2014ರಲ್ಲಿ ವಿಫಲವಾದ ಎಟಿಎಂ ವಹಿವಾಟಿನಲ್ಲಿ ಹಣ ಕಳೆದುಕೊಂಡ ಗ್ರಾಹಕನೊಬ್ಬನಿಗೆ ಕೇರಳದ ಗ್ರಾಹಕ ನ್ಯಾಯಾಲಯವು ಐತಿಹಾಸಿಕ ತೀರ್ಪು ನೀಡಿದೆ. ಬ್ಯಾಂಕಿನ ಸೇವಾ ಲೋಪವನ್ನು ಪರಿಗಣಿಸಿ, ಕಡಿತಗೊಂಡ 10,000 ರೂ. ಜೊತೆಗೆ ಬಡ್ಡಿ ಹಾಗೂ ಪರಿಹಾರ ಸೇರಿ ಒಟ್ಟು 70,000 ರೂ. ನೀಡುವಂತೆ ಆದೇಶಿಸಿದೆ.

ತಿರುವನಂತಪುರಂ (ಸೆ.10): ಎಟಿಎಂನಿಂದ (ATM) ಹಣ ವಿತ್‌ಡ್ರಾ ಮಾಡಲು ಯತ್ನಿಸಿದಾಗ ಮಷಿನ್‌ನಿಂದ ಹಣವೇ ಹೊರಬರದಿದ್ದರೂ, ಖಾತೆಯಿಂದ ಹಣ ಕಡಿತಗೊಂಡ (Debit) ದೂರಿಗೆ ಸಂಬಂಧಿಸಿದಂತೆ ಕೇರಳದ ಗ್ರಾಹಕ ನ್ಯಾಯಾಲಯವೊಂದು ಅತ್ಯಂತ ಪ್ರಮುಖ ಹಾಗೂ ಐತಿಹಾಸಿಕ ತೀರ್ಪು ನೀಡಿದೆ. 2014 ರ ಘಟನೆಗೆ ಸಂಬಂಧಿಸಿದಂತೆ, ಹಣ ಕಳೆದುಕೊಂಡ ಗ್ರಾಹಕನಿಗೆ ಬಡ್ಡಿ ಹಾಗೂ ಪರಿಹಾರ ಸೇರಿ ಒಟ್ಟು 70,000 ರೂಪಾಯಿಗಳನ್ನು ಪಾವತಿಸುವಂತೆ ಸಂತ್ರಸ್ತ ಗ್ರಾಹಕನ ಖಾತೆ ಇರುವ ಬ್ಯಾಂಕ್‌ಗೆ ಕೋರ್ಟ್‌ ಆದೇಶ ನೀಡಿದೆ. ಎಟಿಎಂ ವ್ಯವಹಾರ ಯಶಸ್ವಿಯಾಗಿದೆ ಎಂದು ಬ್ಯಾಂಕ್ ವಾದಿಸಿತ್ತಾದರೂ, ಸಲ್ಲಿಕೆಯಾದ ಎಲೆಕ್ಟ್ರಾನಿಕ್ ದಾಖಲೆಗಳು ಮತ್ತು ಎಟಿಎಂನ ಸ್ವಯಂಚಾಲಿತ ದಾಖಲೆಗಳು (Electronic Records) ಗ್ರಾಹಕನಿಗೆ ಹಣ ತಲುಪಿರುವುದನ್ನು ಸಾಬೀತುಪಡಿಸಲು ವಿಫಲವಾದ ಹಿನ್ನೆಲೆಯಲ್ಲಿ ಕೋರ್ಟ್ ಈ ಮಹತ್ವದ ಆದೇಶ ನೀಡಿದೆ.

ಏನಿದು ಪ್ರಕರಣ?

ಕೇರಳದ ತ್ರಿಶೂರ್ ಮೂಲದ ವ್ಯಕ್ತಿಯೊಬ್ಬರು ಮಾರ್ಚ್ 1, 2014 ರಂದು ಬೇರೊಂದು ಬ್ಯಾಂಕ್‌ಗೆ ಸೇರಿದ ಎಟಿಎಂ ಒಂದರಿಂದ 10,000 ರೂಪಾಯಿಗಳನ್ನು ವಿತ್‌ಡ್ರಾ ಮಾಡಲು ಯತ್ನಿಸಿದ್ದರು. ಎಟಿಎಂ ಯಂತ್ರದಲ್ಲಿ ಪ್ರಕ್ರಿಯೆ ಜರುಗಿದರೂ ಯಾವುದೇ ಹಣ ಹೊರಬರಲಿಲ್ಲ. ಆದರೆ, ಕೆಲ ಹೊತ್ತಿನಲ್ಲೇ ಅವರ ಖಾತೆಯಿಂದ 10,000 ರೂಪಾಯಿ ಕಡಿತಗೊಂಡಿರುವುದು (Debited) ಗೊತ್ತಾಯಿತು.

ಈ ಕುರಿತು ಗ್ರಾಹಕರು ಬ್ಯಾಂಕ್‌ಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಲಿಲ್ಲ. ತದನಂತರ ಮಾರ್ಚ್ 2015 ರಲ್ಲಿ ತಮ್ಮ ಪರ ವಕೀಲರಾದ ಎ.ಡಿ. ಬೆನ್ನಿ (A D Benny) ಮೂಲಕ ಲೀಗಲ್ ನೋಟಿಸ್ ಕಳುಹಿಸಿದರೂ ಬ್ಯಾಂಕ್‌ಗಳು ಸಮಸ್ಯೆಯನ್ನು ಬಗೆಹರಿಸಲಿಲ್ಲ. ಇದರಿಂದ ಬೇಸತ್ತ ಗ್ರಾಹಕರು, ಸೂಕ್ತ ತನಿಖೆ ನಡೆಸದೆ ದೂರು ತಿರಸ್ಕರಿಸಿದ್ದು ಬ್ಯಾಂಕ್ ಮಾಡಿದ ಸೇವಾ ಲೋಪ (Deficiency in service) ಹಾಗೂ ನಿರ್ಲಕ್ಷ್ಯ ಎಂದು ಆರೋಪಿಸಿ ತ್ರಿಶೂರ್ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಕಮಿಷನ್ ಹೇಳಿದೆ.

ಬ್ಯಾಂಕ್‌ನ ವಾದವೇನಿತ್ತು?

ಬ್ಯಾಂಕ್ ಪರ ವಾದ ಮಂಡಿಸಿದ ವಕೀಲ ಕೆ.ಎನ್. ಸಂತೋಷ್, ತಮ್ಮ ಖಾತೆ ದಾಖಲೆಗಳು ಮತ್ತು ವಹಿವಾಟು ವಿವರಣೆಯ ಪ್ರಕಾರ ಮಾರ್ಚ್ 1, 2014 ರಂದು ಎಟಿಎಂ ವಹಿವಾಟಿನ ಮೂಲಕ 10,000 ರೂ. ಹಿಂಪಡೆಯಲಾಗಿದೆ. ದೂರಿನ ನಂತರ ತನಿಖೆ ನಡೆಸಲಾಗಿದ್ದು, ವಹಿವಾಟು ಯಶಸ್ವಿಯಾಗಿದೆ ಮತ್ತು ಎಟಿಎಂನಿಂದ ಹಣ ಹೊರಬಂದಿದೆ ಎಂದು ವಾದಿಸಿದ್ದರು.

ಗ್ರಾಹಕ ಕಮಿಷನ್ ಕಠಿಣ ತರಾಟೆ

ಪ್ರಕರಣದ ವಿಚಾರಣೆ ನಡೆಸಿದ ಕಮಿಷನ್ ಅಧ್ಯಕ್ಷ ಸಿ.ಟಿ. ಸಾಬು (C T Sabu), ಸದಸ್ಯರಾದ ಶ್ರೀಜಾ ಎಸ್. ಮತ್ತು ರಾಮ್ ಮೋಹನ್ ಆರ್. ಅವರಿದ್ದ ಪೀಠವು ಬ್ಯಾಂಕ್ ಆಡಳಿತ ಮಂಡಳಿಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತು. ಬ್ಯಾಂಕ್ ಸೂಕ್ತ ಪರಿಶೀಲನೆ ಮತ್ತು ಪೂರಕ ದಾಖಲೆಗಳ ಆಧಾರದ ಮೇಲೆ ಗ್ರಾಹಕರ ದೂರನ್ನು ಪರಿಹರಿಸುವ ಬದಲು, ಹಣ ಯಶಸ್ವಿಯಾಗಿ ತಲುಪಿದೆ ಎಂಬುದಕ್ಕೆ ಯಾವುದೇ ದೃಢವಾದ ಸಾಕ್ಷ್ಯಗಳನ್ನು ನೀಡದೆ ಅರ್ಜಿಯನ್ನು ತಿರಸ್ಕರಿಸಿದೆ. ಬ್ಯಾಂಕ್‌ನ ಈ ನಡವಳಿಕೆಯು ದೂರುದಾರರಿಗೆ ತೀವ್ರ ಮಾನಸಿಕ ಕಿರುಕುಳ, ಅಸೌಕರ್ಯ, ಆರ್ಥಿಕ ಕಷ್ಟ ಮತ್ತು ನಷ್ಟವನ್ನು ಉಂಟುಮಾಡಿದೆ. ಗ್ರಾಹಕನ ಖಾತೆಯಿಂದ ಹಣ ಕಡಿತಗೊಂಡಾಗ, ಆ ಸಮಸ್ಯೆಯನ್ನು ಬಗೆಹರಿಸುವುದು ಗ್ರಾಹಕನ ಖಾತೆ ಇರುವ ಬ್ಯಾಂಕ್‌ನ ಪ್ರಮುಖ ಕರ್ತವ್ಯವಾಗಿದೆ" ಎಂದು ಆಗಸ್ಟ್ 31 ರಂದು ನೀಡಿರುವ ತೀರ್ಪಿನಲ್ಲಿ ಕಮಿಷನ್ ಉಲ್ಲೇಖಿಸಿದೆ.

'ಇಂಟರ್-ಬ್ಯಾಂಕ್ ದೋಷಕ್ಕೆ ಗ್ರಾಹಕ ಬಾಧ್ಯನಲ್ಲ'

ಇನ್ನೊಂದು ಬ್ಯಾಂಕ್‌ನ ಎಟಿಎಂನಲ್ಲಿ ತಾಂತ್ರಿಕ ದೋಷವಿದ್ದರೂ ಸಹ, ಗ್ರಾಹಕನ ಖಾತೆ ಹೊಂದಿರುವ ಬ್ಯಾಂಕ್ ಆ ಬೇರೆ ಬ್ಯಾಂಕ್‌ನೊಂದಿಗೆ ವ್ಯವಹರಿಸಿ ಸಮಸ್ಯೆಯನ್ನು ಇತ್ಯರ್ಥಪಡಿಸಬೇಕು. ಬ್ಯಾಂಕ್‌ಗಳ ನಡುವಿನ ಎಟಿಎಂ ತಾಂತ್ರಿಕ ದೋಷಗಳನ್ನು ಗ್ರಾಹಕನೇ ಸ್ವತಂತ್ರವಾಗಿ ಸಾಬೀತುಪಡಿಸಬೇಕು ಎಂದು ನಿರೀಕ್ಷಿಸಲು ಸಾಧ್ಯವಿಲ್ಲ. ಗ್ರಾಹಕನ ನೇರ ಸಂಬಂಧವಿರುವುದು ತನ್ನ ಖಾತೆ ಇರುವ ಬ್ಯಾಂಕ್ ಜೊತೆ ಮಾತ್ರ ಎಂದು ಕಮಿಷನ್ ಸ್ಪಷ್ಟಪಡಿಸಿದೆ. ಖಾತೆಯಲ್ಲಿದ್ದ ಹಣ ವಿಫಲ ವಹಿವಾಟಿಗೆ ಕಟ್ ಆಗಿದ್ದರೂ ಬ್ಯಾಂಕ್ ಅದನ್ನು ಸೂಕ್ತವಾಗಿ ತನಿಖೆ ನಡೆಸಲು ಮತ್ತು ಹೊಂದಾಣಿಕೆ (Reconcile) ಮಾಡಲು ವಿಫಲವಾಗಿದೆ ಎಂಬುದನ್ನು ಕಮಿಷನ್ ತಿಳಿಸಿದೆ.

ದೂರುದಾರ ಕೇಳಿದ್ದಕ್ಕಿಂತ ಹೆಚ್ಚಿನ ಪರಿಹಾರ

ದೂರುದಾರ ಗ್ರಾಹಕರು ಕೇವಲ 10,000 ರೂಪಾಯಿ ಪರಿಹಾರಕ್ಕಾಗಿ ಮನವಿ ಮಾಡಿದ್ದರು. ಆದರೆ ಬ್ಯಾಂಕ್ ಮಾಡಿದ ಸೇವಾ ಲೋಪದ ಗಂಭೀರತೆ ಮತ್ತು ದೂರು ಪರಿಹರಿಸಲು ದಶಕಕ್ಕೂ ಹೆಚ್ಚು ಕಾಲ ತೆಗೆದುಕೊಂಡ ವಿಳಂಬವನ್ನು ಪರಿಗಣಿಸಿ, ಕಮಿಷನ್ ಹೆಚ್ಚಿನ ಮೊತ್ತದ ಪರಿಹಾರವನ್ನು ಘೋಷಿಸಿದೆ. ಅದೇ ಸಮಯದಲ್ಲಿ, ಹಣ ವಿತ್‌ಡ್ರಾ ಮಾಡಲು ಯತ್ನಿಸಿದ ಎಟಿಎಂ ಹೊಂದಿದ್ದ ಇನ್ನೊಂದು ಬ್ಯಾಂಕ್‌ನ ಸ್ವತಂತ್ರ ಲೋಪವೇನೂ ಕಂಡುಬರದ ಕಾರಣ, ಆ ಬ್ಯಾಂಕ್ ವಿರುದ್ಧದ ದೂರನ್ನು ಕಮಿಷನ್ ವಜಾಗೊಳಿಸಿದೆ.

ತೀರ್ಪಿನ ಪೂರ್ಣ ವಿವರ ಹಾಗೂ ಪರಿಹಾರ

ಅಂತಿಮವಾಗಿ ಗ್ರಾಹಕನ ಖಾತೆ ಹೊಂದಿರುವ ಮೂಲ ಬ್ಯಾಂಕ್‌ಗೆ ಕಮಿಷನ್ ಈ ಆದೇಶ ನೀಡಿದೆ. ಎಟಿಎಂ ವಹಿವಾಟಿನಲ್ಲಿ ಕಡಿತಗೊಳಿಸಲಾಗಿದ್ದ 10,000 ರೂಪಾಯಿಗಳನ್ನು ತಕ್ಷಣವೇ ಮರುಪಾವತಿಸಬೇಕು. ಆರ್ಥಿಕ ನಷ್ಟ ಹಾಗೂ ಅನುಭವಿಸಿದ ಮಾನಸಿಕ ಕಿರುಕುಳಕ್ಕೆ ಪರಿಹಾರವಾಗಿ 50,000 ರೂಪಾಯಿ ಪಾವತಿಸಬೇಕು. ದೂರುದಾರರ ನ್ಯಾಯಾಲಯದ ವೆಚ್ಚವಾಗಿ 10,000 ರೂಪಾಯಿಗಳನ್ನು ನೀಡಬೇಕು. ಈ ಒಟ್ಟು 70,000 ರೂಪಾಯಿಗಳ ಮೊತ್ತವನ್ನು ಆದೇಶ ಹೊರಬಂದ ಒಂದು ತಿಂಗಳ ಅವಧಿಯೊಳಗೆ ನೀಡಬೇಕೆಂದು ಕಮಿಷನ್ ಬ್ಯಾಂಕ್‌ಗೆ ನಿರ್ದೇಶ ನೀಡಿದೆ.