ರಾಜ್ಯದಲ್ಲಿ ಬೈಕ್ ಟ್ಯಾಕ್ಸಿ ನಿಷೇಧಿಸಿದ್ದ ಸರ್ಕಾರದ ಕ್ರಮವನ್ನು ರದ್ದುಪಡಿಸಿರುವ ಹೈಕೋರ್ಟ್ ವಿಭಾಗೀಯ ಪೀಠ, ಬೈಕ್‌ಗಳನ್ನು ಸಾರಿಗೆ ವಾಹನಗಳಾಗಿ ಬಳಸಲು ಅನುಮತಿ ನೀಡಿದೆ. ಓಲಾ, ಉಬರ್‌ನಂತಹ ಅಗ್ರಿಗೇಟರ್ ಸಂಸ್ಥೆಗಳ ಮೇಲ್ಮನವಿಯನ್ನು ನ್ಯಾಯಾಲಯ ಮಾನ್ಯ ಮಾಡಿದೆ.
ಬೆಂಗಳೂರು: ರಾಜ್ಯದಲ್ಲಿ ಬೈಕ್‌ಗಳನ್ನು ಸಾರಿಗೆ ವಾಹನಗಳಾಗಿ (ಟ್ಯಾಕ್ಸಿ) ಬಳಸಲು ಅನುಮತಿ ನೀಡಿ ಹೈಕೋರ್ಟ್ ವಿಭಾಗೀಯ ಪೀಠ ಶುಕ್ರವಾರ ಆದೇಶಿಸಿದೆ.
ರಾಜ್ಯದಲ್ಲಿ ಬೈಕ್ ಟ್ಯಾಕ್ಸಿಗಳ ಕಾರ್ಯಾಚರಣೆ ನಿಷೇಧಿಸಿದ್ದ ರಾಜ್ಯ ಸರ್ಕಾರದ ಕ್ರಮ ಪುರಸ್ಕರಿಸಿದ್ದ ಹೈಕೋರ್ಟ್ ಏಕಸದಸ್ಯ ನ್ಯಾಯಪೀಠದ ಆದೇಶ ರದ್ದುಪಡಿಸುವಂತೆ ಕೋರಿ ಅಗ್ರಿಗೇಟರ್ ಸಂಸ್ಥೆಗಳಾದ ಓಲಾ, ಉಬರ್, ರ‍್ಯಾಪಿಡೊ ಮತ್ತಿತರರು ಸಲ್ಲಿಸಿದ್ದ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದ್ದವು.
ಅನುಮತಿ ನೀಡುವಂತೆ ಸರ್ಕಾರಕ್ಕೆ ಸೂಚನೆ
ಈ ಮೇಲ್ಮನವಿಗಳನ್ನು ಮಾನ್ಯ ಮಾಡಿರುವ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠ, ದ್ವಿಚಕ್ರ ವಾಹನ ಮಾಲೀಕರು ತಮ್ಮ ವಾಹನಗಳನ್ನು ಸಾರಿಗೆ ವಾಹನ ಎಂದು ನೋಂದಾಯಿಸಲು ಅರ್ಜಿ ಸಲ್ಲಿಸಲು ಮುಕ್ತರಾಗಿದ್ದಾರೆ. ಅಂಥ ಅರ್ಜಿಗಳನ್ನು ಕಾನೂನು ಚೌಕಟ್ಟಿನಡಿ ಪರಿಗಣಿಸಬೇಕು. ವಾಹನ ಮಾಲೀಕರಿಗೆ ಸಾರಿಗೆ ವಾಹನವಾಗಿ ನೋಂದಣಿ ನೀಡಲು ಮತ್ತು ಕಾಂಟ್ರ್ಯಾಕ್ಟ್ ಕ್ಯಾರೇಜ್ ಆಗಿ ಕಾರ್ಯನಿರ್ವಹಿಸಲು ಸರ್ಕಾರ ಅನುಮತಿ ನೀಡಬೇಕು. ಪ್ರಾದೇಶಿಕ ಸಾರಿಗೆ ಪ್ರಾಧಿಕಾರವು ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 74(2)ರ ಪ್ರಕಾರ ಅಗತ್ಯವೆಂದು ಕಂಡುಬರುವ ಷರತ್ತುಗಳನ್ನು ವಿಧಿಸಬಹುದು ಎಂದು ಪೀಠ ಹೇಳಿದೆ.
ಅಲ್ಲದೆ, ಪ್ರಾದೇಶಿಕ ಸಾರಿಗೆ ಇಲಾಖೆ ಅಧಿಕಾರಿಗಳು ಪ್ರಸ್ತುತ ನಿಯಮಾವಳಿ ಪರಿಶೀಲಿಸಬಹುದಾದರೂ ದ್ವಿಚಕ್ರ ವಾಹನಗಳನ್ನು ಸಾರಿಗೆ ವಾಹನ ಅಥವಾ ಕಾಂಟ್ರಾಕ್ಟ್ ಕ್ಯಾರೇಜ್ ಆಗಿ ಬಳಸಲು ಸಾಧ್ಯವಿಲ್ಲ ಎಂಬ ಕಾರಣ ನೀಡಿ ಅನುಮತಿ ನಿರಾಕರಿಸುವಂತಿಲ್ಲ ಎಂದು ವಿಭಾಗೀಯ ಪೀಠ ತಿಳಿಸಿದೆ. ಹಾಗೆಯೇ, 2025ರ ಏ.2ರಂದು ಏಕ ಸದಸ್ಯ ಪೀಠವು ಬೈಕ್ ಟ್ಯಾಕ್ಸಿ ಕಾರ್ಯಾಚರಣೆಗಳು ಸ್ಥಗಿತಗೊಳ್ಳುವಂತೆ ನೋಡಿಕೊಳ್ಳಬೇಕು ಎಂದು ಸರ್ಕಾರಕ್ಕೆ ನಿರ್ದೇಶಿಸಿ ಹೊರಡಿಸಿದ್ದ ಆದೇಶ ರದ್ದುಪಡಿಸಿದೆ.
ಏಕಸದಸ್ಯ ಪೀಠದ ಆದೇಶ ವಿರುದ್ಧ ಅರ್ಜಿ:
ರಾಜ್ಯ ಸರ್ಕಾರ ಬೈಕ್ ಟ್ಯಾಕ್ಸಿಗಳಿಗೆ ಯಾವುದೇ ನಿಯಮ ರೂಪಿಸಿಲ್ಲ. ನಿಯಮಗಳಿಲ್ಲದೇ ಬೈಕ್ ಟ್ಯಾಕ್ಸಿ ಕಾರ್ಯಾಚರಣೆ ಮಾಡುವಂತಿಲ್ಲ. 1988ರ ಮೋಟಾರು ವಾಹನ ಕಾಯ್ದೆಯ ಸೆಕ್ಷ ನ್ 3ರ ಅಡಿ ಅಗತ್ಯ ನಿಯಮಗಳೊಂದಿಗೆ ಸಂಬಂಧಿತ ಮಾರ್ಗಸೂಚಿಗಳನ್ನು ತಿಳಿಸದ ಹೊರತು ರಾಜ್ಯದಲ್ಲಿ ಬೈಕ್ ಟ್ಯಾಕ್ಸಿ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ. ಆರು ವಾರಗಳ ಒಳಗೆ ಎಲ್ಲಾ ಬೈಕ್ ಟ್ಯಾಕ್ಸಿ ಕಾರ್ಯಾಚರಣೆಗಳು ಸ್ಥಗಿತಗೊಳ್ಳುವಂತೆ ನೋಡಿಕೊಳ್ಳಬೇಕು ಎಂದು ರಾಜ್ಯ ಸರ್ಕಾರ ಮತ್ತು ಸಾರಿಗೆ ಇಲಾಖೆಗೆ ನಿರ್ದೇಶನ ನೀಡಿ 2025ರ ಏ.2ರಂದು ಹೈಕೋರ್ಟ್ ಏಕಸದಸ್ಯ ಪೀಠ ಆದೇಶಿಸಿತ್ತು. ಈ ಆದೇಶ ಪ್ರಶ್ನಿಸಿ ಅಗ್ರಿಗೇಟರ್ ಕಂಪನಿಗಳು ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದ್ದವು


