ತು ಗ್ರಾಹಕರ ದೂರುಗಳು ಎದುರಾದಾಗ, ಗೋಪಿನಾಥ್ ಅವರು ಪಾರದರ್ಶಕತೆಯಿಂದ ಸ್ವತಃ ಪ್ರಯಾಣಿಕರ ಕುಂದುಕೊರತೆಗಳನ್ನು ಆಲಿಸಿ ಪರಿಹರಿಸಿದರು.

ಸಾಧನೆ ಮತ್ತು ವಾಯುಯಾನದ ಮೇಲಾದ ಪ್ರಭಾವ

2005 ರ ಹೊತ್ತಿಗೆ ಏರ್ ಡೆಕ್ಕನ್ ದೇಶದಾದ್ಯಂತ ತನ್ನ ಜಾಲವನ್ನು ವಿಸ್ತರಿಸಿತು. ಮೊದಲ ಬಾರಿಗೆ ವಿಮಾನವೇರಿದ ಲಕ್ಷಾಂತರ ಭಾರತೀಯರಿಗೆ ಇದು ಬಾಗಿಲು ತೆರೆಯಿತು. ಈ ಬದಲಾವಣೆಯು ಪ್ರಯಾಣದ ಶೈಲಿಯನ್ನು ಬದಲಿಸಿದ್ದಲ್ಲದೆ, ಸಣ್ಣ ನಗರಗಳ ಆರ್ಥಿಕ ಚಟುವಟಿಕೆಗಳಿಗೂ ಉತ್ತೇಜನ ನೀಡಿತು.

2007 ರಲ್ಲಿ, ಏರ್ ಡೆಕ್ಕನ್ ಸಂಸ್ಥೆಯು ವಿಜಯ್ ಮಲ್ಯ ನೇತೃತ್ವದಲ್ಲಿದ್ದ 'ಕಿಂಗ್‌ಫಿಷರ್ ಏರ್‌ಲೈನ್ಸ್' ನೊಂದಿಗೆ ವಿಲೀನಗೊಂಡಿತು. ಕಾಲಕ್ರಮೇಣ ಏರ್ ಡೆಕ್ಕನ್ ಬ್ರ್ಯಾಂಡ್ ಮರೆಯಾದ Melu, ಗೋಪಿನಾಥ್ ಅವರು ರೂಪಿಸಿದ ಕಡಿಮೆ-ವೆಚ್ಚದ ಮಾದರಿಯು ಮುಂದೆ ಬಂದ ಇಂಡಿಗೊ ಮತ್ತು ಸ್ಪೈಸ್‌ಜೆಟ್‌ನಂತಹ ಪ್ರಮುಖ ಸಂಸ್ಥೆಗಳಿಗೆ ಮಾರ್ಗದರ್ಶಿಯಾಯಿತು.

ಗೌರವಗಳು ಮತ್ತು ಪ್ರಶಸ್ತಿಗಳು:

ವಾಯುಯಾನ ಕ್ಷೇತ್ರಕ್ಕೆ ನೀಡಿದ ಕೊಡುಗೆಗಾಗಿ ಕ್ಯಾಪ್ಟನ್ ಗೋಪಿನಾಥ್ ಅವರಿಗೆ ಹಲವು ಪ್ರತಿಷ್ಠಿತ ಪ್ರಶಸ್ತಿಗಳು ಲಭಿಸಿವೆ:

ಉದ್ಯಮಕ್ಕಾಗಿ ರೋಲೆಕ್ಸ್ ಪ್ರಶಸ್ತಿ (1996)

ರಾಜ್ಯೋತ್ಸವ ಪ್ರಶಸ್ತಿ - ಕರ್ನಾಟಕ ಸರ್ಕಾರ (2005)

ಚೆವಲಿಯರ್ ಡೆ ಲಾ ಲೀಜಿಯನ್ ಡಿ'ಆನರ್ - ಫ್ರೆಂಚ್ ಸರ್ಕಾರ (2007)

ದಶಕದ ವ್ಯಕ್ತಿತ್ವ ಪ್ರಶಸ್ತಿ - ಕೆಜಿ ಫೌಂಡೇಶನ್

ಸರ್ ಎಂ. ವಿಶ್ವೇಶ್ವರಯ್ಯ ಸ್ಮಾರಕ ಪ್ರಶಸ್ತಿ - FKCCI (ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಒಕ್ಕೂಟ)

ನಂತರದ ಉದ್ಯಮಗಳು ಮತ್ತು ಪರಂಪರೆ

ಏರ್ ಡೆಕ್ಕನ್ ನಂತರ ಗೋಪಿನಾಥ್ ಅವರು ಭಾರತದಲ್ಲಿ ಸರಕು ಸಾಗಣೆಯನ್ನು ಸುಧಾರಿಸಲು 'ಡೆಕ್ಕನ್ 360' ಎಂಬ ಲಾಜಿಸ್ಟಿಕ್ಸ್ ಕಂಪನಿಯನ್ನು ಪ್ರಾರಂಭಿಸಿದರು. ಈ ಉದ್ಯಮವು ಸವಾಲುಗಳನ್ನು ಎದುರಿಸಿ ಸ್ಥಗಿತಗೊಂಡರೂ, ಅವರ ನಾವೀನ್ಯತೆಯ ಬದ್ಧತೆ ಸಾಗುತ್ತಲೇ ಇತ್ತು. 2007 ರಲ್ಲಿ ಏರ್ ಡೆಕ್ಕನ್ ಅನ್ನು ವಿಜಯ್ ಮಲ್ಯಗೆ ಮಾರಾಟ ಮಾಡಿದ ನಂತರ, ಗೋಪಿನಾಥ್ 2009 ರಲ್ಲಿ ಡೆಕ್ಕನ್ 360 ಅನ್ನು ಪ್ರಾರಂಭಿಸುವ ಮೂಲಕ ಲಾಜಿಸ್ಟಿಕ್ಸ್ ಕ್ಷೇತ್ರದಲ್ಲಿ ಕಡಿಮೆ-ವೆಚ್ಚದ ಮಾದರಿಯನ್ನು ಪುನರಾವರ್ತಿಸಲು ನಿರ್ಧರಿಸಿದರು. ಫೆಡ್ಎಕ್ಸ್‌ನಲ್ಲಿ 21 ವರ್ಷಗಳ ಅನುಭವ ಹೊಂದಿರುವ ಆಸ್ಟ್ರೇಲಿಯಾ-ಶ್ರೀಲಂಕನ್ ಜೂಡ್ ಫೋನ್ಸೆಕಾ ಅವರನ್ನು ದೇಶೀಯ ಮತ್ತು ಅಂತರರಾಷ್ಟ್ರೀಯ ಕಾರ್ಯಾಚರಣೆಗಳನ್ನು ಒಳಗೊಂಡ ಕಾರ್ಯಾಚರಣೆಗಳನ್ನು ನಡೆಸಲು ಕಂಪನಿಯ ಸಿಇಒ ಆಗಿ ನೇಮಿಸಿದರು. ವ್ಯವಹಾರ ಆರಂಭಿಸಿ ಒಂದು ವರ್ಷವಾದ ಡೆಕ್ಕನ್ 360, ಮುಖೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಇಂಡಸ್ಟ್ರೀಸ್ ಕಂಪನಿಯಲ್ಲಿ ಸುಮಾರು 125 ಕೋಟಿ ರೂ.ಗಳಿಗೆ ಗಮನಾರ್ಹ ಪಾಲನ್ನು ಖರೀದಿಸುವುದರೊಂದಿಗೆ ಕಾರ್ಯತಂತ್ರದ ಹೂಡಿಕೆದಾರರನ್ನು ತನ್ನತ್ತ ಸೆಳೆಯಿತು. ಆರಂಭಿಸಿ ಎರಡು ವರ್ಷಗಳ ಕಾಲ ಸರಕು ವ್ಯವಹಾರವು ಹಿನ್ನಡೆ ಅನುಭವಿಸಿತು ಮತ್ತು ಅಂದಿನಿಂದ ಇದುವರೆಗೆ ಯಾವುದೇ ಪ್ರಗತಿ ಸಾಧಿಸಲು ಸಾಧ್ಯವಾಗಿಲ್ಲ.

ತಮ್ಮ ಆತ್ಮಚರಿತ್ರೆ "ಸಿಂಪ್ಲಿ ಫ್ಲೈ: ಎ ಡೆಕ್ಕನ್ ಒಡಿಸ್ಸಿ" ಮೂಲಕ ತಮ್ಮ ಉದ್ಯಮಶೀಲತೆಯ ಪಯಣವನ್ನು ಹಂಚಿಕೊಂಡಿರುವ ಅವರ ಕಥೆಯು, ಸಾಮಾನ್ಯ ಹಿನ್ನೆಲೆಯಿಂದ ಬಂದು ದೊಡ್ಡ ಕನಸುಗಳನ್ನು ನನಸಾಗಿಸಲು ಶ್ರಮಿಸುವ ಅಸಂಖ್ಯಾತ ವ್ಯಕ್ತಿಗಳಿಗೆ ಇಂದಿಗೂ ಭರವಸೆ ಮತ್ತು ಸ್ಫೂರ್ತಿಯ ದಾರಿದೀಪವಾಗಿದೆ.