ಅಕ್ಟೋಬರ್ 15ರಿಂದ ಜಾರಿಗೆ ಬರಲಿರುವ ಹೊಸ ಎಂಡಿಆರ್ (MDR) ಶುಲ್ಕವನ್ನು ವಿರೋಧಿಸಿ ಅಕ್ಟೋಬರ್ 2ರಂದು 'ನೋ ಯುಪಿಐ ಡೇ' ಆಚರಿಸಲು ವ್ಯಾಪಾರಿಗಳು ನಿರ್ಧರಿಸಿದ್ದಾರೆ. ಅಂದು ಯುಪಿಐ ಬದಲಾಗಿ ಕೇವಲ ನಗದು ಅಥವಾ ಕಾರ್ಡ್ ಮೂಲಕ ಮಾತ್ರ ವಹಿವಾಟು ನಡೆಯಲಿದೆ. ಈ ಹೊಸ ತೆರಿಗೆಯು ತಮ್ಮ ಮೇಲೆ ಆರ್ಥಿಕ ಹೊರೆ ತರಲಿದೆ ಎಂದು ವರ್ತಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನವದೆಹಲಿ (ಸೆ.24): ದೇಶದಲ್ಲಿ ಅಕ್ಟೋಬರ್ 15ರಿಂದ ಜಾರಿಗೆ ಬರಲಿರುವ ಹೊಸ ಮರ್ಚೆಂಟ್ ಡಿಸ್ಕೌಂಟ್ ರೇಟ್ (MDR) ಶುಲ್ಕವನ್ನು ವಿರೋಧಿಸಿ ದೇಶಾದ್ಯಂತ ವ್ಯಾಪಾರಿಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಇದರ ಬೆನ್ನಲ್ಲೇ, ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಜನ್ಮದಿನವಾದ ಅಕ್ಟೋಬರ್ 2ರಂದು ದೇಶಾದ್ಯಂತ ‘ನೋ ಯುಪಿಐ ಡೇ’ (No UPI Day) ಆಚರಿಸಲು ಪ್ರಮುಖ ವ್ಯಾಪಾರಿ ಸಂಘಟನೆಗಳು ನಿರ್ಧರಿಸಿವೆ.
ಫೆಡರೇಷನ್ ಆಫ್ ಆಲ್ ಇಂಡಿಯಾ ವ್ಯಾಪಾರ್ ಮಂಡಲ್ (FAIVM) ಮತ್ತು ಕನ್ಫೆಡರೇಷನ್ ಆಫ್ ಆಲ್ ಇಂಡಿಯಾ ಟ್ರೇಡರ್ಸ್ (CAIT) ಸೇರಿದಂತೆ ವಿವಿಧ ಸಂಘಟನೆಗಳ ಕರೆ ನೀಡಿರುವ ಈ ನಿರ್ಧಾರದಿಂದಾಗಿ, ಅಕ್ಟೋಬರ್ 2ರಂದು ವ್ಯಾಪಾರಿಗಳು ಯುಪಿಐ ಮೂಲಕ ಪಾವತಿಗಳನ್ನು ಸ್ವೀಕರಿಸುವುದಿಲ್ಲ. ಸಾರ್ವಜನಿಕರು ಆ ದಿನ ಕೇವಲ ನಗದು (Cash) ಅಥವಾ ಕಾರ್ಡ್ ಮೂಲಕ ಮಾತ್ರ ಹಣ ಪಾವತಿಸಿ ಖರೀದಿಸಬೇಕಾಗುತ್ತದೆ.
ವ್ಯಾಪಾರಿಗಳ ವಿರೋಧಕ್ಕೆ ಕಾರಣವೇನು?
ಯುಪಿಐ ವಹಿವಾಟುಗಳ ಮೇಲೆ ಶೇ. 0.4ರಷ್ಟು ಮರ್ಚೆಂಟ್ ಡಿಸ್ಕೌಂಟ್ ರೇಟ್ (MDR) ಶುಲ್ಕ ವಿಧಿಸುವುದನ್ನು ವರ್ತಕರು ವಿರೋಧಿಸುತ್ತಿದ್ದಾರೆ. ಪೆಟ್ರೋಲ್-ಡೀಸಲ್, ದಿನಸಿ, ಎಲೆಕ್ಟ್ರಾನಿಕ್ಸ್ ಮತ್ತು ಆಹಾರ ಧಾನ್ಯಗಳ ಮಾರಾಟದಲ್ಲಿ ಈಗಾಗಲೇ ಅಂಚು (Margin) ತುಂಬ ಕಡಿಮೆ ಇದೆ. ಇಂತಹ ಪರಿಸ್ಥಿತಿಯಲ್ಲಿ ಹೊಸ ತೆರಿಗೆಯು ವ್ಯಾಪಾರಿಗಳ ಮೇಲೆ ಹೆಚ್ಚುವರಿ ಆರ್ಥಿಕ ಹೊರೆ ಹೊರಿಸಲಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಧ್ಯಪ್ರದೇಶದ ಇಂದೋರ್‌ನಲ್ಲಿ ವರ್ತಕರು ಈಗಾಗಲೇ ತಮ್ಮ ಯುಪಿಐ ಕ್ಯೂಆರ್ ಕೋಡ್ ಮೆಷಿನ್‌ಗಳನ್ನು ನೀರಿನಲ್ಲಿ ತೇಲಿಬಿಡುವುದಾಗಿ ಎಚ್ಚರಿಕೆ ನೀಡಿದ್ದಾರೆ. ಈಗಾಗಲೇ ಮಧ್ಯಪ್ರದೇಶದ ವಿವಿಧ ನಗರಗಳಲ್ಲಿ ವರ್ತಕರು ಸಾಂಕೇತಿಕವಾಗಿ 'ನೋ ಯುಪಿಐ ಡೇ' ಆಚರಿಸಿ ತಮ್ಮ ವಿರೋಧ ವ್ಯಕ್ತಪಡಿಸಿದ್ದಾರೆ.
ಯಾವೆಲ್ಲಾ ಸಂಘಟನೆಗಳ ಬೆಂಬಲವಿದೆ?
ಮಹಾರಾಷ್ಟ್ರ ಚೇಂಬರ್ ಆಫ್ ಕಾಮರ್ಸ್ (MACCIA), ಫೆಡರೇಷನ್ ಆಫ್ ರಿಟೇಲ್ ಟ್ರೇಡರ್ಸ್ ವೆಲ್ಫೇರ್ ಅಸೋಸಿಯೇಷನ್ (FRTWA), ಆಲ್ ಇಂಡಿಯಾ ಮೊಬೈಲ್ ರಿಟೇಲರ್ಸ್ ಅಸೋಸಿಯೇಷನ್ (AIMRA), ಆಲ್ ಇಂಡಿಯಾ ಜ್ಯುವೆಲ್ಲರ್ಸ್ ಅಂಡ್ ಗೋಲ್ಡ್ ಸ್ಮಿತ್ ಫೆಡರೇಷನ್ ಸೇರಿದಂತೆ ದೇಶದ ಹಲವು ಪ್ರಮುಖ ಸಂಘಟನೆಗಳು ಈ ಪ್ರತಿಭಟನೆಗೆ ಸಂಪೂರ್ಣ ಬೆಂಬಲ ಸೂಚಿಸಿವೆ.
ಏನಿದು ಎಂಡಿಆರ್ (MDR) ವಿವಾದ?
ಎಂಡಿಆರ್ ಎನ್ನುವುದು ಡಿಜಿಟಲ್ ಪಾವತಿಗಳನ್ನು ಸ್ವೀಕರಿಸುವ ಬದಲಿಗೆ ವ್ಯಾಪಾರಿಗಳಿಂದ ವಿಧಿಸಲಾಗುವ ಒಂದು ರೀತಿಯ ಪ್ರೊಸೆಸಿಂಗ್ ಶುಲ್ಕವಾಗಿದೆ. ಡಿಜಿಟಲ್ ಪಾವತಿ ವ್ಯವಸ್ಥೆಯ ಮೂಲಸೌಕರ್ಯ ಮತ್ತು ಭದ್ರತೆಯನ್ನು ಕಾಯ್ದುಕೊಳ್ಳಲು ಬ್ಯಾಂಕ್‌ಗಳು ಈ ಶುಲ್ಕವನ್ನು ಪಡೆಯುತ್ತವೆ. ಸರ್ಕಾರದ ಹೊಸ ನಿಯಮದ ಪ್ರಕಾರ, ಅಕ್ಟೋಬರ್ 15ರಿಂದ 2000 ರೂ.ಗಿಂತ ಹೆಚ್ಚಿನ ಪೀರ್-ಟು-ಮರ್ಚೆಂಟ್ (P2M) ಯುಪಿಐ ವಹಿವಾಟುಗಳ ಮೇಲೆ ಶೇ. 0.40ರಷ್ಟು ಶುಲ್ಕ ವಿಧಿಸಲಾಗುತ್ತದೆ. ಇದರ ಗರಿಷ್ಠ ಮಿತಿಯನ್ನು 300 ರೂ.ಗಳಿಗೆ ನಿಗದಿಪಡಿಸಲಾಗಿದೆ. ಅಂದರೆ ಎಷ್ಟೇ ದೊಡ್ಡ ಮೊತ್ತದ ವಹಿವಾಟು ನಡೆದರೂ ವರ್ತಕರು ಗರಿಷ್ಠ 300 ರೂ. ವರೆಗೆ ಶುಲ್ಕ ಪಾವತಿಸಬೇಕಾಗುತ್ತದೆ. ಸರ್ಕಾರದ ಈ ನಿರ್ಧಾರವು ಮುಂದಿನ ದಿನಗಳಲ್ಲಿ ವ್ಯಾಪಾರ ವಲಯದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿದೆ.

