ಬೆಂಗಳೂರಿನ ರಾಜಾನುಕುಂಟೆಯ ನಿರ್ಜನ ಪ್ರದೇಶದಲ್ಲಿ ಪಾಪಿಗಳು ಬಿಟ್ಟು ಹೋಗಿದ್ದ ನವಜಾತ ಹೆಣ್ಣು ಮಗುವನ್ನು ವಾಕಿಂಗ್ ಹೋಗುತ್ತಿದ್ದ ಮಂಜುನಾಥ್ ಎಂಬುವವರು ಸಕಾಲದಲ್ಲಿ ರಕ್ಷಿಸಿದ್ದಾರೆ. ಸದ್ಯ ಮಗು ಆಸ್ಪತ್ರೆಯಲ್ಲಿ ಸುರಕ್ಷಿತವಾಗಿದ್ದು, ಮಗುವನ್ನು ಆಟೋದಲ್ಲಿ ಬಂದು ಬಿಟ್ಟು ಹೋದ ಪೋಷಕರ ಪತ್ತೆಗಾಗಿ ರಾಜಾನುಕುಂಟೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಬೆಂಗಳೂರು (ನೆಲಮಂಗಲ): ಹೆಣ್ಣು ಮಗು ಎಂಬ ಕಾರಣಕ್ಕೋ ಅಥವಾ ಯಾವುದೋ ಸಾಮಾಜಿಕ ಕಳಂಕಕ್ಕೆ ಹೆದರಿಯೋ, ಹೆತ್ತ ಮಗುವನ್ನೇ ನಿರ್ಜನ ಪ್ರದೇಶದಲ್ಲಿ ಬಿಟ್ಟು ಹೋದ ಅಮಾನವೀಯ ಘಟನೆ ಬೆಂಗಳೂರಿನ ರಾಜಾನುಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಬೆಕ್ಕಿನ ಮರಿ ಅಳುವಿನಂತೆ ಕೇಳಿದ ದನಿ
ಇಂದು ಮುಂಜಾನೆ ರಾಜಾನುಕುಂಟೆಯ ನಿರ್ಜನ ಪ್ರದೇಶದ ರಸ್ತೆಯಲ್ಲಿ ಮಂಜುನಾಥ್ ಎಂಬುವವರು ವಾಕಿಂಗ್ ಹೋಗುತ್ತಿದ್ದರು. ಈ ವೇಳೆ ಹಳ್ಳದ ಪಕ್ಕದಲ್ಲಿ ಬೆಕ್ಕಿನ ಮರಿ ಅಳುವಿನಂತೆ ಸಣ್ಣದಾಗಿ ದನಿ ಕೇಳಿಬಂದಿದೆ. ಅನುಮಾನಗೊಂಡು ಹತ್ತಿರ ಹೋಗಿ ನೋಡಿದ ಮಂಜುನಾಥ್ ಅವರಿಗೆ ಕಂಡ ದೃಶ್ಯ ಎದೆ ನಡುಗಿಸುವಂತಿತ್ತು. ಅಲ್ಲಿ ಬಟ್ಟೆಯಲ್ಲಿ ಸುತ್ತಿಟ್ಟಿದ್ದ ನವಜಾತ ಶಿಶುವೊಂದು ಅಳುತ್ತಿತ್ತು.
ರಕ್ತದ ಕಲೆಗಳು ಆರಿರಲಿಲ್ಲ
ಬೆಳಿಗ್ಗೆ ವಾಕಿಂಗ್ ಬಂದಿದ್ದ ಮಂಜುನಾಥ್ ಅವರು ಭಯಭೀತರಾಗಿ ತಕ್ಷಣವೇ ತಮ್ಮ ಸ್ನೇಹಿತನಿಗೆ ಕರೆ ಮಾಡಿ ಸ್ಥಳಕ್ಕೆ ಕರೆಸಿಕೊಂಡಿದ್ದಾರೆ. ಮಗು ಆಗತಾನೇ ಹುಟ್ಟಿದ್ದು, ಮಗುವಿನ ಮೈಮೇಲಿದ್ದ ರಕ್ತದ ಕಲೆಗಳು ಕೂಡ ಆರಿರಲಿಲ್ಲ. ಇಷ್ಟು ಚಿಕ್ಕ ಮಗುವನ್ನು ಯಾವುದೋ ಪಾಪಿಗಳು ರಸ್ತೆಯ ಬದಿಯಲ್ಲಿ ಬಿಟ್ಟು ಹೋಗಿದ್ದರು. ಒಂದು ವೇಳೆ ಮಂಜುನಾಥ್ ಅವರು ಮಗುವನ್ನು ಗಮನಿಸದೇ ಹೋಗಿದ್ದರೆ ಅಕ್ಕಪಕ್ಕದ ಬೀದಿನಾಯಿಗಳಿಗೆ ಆ ಮಗು ಆಹಾರವಾಗಿಬಿಡುತ್ತಿತ್ತು.
ಪೊಲೀಸ್ ಠಾಣೆಗೆ ಮಗು ರವಾನೆ
ತಡ ಮಾಡದ ಮಂಜುನಾಥ್ ಮತ್ತು ಅವರ ಸ್ನೇಹಿತರು ಕೂಡಲೇ ಮಗುವನ್ನು ಎತ್ತಿಕೊಂಡು ರಾಜಾನುಕುಂಟೆ ಪೊಲೀಸ್ ಠಾಣೆಗೆ ಓಡಿದ್ದಾರೆ. ವಿಷಯ ತಿಳಿದ ಪೊಲೀಸರು ಮಗುವನ್ನು ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಅದೃಷ್ಟವಶಾತ್ ಮಗು ಸದ್ಯ ಆರೋಗ್ಯವಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಈ ಘಟನೆ ಸಂಬಂಧ ರಾಜಾನುಕುಂಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಪ್ರಾಥಮಿಕ ತನಿಖೆಯ ವೇಳೆ, ಅಪರಿಚಿತರು ಆಟೋದಲ್ಲಿ ಬಂದು ನಿರ್ಜನ ಪ್ರದೇಶದಲ್ಲಿ ಮಗುವನ್ನು ಬಿಟ್ಟು ಹೋಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಪೊಲೀಸರು ಮಗುವಿನ ಪೋಷಕರ ಪತ್ತೆಗೆ ಬಲೆ ಬೀಸಿದ್ದಾರೆ.
ಹೆಣ್ಣು ಮಗು ಎಂಬ ಕಾರಣಕ್ಕೆ ಈ ರೀತಿ ಮಾಡಿದ್ದಾರೆಯೇ ಎಂಬ ಅನುಮಾನ ಕೂಡ ವ್ಯಕ್ತವಾಗಿದ್ದು, ಅಮಾಯಕ ಜೀವವೊಂದನ್ನು ನಡುರಸ್ತೆಯಲ್ಲಿ ಬಿಟ್ಟು ಹೋದವರ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.


