ನಗರದ ಹೊರವಲಯದ ಕೆಂಚನಪುರದಲ್ಲಿ ಅಕ್ರಮವಾಗಿ ಹುಕ್ಕಾಬಾರ್ ನಡೆಸುತ್ತಿದ್ದ ಸಿವಿಲ್ ಎಂಜಿನಿಯರ್ ಸೇರಿ ಇಬ್ಬರನ್ನು ಕುಂಬಳಗೋಡು ಪೊಲೀಸರು ಬಂಧಿಸಿದ್ದಾರೆ. ಹುಕ್ಕಾಬಾರ್‌ಗಳು ದುಬಾರಿಯಾದ ಕಾರಣ, ಹಣ ಉಳಿಸಲು ಆರೋಪಿಗಳು ಬಾಡಿಗೆ ಮನೆಯಲ್ಲಿ ಈ ದಂಧೆ ಆರಂಭಿಸಿದ್ದರು.
ಬೆಂಗಳೂರು: ನಗರದ ಹೊರವಲಯದಲ್ಲಿ ಮನೆ ಬಾಡಿಗೆ ಪಡೆದು ಅಕ್ರಮವಾಗಿ ‘ಹುಕ್ಕಾಬಾರ್’ ನಿರ್ಮಿಸಿ ‘ಪಾರ್ಟಿ’ ಆಯೋಜಿಸುತ್ತಿದ್ದ ಸಿವಿಲ್ ಎಂಜಿನಿಯರ್ ಸೇರಿದಂತೆ ಇಬ್ಬರನ್ನು ಕುಂಬಳಗೋಡು ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬಸವೇಶ್ವರ ನಗರ ಸಮೀಪದ ಮೀನಾಕ್ಷಿ ನಗರದ ಅಜಿತ್ ಹಾಗೂ ಹಾಸನ ಜಿಲ್ಲೆ ಕಾಳೇನಹಳ್ಳಿ ಗ್ರಾಮದ ಕೆ.ಆರ್.ವರುಣ್ ಬಂಧಿತರಾಗಿದ್ದು, ಆರೋಪಿಗಳಿಂದ 5 ಹುಕ್ಕಾ ಪಾಟ್‌ಗಳು, 3 ಹುಕ್ಕಾ ಪೈಪ್‌ಗಳು ಹಾಗೂ 2 ಬಾಕ್ಸ್‌ಗಳು ಸೇರಿದಂತೆ ಇತರೆ ವಸ್ತುಗಳು ಜಪ್ತಿಯಾಗಿವೆ.
ಕುಂಬಳಗೋಡು ಹತ್ತಿರದ ಕೆಂಚನಪುರ ಗ್ರಾಮದಲ್ಲಿ ಮನೆಯೊಂದರಲ್ಲಿ ಯುವಕರು ಜಮಾಯಿಸುತ್ತಿದ್ದನ್ನು ಗಸ್ತು ಪೊಲೀಸರಿಗೆ ಗೊತ್ತಾಗಿದೆ. ತಕ್ಷಣವೇ ಆ ಮನೆ ಮೇಲೆ ಕುಂಬಳಗೋಡು ಠಾಣೆ ಇನ್ಸ್‌ಪೆಕ್ಟರ್ ಕುಮಾರ್ ನೇತೃತ್ವದ ತಂಡ ದಾಳಿ ನಡೆಸಿದಾಗ ‘ಹುಕ್ಕಾ ಬಾರ್’ ಬಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹುಕ್ಕಾ ಬಾರ್‌ಗೆ ಗಂಟೆಗೆ 650 ರಿಂದ 700 ದರ
ಬಸವೇಶ್ವರನಗರದಲ್ಲಿ ನೆಲೆಸಿದ್ದ ಅಜಿತ್ ನಾಯಕ್, ದೊಮ್ಮಲೂರು ಸಮೀಪದ ಖಾಸಗಿ ಕಂಪನಿಯಲ್ಲಿ ಸಿವಿಲ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ. ತನ್ನ ಸ್ನೇಹಿತರ ಜತೆ ವಾರಾಂತ್ಯಗಳಲ್ಲಿ ಹುಕ್ಕಾ ಪಾರ್ಟಿಗಳಿಗೆ ಗೆಳೆಯರ ಜತೆ ಹೋಗುವ ಖಯಾಲಿ ಇತ್ತು. ಆದರೆ ಆ ಹುಕ್ಕಾ ಬಾರ್‌ಗಳಲ್ಲಿ ಪ್ರತಿ ಗಂಟೆಗೆ 650 ರು ನಿಂದ 700 ವರೆಗೆ ದರ ಇತ್ತು. ಆದರೆ ಕೆಲವು ಬಾರಿ ನಾಲ್ಕೈದು ಸ್ನೇಹಿತರು ಹೋದರೆ ಗಂಟೆಗೆ 5 ರಿಂದ 6 ಸಾವಿರ ರು ವರೆಗೆ ವಿನಿಯೋಗಿಸಲಾಗುತ್ತಿತ್ತು. ಕೆಲವು ಬಾರಿ ಇದು ಅಜಿತ್ ಹಾಗೂ ಆತನ ಗೆಳೆಯರಿಗೆ ದುಬಾರಿಯಾಗುತ್ತಿತ್ತು. ಹಣ ಹೊಂದಿಸಲು ಪರದಾಡುತ್ತಿದ್ದರು. ಆಗ ತಾವೇ ಹುಕ್ಕಾ ಬಾರ್ ತೆರೆದರೆ ಹಣ ಉಳಿಸಬಹುದು ಎಂದು ಆತ ಯೋಜಿಸಿದ್ದಾನೆ. ಇದಕ್ಕೆ ಗೆಳೆಯ ವರುಣ್ ಸಾಥ್ ಕೊಟ್ಟಿದ್ದಾನೆ.
ಅಂತೆಯೇ ಹುಕ್ಕಾ ಬಾರ್ ನಿರ್ಮಾಣ ಬಗ್ಗೆ ಅಜಿತ್ ಮಾಹಿತಿ ಕಲೆ ಹಾಕಿದ್ದಾನೆ. ಅದೇ ವೇಳೆ ನಾಗರಬಾವಿ ಸಮೀಪ ಹುಕ್ಕಾ ಬಾರ್‌ವೊಂದು ಬಾಗಿಲು ಮುಚ್ಚಿರುವ ಸಂಗತಿ ಆರೋಪಿಗಳಿಗೆ ಗೊತ್ತಾಯಿತು. ಕೂಡಲೇ ಆ ಬಾರ್‌ನ ಮಾಲಿಕರನ್ನು ಭೇಟಿಯಾಗಿ ಅದರಲ್ಲಿದ್ದ ಉಪಕರಣಗಳನ್ನು ಖರೀದಿಸಿದ್ದಾರೆ. ನಂತರ ಕೆಂಚನಪುರದಲ್ಲಿ ಮನೆ ಬಾಡಿಗೆ ಪಡೆದ ಅಜಿತ್, ಆ ಮನೆಯಲ್ಲಿ ಅಕ್ರಮವಾಗಿ ‘ಹುಕ್ಕಾ ಬಾರ್’ ನಿರ್ಮಿಸಿ ಪಾರ್ಟಿಗಳನ್ನು ಆಯೋಜಿಸುತ್ತಿದ್ದ ಎಂದು ಅಧಿಕಾರಿಗಳು ಹೇಳಿದ್ದಾರೆ.
ಬಯಲಾಗಿದ್ದು ಹೇಗೆ?
ಕೆಲ ತಿಂಗಳಿಂದ ಕೆಂಚನಪುರ ಗ್ರಾಮದಲ್ಲಿ ಅಪರಿಚಿತ ಯುವಕರ ಓಡಾಟ ಹೆಚ್ಚಾಗಿದೆ. ಮನೆಯೊಂದರ ಬಳಿ ಹಲವು ಬೈಕ್‌ಗಳು ನಿಲ್ಲುತ್ತಿವೆ ಎಂಬ ಮಾಹಿತಿ ಕುಂಬಳಗೋಡು ಠಾಣೆ ಗಸ್ತು ಪೊಲೀಸರಿಗೆ ಮಾಹಿತಿ ಸಿಕ್ಕಿದೆ. ಈ ಸುಳಿವು ಆಧರಿಸಿ ಆ ಮನೆ ಮೇಲೆ ದಾಳಿ ನಡೆಸಿದಾಗ ಹುಕ್ಕಾ ಬಾರ್ ಪತ್ತೆಯಾಗಿದೆ. ಕಳೆದೊಂದು ವರ್ಷದಿಂದ ಅಜಿತ್ ಮನೆ ಬಾಡಿಗೆ ಪಡೆದು ಹುಕ್ಕಾಬಾರ್ ನಡೆಸಿದ್ದಾನೆ. ನಗರ ಹೊರವಲಯ ಹಳ್ಳಿಯಲ್ಲಿ ಹುಕ್ಕಾ ಬಾರ್ ಪತ್ತೆಯಾಗುವುದಿಲ್ಲ ಎಂದು ಆತ ಅಂದಾಜಿಸಿದ್ದ. ಆದರೆ ಆತನ ತಿಳಿವಳಿಕೆ ತಪ್ಪಾಗಿದೆ. ಈ ಬಗ್ಗೆ ಮನೆ ಮಾಲಿಕರ ಪಾತ್ರದ ಕುರಿತು ತನಿಖೆ ನಡೆದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.


