ಸಾಕ್ಷ್ಯಗಳ ವಿಚಾರಣೆಗೆ ತಾವು ಖುದ್ದು ಹಾಜರಿರಲು ಅವಕಾಶ ಮಾಡಿಕೊಡುವಂತೆ ಕೋರಿ ದರ್ಶನ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಇವತ್ತು ಹೈಕೋರ್ಟ್‌ ನಡೆಸಿತು. ಈ ವೇಳೆ ಪ್ರತಿದಿನ ಖುದ್ದು ಹಾಜರಿಗೆ ಅವಕಾಶ ನೀಡಲು ನಿರಾಕರಿಸಿದ ನ್ಯಾಯಾಲಯ, ಮಧ್ಯಂತರ ಪರಿಹಾರದ ರೂಪದಲ್ಲಿ ಕೆಲ ಮಾರ್ಗಸೂಚಿಗಳನ್ನು ನೀಡಿತು. ಪ್ರಮುಖ ಸಾಕ್ಷಿಗಳ ವಿಚಾರಣೆ ವೇಳೆ 3 ದಿನ ಖುದ್ದು ಹಾಜರಿಗೆ ಅವಕಾಶ ನೀಡೋಣ ಎಂದಿದೆ.

ಬೆಂಗಳೂರು: ರೇಣುಕಾಸ್ವಾಮಿ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ನಟ ದರ್ಶನ್ ಅವರು ಮುಂದೆ ನಡೆಯಲಿರುವ ಸಾಕ್ಷ್ಯಗಳ ವಿಚಾರಣೆ ಸಂದರ್ಭದಲ್ಲಿಖುದ್ದು ಸೆಷನ್ಸ್ ಕೋರ್ಟ್‌ನಲ್ಲಿ ಹಾಜರಿರಲು ಅವಕಾಶ ಮಾಡಿಕೊಡುವಂತೆ ಕೋರಿ ಹೈಕೋರ್ಟ್‌ ಮೆಟ್ಟಿಲೇರಿದ್ದರು. ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿವಂಗತ ಜೆ. ಜಯಲಲಿತಾ ಅವರ ಅಕ್ರಮ ಆಸ್ತಿ ಗಳಿಕೆ ಪ್ರಕರಣದ ಮಾದರಿಯಲ್ಲೇ, ಪರಪ್ಪನ ಅಗ್ರಹಾರ ಜೈಲಿನ ಆವರಣದಲ್ಲೇ ಇರುವ ಕೋರ್ಟ್‌ನಲ್ಲಿ ದರ್ಶನ್ ವಿಚಾರಣೆ ನಡೆಸುವ ಬಗ್ಗೆ ಹೈಕೋರ್ಟ್ ಮಹತ್ವದ ಸಲಹೆ ನೀಡಿದೆ.

ದರ್ಶನ್ ಹೈಕೋರ್ಟ್ ಮೆಟ್ಟಿಲೇರಿದ್ದೇಕೆ?

ಪ್ರಸ್ತುತ ಸೆಷನ್ಸ್ ಕೋರ್ಟ್‌ನಲ್ಲಿ ನಡೆಯುತ್ತಿರುವ ಕಲಾಪದಲ್ಲಿ ದರ್ಶನ್ ಅವರನ್ನು ವಿಡಿಯೋ ಕಾನ್ಫರೆನ್ಸ್ (VC) ಮೂಲಕ ಹಾಜರುಪಡಿಸಲಾಗುತ್ತಿದೆ. ಈ ವಿಡಿಯೋ ಕಾನ್ಫರೆನ್ಸ್ ವಿಚಾರಣೆಯಿಂದ ತಮಗೆ ಸಮಾಧಾನವಿಲ್ಲ. ಅದರಲ್ಲೂ ಪ್ರಮುಖವಾಗಿ ಪ್ರಕರಣದಲ್ಲಿ ಮಾಫಿ ಸಾಕ್ಷಿಯಾಗಿರುವ (ಅಪ್ರೂವರ್) ಪ್ರದೋಶ್ ಸೇರಿದಂತೆ ಪ್ರಮುಖ ಸಾಕ್ಷಿಗಳ ಕ್ರಾಸ್ ಎಕ್ಸಾಮಿನೇಷನ್ (ವಿಚಾರಣೆ) ನಡೆಯುವಾಗ ತಾವು ಕೋರ್ಟ್‌ನಲ್ಲಿ ಖುದ್ದು ಹಾಜರಿರಬೇಕು ಎಂದು ಕೋರಿ ದರ್ಶನ್ ಪರ ವಕೀಲರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಈ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್‌ನ ನ್ಯಾಯಮೂರ್ತಿ ವಿ. ಶ್ರೀಷಾನಂದ ಅವರ ಏಕಸದಸ್ಯ ಪೀಠ ನಡೆಸಿದ್ದು, ವಿಚಾರಣೆ ವೇಳೆ ಹಲವು ಕುತೂಹಲಕಾರಿ ಮತ್ತು ಮಹತ್ವದ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದೆ.

ಕೋರ್ಟ್‌ಗಿಂತ ವಿಡಿಯೋ ಕಾನ್ಫರೆನ್ಸ್‌ನಲ್ಲೇ ಚೆನ್ನಾಗಿ ಕೇಳುತ್ತೆ: ಜಡ್ಜ್

ವಿಚಾರಣೆ ಆರಂಭವಾಗುತ್ತಿದ್ದಂತೆ ದರ್ಶನ್ ಪರ ಹಿರಿಯ ವಕೀಲ ಹಷ್ಮತ್ ಪಾಷಾ, ಸಾಕ್ಷಿಗಳ ವಿಚಾರಣೆ ವೇಳೆ ಆರೋಪಿ ಖುದ್ದು ಹಾಜರಿರಲು ಕಾನೂನಿನಲ್ಲಿ ಅಧಿಕಾರವಿದೆ ಎಂದು ವಾದಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿಗಳು, ಕೋರ್ಟ್ ಹಾಲ್‌ನಲ್ಲಿ ಹಾಜರಿರುವುದಕ್ಕಿಂತ ವಿಡಿಯೋ ಕಾನ್ಫರೆನ್ಸ್‌ನಲ್ಲೇ ಧ್ವನಿ ಸ್ಪಷ್ಟವಾಗಿ ಕೇಳಿಸುತ್ತದೆ. ಇರುವ ಆಧುನಿಕ ತಂತ್ರಜ್ಞಾನವನ್ನು ನಾವು ಸದ್ಬಳಕೆ ಮಾಡಿಕೊಳ್ಳಬೇಕು. ವಿಡಿಯೋ ಕಾನ್ಫರೆನ್ಸ್ ವೇಳೆ ಯಾವುದೇ ಕಿರಿಕಿರಿಯಾಗದಂತೆ, ಆ ಸಮಯದಲ್ಲಿ ಜೈಲು ಸಿಬ್ಬಂದಿಯನ್ನು ಹೊರಗೆ ಕಳುಹಿಸಲು ಸೂಚಿಸಲಾಗುವುದು. ಸರಿಯಾಗಿ ಕೇಳಿಸದಿದ್ದರೆ ದರ್ಶನ್‌ಗೆ ಪ್ರತ್ಯೇಕ ಹೆಡ್‌ಫೋನ್ ನೀಡಲು ಸೂಚಿಸುತ್ತೇವೆ. ನೆಟ್‌ವರ್ಕ್ ಅಥವಾ ಇನ್ಯಾವುದೇ ಸಮಸ್ಯೆಯಿದ್ದರೆ ರಿಜಿಸ್ಟ್ರಾರ್ ಮೊಬೈಲ್ ಅಥವಾ ಲ್ಯಾಪ್‌ಟಾಪ್ ಮೂಲಕ ವಕೀಲರು ಮತ್ತು ಕಕ್ಷಿದಾರರು ಮಾತನಾಡಲು ಅವಕಾಶ ಕಲ್ಪಿಸಲಾಗುವುದು. ಕೋರ್ಟ್ ಅನುಮತಿ ಪಡೆದು ವಕೀಲರೇ ಜೈಲಿಗೆ ಹೋಗಿ ದರ್ಶನ್ ಅವರನ್ನು ಭೇಟಿಯಾಗಿ ಮಾತನಾಡಿಕೊಂಡು ಬರಬಹುದು ಎಂದು ತಿಳಿಸಿದರು.

ಜಯಲಲಿತಾ ಕೇಸ್ ನಡೆದ ಕೋರ್ಟ್‌ನಲ್ಲೇ ವಿಚಾರಣೆ ನಡೆಸೋಣ

ದರ್ಶನ್ ಪರ ವಕೀಲರು ಖುದ್ದು ಹಾಜರಿಗೆ ಪಟ್ಟು ಹಿಡಿದಾಗ ನ್ಯಾಯಮೂರ್ತಿ ವಿ. ಶ್ರೀಷಾನಂದ ಅವರು ಜಯಲಲಿತಾ ಪ್ರಕರಣದ ವಿಚಾರಣೆಯನ್ನು ಉಲ್ಲೇಖಿಸಿ ಮಹತ್ವದ ಆಯ್ಕೆಯೊಂದನ್ನು ಮುಂದಿಟ್ಟರು. ಪ್ರಮುಖ ಮೆಟೀರಿಯಲ್ ಸಾಕ್ಷಿಗಳ ವಿಚಾರಣೆ ನಡೆಸಲು ಜೈಲಿಗೆ ಹೋಗಿಯೇ ವಿಚಾರಣೆ ಮಾಡಬಹುದು. ಹಿಂದೆ ತಮಿಳುನಾಡು ಮಾಜಿ ಸಿಎಂ ಜಯಲಲಿತಾ ಕೇಸ್ ವಿಚಾರಣೆ ನಡೆದ ಪರಪ್ಪನ ಅಗ್ರಹಾರದ ಕೋರ್ಟ್‌ನಲ್ಲೇ ದರ್ಶನ್ ವಿಚಾರಣೆಗೂ ಸೂಚನೆ ನೀಡಲಾಗುವುದು. ಬೇಕಿದ್ದರೆ ಹೇಳಿ, ರಿಜಿಸ್ಟ್ರಾರ್‌ಗೆ ಸೂಚನೆ ಕೊಡುತ್ತೇನೆ. ಜಡ್ಜ್ ಮತ್ತು ವಕೀಲರೇ ಜೈಲಿಗೆ ಹೋಗಿ ವಿಚಾರಣೆ ಮಾಡಿಕೊಂಡು ಬರಬಹುದು. ನೀವೇನು ಹೇಳ್ತೀರಿ? ಎಂದು ದರ್ಶನ್ ಪರ ವಕೀಲರು ಹಾಗೂ ಎಸ್‌ಪಿಪಿಗೆ ಜಡ್ಜ್ ಪ್ರಶ್ನಿಸಿದರು.

ದರ್ಶನ್ ಭದ್ರತೆ ಕೋರ್ಟ್‌ನ ಹೊಣೆ

ದರ್ಶನ್ ಅವರನ್ನು ಕೋರ್ಟ್‌ಗೆ ಕರೆತರುವ ವಿಚಾರದ ಬಗ್ಗೆ ಮಾತನಾಡಿದ ನ್ಯಾಯಮೂರ್ತಿಗಳು, ನಿಮ್ಮ ಕಕ್ಷಿದಾರರ (ದರ್ಶನ್) ಅದೃಷ್ಟವೋ ಅಥವಾ ದುರದೃಷ್ಟವೋ ಅವರ ಮೇಲೆ ಗಂಭೀರ ಆರೋಪ ಬಂದಿದೆ. ಆ ಆರೋಪದ ಬಗ್ಗೆ ಅಂತಿಮ ತೀರ್ಮಾನ ಆಗುವವರೆಗೂ ಆರೋಪಿಯ ಭದ್ರತೆ ಮತ್ತು ರಕ್ಷಣೆ ಮಾಡುವುದು ಕೋರ್ಟ್‌ನ ಹೊಣೆಗಾರಿಕೆಯಾಗಿದೆ. ಅವರನ್ನು ಪದೇ ಪದೆ ಕೋರ್ಟ್‌ಗೆ ಕರೆತಂದರೆ ಭದ್ರತಾ ಸಮಸ್ಯೆಗಳು ಎದುರಾಗಬಹುದು ಎಂದು ಎಚ್ಚರಿಸಿದರು.

ಎಲ್ಲ ದಿನವೂ ಖುದ್ದು ಹಾಜರಿಗೆ ಅವಕಾಶವಿಲ್ಲ: 3-4 ದಿನಗಳ ಫಾರ್ಮುಲಾ

ಪ್ರತಿದಿನ ಖುದ್ದು ಹಾಜರಿಗೆ ಅವಕಾಶ ನೀಡಲು ನಿರಾಕರಿಸಿದ ನ್ಯಾಯಾಲಯ, ಮಧ್ಯಂತರ ಪರಿಹಾರದ ರೂಪದಲ್ಲಿ ಕೆಲ ಮಾರ್ಗಸೂಚಿಗಳನ್ನು ನೀಡಿತು. ಪರಪ್ಪನ ಅಗ್ರಹಾರಕ್ಕೆ ಹೋಗಿ ವಿಚಾರಣೆ ನಡೆಸುವುದು ವಕೀಲರಿಗೆ ಕಷ್ಟ ಎಂದು ಹಷ್ಮತ್ ಪಾಷಾ ಹೇಳಿದಾಗ, ಹಾಗೆ ಹೇಳಿದರೆ ಹೇಗೆ? ಆರೋಪಿಯನ್ನು ಕರೆತಂದರೆ ಸಮಸ್ಯೆಯಾಗುತ್ತದೆ ಎಂದು ಜಡ್ಜ್ ಹೇಳಿದರು. ಯಾವ ದಿನ ಪ್ರಮುಖ ಸಾಕ್ಷಿಗಳ ವಿಚಾರಣೆ ನಡೆಯುತ್ತದೆಯೋ ಆ ದಿನ ಮಾತ್ರ ಖುದ್ದು ಹಾಜರಿಗೆ ಅವಕಾಶ ನೀಡಲಾಗುವುದು. ಒಂದು ದಿನಕ್ಕೆ ಆಗಲ್ಲ ಎನ್ನುವುದಾದರೆ, ಪ್ರಮುಖ ಸಾಕ್ಷಿಗಳ ವಿಚಾರಣೆ ವೇಳೆ 3 ದಿನ ಖುದ್ದು ಹಾಜರಿಗೆ ಅವಕಾಶ ನೀಡೋಣ. ಅಗತ್ಯವಿದ್ದರೆ ನಾಲ್ಕನೇ ದಿನದ ಬಗ್ಗೆ ಪರಿಶೀಲಿಸೋಣ.

ದರ್ಶನ್ ಕೋರ್ಟ್‌ಗೆ ಬರುವ ನಿರ್ದಿಷ್ಟ ದಿನದಂದು ಯಾವುದೇ ಗಲಾಟೆ, ಕಿರಿಕಿರಿ ಇರದಂತೆ ಇನ್-ಕ್ಯಾಮೆರಾ ಪ್ರೊಸೀಡಿಂಗ್ಸ್ (ಬಹಿಷ್ಕೃತ ವಿಚಾರಣೆ) ನಡೆಸಲು ಸೂಚಿಸಲಾಗುವುದು ಮತ್ತು ಅಂದು ಬಿಗಿ ಭದ್ರತೆ ಕಲ್ಪಿಸಲಾಗುವುದು. ಯಾವ ದಿನ ಖುದ್ದು ಹಾಜರು ಬೇಕು ಎಂದು ವಿಚಾರಣಾ ಕೋರ್ಟ್‌ಗೆ ಅರ್ಜಿ ಹಾಕಿ, ಅದಕ್ಕೆ ಪ್ರಾಸಿಕ್ಯೂಷನ್ ಕೂಡ ವಿರೋಧ ವ್ಯಕ್ತಪಡಿಸುವುದಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿತು.

ಮುಂದಿನ ಮಂಗಳವಾರ ಅಂತಿಮ ತೀರ್ಮಾನ

ಪ್ರಕರಣದ ಟ್ರಯಲ್ ಯಾವುದೇ ಗೊಂದಲ, ಕಿರಿಕಿರಿ ಇಲ್ಲದೆ ತ್ವರಿತಗತಿಯಲ್ಲಿ ಪೂರ್ಣಗೊಳ್ಳಬೇಕು ಎಂದು ನ್ಯಾಯಮೂರ್ತಿಗಳು ಕಿವಿಮಾತು ಹೇಳಿದರು. ಈ ಎಲ್ಲಾ ಸಲಹೆಗಳ ಬಗ್ಗೆ ಜೈಲಿನಲ್ಲಿರುವ ನಿಮ್ಮ ಕಕ್ಷಿದಾರ ದರ್ಶನ್ ಜೊತೆ ಮಾತನಾಡಿ. ಯಾವ ಸಾಕ್ಷಿಗಳ ಕ್ರಾಸ್ ಎಕ್ಸಾಮಿನೇಷನ್ ದಿನ ದರ್ಶನ್ ಖುದ್ದು ಇರಬೇಕು ಎಂಬುದನ್ನು ನಿರ್ಧರಿಸಿ ತಿಳಿಸಿ ಎಂದು ದರ್ಶನ್ ಪರ ವಕೀಲರಿಗೆ ಸೂಚಿಸಿದ ಹೈಕೋರ್ಟ್, ಅಂತಿಮ ತೀರ್ಮಾನಕ್ಕಾಗಿ ವಿಚಾರಣೆಯನ್ನು ಸೆಪ್ಟೆಂಬರ್ 16ರ ಮಧ್ಯಾಹ್ನ 2:30ಕ್ಕೆ ಮುಂದೂಡಿದೆ.