ಕೇಂದ್ರ ಸರ್ಕಾರವು ಆನ್‌ಲೈನ್ ಶಾಪಿಂಗ್‌ನಲ್ಲಿ ಪಾರದರ್ಶಕತೆ ತರಲು ಹೊಸ ನಿಯಮಗಳನ್ನು ಜಾರಿಗೆ ತರುತ್ತಿದೆ. ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳು ಇನ್ನು ಮುಂದೆ ನಕಲಿ ರಿಯಾಯಿತಿಗಳನ್ನು ತಡೆಯಲು ಉತ್ಪನ್ನದ ನೈಜ ಬೆಲೆಯನ್ನು ಪ್ರದರ್ಶಿಸುವುದು ಕಡ್ಡಾಯವಾಗಿದೆ. ಅಲ್ಲದೆ, ಗ್ರಾಹಕರನ್ನು ದಾರಿತಪ್ಪಿಸುವ ಡಾರ್ಕ್ ಪ್ಯಾಟರ್ನ್‌ಗಳು ಮತ್ತು ಜಾಹೀರಾತುಗಳನ್ನು ನಿಷೇಧಿಸಲಾಗಿದೆ.

ನವದೆಹಲಿ: ಆನ್‌ಲೈನ್ ಶಾಪಿಂಗ್ ಪ್ರಿಯರಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿ ನೀಡಿದ್ದು ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳ ನಕಲಿ ರಿಯಾಯಿತಿ ಮತ್ತು ದಾರಿತಪ್ಪಿಸುವ ಜಾಹೀರಾತುಗಳಿಗೆ ಕಡಿವಾಣ ಹಾಕಲು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಮುಂಬರುವ ಜನವರಿಯಿಂದ ಜಾರಿಗೆ ಬರಲಿರುವ ಹೊಸ ನಿಯಮಗಳ ಪ್ರಕಾರ, ಫ್ಲಿಪ್‌ಕಾರ್ಟ್, ಅಮೆಜಾನ್ ಸೇರಿದಂತೆ ಎಲ್ಲಾ ಇ-ಕಾಮರ್ಸ್ ಸಂಸ್ಥೆಗಳು ಹಬ್ಬದ ಮಾರಾಟ ಅಥವಾ ಯಾವುದೇ ಕೊಡುಗೆಗಳ ಸಮಯದಲ್ಲಿ ಉತ್ಪನ್ನದ ‘ರಿಯಾಯಿತಿ ದರ’ದ ಜೊತೆಗೆ ಅದರ ಅಸಲಿ ಬೆಲೆ ಯನ್ನು ಸ್ಪಷ್ಟವಾಗಿ ನಮೂದಿಸುವುದನ್ನು ಕಡ್ಡಾಯಗೊಳಿಸಲಾಗಿದೆ.

ಗ್ರಾಹಕರ ಹಿತರಕ್ಷಣೆ ಮತ್ತು ಆನ್‌ಲೈನ್ ವ್ಯಾಪಾರದಲ್ಲಿ ಪಾರದರ್ಶಕತೆ ತರುವ ಉದ್ದೇಶದಿಂದ ಕೇಂದ್ರ ಗ್ರಾಹಕ ವ್ಯವಹಾರಗಳ ಇಲಾಖೆಯು 'ಗ್ರಾಹಕ ರಕ್ಷಣೆ (ಇ-ಕಾಮರ್ಸ್) ನಿಯಮಗಳು'ಗಳಿಗೆ ವ್ಯಾಪಕ ತಿದ್ದುಪಡಿ ತಂದಿದ್ದು, ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.

'ಹಿಂದಿನ ಬೆಲೆ' ಎಂದರೆ ಏನು?

ಸಾಮಾನ್ಯವಾಗಿ ಹಬ್ಬದ ಸೇಲ್‌ಗಳಲ್ಲಿ ರಿಯಾಯಿತಿ ನೀಡುವ ಮುನ್ನ ಉತ್ಪನ್ನಗಳ ಬೆಲೆಯನ್ನು ಕೃತಕವಾಗಿ ಏರಿಸಿ, ನಂತರ ಭಾರಿ ಆಫರ್ ನೀಡಿದಂತೆ ಬಿಂಬಿಸಲಾಗುತ್ತದೆ ಎಂಬ ದೂರುಗಳಿದ್ದವು. ಇದನ್ನು ತಡೆಯಲು ‘ಹಿಂದಿನ ಬೆಲೆ’ (Previous Price) ಎಂಬ ಸ್ಪಷ್ಟ ವ್ಯಾಖ್ಯಾನ ನೀಡಲಾಗಿದೆ. ಆಫರ್ ಘೋಷಿಸುವ ದಿನಕ್ಕಿಂತ ಹಿಂದಿನ 30 ದಿನಗಳ ಅವಧಿಯಲ್ಲಿ ಆ ಉತ್ಪನ್ನಕ್ಕೆ ವಿಧಿಸಲಾಗಿದ್ದ ಅತ್ಯಂತ ಕಡಿಮೆ ಬೆಲೆಯನ್ನು 'ಹಿಂದಿನ ಬೆಲೆ' ಎಂದು ಪರಿಗಣಿಸಲಾಗುತ್ತದೆ. ಪ್ಲಾಟ್‌ಫಾರ್ಮ್‌ಗಳು ಕಡ್ಡಾಯವಾಗಿ ಈ ಕಡಿಮೆ ಬೆಲೆ ಮತ್ತು ಪ್ರಸ್ತುತ ನೀಡುತ್ತಿರುವ ರಿಯಾಯಿತಿ ಬೆಲೆ ಎರಡನ್ನೂ ಪ್ರದರ್ಶಿಸಬೇಕು.

ರಾಷ್ಟ್ರೀಯ ಗ್ರಾಹಕ ಸಹಾಯವಾಣಿ ಜೊತೆ ಲಿಂಕ್ ಕಡ್ಡಾಯ

ಇನ್ಮುಂದೆ ಪ್ರತಿಯೊಂದು ಇ-ಕಾಮರ್ಸ್ ಸಂಸ್ಥೆಯು 'ರಾಷ್ಟ್ರೀಯ ಗ್ರಾಹಕ ಸಹಾಯವಾಣಿ'ಯ (NCH) ಒಮ್ಮುಖ ವ್ಯವಸ್ಥೆಯೊಂದಿಗೆ ಸಂಯೋಜನೆಗೊಳ್ಳುವುದು ಕಡ್ಡಾಯವಾಗಿದೆ. 2025 ರ ಒಂದೇ ವರ್ಷದಲ್ಲಿ ಎನ್‌ಸಿಎಚ್‌ಗೆ ಬಂದ ಒಟ್ಟು 17.7 ಲಕ್ಷ ದೂರುಗಳಲ್ಲಿ ಶೇಕಡಾ 29 ರಷ್ಟು ದೂರುಗಳು ಇ-ಕಾಮರ್ಸ್ ವಲಯಕ್ಕೆ ಸಂಬಂಧಿಸಿದ್ದಾಗಿದ್ದವು. ಗ್ರಾಹಕರು ಬೆಲೆಯಲ್ಲಿ ವ್ಯತ್ಯಾಸ ಅಥವಾ ಮೋಸ ಕಂಡುಕೊಂಡರೆ ಎನ್‌ಸಿಎಚ್‌ಗೆ ದೂರು ನೀಡಬಹುದು. ಗ್ರಾಹಕ ಕುಂದುಕೊರತೆ ಅಧಿಕಾರಿಯು ದಾಖಲಿಸಿದ ದೂರಿನ ಪ್ರತಿಯನ್ನು ಇ-ಕಾಮರ್ಸ್ ಸಂಸ್ಥೆಗಳು ಗ್ರಾಹಕರಿಗೆ ಕಡ್ಡಾಯವಾಗಿ ಒದಗಿಸಬೇಕಾಗುತ್ತದೆ.

ಡಾರ್ಕ್ ಪ್ಯಾಟರ್ನ್ ಹಾಗೂ ದಾರಿತಪ್ಪಿಸುವ ಹುಡುಕಾಟಗಳಿಗೆ ನಿಷೇಧ

ಗ್ರಾಹಕರು ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ವಸ್ತುಗಳನ್ನು ಸರ್ಚ್ ಮಾಡುವಾಗ ಅವರನ್ನು ದಾರಿತಪ್ಪಿಸುವ ‘ಡಾರ್ಕ್ ಪ್ಯಾಟರ್ನ್‌’ (Dark Patterns) ತಂತ್ರಗಳನ್ನು ಹೊಸ ನಿಯಮಗಳು ಕಟ್ಟುನಿಟ್ಟಾಗಿ ನಿಷೇಧಿಸುತ್ತವೆ.

ಪ್ರಾಯೋಜಿತ ಪಟ್ಟಿಗಳ (Sponsored Listings) ಬಹಿರಂಗಪಡಿಸುವಿಕೆ: ಪ್ರಾಯೋಜಿತ ಅಥವಾ ಪಾವತಿಸಿದ ಜಾಹೀರಾತು ಉತ್ಪನ್ನಗಳನ್ನು ನೈಜ (Organic) ಶೋಧನಾ ಫಲಿತಾಂಶಗಳಿಂದ ಪ್ರತ್ಯೇಕಿಸಲು "ಸ್ಪಷ್ಟ ಮತ್ತು ಎದ್ದುಕಾಣುವ" ಲೇಬಲ್‌ಗಳನ್ನು ಹಾಕಬೇಕು. ಇದರಿಂದ ಗ್ರಾಹಕರು ಜಾಹೀರಾತು ಮತ್ತು ನೈಜ ಉತ್ಪನ್ನಗಳ ನಡುವಿನ ವ್ಯತ್ಯಾಸವನ್ನು ಸುಲಭವಾಗಿ ಗುರುತಿಸಲು ಸಾಧ್ಯವಾಗುತ್ತದೆ. ಕೇಂದ್ರ ಸರ್ಕಾರದ ಈ ತಿದ್ದುಪಡಿ ನಿಯಮಗಳು ಆನ್‌ಲೈನ್ ಶಾಪಿಂಗ್ ವ್ಯವಸ್ಥೆಯಲ್ಲಿ ಗ್ರಾಹಕರ ಹಕ್ಕುಗಳನ್ನು ಎತ್ತಿಹಿಡಿಯಲಿದ್ದು, ಬೆಲೆ ನಿಗದಿಯಲ್ಲಿ ಹೆಚ್ಚಿನ ಪಾರದರ್ಶಕತೆಯನ್ನು ತರಲಿವೆ.