ಎಂಬಿಎ ಪದವೀಧರರಾದ ಅಲೋಕ್ ಪಟ್ನಾಯಕ್ ಅವರು ತಮ್ಮ 16 ವರ್ಷಗಳ ಕಾರ್ಪೊರೇಟ್ ವೃತ್ತಿಜೀವನವನ್ನು ತೊರೆದು ತುಳಸಿ ಕೃಷಿಯಲ್ಲಿ ಯಶಸ್ಸು ಕಂಡಿದ್ದಾರೆ. ತುಳಸಿ ಎಣ್ಣೆ ಮತ್ತು ಅದರ ತ್ಯಾಜ್ಯದಿಂದ ತಯಾರಿಸಿದ ಮಣಿಗಳನ್ನು ನೇರವಾಗಿ ಕಂಪನಿಗಳು ಹಾಗೂ ಧಾರ್ಮಿಕ ಕೇಂದ್ರಗಳಿಗೆ ಮಾರಾಟ ಮಾಡುವ ಮೂಲಕ ತಿಂಗಳಿಗೆ 6 ಲಕ್ಷಕ್ಕೂ ಹೆಚ್ಚು ಆದಾಯ ಗಳಿಸುತ್ತಿದ್ದಾರೆ.
ಕಾರ್ಪೋರೇಟ್ ಜಗತ್ತಿನ ಡೆಡ್‌ಲೈನ್, ಟಾರ್ಗೆಟ್, ಹಗಲು-ರಾತ್ರಿ ಪಾಳಿಯಲ್ಲಿ ಕೆಲಸ... ಹೀಗೆ ಇದರ ಜಂಜಾಟವೇ ಬೇಡ ಎಂದು ಕೆಲವರು ಇದೀಗ ಹಳ್ಳಿಯತ್ತ ಮುಖ ಮಾಡುತ್ತಿದ್ದಾರೆ. ಕೆಲವರು ಎಐ ಕಾರಣದಿಂದ ಕೆಲಸ ಕಳೆದುಕೊಂಡು ಹಳ್ಳಿಗೆ ವಾಪಸಾಗುತ್ತಿದ್ದರೆ, ಮತ್ತೆ ಕೆಲವರು ಇದರ ಉಸಾಬರಿಯೇ ಬೇಡ ಎಂದು ತಮಗೆ ಇರುವ ಜಮೀನಿನಲ್ಲಿಯೇ ಕೃಷಿ ಮಾಡಲು ಮುಂದಾಗುತ್ತಿದ್ದಾರೆ. ಅವರಲ್ಲಿ ಹಲವರು ಭಾರಿ ಯಶಸ್ಸನ್ನೂ ಕಂಡಿದ್ದಾರೆ. ಅಂಥವರಲ್ಲಿ ಒಬ್ಬರು ಎಂಬಿಎ ಪದವೀಧರ ಅಲೋಕ್ ಪಟ್ನಾಯಕ್. ಟಾಟಾ ಕಂಪೆನಿಯಲ್ಲಿ ಉದ್ಯೋಗದಲ್ಲಿದ್ದ ಇವರು, ಇದೀಗ ತುಳಸಿಯನ್ನು ಬೆಳೆದು ಲಕ್ಷ ಲಕ್ಷ ಆದಾಯ ಗಳಿಸುತ್ತಿದ್ದಾರೆ.
16 ವರ್ಷ ಉನ್ನತ ಹುದ್ದೆ
16 ವರ್ಷಗಳ ಕಾಲ ಕಾರ್ಪೊರೇಟ್ ಜಗತ್ತಿನಲ್ಲಿ ಉನ್ನತ ಹುದ್ದೆಯಲ್ಲಿದ್ದ ಅಲೋಕ್ ಅವರು, ಇದರ ಜೀವ ಸಾಕು ಎಂದೆನಿಸಿ ಕೃಷಿಯತ್ತ ವಾಲಿದರು. ಅಲ್ಲಿಯೇ ತುಳಸಿ ಬೆಳೆ ಬೆಳದು ಈಗ ಕನಿಷ್ಠ ಆರು ಲಕ್ಷ ರೂಪಾಯಿ ಆದಾಯ ಗಳಿಸುತ್ತಿದ್ದು, ಇವರ ಜೀವನ ಇತರರಿಗೂ ಮಾದರಿಯಾಗಿದೆ. ಅಲೋಕ್ ಪಟ್ನಾಯಕ್ ಅವರು 2002ರಲ್ಲಿ ಸಂಬಲ್‌ಪುರ ವಿಶ್ವವಿದ್ಯಾಲಯದಿಂದ ಎಂಬಿಎ ಪದವಿ ಪೂರೈಸಿದ್ದರು. 2003ರಲ್ಲಿ ಬಜಾಜ್ ಆಟೋ ಕಂಪನಿಯಲ್ಲಿ ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ಆಗಿ ತಮ್ಮ ವೃತ್ತಿಜೀವನ ಆರಂಭಿಸಿದರು, 2009ರಲ್ಲಿ ಪ್ರತಿಷ್ಠಿತ ಟಾಟಾ ಆಟೋಮೋಟಿವ್ ಸೇರಿದ್ದರು. ಇಲ್ಲಿ 16 ವರ್ಷ ಸೇವೆ ಸಲ್ಲಿಸಿದರು, ಕೈತುಂಬಾ ಸಂಬಳ ಪಡೆಯುತ್ತಿದ್ದರೂ, ಅವರಿಗೆ ಕೃಷಿಯತ್ತ ವಾಲುವ ಮನಸ್ಸಾಗಿತ್ತು. ಇದರಿಂದ ಉದ್ಯೋಗ ಬಿಟ್ಟು ಹಳ್ಳಿಗೆ ಮರಳಿದರು.
ಕೆಲಸಕ್ಕೆ ಗುಡ್‌ಬೈ
2018ರಲ್ಲಿ ತಮ್ಮ ಮಾರ್ಕೆಟಿಂಗ್ ಕೆಲಸಕ್ಕೆ ರಿಸೈನ್ ಮಾಡಿ, ಕೃಷಿ ಮಾಡುವ ದೃಷ್ಟಿಯಿಂದ ಸ್ವಗ್ರಾಮಕ್ಕೆ ಮರಳಿದರು. ಎಲೆಗಳಿಗಿಂತ ತುಳಸಿ ಎಣ್ಣೆಗೆ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆ ಅಲೋಕ್ ಕೇವಲ ಸಾಂಪ್ರದಾಯಿಕ ರೀತಿಯಲ್ಲಿ ತುಳಸಿ ಬೆಳೆಯುವುದನ್ನೇ ತಮ್ಮ ಗುರಿಯಾಗಿಸಿಕೊಳ್ಳಲಿಲ್ಲ. ಮಾರುಕಟ್ಟೆಯಲ್ಲಿ ಕೇವಲ ತುಳಸಿ ಎಲೆಗಳಿಗೆ ಹೆಚ್ಚಿನ ಬೆಲೆಯಿಲ್ಲ ಎಂಬುದನ್ನು ಚೆನ್ನಾಗಿ ಅರಿತಿದ್ದ ಅವರು, ಅದರ ಮೌಲ್ಯವರ್ಧನೆಗೆ ಮುಂದಾದರು. ತುಳಸಿ ಎಲೆಗಳಿಗಿಂತ ಅದರಿಂದ ತೆಗೆಯುವ ಎಣ್ಣೆಗೆ ಅಂತಾರಾಷ್ಟ್ರೀಯ ಮತ್ತು ದೇಶೀಯ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಬೇಡಿಕೆಯಿದೆ. ದೊಡ್ಡ ದೊಡ್ಡ ಔಷಧೀಯ ವಸ್ತುಗಳ ಉತ್ಪಾದಕರು ಮತ್ತು ಸೌಂದರ್ಯವರ್ಧಕ ಕಂಪನಿಗಳು ಈ ತುಳಸಿ ಎಣ್ಣೆಯನ್ನ ಅತ್ಯಂತ ದುಬಾರಿ ಬೆಲೆ ಕೊಟ್ಟು ಖರೀದಿಸುತ್ತವೆ. ಈ ಮಾರುಕಟ್ಟೆ ತಂತ್ರವನ್ನು ಅರ್ಥಮಾಡಿಕೊಂಡ ಅಲೋಕ್, ತಮ್ಮ ಜಮೀನಿನಲ್ಲಿ ಸಾವಯವ ತುಳಸಿ ಬೆಳೆದು, ಪ್ರತ್ಯೇಕ ಘಟಕದ ಮೂಲಕ ಅದರಿಂದ ಪ್ರತಿದಿನ 7 ರಿಂದ 8 ಲೀಟರ್ ಎಣ್ಣೆಯನ್ನು ಹೊರತೆಗೆಯುತ್ತಿದ್ದಾರೆ.
ಸಕ್ಸಸ್ ಸ್ಟೋರಿಯ ಕಥೆ...
ಅವರ ಸಕ್ಸಸ್ ಹಿಂದಿರೋ ಸ್ಟೋರಿ ಎಂದರೆ, ಅವರು ಅದನ್ನು ಸ್ಥಳೀಯ ಕೃಷಿ ಮಂಡಿಗಳಿಗೆ ತೆಗೆದುಕೊಂಡು ಹೋಗುಲಿಲ್ಲ. ಬದಲಿಗೆ ನೇರವಾಗಿ ಬೃಹತ್ ಕೈಗಾರಿಕಾ ಕಂಪನಿಗಳಿಗೆ ಗುತ್ತಿಗೆ ಆಧಾರದ ಮೇಲೆ ಮಾರಾಟ ಮಾಡುತ್ತಿದ್ದಾರೆ. ಇದರಿಂದ ಅವರ ಉದ್ಯಮದ ವಹಿವಾಟು ದಿನಕ್ಕೆ ಸರಿಸುಮಾರು 21,000 ರೂಪಾಯಿಗಳಷ್ಟಿದ್ದು, ತಿಂಗಳಿಗೆ 6 ಲಕ್ಷ ರೂಪಾಯಿ ಗಡಿ ದಾಟುತ್ತದೆ. ’
ಇವರು, ಐಐಟಿ ದೆಹಲಿ ವಿನ್ಯಾಸಗೊಳಿಸಿದ ಸಣ್ಣ ಯಂತ್ರವೊಂದನ್ನ ಖರೀದಿಸಿರುವ ಅವರು, ಆ ತ್ಯಾಜ್ಯದಿಂದ ಪವಿತ್ರವಾದ ತುಳಸಿ ಮಣಿಗಳನ್ನ ತಯಾರಿಸುತ್ತಿದ್ದಾರೆ. ಈ ಮಣಿಗಳಿಗೆ ದೇವಸ್ಥಾನಗಳು, ಇಸ್ಕಾನ್ ಸೇರಿದಂತೆ ವಿವಿಧ ಧಾರ್ಮಿಕ ಕೇಂದ್ರಗಳಿಂದ ಭಾರಿ ಬೇಡಿಕೆಯಿದೆ. ಒಂದೇ ಬೆಳೆಯಿಂದ, ಎಣ್ಣೆಯ ಮೂಲಕ ಬೃಹತ್ ಕಂಪನಿಗಳಿಗೆ, ಮತ್ತು ಮಣಿಗಳ ಮೂಲಕ ಆಧ್ಯಾತ್ಮಿಕ ಗ್ರಾಹಕರಿಗೆ ಉತ್ಪನ್ನಗಳನ್ನ ತಲುಪಿಸುವ ಮೂಲಕ ಎರಡು ವಿಭಿನ್ನ ಆದಾಯದ ಮೂಲಗಳನ್ನ ಸೃಷ್ಟಿಸಿದ್ದಾರೆ. ತಮ್ಮ ಗ್ರಾಮದ ಸುತ್ತಮುತ್ತಲಿನ ಬುಡಕಟ್ಟು ಸಮುದಾಯದ ಜನರಿಗೆ ಅವರು ತಮ್ಮ ತೋಟದಲ್ಲಿ ಉದ್ಯೋಗ ನೀಡುವ ಮೂಲಕ ಅವರ ಆರ್ಥಿಕ ಸ್ವಾವಲಂಬನೆಗೆ ಆಸರೆಯಾಗಿದ್ದಾರೆ.


