ಬೆಂಗಳೂರಿನ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದಲ್ಲಿ (ಎನ್‌ಎಲ್‌ಎಸ್‌ಐಯು) ಉಮರ್ ಖಾಲಿದ್ ಕುರಿತ ‘ಪ್ರಿಸನರ್ ನಂ. 626710’ ಸಾಕ್ಷ್ಯಚಿತ್ರದ ಪ್ರದರ್ಶನವನ್ನು ಎಬಿವಿಪಿ ವಿರೋಧದ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಮುಂದೂಡಲಾಗಿದೆ.

ಬೆಂಗಳೂರು: ಉಮರ್ ಖಾಲಿದ್ ಕುರಿತಾದ ‘ಪ್ರಿಸನರ್ ನಂ. 626710’ ಸಾಕ್ಷ್ಯಚಿತ್ರದ ಪ್ರದರ್ಶನವನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ ಎಂದು ನಗರದ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯ (ಎನ್‌ಎಲ್‌ಎಸ್‌ಐಯು) ಇ-ಮೇಲ್ ಮೂಲಕ ವಿದ್ಯಾರ್ಥಿಗಳಿಗೆ ಭಾನುವಾರ ಸಂಜೆ ಮಾಹಿತಿ ನೀಡಿದೆ.

ಸೋಮವಾರ ಸಂಜೆ 7 ಗಂಟೆಗೆ ಕಾಲೇಜಿನ ಆವರಣದಲ್ಲಿ ಪೊಲಿಟಿಕಲ್‌ ಪ್ರಿಸನರ್ಸ್ ಡೇ ಆಚರಣೆ ವೇಳೆ ಸಾಕ್ಷ್ಯಚಿತ್ರ ಪ್ರದರ್ಶನಕ್ಕೆ ಉದ್ದೇಶಿಸಲಾಗಿತ್ತು. ಆದರೆ, ಎಬಿವಿಪಿಯ ತೀವ್ರ ವಿರೋಧದ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಮುಂದೂಡಲಾಗಿದೆ ಎಂದು ತಿಳಿದು ಬಂದಿದೆ.

ಆದರೆ, ಇಂತಹ ಕಾರ್ಯಕ್ರಮವನ್ನು ಸಂಪೂರ್ಣವಾಗಿ ರದ್ದುಗೊಳಿಸಬೇಕು ಎಂದು ಎಬಿವಿಪಿ ಬೆಂಗಳೂರು ನಗರ ಕಾರ್ಯದರ್ಶಿ ಅಭಿನಂದನ್ ಮಿರ್ಜಿ ಒತ್ತಾಯಿಸಿದ್ದಾರೆ.

ಅಭಿನಂದನ್ ಮಿರ್ಜಿ ಹೇಳಿಕೆ

ಪ್ರತ್ಯೇಕತಾವಾದಿ ಮತ್ತು ದೇಶವಿರೋಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಗಂಭೀರ ಆರೋಪಗಳನ್ನು ಎದುರಿಸುತ್ತಿರುವ ವ್ಯಕ್ತಿಗಳನ್ನು ಬೆಂಬಲಿಸಲು ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಅಸ್ತ್ರವನ್ನಾಗಿ ಬಳಸಿಕೊಳ್ಳಬಾರದು. ಇದು ನಮ್ಮ ದೇಶದ ಸಮಗ್ರತೆಯನ್ನು ರಕ್ಷಿಸುವ ಮೂಲಭೂತ ಕರ್ತವ್ಯಕ್ಕೆ ವಿರುದ್ಧವಾಗಿದೆ. ಭಾರತದ ಪ್ರಮುಖ ಕಾನೂನು ವಿಶ್ವವಿದ್ಯಾಲಯಗಳಲ್ಲಿ ಒಂದಾಗಿರುವ ಎನ್‌ಎಲ್‌ಎಸ್‌ಐಯು ಆವರಣದಲ್ಲಿ ಇಂತಹ ಕಾರ್ಯಕ್ರಮಗಳಿಗೆ ಪ್ರೋತ್ಸಾಹ ನೀಡಬಾರದು. ಇದು ಇತರ ಶಿಕ್ಷಣ ಸಂಸ್ಥೆಗಳಿಗೆ ಕೆಟ್ಟ ದಾರಿ ಮಾಡಿಕೊಡುತ್ತದೆ ಎಂದು ಅಭಿನಂದನ್ ಮಿರ್ಜಿ ಹೇಳಿದ್ದಾರೆ.

ಇದನ್ನೂ ಓದಿ : ಬೆಂಗಳೂರಿನಲ್ಲಿ ಉಮರ್ ಖಾಲಿದ್ ವಿಚಾರ ಸಂಕಿರಣಕ್ಕೆ ವಿರೋಧ; ಕಾರ್ಯಕ್ರಮ ರದ್ದುಪಡಿಸಲು ಸಂಸದ ಪಿ.ಸಿ. ಮೋಹನ್ ಆಗ್ರಹ!