ಯುವ ಉದ್ಯಮಿ ಬೆಂಗಳೂರು ಪರಿಸ್ಥಿತಿ ಕುರಿತು ಮಾಡಿದ ಪೋಸ್ಟ್ ಇದೀಗ ಭಾರಿ ಚರ್ಚೆಯಾಗುತ್ತಿದೆ. ನನ್ನ ಬೆನ್ನು ಬೆಂಗಳೂರು ರಸ್ತೆಯನ್ನು ದ್ವೇಷಿಸಲು ಆರಂಭಿಸಿದೆ ಎಂದು ಪೋಸ್ಟ್ ಮಾಡಿದ್ದಾರೆ. ಟ್ಯಾಕ್ಸ್ ಕಟ್ಟಿದರೂ ಈ ಪರಿಸ್ಥಿತಿ ಯಾಕೆ ಎಂದು ಪ್ರಶ್ನಿಸಿದ್ದಾರೆ.
ಬೆಂಗಳೂರು (ಸೆ.03) ಬೆಂಗಳೂರು ವಿಶ್ವದ ಭೂಪಟದಲ್ಲಿ ಪ್ರಮುಖ ಸ್ಥಾನ ಪಡೆದಿದೆ. ಭಾರತದ ನಗರಗಳ ಪೈಕಿ ಮಂಚೂಣಿಯಲ್ಲಿರುವ ನಗರ. ಐಟಿ ಬಿಟಿ , ಸಿಲಿಕಾನ್ ಸಿಟಿ, ಉದ್ಯಾನ ನಗರ ಎಂದೆಲ್ಲಾ ಕರೆಯಿಸಿಕೊಳ್ಳುವ ಬೆಂಗಳೂರಿನ ಪರಿಸ್ಥಿತಿ ಕುರಿತು ಹಲವರು ಆಕ್ರೋಶ ಹೊರಹಾಕಿದ್ದಾರೆ. ಇದೀಗ ಯುವ ಉದ್ಯಮಿ ಎಲಿಶಾ ರಾಯ್ ಬೆಂಗಳೂರು ಹಾಗೂ ಇಲ್ಲಿನ ರಸ್ತೆಗಳ ಕುರಿತು ಆಕ್ರೋಶ ಹೊರಹಾಕಿದ್ದಾರೆ. ನನ್ನ ಬೆನ್ನು ಬೆಂಗಳೂರು ರಸ್ತೆಯನ್ನು ದ್ವೇಷಿಸುತ್ತಿದೆ ಎಂದು ಪೋಸ್ಟ್ ಮಾಡಿದ್ದಾರೆ.
ಬೆನ್ನು ಮೂಳೆ ಮುರಿದ ಅನುಭವ
ಮೈಮಿನಿಮೂ ಅನ್ನೋ ಕಂಪನಿ ಸಂಸ್ಥಾಪಕಿ ಎಲಿಶಾ ರಾಯ್ ಬೆಂಗಳೂರು ರಸ್ತೆಗಳ ಕುರಿತು ಬೇಸರ ಹೊರಹಾಕಿದ್ದಾರೆ. ಬೆಂಗಳೂರು ರಸ್ತೆಗಳಿಂದ ಕೆಲಸ ಕಾರ್ಯಗಳಿಗೆ ಮಾತ್ರವಲ್ಲ, ಆರೋಗ್ಯವೂ ಹದಗೆಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕ್ಯಾಬ್ ಬುಕ್ ಮಾಡಿದರೆ ಈ ಕೆಟ್ಟ ರಸ್ತೆಗಳಲ್ಲಿ ಅವರು ಬರಲು ಕೇಳುತ್ತಿಲ್ಲ. ಕ್ಯಾನ್ಸಲ್ ಮಾಡುತ್ತಾರೆ. ಹೀಗಾಗಿ ಆಟೋ ಬುಕ್ ಮಾಡಿ ಕಚೇರಿಗೆ ತೆರಳಿದರೆ ನನ್ನ ಬೆನ್ನು ಮೂಳೆ ಮುರಿದ ಅನುಭವವಾಯಿತು ಎಂದು ಎಲಿಶಾ ರಾಯ್ ಹೇಳಿದ್ದಾರೆ.
ಆಟೋದಿಂದ ಹೊರಗೆ ಬೀಳುತ್ತಿದ್ದೆ
ದುಡ್ಡು ಹೆಚ್ಚಾದರೂ ಪರವಾಗಿಲ್ಲ ಕ್ಯಾಬ್ ಬುಕ್ ಮಾಡಿ ಕಚೇರಿಗೆ ತೆರಳುತ್ತೇನೆ. ಆದರೆ ಅತೀಯಾದ ಟ್ರಾಫಿಕ್‌ನಿಂದ ಕೊನೆಗೆ ಆಟೋ ಬುಕ್ ಮಾಡಿ ತೆರಳಿದ್ದೇನೆ. ಆದರೆ ಬೆಂಗಳೂರಿನ ಕೆಟ್ಟ ರಸ್ತೆಗಳಲ್ಲಿ ಆಟೋ ಗುಂಡಿ, ಹಂಪ್ ಸೇರಿದಂತೆ ಎಲ್ಲಾ ದಾಟಿಕೊಂಡು ಸಾಗುವಾಗ ನನ್ನ ಆರೋಗ್ಯವೂ ಹದಗೆಟ್ಟಿತು, ಬೆನ್ನು ಮೂಳೆಯೂ ಸಮಸ್ಯೆಗೆ ಸಿಲುಕಿತು ಎಂದು ಎಲಿಶಾ ರಾಯ್ ಹೇಳಿದ್ದಾರೆ. ಇದರ ನಡುವೆ ದೊಡ್ಡ ರಸ್ತೆ ಗುಂಡಿ ಮೂಲಕ ಆಟೋ ಸಾಗಿದಾಗ ನಾನು ಆಟೋದಿಂದ ಇನ್ನೇನು ಹೊರಗೆ ಬಿದ್ದು ಬಿಡುವ ಅನುಭವವಾಗಿತ್ತು. ಜೀವ ಕೈಯಲ್ಲಿ ಹಿಡಿದು ಸಾಗಬೇಕು. ನಾನಿಲ್ಲಿ ಆಟೋ ಟಾಲಕನ ವಿರುದ್ದ ಹೇಳುತ್ತಿಲ್ಲ. ಆತ ಅದಕ್ಕಿಂತ ದೊಡ್ಡ ರಸ್ತೆ ಗುಂಡಿ ತಪ್ಪಿಸಿದ್ದ ಕಾರಣ ಆಟೋ ಪಲ್ಟಿಯಾಗದೆ ಸಾಗಿತ್ತು ಎಂದು ಎಲಿಶಾ ರಾಯ್ ಹೇಳಿದ್ದಾರೆ.
ಬೆಂಗಳೂರಿನ ಟ್ರಾಫಿಕ್ ಹೆಚ್ಚುತ್ತಿದೆ. ಇತ್ತ ಆರೋಗ್ಯವೂ ಕೆಡುತ್ತಿದೆ. ಈ ಪರಿಸ್ಥಿತಿಯಲ್ಲಿ ಕಚೇರಿಗೆ ಹೋಗಿ ಕೆಲಸ ಮಾಡುವುದಾದರು ಹೇಗೆ? ಬೆಂಗಳೂರು ಭಾರತದ ಐಟಿ ಹಬ್. ಹಲವು ಕಂಪನಿಗಳು ಇಲ್ಲಿ ಕಾರ್ಯನಿರ್ವಹಿಸುತ್ತಿದೆ. ಗರಿಷ್ಠ ತೆರಿಗೆ ಸಂಗ್ರವಾಗುತ್ತಿದೆ. ಆರ್ಥಿಕ ಚಟುವಟಿಕೆ ಸಕ್ರಿಯವಾಗಿದೆ. ನಾವು ವೈಯುಕ್ತಿಕವಾಗಿ ತೆರಿಗೆ ಕಟ್ಟುತ್ತಿದ್ದೇವೆ. ಇಷ್ಟಾದರೂ ಕನಿಷ್ಠ ಮೂಲಭೂತ ಸೌಕರ್ಯವಾದ ರಸ್ತೆ ಉತ್ತಮವಾಗಿ ನೀಡಲು ಸಾಧ್ಯವಿಲ್ಲವೇ ಎಂದು ಪ್ರಶ್ನಿಸಿದ್ದಾರೆ.


