ಪ್ರಧಾನಿ ಮೋದಿಯವರಿಂದ 'ಮನ್ ಕಿ ಬಾತ್'ನಲ್ಲಿ ಶ್ಲಾಘನೆಗೆ ಒಳಗಾಗಿದ್ದ ಬೆಂಗಳೂರಿನ ಬೀದಿ ಬದಿ ವ್ಯಾಪಾರಿ ನಿಂಗಮ್ಮ, ಸ್ವಾನಿಧಿ ಯೋಜನೆಯಿಂದ ಯಶಸ್ಸು ಕಂಡಿದ್ದರು. ಆದರೆ, ಇದೀಗ ಪಾಲಿಕೆಯ ಫುಟ್‌ಪಾತ್ ತೆರವು ಕಾರ್ಯಾಚರಣೆಯಿಂದಾಗಿ ತಮ್ಮ ಜೀವನೋಪಾಯದ ಹೋಟೆಲ್ ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ. ತಮ್ಮ ವ್ಯಾಪಾರಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ಅವರು ಮನವಿ ಮಾಡಿದ್ದಾರೆ.
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ 'ಮನ್ ಕಿ ಬಾತ್' 137ೇ ಸಂಚಿಕೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರಿನ ಬೀದಿ ಬದಿ ವ್ಯಾಪಾರಿ ಟಿಎಸ್ ನಿಂಗಮ್ಮ ಅವರ ಬಗ್ಗೆ ಪ್ರಸ್ತಾಪಿಸಿ ಮೆಚ್ಚುಗೆ ಸೂಚಿಸಿದ್ದರು. ಪ್ರಧಾನ ಮಂತ್ರಿ ಸ್ವಾನಿಧಿ ಯೋಜನೆಯಡಿ ನೀಡಲಾದ ಬೆಂಬಲದಿಂದ ಅವರು ಸಣ್ಣ ವ್ಯಾಪಾರ ಆರಂಭಿಸಿ, ಜೀವನ ಕಟ್ಟಿಕೊಂಡ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು.
ಮೋದಿ ಮೆಚ್ಚಿದ ವ್ಯಾಪಾರಿಯ ಬದುಕಿಗೇಕೆ ಸಂಕಷ್ಟ?
ಬೀದಿ ಬದಿ ವ್ಯಾಪಾರಿ ನಿಂಗಮ್ಮ ಅವರು ಮತ್ತು ಅವರ ಪತಿ ಇಡ್ಲಿ, ದೋಸೆ ಮತ್ತು ಸಾಂಬಾರ್ ಮಾರಾಟ ಮಾಡುವ ಸಣ್ಣ ವ್ಯಾಪಾರ ಆರಂಭಿಸಿದ್ದರು. ವ್ಯಾಪಾರ ಉತ್ತಮವಾಗಿ ನಡೆಸಲು ಪ್ರಾರಂಭಿಸಿದಾಗ, ದಂಪತಿಗೆ ವ್ಯಾಪಾರ ವಿಸ್ತರಿಸಲು ಹೆಚ್ಚುವರಿ ಹಣದ ಅಗತ್ಯವಿತ್ತು. ಆಗ ಪ್ರಧಾನ ಮಂತ್ರಿ ಸ್ವಾನಿಧಿ ಯೋಜನೆಯ ಅಡಿ ಆರ್ಥಿಕ ನೆರವು ಪಡೆದುಕೊಂಡು, ಹೆಚ್ಚುವರಿ ಬಂಡವಾಳ ಹೂಡಿಕೆ ಮಾಡಿ ತಮ್ಮ ಮೆನುವನ್ನು ವಿಸ್ತರಣೆ ಮಾಡಿದ್ದರು. ಇದರೊಂದಿಗೆ ಅಂಗಡಿಗೆ ಹೆಚ್ಚಿನ ಗ್ರಾಹಕರು ಬಂದಿದ್ದರು. ಇದರಿಂದ ನಿಂಗಮ್ಮ ಅವರ ಕುಟುಂಬದ ಆರ್ಥಿಕ ಸ್ಥಿತಿ ಉತ್ತಮವಾಗಿತ್ತು ಎಂದು ಮೋದಿ ಮನ್ ಕಿ ಬತ್‌ನಲ್ಲಿ ವಿವರಿಸಿದ್ದರು.

25 ವರ್ಷಗಳಿಂದ ಬೀದಿ ಬದಿ ವ್ಯಾಪಾರದಿಂದಲೇ ಜೀವನ
ಬೆಂಗಳೂರಿನ ಹೊಸಹಳ್ಳಿ ಮೆಟ್ರೋ ನಿಲ್ದಾಣದ ಬಲಿ ಪುಟ್ಟ ಹೋಟೆಲ್‌ವೊಂದನ್ನು ಇಟ್ಟುಕೊಂಡು ಕಳೆದ 25 ವರ್ಷಗಳಿಂದ ನಿಂಗಮ್ಮ ಜೀವನ ನಡೆಸುತ್ತಿದ್ದಾರೆ. ಈ ಹೋಟೆಲ್‌ನಿಂದ ಬಂದ ಹಣದಿಂದಲೇ ತಮ್ಮ ಮೂವರು ಮಕ್ಕಳಿಗೆ ಶಿಕ್ಷಣವನ್ನು ಕೊಡಿಸಿದ್ದಾರೆ. ಮಹಿಳೆಯರ ಆತ್ಮವಿಶ್ವಾಸವನ್ನು ಹೆಚ್ಚಿಸಿ ಜೀವನ ನಿರ್ಮಿಸಿಕೊಳ್ಳಲು ಇದು ಜೀವಂತ ಉದಾಹರಣೆಯಾಗಿದ್ದು, ಇದು ಮಹಿಳಾ ಸಬಲೀಕರಣ ಎಂದು ಪ್ರಧಾನಿಗಳು ಹೇಳಿದ್ದರು.
ಆತಂಕ ಏಕೆ?
ಆದರೆ, ಇಷ್ಟು ವರ್ಷಗಳಿಂದ ಹೋಟೆಲ್ ನಡೆಸುತ್ತಿದ್ದ ನಿಂಗಮ್ಮ ಅವರಿಗೆ ಈಗ ಸಂಕಷ್ಟ ಎದುರಾಗಿದೆ. ಏಕೆಂದರೆ ಫುಟ್ ಪಾತ್ ಪಕ್ಕಲ್ಲಿಯೇ ನಿಂಗಮ್ಮ ಅವರು ಹೋಟೆಲ್ ಹಾಕಿಕೊಂಡು ಜೀವನ ನಡೆಸುತ್ತಿದ್ದರು. ಏಕೆಂದರೆ ನಿಂಗಮ್ಮ ಅವರಿಗೆ ಇದೀಗ ಒತ್ತುವರಿ ತೆರವು ಆತಂಕ ಶುರುವಾಗಿದೆ. ಪಾಲಿಕೆ ನಗರದಾದ್ಯಂತ ಫುಟ್‌ಪಾಟ್ ತೆರವು ಕಾರ್ಯಾಚರಣೆ ನಡೆಸುತ್ತಿದ್ದು, ಈ ಹಿಂದೆಯೂ ಫುಟ್‌ಪಾತ್ ಹೋಟೆಲ್‌ಅನ್ನು ಜಿಬಿಎ ತೆರವು ಮಾಡಿದ್ದರು. ಆದರೆ ಆ ಬಳಿಕ ಬದುಕು ಕಟ್ಟಿಕೊಳ್ಳಲು ಜೀವನ ನಡೆಸಲು ಮತ್ತ ಸಾಲ ಮಾಡಿ ವ್ಯಾಪಾರ ಆರಂಭ ಮಾಡಿದ್ದರು. ಈಗ ಈ ಅಂಗಡಿ ತೆರವನ್ನು ಮಾಡುವ ಸಾಧ್ಯತೆ ಇದೆ. ಆದ್ದರಿಂದ ತಮಗೆ ಪರ್ಯಾಯ ವ್ಯವಸ್ಥೆ ಮಾಡಿಕೊಡುವಂತೆ ನಿಂಗಮ್ಮ ಅವರು ಮನವಿ ಮಾಡಿದ್ದಾರೆ.
ನಿಂಗಮ್ಮ ಹೇಳಿದ್ದೇನು?
ಏಷ್ಯಾನೆಟ್ ಸುವರ್ಣ ನ್ಯೂಸ್‌ನೊಂದಿಗೆ ಮಾತಾಡಿದ ನಿಂಗಮ್ಮ ಅವರು, ನಾನು ಈ ಸಣ್ಣ ಹೋಟೆಲ್ ಶುರು ಮಾಡಿದ್ದ ಸಂದರ್ಭದಿಂದಲೂ ಆತಂಕ ಇದೆ. ಆದರೆ ಮೋದಿ ಅವರು ನನ್ನ ಹೆಸರು ಹೇಳಿ, ಸ್ವಾನಿಧಿ ಮೂಲಕ ಯಶಸ್ಸು ಗಳಿಸಿದ್ದಾರೆ ಎಂದು ಮೆಚ್ಚುಗೆ ಸೂಚಿಸಿದ್ದರು. ಇದು ನಮಗೆ ಸಂತಸ ತಂದಿತ್ತು. ಆದರೆ ಈಗ ಲೋನ್ ತೆಗೆದುಕೊಂಡು ಹೋಟೆಲ್ ಮಾಡಿದ್ದು, ಹೋಟೆಲ್ ತೆರವು ಮಾಡಿದರೆ ಸಾಲ ಮರುಪಾವತಿ ಮಾಡಲು ನಮಗೆ ಒಂದು ವ್ಯವಸ್ಥೆ ಮಾಡಿಕೊಡಿ. ವ್ಯಾಪಾರ ಆಗುವ ಕಡೆ ಅಂಗಡಿ ಶುರು ಮಾಡಲು ಅವಕಾಶ ನೀಡಬೇಕು. ಈಗಾಗಲೇ ಅಧಿಕಾರಿಗಳು ಮೌಖಿಕವಾಗಿ ತೆರವು ಮಾಡಲು ಹೇಳಿದ್ದಾರೆ. ನೋಟಿಸ್ ಕೊಟ್ಟು ತೆರವು ಮಾಡಲು ಹೇಳಿದರೆ, ನಮಗೆ ಒಂದು ಸ್ಥಳವನ್ನು ಸೂಚಿಸಿ ವ್ಯಾಪಾರ ಮಾಡಲು ಅವಕಾಶ ಮಾಡಿಕೊಡಬೇಕು ಅಂತ ಮನವಿ ಮಾಡುತ್ತೇನೆ. ಬೇರೆ ಕಡೆ ನಾನು ವ್ಯಾಪಾರಕ್ಕೆ ಹೋದರ ಮತ್ತೆ ಗ್ರಾಹಕರು ನಮ್ಮ ಹೋಟೆಲ್ ಬರಲು ಆರೇಳು ತಿಂಗಳು ಸಮಯ ಬೇಕಾಗುತ್ತದೆ ಎಂದು ಹೇಳಿದ್ದಾರೆ.



