ಟೀಮ್ ಇಂಡಿಯಾದ ಮಾಜಿ ವೇಗಿ ಹಾಗೂ ಕೆಎಸ್‌ಸಿಎ ಅಧ್ಯಕ್ಷ ವೆಂಕಟೇಶ್ ಪ್ರಸಾದ್, ಬೆಂಗಳೂರಿನ ಭೀಕರ ಸಂಚಾರ ದಟ್ಟಣೆ ತಪ್ಪಿಸಲು 'ನಮ್ಮ ಮೆಟ್ರೋ'ದಲ್ಲಿ ಕೆಂಗೇರಿಯಿಂದ ಕಬ್ಬನ್ ಪಾರ್ಕ್‌ಗೆ ಪ್ರಯಾಣಿಸಿದರು. ತಮ್ಮ ಈ ವೇಗದ ಹಾಗೂ ಸುಲಭ ಪಯಣದ ಅನುಭವವನ್ನು ಅವರು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಬೆಂಗಳೂರು (ಸೆ.10): ಸಿಲಿಕಾನ್ ಸಿಟಿ ಬೆಂಗಳೂರಿನ ಭೀಕರ ರಸ್ತೆ ಸಂಚಾರ ದಟ್ಟಣೆಗೆ (Traffic) ಬಲಿಬೀಳದೆ, ಸಾರ್ವಜನಿಕ ಸಾರಿಗೆಯಾದ 'ನಮ್ಮ ಮೆಟ್ರೋ'ವನ್ನು ನೆಚ್ಚಿಕೊಳ್ಳುವ ಪ್ರಮುಖ ಗಣ್ಯರ ಪಟ್ಟಿಗೆ ಟೀಮ್ ಇಂಡಿಯಾದ ಮಾಜಿ ವೇಗದ ಬೌಲರ್ ಹಾಗೂ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ (KSCA) ಅಧ್ಯಕ್ಷ ವೆಂಕಟೇಶ್ ಪ್ರಸಾದ್ (Venkatesh Prasad) ಹೊಸದಾಗಿ ಸೇರ್ಪಡೆಯಾಗಿದ್ದಾರೆ. ಕೆಂಗೇರಿಯಿಂದ ಕಬ್ಬನ್ ಪಾರ್ಕ್‌ಗೆ ಮೆಟ್ರೋದಲ್ಲಿ ಅತ್ಯಂತ ಸಿಂಪಲ್ ಆಗಿ ಸಂಚರಿಸಿದ ಅವರು, ತಮ್ಮ ಈ ವೇಗದ ಹಾಗೂ ಸುಲಭ ಪಯಣದ ಅನುಭವವನ್ನು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ವೆಂಕಟೇಶ್ ಪ್ರಸಾದ್ ಅವರು ಕೆಎಸ್‌ಸಿಎ ಕಾರ್ಯದರ್ಶಿ ಸಂತೋಷ್ ಮೆನನ್ ಅವರೊಂದಿಗೆ ಕೆಂಗೇರಿ ಮೆಟ್ರೋ ನಿಲ್ದಾಣದಿಂದ ಕಬ್ಬನ್ ಪಾರ್ಕ್ (ಎಂ. ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ) ನಿಲ್ದಾಣದವರೆಗೆ ಮೆಟ್ರೋ ರೈಲಿನಲ್ಲಿ ಪ್ರಯಾಣ ಬೆಳೆಸಿದರು. ಈ ವೇಳೆ ಸಾಮಾನ್ಯ ಪ್ರಯಾಣಿಕರಂತೆ ಆಸನದಲ್ಲಿ ಕುಳಿತು ಪ್ರಯಾಣಿಸಿದ ಫೋಟೋವನ್ನು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

"ಧನ್ಯವಾದಗಳು ನಮ್ಮ ಮೆಟ್ರೋ":

ತಮ್ಮ ಮೆಟ್ರೋ ಪ್ರಯಾಣದ ಅನುಭವವನ್ನು ಹಂಚಿಕೊಂಡಿರುವ ವೆಂಕಟೇಶ್ ಪ್ರಸಾದ್, ಕೆಎಸ್‌ಸಿಎ ಕಾರ್ಯದರ್ಶಿ ಶ್ರೀ ತೋಷ್ ಮೆನನ್ ಅವರೊಂದಿಗೆ ಕೆಂಗೇರಿಯಿಂದ ಕಬ್ಬನ್ ಪಾರ್ಕ್‌ವರೆಗೆ (ಎಂ. ಚಿನ್ನಸ್ವಾಮಿ ಕ್ರೀಡಾಂಗಣ) 'ನಮ್ಮ ಮೆಟ್ರೋ'ದಲ್ಲಿ ಪಯಣಿಸಿದೆ. ಸುಮಾರು 20 ಕಿಲೋಮೀಟರ್‌ಗಳಷ್ಟು ದೀರ್ಘ ದೂರವನ್ನು ಕೇವಲ 35 ನಿಮಿಷಗಳಲ್ಲಿ ತಲುಪಿದೆವು! ಇದೊಂದು ಅದ್ಭುತ ಅನುಭವ, ಅತ್ಯಂತ ಅನುಕೂಲಕರ ಮತ್ತು ಅತ್ಯುತ್ತಮ ಸೇವೆ. ಧನ್ಯವಾದಗಳು ನಮ್ಮ ಮೆಟ್ರೋ ಎಂದು ಬರೆದುಕೊಂಡು ಬಿಎಂಆರ್‌ಸಿಎಲ್ (BMRCL) ಸೇವೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮೊನ್ನೆ ಶ್ರೀನಾಥ್, ಇಂದು ವೆಂಕಟೇಶ್ ಪ್ರಸಾದ್!

ವಿಶೇಷವೆಂದರೆ, ಇತ್ತೀಚೆಗಷ್ಟೇ ಭಾರತ ಕ್ರಿಕೆಟ್ ತಂಡದ ಮತ್ತೊಬ್ಬ ದಂತಕಥೆ ಹಾಗೂ ಮಾಜಿ ವೇಗಿ ಜಾವಗಲ್ ಶ್ರೀನಾಥ್ (Javagal Srinath) ಕೂಡ ಬೆಂಗಳೂರಿನ ಕಾರುಗಳ ಟ್ರಾಫಿಕ್ ಕಿರಿಕಿರಿ ತಪ್ಪಿಸಲು 'ನಮ್ಮ ಮೆಟ್ರೋ'ವನ್ನು ನೆಚ್ಚಿಕೊಂಡು ಸಿಂಪಲ್ ಆಗಿ ಪ್ರಯಾಣಿಸಿದ್ದರು. ಶ್ರೀನಾಥ್ ಮೆಟ್ರೋದಲ್ಲಿ ನಿಂತುಕೊಂಡು ಪ್ರಯಾಣಿಸುತ್ತಿದ್ದ ಫೋಟೋಗಳು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್ ಆಗಿ ಅಪಾರ ಮೆಚ್ಚುಗೆ ಗಳಿಸಿದ್ದವು. ಇದೀಗ ಅವರ ಜತೆಗಾರರಾಗಿದ್ದ ವೆಂಕಟೇಶ್ ಪ್ರಸಾದ್ ಕೂಡ ಅದೇ ಮೆಟ್ರೋ ಹಾದಿ ಹಿಡಿದಿರುವುದು ಕ್ರಿಕೆಟ್ ಅಭಿಮಾನಿಗಳಿಗೆ ಹಾಗೂ ನಗರದ ಜನತೆಗೆ ಸಂತಸ ತಂದಿದೆ.

ವೆಂಕಟೇಶ್ ಪ್ರಸಾದ್ ಕ್ರಿಕೆಟ್ ಪ್ರಯಾಣ

ಭಾರತ ಕಂಡ ಅತ್ಯುತ್ತಮ ವೇಗದ ಬೌಲರ್‌ಗಳಲ್ಲಿ ಒಬ್ಬರಾದ ವೆಂಕಟೇಶ್ ಪ್ರಸಾದ್ ಅವರು 2001 ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು. 2025 ರ ಕೊನೆಯಲ್ಲಿ ನಡೆದ ಚುನಾವಣೆಯಲ್ಲಿ ಗೆದ್ದು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ (KSCA) ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿ ಪ್ರಸ್ತುತ ರಾಜ್ಯ ಕ್ರಿಕೆಟ್ ಆಡಳಿತವನ್ನು ಮುನ್ನಡೆಸುತ್ತಿದ್ದಾರೆ.

ನಿವೃತ್ತಿಯ ನಂತರ 2007 ರಿಂದ 2009 ರವರೆಗೆ ಭಾರತೀಯ ಪುರುಷರ ಕ್ರಿಕೆಟ್ ತಂಡದ ಬೌಲಿಂಗ್ ಕೋಚ್ ಆಗಿ, ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB), ಚೆನ್ನೈ ಸೂಪರ್ ಕಿಂಗ್ಸ್ (CSK) ಮತ್ತು ಕಿಂಗ್ಸ್ XI ಪಂಜಾಬ್ (KXIP) ತಂಡಗಳಿಗೆ ಕೋಚ್‌ ಆಗಿ ಕಾರ್ಯನಿರ್ವಹಿಸಿದ್ದಾರೆ. ಜೊತೆಗೆ, ಬಿಸಿಸಿಐ ಜೂನಿಯರ್ ಆಯ್ಕೆ ಸಮಿತಿ ಅಧ್ಯಕ್ಷರಾಗಿ 2018 ರಲ್ಲಿ ಭಾರತ ಅಂಡರ್-19 ವಿಶ್ವಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಪ್ರಸ್ತುತ ಪ್ರಮುಖ ಕ್ರಿಕೆಟ್ ವಿಶ್ಲೇಷಕರಾಗಿಯೂ ಗುರುತಿಸಿಕೊಂಡಿದ್ದಾರೆ. ರಸ್ತೆಯಲ್ಲಿ ಗಂಟೆಗಟ್ಟಲೆ ಟ್ರಾಫಿಕ್‌ನಲ್ಲಿ ಸಿಲುಕುವ ಬದಲು, ಕೇವಲ 35 ನಿಮಿಷದಲ್ಲಿ 20 ಕಿ.ಮೀ ದೂರ ಕ್ರಮಿಸಿ ಕ್ರೀಡಾಂಗಣ ತಲುಪಿದ ಇವರ ಪಯಣ, 'ನಮ್ಮ ಮೆಟ್ರೋ' ನಗರದ ಲೈಫ್‌ಲೈನ್ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.

View post on Instagram