'ಟೈಮ್ ಔಟ್ 2026' ಜಾಗತಿಕ ಸಮೀಕ್ಷೆಯ ಪ್ರಕಾರ, ವಿಶ್ವದ ಅತ್ಯುತ್ತಮ ನೈಟ್‌ಲೈಫ್ ನಗರಗಳ ಪಟ್ಟಿಯಲ್ಲಿ ಬೆಂಗಳೂರು 17ನೇ ಸ್ಥಾನ ಪಡೆದುಕೊಂಡಿದೆ. ಈ ಮೂಲಕ ಟಾಪ್ 20ರಲ್ಲಿ ಸ್ಥಾನ ಪಡೆದ ಏಕೈಕ ಭಾರತೀಯ ನಗರವಾಗಿ ಹೊರಹೊಮ್ಮಿದೆ. ಈ ಸಮೀಕ್ಷೆಯು ನಗರದ ಸಮುದಾಯ ಭಾವನೆ, ಹೊಸ ತಾಣಗಳ ಬೆಳವಣಿಗೆ ಮತ್ತು ಉದ್ಯಮದ ಬೇಡಿಕೆಗಳನ್ನು ಎತ್ತಿ ತೋರಿಸುತ್ತದೆ.
ಜಾಗತಿಕ ಮಟ್ಟದ ‘ಟೈಮ್ ಔಟ್ 2026’ (Time Out 2026) ಸಮೀಕ್ಷೆಯ ಪ್ರಕಾರ, ನೈಟ್‌ಲೈಫ್ ವಿಶ್ವದ ಅತ್ಯುತ್ತಮ ನಗರಗಳ ಪಟ್ಟಿಯಲ್ಲಿ ನಮ್ಮ ಹೆಮ್ಮೆಯ ಬೆಂಗಳೂರು 17 ನೇ ಸ್ಥಾನ ಪಡೆದುಕೊಂಡಿದೆ. ವಿಶ್ವದಾದ್ಯಂತ ಒಟ್ಟು 150 ನಗರಗಳ ಸುಮಾರು 24,000 ಕ್ಕೂ ಹೆಚ್ಚು ಸ್ಥಳೀಯ ಜನರಿಂದ ಅಭಿಪ್ರಾಯ ಸಂಗ್ರಹಿಸಿ ಈ ಶ್ರೇಯಾಂಕವನ್ನು ನೀಡಲಾಗಿದೆ. ಈ ಪಟ್ಟಿಯ ಟಾಪ್ 20 ರಲ್ಲಿ ಸ್ಥಾನ ಪಡೆದ ಏಕೈಕ ಭಾರತೀಯ ನಗರ ಬೆಂಗಳೂರು ಎಂಬುದು ವಿಶೇಷ. ಮುಂಬೈ ಮತ್ತು ನವದೆಹಲಿಯಂತಹ ಪ್ರಮುಖ ಮೆಟ್ರೋ ನಗರಗಳು ಟಾಪ್ 20 ರಿಂದ ಹೊರಗುಳಿದಿವೆ.
ಸಮೀಕ್ಷೆಯ ಪ್ರಮುಖ ಮುಖ್ಯಾಂಶಗಳು
ಬ್ಯಾಂಕಾಕ್ ಅಗ್ರಸ್ಥಾನ: ಜಾಗತಿಕ ರಾತ್ರಿಜೀವನದ ಪಟ್ಟಿಯಲ್ಲಿ ಬ್ಯಾಂಕಾಕ್ ಮೊದಲ ಸ್ಥಾನದಲ್ಲಿದ್ದರೆ, ಬರ್ಲಿನ್, ನ್ಯೂಯಾರ್ಕ್ ಸಿಟಿ, ಮೆಲ್ಬೋರ್ನ್, ಸಾವೊ ಪಾಲೊ, ಶಾಂಘೈ, ರಿಯೊ ಡಿ ಜನೈರೊ ಮತ್ತು ಮನಿಲಾ ನಗರಗಳು ನಂತರದ ಪಟ್ಟಿಯಲ್ಲಿವೆ.
ಸಮುದಾಯದ ಭಾವನೆ: ಬೆಂಗಳೂರಿನ ರಾತ್ರಿಜೀವನದಲ್ಲಿ ಸಮುದಾಯ ಭಾವನೆಗೆ ಅತಿ ಹೆಚ್ಚು ಅಂಕ (82%) ಸಿಕ್ಕಿದ್ದರೆ, ಗುಣಮಟ್ಟಕ್ಕೆ 71% ಅಂಕ ಲಭಿಸಿದೆ. ವೆಚ್ಚದ ವಿಷಯಕ್ಕೆ ಬಂದರೆ (Affordability) ನಗರವು 54% ರಷ್ಟು ಸಾಧಾರಣ ಅಂಕವನ್ನು ಗಳಿಸಿದೆ.
ಜನಪ್ರಿಯ ಆಕರ್ಷಣೆ: ನಗರದ ಶೇ. 55 ರಷ್ಟು ಜನರು ರಾತ್ರಿಯ ವೇಳೆಯ ‘ಬೀದಿ ಜೀವನ’ವನ್ನು (Street Life) ಇಷ್ಟಪಟ್ಟರೆ, ಶೇ. 50 ರಷ್ಟು ಜನರು ‘ಕ್ಯಾಶುಯಲ್ ಬಾರ್‌ಗಳನ್ನು’ (Casual Bars) ಆಯ್ಕೆ ಮಾಡಿದ್ದಾರೆ.
ಹೊಸ ಹಾಟ್‌ಸ್ಪಾಟ್‌ಗಳು ಮತ್ತು ಸಾಂಸ್ಕೃತಿಕ ಬದಲಾವಣೆ
ಇಂದಿರಾನಗರ, ಎಂ.ಜಿ. ರಸ್ತೆ ಮತ್ತು ಕೋರಮಂಗಲದಂತಹ ಹಳೆಯ ಹಾಗೂ ಪ್ರಸಿದ್ಧ ತಾಣಗಳ ಜೊತೆಗೆ, ಈಗ ರಾತ್ರಿಜೀವನದ ಸಂಸ್ಕೃತಿಯು ಹಲಸೂರು, ರಾಜಾಜಿನಗರ ಮತ್ತು ವೈಟ್‌ಫೀಲ್ಡ್‌ಗೂ ವಿಸ್ತರಿಸಿದೆ. ಬಾರ್ ಡಬ್ಬಲ್, ಡಾಲಿ & ಗಾಲಾ, ಬಾರ್ ಕ್ಯಾಮಿಯೊ ಮತ್ತು ಮಿಡಲ್ ರೂಮ್‌ನಂತಹ ಹೊಸ ತಾಣಗಳು ಕಾಕ್‌ಟೈಲ್, ಜಾಝ್ ಮತ್ತು ಲೈವ್ ಸಂಗೀತದ ಪ್ರಿಯರನ್ನು ಆಕರ್ಷಿಸುತ್ತಿವೆ. ಕ್ರಾಫ್ಟ್ ಮೈಕ್ರೋಬ್ರೂವರೀಸ್ ಮತ್ತು ತಡರಾತ್ರಿಯ ಆಹಾರ ಕೇಂದ್ರಗಳು ನಗರದ ನೈಟ್‌ಲೈಫ್‌ಗೆ ಹೊಸ ಮೆರುಗು ನೀಡಿವೆ.
ನಿರೀಕ್ಷೆಗಳು ಮತ್ತು ಬೇಡಿಕೆಗಳು
ನ್ಯಾಷನಲ್ ರೆಸ್ಟೋರೆಂಟ್ ಅಸೋಸಿಯೇಷನ್ ಆಫ್ ಇಂಡಿಯಾ (NRAI) ಬೆಂಗಳೂರು ಅಧ್ಯಾಯದ ಮುಖ್ಯಸ್ಥ ಹಾಗೂ 'ಜಸ್ಟ್ ಬಿಎಲ್‌ಆರ್' (JustBLR) ಸಂಸ್ಥಾಪಕ ಅನಂತ್ ನಾರಾಯಣ್ ಅವರು ಮಾತನಾಡಿ, "ಈ ಶ್ರೇಯಾಂಕವು ಬೆಂಗಳೂರಿನ ಬಲವಾದ ರಾತ್ರಿ ಸಂಸ್ಕೃತಿಯನ್ನು ದೃಢಪಡಿಸಿದೆ," ಎಂದಿದ್ದಾರೆ.
ಅಲ್ಲದೆ, ನಗರದ ಆರ್ಥಿಕತೆಗೆ ಇನ್ನಷ್ಟು ಉತ್ತೇಜನ ನೀಡಲು 24 ಗಂಟೆಗಳ ಕಾಲ ವ್ಯಾಪಾರ ಕಾರ್ಯಾಚರಣೆಗೆ ಅನುಮತಿ, ಬೆಳಗಿನ ಜಾವ 2:30 ರವರೆಗೆ ಮದ್ಯ ಪೂರೈಕೆ, ತಡರಾತ್ರಿಯ ಆಹಾರ ಮಳಿಗೆಗಳ ಉತ್ತೇಜನ ಹಾಗೂ ಉದ್ಯಮಕ್ಕೆ ಸುಲಭವಾಗುವಂತೆ ಸಿಂಗಲ್ ವಿಂಡೋ ಕ್ಲಿಯರೆನ್ಸ್ ವ್ಯವಸ್ಥೆಯನ್ನು ಜಾರಿಗೆ ತರಬೇಕೆಂದು ಅವರು ಒತ್ತಾಯಿಸಿದ್ದಾರೆ.


