ಮುಂಗಾರು ದುರ್ಬಲಗೊಂಡಿದೆ. ರಾಜ್ಯದಲ್ಲಿ ಮಳೆಯ ಕೊರತೆ ಶುರುವಾಗಿದೆ. ಈ ನಡುವೆ ಮಾನ್ಸೂನ್‌ ಹಿಮ್ಮೆಟ್ಟುವಿಕೆ ಪ್ರಕ್ರಿಯೆ ಶುರುವಾಗಿದೆ. ಈ ಕುರಿತ ಒಂದು ವರದಿ ಇಲ್ಲಿದೆ.

ಬೆಂಗಳೂರು: ಈ ವರ್ಷ ದೇಶದಲ್ಲಿ ಅಂದುಕೊಂಡಷ್ಟು ಮಳೆಯೇ ಆಗಿಲ್ಲ. ಇದರಿಂದ ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳ ಅನ್ನದಾತರು ಕಂಗಾಲಾಗಿದ್ದಾರೆ. ಇದರ ಮಧ್ಯೆ ಮಾನ್ಸೂನ್‌ ಹಿಮ್ಮೆಟ್ಟುವ ಪ್ರಕ್ರಿಯೆ ಶುರುವಾಗಿದೆ.. ಕರ್ನಾಟಕದಲ್ಲೂ ಮುಂಗಾರು ದುರ್ಬಲಗೊಂಡಿದ್ದು, ಹವಾಮಾನ ಇಲಾಖೆ ಮಳೆಯ ಬಗ್ಗೆ ಭವಿಷ್ಯ ನುಡಿದಿದೆ.

ಹೌದು, ಸೆಪ್ಟೆಂಬರ್‌ ಅಂತ್ಯದ ಒಳಗಾಗಿ ಮಾನ್ಸೂನ್‌ ಸಂಪೂರ್ಣವಾಗಿ ನಿರ್ಗಮನವಾಗಲಿದೆ. ಮಾನ್ಸೂನ್‌ ಹಿಮ್ಮೆಟ್ಟುವ ವೇಳೆ ಅನೇಕ ರಾಜ್ಯಗಳ ಮೇಲೆ ಸಹಜವಾಗಿಯೇ ಪರಿಣಾಮ ಬೀಳಲಿದೆ. ಗಾಳಿಯ ದಿಕ್ಕು ಬದಲಾಗುತ್ತದೆ. ತೇವಾಂಶವುಳ್ಳ ಗಾಳಿಯು ಒಂದು ನಿರ್ದಿಷ್ಟ ಪ್ರದೇಶದ ಕಡೆಗೆ ಹಿಂತಿರುಗುತ್ತದೆ. ಇದರಿಂದ ಭಾರೀ ಮಳೆಯಾದರೂ ಅಚ್ಚರಿ ಇಲ್ಲ. ದಕ್ಷಿಣ ಭಾರತದ ಕೆಲವು ಭಾಗಗಳಲ್ಲಿ ವಿಶೇಷವಾಗಿ ತಮಿಳುನಾಡಿನಲ್ಲಿ ಮಳೆ ಬೀಳಲಿದೆ. ವಿಶೇಷ ಅಂದ್ರೆ ಈ ಬಾರಿಯ ಮಾನ್ಸೂನ್‌ ಆರ್ಭಟದಿಂದ ಆಗಮಿಸಿತ್ತು. ಆದರೆ ಹೋಗುವಾಗ ಶಾಂತ ಮತ್ತು ನಿಧಾನವಾಗಿ ಹೋಗಲಿದೆ. ಇನ್ನು, ಈ ಮಾನ್ಸುನ್‌ ಹಿಮ್ಮೆಟ್ಟುವ ಪ್ರಕ್ರಿಯೆಯು ಅಕ್ಟೋಬರ್‌ ಮತ್ತು ನವೆಂಬರ್‌ನಲ್ಲಿ ಉತ್ತಮ ಮಳೆಗೆ ಅವಕಾಶ ಮಾಡಿಕೊಡಲಿದೆ.

ಯಾವಾಗಿಂದ?

ಯಾವಾಗಲೂ ದೇಶದ ವಾಯುವ್ಯ ತುದಿಯಲ್ಲಿ ಮಾನ್ಸೂನ್ ನಿರ್ಗಮನ ಪ್ರಾರಂಭವಾಗುತ್ತದೆ. ಪಶ್ಚಿಮ ರಾಜಸ್ಥಾನ ಮತ್ತು ಕಚ್‌ನಿಂದ ಶುರುವಾಗುತ್ತದೆ. ಹವಾಮಾನ ಇಲಾಖೆಯ ನಿಯಮಗಳ ಪ್ರಕಾರ.. ಸೆಪ್ಟೆಂಬರ್ 1 ರ ಮೊದಲು ದೇಶದ ಯಾವುದೇ ಭಾಗದಿಂದ ಮಾನ್ಸೂನ್ ಹಿಂತೆಗೆತ ಪ್ರಾರಂಭಿಸುವುದಿಲ್ಲ. ಒಂದು ಪ್ರದೇಶದಲ್ಲಿ ಸತತ ಐದು ದಿನಗಳವರೆಗೆ ಮಳೆಯಾಗದಿದ್ದರೆ.. ಗಾಳಿಯ ಒತ್ತಡ ಬದಲಾದರೆ ಮತ್ತು ಆರ್ದ್ರತೆಯ ಮಟ್ಟ ಕಡಿಮೆಯಾಗಲು ಪ್ರಾರಂಭಿಸಿದರೆ.. ಹವಾಮಾನ ಇಲಾಖೆಯು ಆ ಪ್ರದೇಶದಿಂದ ಮಾನ್ಸೂನ್ ಹಿಂತೆಗೆತ ಎಂದು ಪರಿಗಣಿಸುತ್ತದೆ.

ರಾಜಸ್ಥಾನ ಮತ್ತು ಕಚ್‌ನಿಂದ ನಿರ್ಗಮಿಸಿದ ನಂತರ ಮಾನ್ಸೂನ್ ಕ್ರಮೇಣ ಪಂಜಾಬ್, ಹರಿಯಾಣ, ದೆಹಲಿ ಮತ್ತು ಗುಜರಾತ್‌ನ ಉಳಿದ ಭಾಗಗಳಿಂದ ಹಿಮ್ಮೆಟ್ಟುತ್ತದೆ. ನಂತರ ಮಧ್ಯಪ್ರದೇಶ, ಉತ್ತರ ಪ್ರದೇಶ ಮತ್ತು ಬಿಹಾರದಂತಹ ರಾಜ್ಯಗಳಿಗೆ ಚಲಿಸುತ್ತದೆ. ಅದು ಜಾರ್ಖಂಡ್, ಪಶ್ಚಿಮ ಬಂಗಾಳ ಮತ್ತು ಈಶಾನ್ಯ ರಾಜ್ಯಗಳಿಂದ ತನ್ನ ಹಿಮ್ಮೆಟ್ಟುವಿಕೆಯನ್ನ ಪ್ರಾರಂಭಿಸುತ್ತದೆ.

ಮಹಾರಾಷ್ಟ್ರ, ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು ಮತ್ತು ಕೇರಳದಿಂದ ಕೊನೆಯದಾಗಿ ಹೊರಡುತ್ತದೆ. ಇದರರ್ಥ ಅದು ಬಂದ ಮಾರ್ಗಕ್ಕೆ ವಿರುದ್ಧವಾದ ಮಾರ್ಗವನ್ನು ಅನುಸರಿಸಿ ದೇಶವನ್ನು ಬಿಡುತ್ತದೆ. ಮಾನ್ಸೂನ್ ಇಡೀ ದೇಶದಿಂದ ಸಂಪೂರ್ಣವಾಗಿ ಹಿಂದೆ ಸರಿಯಲು ಸಾಮಾನ್ಯವಾಗಿ ಒಂದು ತಿಂಗಳಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ..

ರಾಜ್ಯದ ಇವತ್ತಿನ ಮಳೆ ಪರಿಸ್ಥಿತಿ ಹೇಗಿದೆ?

ಕರ್ನಾಟಕದಲ್ಲಿ ಮುಂಗಾರು ಸಂಪೂರ್ಣ ದುರ್ಬಲಗೊಂಡಿದೆ. ಕರಾವಳಿ, ದಕ್ಷಿಣ ಮತ್ತು ಉತ್ತರ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಹಗುರವಾಗಿ ಮಳೆ ಬೀಳುವ ಮುನ್ಸೂಚನೆಯನ್ನ ಹವಾಮಾನ ಇಲಾಖೆ ನೀಡಿದೆ. ಸೆಪ್ಟೆಂಬರ್‌ 13 ರಂದು ವಿವಿಧ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಹಗುರ ಮಳೆಯಾಗಲಿದೆ. ಇನ್ನು ಉತ್ತರ ಒಳನಾಡಿನ ಬೀದರ್, ಕಲಬುರಗಿ, ರಾಯಚೂರು, ಯಾದಗಿರಿಯಲ್ಲೂ ಮಳೆ ಬೀಳುವ ಸೂಚನೆ ನೀಡಲಾಗಿದೆ. ಇನ್ನು ದಕ್ಷಿಣ ಒಳನಾಡಿನಲ್ಲಿ ಮೈಸೂರು, ಚಾಮರಾಜನಗರ, ಬೆಂಗಳೂರು, ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳ ಒಂದೆರಡು ಭಾಗಗಳಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ.