ಕೇಂದ್ರ ಸರ್ಕಾರವು ಗ್ರಾಹಕರ ಸುರಕ್ಷತೆಗಾಗಿ ಹೊಸ 'ಇ-ಕಾಮರ್ಸ್ ರೂಲ್ಸ್ 2026' ಅನ್ನು ಜಾರಿಗೆ ತರುತ್ತಿದೆ. ಆನ್‌ಲೈನ್ ಶಾಪಿಂಗ್ ಮಾಡುವಾಗ ಸೈಬರ್ ವಂಚನೆ ತಡೆಯಲು ಸೆಲ್ಲರ್ ವಿವರ, ಪೇಮೆಂಟ್ ಲಿಂಕ್ ಮತ್ತು ಡಾರ್ಕ್ ಪ್ಯಾಟರ್ನ್‌ಗಳ ಬಗ್ಗೆ ಎಚ್ಚರವಿರಬೇಕು. ಹಣ ಕಳೆದುಕೊಳ್ಳದಿರಲು ಈ 7 ಮುಖ್ಯ ನಿಯಮಗಳನ್ನು ಪಾಲಿಸುವುದು ಕಡ್ಡಾಯ.
ಕೇಂದ್ರ ಸರ್ಕಾರ ಗ್ರಾಹಕರ ಸೇಫ್ಟಿಗಾಗಿ ಹೊಸ 'ಇ-ಕಾಮರ್ಸ್ ರೂಲ್ಸ್ 2026' ತಂದಿದೆ. ಆನ್‌ಲೈನ್ ಶಾಪಿಂಗ್ ಮಾಡೋ ಮುನ್ನ ನೀವು ಕಡ್ಡಾಯವಾಗಿ ಚೆಕ್ ಮಾಡಲೇಬೇಕಾದ 7 ಮುಖ್ಯ ವಿಚಾರಗಳು ಇಲ್ಲಿವೆ.
ಆನ್‌ಲೈನ್ ಶಾಪಿಂಗ್: ಗ್ರಾಹಕರಿಗೆ ಬಂಪರ್ ಗುಡ್ ನ್ಯೂಸ್
ಕೈಯಲ್ಲಿ ಸ್ಮಾರ್ಟ್‌ಫೋನ್ ಇದ್ರೆ ಸಾಕು, ಒಂದೇ ಕ್ಲಿಕ್‌ನಲ್ಲಿ ಬೇಕಾದ ವಸ್ತು ಮನೆ ಬಾಗಿಲಿಗೆ ಬರುತ್ತೆ. ಬಟ್ಟೆಯಿಂದ ಹಿಡಿದು ಮನೆಗೆ ಬೇಕಾದ ಪ್ರತಿಯೊಂದು ವಸ್ತುವನ್ನೂ ನಾವು ಆನ್‌ಲೈನ್‌ನಲ್ಲೇ ತರಿಸ್ತೀವಿ. ಆದ್ರೆ ಈ ಗಡಿಬಿಡಿಯಲ್ಲಿ ನಾವೊಂದು ವಿಚಾರ ಮರೆತಿದ್ದೀವಿ. ಆನ್‌ಲೈನ್‌ನಲ್ಲಿ ಏನೇ ಖರೀದಿಸಿದ್ರೂ ನಮ್ಮ ಹೆಸರು, ಫೋನ್ ನಂಬರ್, ಅಡ್ರೆಸ್, ಲಾಗಿನ್ ಐಡಿ, ಬ್ಯಾಂಕ್ ಡೀಟೇಲ್ಸ್ ಎಲ್ಲವೂ ಡಿಜಿಟಲ್ ಆಗಿ ಸೇವ್ ಆಗುತ್ತೆ. ಸೈಬರ್ ವಂಚನೆ ತಡೆಯಲು ಹಾಗೂ ಗ್ರಾಹಕರಿಗೆ ಹೆಚ್ಚಿನ ಭದ್ರತೆ ಕೊಡಲು ಕೇಂದ್ರ ಸರ್ಕಾರ 'ಗ್ರಾಹಕ ಸಂರಕ್ಷಣಾ ನಿಯಮಗಳು, 2026' (Consumer Protection Rules, 2026) ರೂಪಿಸಿದೆ. ಈ ಹೊಸ ರೂಲ್ಸ್ ಜನವರಿ 2027 ರಿಂದ ಜಾರಿಗೆ ಬರಲಿದೆ.
ಬೆಲೆ ನಿಗದಿ, ಸೆಲ್ಲರ್ ಡೀಟೇಲ್ಸ್, ಸರ್ಚ್ ರಿಸಲ್ಟ್, ಜಾಹೀರಾತು, ಡಾರ್ಕ್ ಪ್ಯಾಟರ್ನ್, ಕಸ್ಟಮರ್ ಡೇಟಾ ಸೇಫ್ಟಿ ವಿಚಾರದಲ್ಲಿ ಈ ರೂಲ್ಸ್ ಪಾರದರ್ಶಕತೆ ತರಲಿದೆ. ಆದ್ರೆ, ಎಷ್ಟೇ ರೂಲ್ಸ್ ಬಂದ್ರೂ ಸೈಬರ್ ವಂಚನೆ ಸಂಪೂರ್ಣವಾಗಿ ನಿಲ್ಲಲ್ಲ. ಹಾಗಾಗಿ 'ಬೈ ನೌ' (Buy Now) ಬಟನ್ ಒತ್ತುವ ಮುನ್ನ ನೀವು ಪಾಲಿಸಲೇಬೇಕಾದ 7 ಮುಖ್ಯ ನಿಯಮಗಳು ಇಲ್ಲಿವೆ.
ಕಣ್ಮುಚ್ಚಿ ನಂಬ್ಬೇಡಿ.. ಸೆಲ್ಲರ್ ಯಾರು ಅನ್ನೋದು ಮುಖ್ಯ
ಹೊಸ ರೂಲ್ಸ್ ಪ್ರಕಾರ, ಪ್ರತಿಯೊಂದು ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ತನ್ನ ವೆಬ್‌ಸೈಟ್‌ನಲ್ಲಿ ಸೆಲ್ಲರ್ (ಮಾರಾಟಗಾರ) ಸಂಪೂರ್ಣ ವಿವರಗಳನ್ನು ಸ್ಪಷ್ಟವಾಗಿ ತೋರಿಸಬೇಕು. ಅವರ ಬ್ಯುಸಿನೆಸ್ ಡೀಟೇಲ್ಸ್, ಅಡ್ರೆಸ್, ಕಸ್ಟಮರ್ ಕೇರ್ ನಂಬರ್, ಪ್ರಾಡಕ್ಟ್ ರೇಟಿಂಗ್ ಕಡ್ಡಾಯವಾಗಿ ಇರಬೇಕು. ಬರೀ ಕಲರ್‌ಫುಲ್ ಫೋಟೋ ಅಥವಾ ರಿವ್ಯೂ ನೋಡಿ ಕಣ್ಮುಚ್ಚಿ ಆರ್ಡರ್ ಮಾಡ್ಬೇಡಿ. ಅದರಲ್ಲೂ ಕಾಸ್ಟ್ಲಿ ಗ್ಯಾಜೆಟ್, ಬ್ರಾಂಡೆಡ್ ವಸ್ತುಗಳನ್ನು ಕೊಳ್ಳುವಾಗ ಸೆಲ್ಲರ್ ವಿವರಗಳನ್ನು ಪಕ್ಕಾ ಚೆಕ್ ಮಾಡಿ. ಪ್ರಾಡಕ್ಟ್ ಪೇಜ್ ನೋಡಲು ಅಸಲಿಯಾಗಿ ಕಂಡರೂ, ಆ ಸೆಲ್ಲರ್ ಒರಿಜಿನಲ್ ಅಂತ ಗ್ಯಾರಂಟಿ ಇಲ್ಲ.
ಪೇಮೆಂಟ್ ಪೇಜ್ ಓಪನ್ ಆದಾಗ ಹುಷಾರ್.. ರೀಡೈರೆಕ್ಟ್ ಲಿಂಕ್ ನಂಬ್ಬೇಡಿ
ನಿಮ್ಮ ಕ್ರೆಡಿಟ್/ಡೆಬಿಟ್ ಕಾರ್ಡ್ ಡೀಟೇಲ್ಸ್ ಅಥವಾ ಯುಪಿಐ (UPI) ಪಿನ್ ಎಂಟರ್ ಮಾಡುವ ಮುನ್ನ, ನೀವು ಸರಿಯಾದ ಪೇಮೆಂಟ್ ಪೇಜ್‌ನಲ್ಲಿದ್ದೀರಾ ಇಲ್ವಾ ಅಂತ ಚೆಕ್ ಮಾಡಿ. ನೀವು ಬಳಸುತ್ತಿರುವ ಶಾಪಿಂಗ್ ಆ್ಯಪ್ ಅಥವಾ ಅಧಿಕೃತ ಪೇಮೆಂಟ್ ಗೇಟ್‌ವೇಗೆ ಮಾತ್ರ ಆ ಪೇಜ್ ಸೇರಿರಬೇಕು. ಪೇಮೆಂಟ್ ಮಾಡುವಾಗ ದಿಢೀರ್ ಅಂತ ಬೇರೆ ಯಾವುದೋ ಹೊಸ ವೆಬ್‌ಸೈಟ್‌ಗೆ ರೀಡೈರೆಕ್ಟ್ ಆದ್ರೆ ತಕ್ಷಣ ಟ್ರಾನ್ಸಾಕ್ಷನ್ ಕ್ಯಾನ್ಸಲ್ ಮಾಡಿ. ಹಾಗೇ, ನಿಮ್ಮ ಒಟಿಪಿ (OTP), ಯುಪಿಐ ಪಿನ್, ಕಾರ್ಡ್ ಪಿನ್ ಅಥವಾ ಪಾಸ್‌ವರ್ಡ್‌ಗಳನ್ನು ಸೆಲ್ಲರ್ ಜೊತೆಗಾಗಲಿ, ಕಸ್ಟಮರ್ ಸಪೋರ್ಟ್ ಅಂತ ಹೇಳುವವರ ಜೊತೆಗಾಗಲಿ ಶೇರ್ ಮಾಡ್ಬೇಡಿ.
ಗೂಗಲ್ ಸರ್ಚ್‌ನಲ್ಲಿ ಟಾಪ್‌ನಲ್ಲಿದೆ ಅಂತ ಕಣ್ಮುಚ್ಚಿ ಕೊಳ್ಳಬೇಡಿ
ಸರ್ಚ್ ರಿಸಲ್ಟ್‌ಗಳನ್ನು ತಿರುಚಿ ಗ್ರಾಹಕರನ್ನು ದಾರಿ ತಪ್ಪಿಸದಂತೆ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳ ಮೇಲೆ ಈ ಹೊಸ ರೂಲ್ಸ್ ಕಠಿಣ ನಿರ್ಬಂಧ ಹೇರಿದೆ. ಸರ್ಚ್ ರ್ಯಾಂಕಿಂಗ್ ಮೇಲೆ ಪ್ರಭಾವ ಬೀರುವ ಮುಖ್ಯ ಅಂಶಗಳನ್ನು ಪ್ಲಾಟ್‌ಫಾರ್ಮ್‌ಗಳು ಬಹಿರಂಗಪಡಿಸಬೇಕು. ಆದ್ರೆ ಗ್ರಾಹಕರು ಕೂಡ ಸ್ವಂತವಾಗಿ ಚೆಕ್ ಮಾಡೋದನ್ನ ರೂಢಿಸಿಕೊಳ್ಳಬೇಕು. ಪ್ರಾಡಕ್ಟ್ ಫೀಚರ್ಸ್, ಸೆಲ್ಲರ್ ರಿವ್ಯೂಗಳನ್ನು ನೀವೇ ಖುದ್ದಾಗಿ ಪರಿಶೀಲಿಸಿ. ಒಂದು ವೇಳೆ ಯಾವುದೇ ಸೆಲ್ಲರ್ ಪ್ಲಾಟ್‌ಫಾರ್ಮ್‌ನಿಂದ ಹೊರಬಂದು ಬೇರೆ ದಾರಿಯಲ್ಲಿ ಹಣ ಕಳಿಸಲು ಕೇಳಿದ್ರೆ, ಅದೊಂದು ಡೇಂಜರ್ ಸಿಗ್ನಲ್ ಅಂತ ತಿಳಿದು ತಕ್ಷಣ ಆ ಡೀಲ್‌ನಿಂದ ಹೊರಬನ್ನಿ.
ಆ ಪ್ರಾಡಕ್ಟ್ ಜಾಹೀರಾತಾ? ಸ್ಪಾನ್ಸರ್‌ಶಿಪ್ ಡೀಟೇಲ್ಸ್ ಗಮನಿಸಿ
ತಿದ್ದುಪಡಿಯಾದ ನಿಯಮಗಳ ಪ್ರಕಾರ, ಸ್ಪಾನ್ಸರ್ಡ್ ಲಿಸ್ಟಿಂಗ್‌ಗಳನ್ನು ಅಂದ್ರೆ ಜಾಹೀರಾತುಗಳನ್ನು ಸ್ಪಷ್ಟವಾಗಿ ತೋರಿಸಬೇಕು. ಶಾಪಿಂಗ್ ಸರ್ಚ್‌ನಲ್ಲಿ ಒಂದು ಪ್ರಾಡಕ್ಟ್ ಎಲ್ಲರಿಗಿಂತ ಮೇಲ್ಗಡೆ ಕಂಡ ತಕ್ಷಣ ಅದೇ ಬೆಸ್ಟ್ ಪ್ರಾಡಕ್ಟ್ ಅಂತ ಅನ್ಕೋಬೇಡಿ. ಸ್ಪಾನ್ಸರ್ಡ್ ಪ್ರಾಡಕ್ಟ್ ಅನ್ನೋದು ಕೇವಲ ಒಂದು ಜಾಹೀರಾತು ಅಷ್ಟೇ. ಅದು ಆ ಪ್ರಾಡಕ್ಟ್ ಅಥವಾ ಸೆಲ್ಲರ್ ನಂಬಿಕೆಗೆ ಅರ್ಹ ಅನ್ನೋದಕ್ಕೆ ಗ್ಯಾರಂಟಿ ಅಲ್ಲ. ಹಾಗಾಗಿ ಪ್ರಾಡಕ್ಟ್ ಪಕ್ಕದಲ್ಲಿ 'Sponsored' ಅಂತ ಇದ್ಯಾ ಇಲ್ವಾ ನೋಡಿ, ಸೆಲ್ಲರ್ ವಿವರ ಚೆಕ್ ಮಾಡಿದ ಮೇಲಷ್ಟೇ ನಿರ್ಧಾರ ತಗೊಳ್ಳಿ.
ಡಾರ್ಕ್ ಪ್ಯಾಟರ್ನ್ ಬಲೆಗೆ ಬೀಳದಿರಿ.. ಸಡನ್ ಪಾಪ್-ಅಪ್‌ಗಳ ಬಗ್ಗೆ ಅಲರ್ಟ್
ಗ್ರಾಹಕರಿಗೆ ಗೊತ್ತಿಲ್ಲದಂತೆಯೇ ಅವರಿಂದ ಹೆಚ್ಚುವರಿ ಚಾರ್ಜ್ ಕಟ್ಟಿಸಿಕೊಳ್ಳುವುದು, ಇಷ್ಟವಿಲ್ಲದ ಸರ್ವೀಸ್‌ಗಳನ್ನು ಅಂಟಿಸುವುದು.. ಇಂತಹ ಮೋಸದ ತಂತ್ರಗಳನ್ನೇ 'ಡಾರ್ಕ್ ಪ್ಯಾಟರ್ನ್ಸ್' (Dark Patterns) ಅಂತಾರೆ. 2023ರಲ್ಲಿ ತಂದ ಡಾರ್ಕ್ ಪ್ಯಾಟರ್ನ್ಸ್ ನಿಯಂತ್ರಣ ಮಾರ್ಗಸೂಚಿಗಳನ್ನು ಇ-ಕಾಮರ್ಸ್ ಸಂಸ್ಥೆಗಳು ಕಟ್ಟುನಿಟ್ಟಾಗಿ ಪಾಲಿಸಬೇಕು ಅಂತ ಹೊಸ ರೂಲ್ಸ್ ಸ್ಪಷ್ಟಪಡಿಸಿದೆ. ಪ್ರತಿ ವರ್ಷ ಈ ಬಗ್ಗೆ ಸೆಲ್ಫ್ ಅಸೆಸ್‌ಮೆಂಟ್ ಮಾಡಿಕೊಳ್ಳುವುದರ ಜೊತೆಗೆ ಕಾಂಪ್ಲೈಯೆನ್ಸ್ ಸರ್ಟಿಫಿಕೇಟ್ ಕೂಡ ಪ್ರದರ್ಶಿಸಬೇಕು. ಸೈಬರ್ ಭದ್ರತೆ ದೃಷ್ಟಿಯಿಂದ ನೋಡಿದ್ರೆ.. "ಪೇಮೆಂಟ್ ಫೇಲ್ ಆಗಿದೆ, ಮತ್ತೆ ಪಾಸ್‌ವರ್ಡ್ ಎಂಟರ್ ಮಾಡಿ" ಅಂತ ದಿಢೀರ್ ಬರುವ ಪಾಪ್-ಅಪ್‌ಗಳು, ಅನುಮಾನಾಸ್ಪದ ರೀಡೈರೆಕ್ಟ್‌ಗಳ ಬಗ್ಗೆ ನೀವು ತುಂಬಾ ಹುಷಾರಾಗಿರಬೇಕು.
ಆನ್‌ಲೈನ್ ಶಾಪಿಂಗ್‌ಗೆ ಕೆಲವು ಬೇಸಿಕ್ ಡೀಟೇಲ್ಸ್ ಬೇಕಾಗುತ್ತೆ. ಆದ್ರೆ, ರಿಜಿಸ್ಟ್ರೇಷನ್ ಅಥವಾ ಚೆಕ್-ಔಟ್ ಟೈಮ್‌ನಲ್ಲಿ ಕೇಳುವ ಪ್ರತಿಯೊಂದು ಮಾಹಿತಿಯೂ ಆ ಖರೀದಿಗೆ ಬೇಕಾಗಿರಲ್ಲ. 2026ರ ತಿದ್ದುಪಡಿಗಳ ಪ್ರಕಾರ, ಗ್ರಾಹಕರ ಡೇಟಾ ಬಳಸುವ ಮುನ್ನ ಅವರ ಪೂರ್ವಾನುಮತಿ ಕಡ್ಡಾಯ. ಅಕೌಂಟ್ ಓಪನ್ ಮಾಡುವಾಗ ಎಂಥಾ ಮಾಹಿತಿ ಕೇಳ್ತಿದ್ದಾರೆ ಅಂತ ಗಮನಿಸಿ, ಅನಗತ್ಯವಾದ ವೈಯಕ್ತಿಕ ವಿವರಗಳನ್ನು ಕೊಡಬೇಡಿ. ಹಾಗೇ ಪ್ರತಿಯೊಂದು ಶಾಪಿಂಗ್ ಸೈಟ್‌ಗೂ ಬೇರೆ ಬೇರೆ ಸ್ಟ್ರಾಂಗ್ ಪಾಸ್‌ವರ್ಡ್‌ಗಳನ್ನು ಬಳಸುವುದು ಒಳ್ಳೆಯದು.
ಪ್ರತಿಯೊಂದು ವಹಿವಾಟಿನ ಡಿಜಿಟಲ್ ರೆಕಾರ್ಡ್ ನಿಮ್ಮ ಬಳಿ ಇರಲಿ
ಪೇಮೆಂಟ್ ಮುಗಿದ ತಕ್ಷಣ ಕೆಲಸ ಮುಗೀತು ಅಂತಲ್ಲ. ಪ್ರಾಡಕ್ಟ್ ಇನ್‌ವಾಯ್ಸ್, ಆರ್ಡರ್ ಕನ್ಫರ್ಮೇಷನ್, ಪೇಮೆಂಟ್ ರಸೀದಿ, ಸೆಲ್ಲರ್ ಜೊತೆಗಿನ ಚಾಟ್ ಹಿಸ್ಟರಿಯನ್ನು ಸೇವ್ ಮಾಡಿಟ್ಟುಕೊಳ್ಳಿ. ಭವಿಷ್ಯದಲ್ಲಿ ಏನಾದ್ರೂ ಸಮಸ್ಯೆ ಬಂದ್ರೆ ಇವು ಸಾಕ್ಷಿಯಾಗಿ ಉಪಯೋಗಕ್ಕೆ ಬರುತ್ತವೆ. ಹೊಸ ರೂಲ್ಸ್ ಪ್ರಕಾರ ದೂರು ಪರಿಹಾರ ವ್ಯವಸ್ಥೆಯನ್ನು ಮತ್ತಷ್ಟು ಸ್ಟ್ರಾಂಗ್ ಮಾಡಿದ್ದಾರೆ. ಕಸ್ಟಮರ್ ದೂರು ಬಂದ 48 ಗಂಟೆಯೊಳಗೆ ಗ್ರೀವೆನ್ಸ್ ಆಫೀಸರ್ಸ್ (Grievance Officers) ಪ್ರತಿಕ್ರಿಯಿಸಬೇಕು. ಸರ್ಕಾರ ನೀಡುವ 'ನ್ಯಾಷನಲ್ ಕಸ್ಟಮರ್ ಹೆಲ್ಪ್‌ಲೈನ್' ನೆಟ್‌ವರ್ಕ್‌ನಲ್ಲಿ ಇ-ಕಾಮರ್ಸ್ ಕಂಪನಿಗಳು ಕೂಡ ಭಾಗಿಯಾಗುತ್ತಿವೆ. ಅಂದಹಾಗೆ, 2025ರಲ್ಲಿ ನ್ಯಾಷನಲ್ ಕಸ್ಟಮರ್ ಹೆಲ್ಪ್‌ಲೈನ್‌ಗೆ ಒಟ್ಟು 17,71,622 ದೂರುಗಳು ಬಂದಿದ್ದು, ಅದರಲ್ಲಿ ಶೇ. 29ರಷ್ಟು ಕೇವಲ ಇ-ಕಾಮರ್ಸ್ ವಲಯದಿಂದಲೇ ಬಂದಿರೋದು ಗಮನಾರ್ಹ.
ಒಟ್ಟಿನಲ್ಲಿ, ಸರ್ಕಾರ ತಂದಿರೋ ಈ ಹೊಸ ರೂಲ್ಸ್ ಡಿಜಿಟಲ್ ಶಾಪಿಂಗ್ ಅನ್ನು ಸೇಫ್ ಮಾಡ್ತಿದ್ರೂ, ಗ್ರಾಹಕರ ಸ್ವಂತ ಎಚ್ಚರಿಕೆಯನ್ನು ಯಾವ ರೂಲ್ಸ್ ಕೂಡ ರಿಪ್ಲೇಸ್ ಮಾಡಲ್ಲ. ಒಂದು ವಸ್ತು ಕೊಳ್ಳುವ ಮುನ್ನ ಕೇವಲ ಕೆಲವೇ ಸೆಕೆಂಡುಗಳ ಕಾಲ ಸೆಲ್ಲರ್, ಪೇಮೆಂಟ್ ಯುಆರ್‌ಎಲ್, ಜಾಹೀರಾತು, ರೀಡೈರೆಕ್ಟ್‌ಗಳನ್ನು ಚೆಕ್ ಮಾಡೋದ್ರಿಂದ ನಿಮ್ಮ ಕಷ್ಟದ ಹಣ ಸೈಬರ್ ವಂಚಕರ ಪಾಲಾಗದಂತೆ ಕಾಪಾಡಿಕೊಳ್ಳಬಹುದು.


