ಎಸ್ಸೆಲ್ ಗ್ರೂಪ್ ಸಂಸ್ಥಾಪಕ ಸುಭಾಷ್ ಚಂದ್ರ ಅವರ 22,006 ಕೋಟಿ ರೂ. ಸಾಲಕ್ಕೆ NCLT ಕೇವಲ 6.5 ಕೋಟಿ ರೂ. ಮರುಪಾವತಿ ಯೋಜನೆಗೆ ಅನುಮೋದನೆ ನೀಡಿದೆ. ಎಲ್ಲವನ್ನೂ ಕಳೆದುಕೊಂಡಿರುವುದಾಗಿ ಹೇಳಿರುವ ಚಂದ್ರ, ತಾವು ಸ್ವಿಜರ್ಲೆಂಡ್‌ನಲ್ಲಿ ಕೆಲಸ ಮಾಡಲು ಯೋಜಿಸಿರುವುದಾಗಿ ತಿಳಿಸಿದ್ದಾರೆ.
ನವದೆಹಲಿ (ಆ.29): ಮಾಧ್ಯಮ, ಮೂಲಸೌಕರ್ಯ ಹಾಗೂ ಮನರಂಜನಾ ವಲಯಗಳಲ್ಲಿ ಬೃಹತ್ ಸಾಮ್ರಾಜ್ಯ ಕಟ್ಟಿದ್ದ ಎಸ್ಸೆಲ್ ಗ್ರೂಪ್ (Essel Group) ಸಂಸ್ಥಾಪಕ ಹಾಗೂ ಮಾಧ್ಯಮ ದಿಗ್ಗಜ ಸುಭಾಷ್ ಚಂದ್ರ (Subhash Chandra) ತಮ್ಮ ವ್ಯವಹಾರದ ಮುಂದಿನ ಹಂತದ ಕುರಿತು ಮಹತ್ವದ ಹೇಳಿಕೆ ನೀಡಿದ್ದಾರೆ. 22,006.57 ಕೋಟಿ ರೂಪಾಯಿಗಳ ಬೃಹತ್ ಸಾಲದ ಪೈಕಿ ಸಾಲದಾತರಿಗೆ ಕೇವಲ ಅತ್ಯಲ್ಪ ಮೊತ್ತ ಹಿಂತಿರುಗಿಸುವ ಮರುಪಾವತಿ ಯೋಜನೆಗೆ 'ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಾಧಿಕರಣ' (NCLT) ಅನುಮೋದನೆ ನೀಡಿದ ಬೆನ್ನಲ್ಲೇ, ತಾವು ಸ್ವಿಜರ್ಲೆಂಡ್‌ನಲ್ಲಿ ಕೆಲಸ ಮಾಡಲು ಯೋಜನೆ ರೂಪಿಸಿರುವುದಾಗಿ ತಿಳಿಸಿದ್ದಾರೆ.
ಮರುಪಾವತಿ ಯೋಜನೆಗೆ NCLT ಅಂಕಿತ
ಎನ್‌ಸಿಎಲ್‌ಟಿ ಅನುಮೋದಿಸಿದ ಮರುಪಾವತಿ ಯೋಜನೆಯಡಿ (Repayment Plan), ಸಾಲದಾತರು ಕೋರಿದ್ದ 22,006.57 ಕೋಟಿ ರೂಪಾಯಿಗಳ ಪೈಕಿ ಮರುಪಾವತಿ ಆಗಲಿರುವುದು ಕೇವಲ 6.5 ಕೋಟಿ ರೂಪಾಯಿ ಮಾತ್ರ! ಅಂದರೆ, ಸಾಲದಾತರಿಗೆ ಸಿಗುತ್ತಿರುವ ಹಣ ಕೇವಲ ಶೇಕಡಾ 0.03 ರಷ್ಟು ಮಾತ್ರವಾಗಿದ್ದು, ಬರೋಬ್ಬರಿ ಶೇಕಡಾ 99.97 ರಷ್ಟು ಸಾಲ ಮನ್ನಾ (Haircut) ಆದಂತಾಗಿದೆ.
'ಎಲ್ಲವನ್ನೂ ಕಳೆದುಕೊಂಡಿದ್ದೇನೆ, ಬಾಡಿಗೆ ಹಣದಲ್ಲೇ ಜೀವನ'
ಎನ್‌ಸಿಎಲ್‌ಟಿ ತೀರ್ಪಿನ ನಂತರ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿರುವ 75 ವರ್ಷದ ಉದ್ಯಮಿ ಸುಭಾಷ್ ಚಂದ್ರ, "ನಾನಿಂದು ಅತ್ಯಂತ ಸರಳವಾಗಿ ಮಾತನಾಡುತ್ತಿದ್ದೇನೆ. ಎಲ್ಲವನ್ನೂ ಕಳೆದುಕೊಂಡಿರುವ ಒಬ್ಬ ವ್ಯಕ್ತಿಯಾಗಿ ನಾನಿಲ್ಲಿ ಮಾತನಾಡುತ್ತಿಲ್ಲ. ನನ್ನ ಬಳಿ ಉಳಿದಿರುವ ಕೊನೆಯ 6.5 ಕೋಟಿ ರೂಪಾಯಿಗಳನ್ನು ಯೋಜನೆಯ ಪ್ರಕಾರ ಪಾವತಿಸಬೇಕಾಗಿದೆ. ನನ್ನ ಬಳಿ ಒಂದು ಸಣ್ಣ ವಸತಿ ಮನೆಯಿದ್ದು, ಅದನ್ನು ಬಾಡಿಗೆಗೆ ನೀಡಿದ್ದೇನೆ. ಆ ಬಾಡಿಗೆ ಆದಾಯದಲ್ಲೇ ನನ್ನ ದಿನನಿತ್ಯದ ವೆಚ್ಚಗಳನ್ನು ನಿಭಾಯಿಸುತ್ತಿದ್ದೇನೆ. ನನಗೇನೂ ವಿಷಾದವಿಲ್ಲ. ನಾನು ಮತ್ತೆ ಸಂಪಾದಿಸುತ್ತೇನೆ. ನಾನು ಹೊಸ ಹಾದಿ ನಿರ್ಮಿಸುವವನು. ಒಳ್ಳೆಯ ಮತ್ತು ಹೊಸ ಕಾರ್ಯಗಳನ್ನು ಹೇಗೆ ಮಾಡಬೇಕೆಂದು ನನಗೆ ತಿಳಿದಿದೆ. ಅದನ್ನು ಮುಂದುವರಿಸುತ್ತೇನೆ" ಎಂದು ಹೇಳಿದ್ದಾರೆ.
ಸ್ವಿಜರ್ಲೆಂಡ್‌ನಲ್ಲಿ ಕೆಲಸ, ಹೊಸ ಸ್ಟಾರ್ಟ್‌ಅಪ್‌ಗಳಿಗೆ ಪ್ಲಾನ್
ತಮ್ಮ ಮುಂದಿನ ವೃತ್ತಿಪರ ಹೆಜ್ಜೆಯ ಬಗ್ಗೆ ಮಾತನಾಡಿದ ಅವರು, "ಪ್ರಸ್ತುತ, ಸ್ವಿಜರ್ಲೆಂಡ್‌ನಲ್ಲಿ ಹೂಡಿಕೆ ಉದ್ಯಮದಲ್ಲಿರುವ ನನ್ನ ಸ್ನೇಹಿತರೊಂದಿಗೆ ಕೆಲಸ ಮಾಡುವ ಆಲೋಚನೆಯಿದೆ. ಇದರ ಸಂಪೂರ್ಣ ವಿವರಗಳನ್ನು ಮುಂದಿನ 1-2 ವಾರಗಳಲ್ಲಿ ಹಂಚಿಕೊಳ್ಳಲಿದ್ದೇನೆ. ಜೊತೆಗೆ, ಕುಟುಂಬದಿಂದ 2 ರಿಂದ 4 ಕೋಟಿ ರೂಪಾಯಿ ಸಾಲ ಪಡೆದು, ಬೆಳೆಯುವ ಸಾಮರ್ಥ್ಯವಿರುವ ನಮ್ಮ ಕೆಲವು ಸ್ಟಾರ್ಟ್‌ಅಪ್‌ಗಳಲ್ಲಿ ಹೂಡಿಕೆ ಮಾಡುವ ಯೋಜನೆಯೂ ಇದೆ" ಎಂದು ಸ್ಪಷ್ಟಪಡಿಸಿದ್ದಾರೆ.


