ನಟ ದರ್ಶನ್‌ಗೆ ರೇಣುಕಾಸ್ವಾಮಿ ಕೊಲೆ ಪ್ರಕರಣದ ಜೊತೆಗೆ ಮತ್ತೊಂದು ಕಾನೂನು ಸಂಕಷ್ಟ ಎದುರಾಗಿದೆ. ಮೈಸೂರಿನ ಫಾರ್ಮ್‌ಹೌಸ್‌ನಲ್ಲಿ ಸಂರಕ್ಷಿತ 'ಪಟ್ಟೆ ತಲೆ ಹೆಬ್ಬಾತು'ಗಳನ್ನು ಅಕ್ರಮವಾಗಿ ಸಾಕಿದ ಆರೋಪದ ಮೇಲೆ ಅರಣ್ಯ ಇಲಾಖೆ ದೂರು ದಾಖಲಿಸಿದ್ದು, ಸ್ಥಳೀಯ ನ್ಯಾಯಾಲಯದ ಸಮನ್ಸ್ ಪ್ರಶ್ನಿಸಿ ದರ್ಶನ್ ದಂಪತಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

ಮೈಸೂರು: ರೇಣುಕಾಸ್ವಾಮಿ Koಲೆ ಪ್ರಕರಣದಲ್ಲಿ ಸದ್ಯ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಸ್ಯಾಂಡಲ್‌ವುಡ್ ನಟ ದರ್ಶನ್ ತೂಗುದೀಪಗೆ ಮತ್ತೊಂದ್ದು ಪ್ರಕರಣದಲ್ಲಿ ಈಗ ಸಂಕಷ್ಟ ಎದುರಾಗಿದೆ. ಅವರ ಮೈಸೂರಿನ ಟಿ. ನರಸೀಪುರ ರಸ್ತೆಯಲ್ಲಿರುವ ಫಾರ್ಮ್‌ಹೌಸ್‌ನಲ್ಲಿ ಸಂರಕ್ಷಿತ 'ಪಟ್ಟೆ ತಲೆ ಹೆಬ್ಬಾತು' (Bar-headed Goose) ಪಕ್ಷಿಗಳನ್ನು ಕಾನೂನುಬಾಹಿರವಾಗಿ ಸಾಕಿದ ಆರೋಪಕ್ಕೆ ಸಂಬಂಧಿಸಿದಂತೆ, ಅರಣ್ಯ ಇಲಾಖೆ ಸಲ್ಲಿಸಿದ ದೂರಿನನ್ವಯ ವಿಚಾರಣೆಗೆ ಸಮನ್ಸ್ ಜಾರಿಯಾಗಿದೆ. ಇದನ್ನು ಪ್ರಶ್ನಿಸಿ ನಟ ದರ್ಶನ್, ಅವರ ಪತ್ನಿ ವಿಜಯಲಕ್ಷ್ಮಿ ಹಾಗೂ ಫಾರ್ಮ್‌ಹೌಸ್ ವ್ಯವಸ್ಥಾಪಕ ನಾಗರಾಜ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

ಪ್ರಕರಣದ ಹಿನ್ನೆಲೆ

ಜನವರಿ 2023 ರಲ್ಲಿ ನಟ ದರ್ಶನ್ ಅಭಿನಯದ 'ಕ್ರಾಂತಿ' ಚಲನಚಿತ್ರ ಬಿಡುಗಡೆಗೂ ಮುನ್ನ ನೀಡಿದ್ದ ಸಂದರ್ಶನವೊಂದರಲ್ಲಿ, ತಮ್ಮ ಫಾರ್ಮ್‌ಹೌಸ್‌ನಲ್ಲಿರುವ ಅಪರೂಪದ ವಲಸೆ ಹಕ್ಕಿಗಳನ್ನು ಸಾರ್ವಜನಿಕವಾಗಿ ತೋರಿಸಿದ್ದರು. ಪಂಜರದಲ್ಲಿದ್ದ ಈ ಪಕ್ಷಿಗಳ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿತ್ತು.

ವಿಡಿಯೋ ಗಮನಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ತಕ್ಷಣವೇ ದರ್ಶನ್ ಅವರ ಫಾರ್ಮ್‌ಹೌಸ್ ಮೇಲೆ ದಾಳಿ ನಡೆಸಿ, ಕಾನೂನುಬಾಹಿರವಾಗಿ ಬಂಧನದಲ್ಲಿದ್ದ ನಾಲ್ಕು ಪಟ್ಟೆ ತಲೆ ಹೆಬ್ಬಾತುಗಳನ್ನು ವಶಪಡಿಸಿಕೊಂಡಿದ್ದರು. ಈ ಹಕ್ಕಿಗಳು ಮೂಲತಃ ಮಂಗೋಲಿಯಾ ಮತ್ತು ಟಿಬೆಟ್‌ನಿಂದ ಚಳಿಗಾಲದಲ್ಲಿ ಭಾರತಕ್ಕೆ ವಲಸೆ ಬರುವ ಅಪರೂಪದ ತಳಿಗಳಾಗಿವೆ. ನಂತರ ನ್ಯಾಯಾಲಯದ ಅನುಮತಿ ಪಡೆದ ಅಧಿಕಾರಿಗಳು, ಅವುಗಳನ್ನು ಮೈಸೂರು ಬಳಿಯ ‘ಹದಿನಾರು ಕೆರೆ’ ವಲಸೆ ಹಕ್ಕಿಗಳ ತಾಣಕ್ಕೆ ಸುರಕ್ಷಿತವಾಗಿ ಬಿಡುಗಡೆ ಮಾಡಿದ್ದರು.

ಕಾನೂನು ಕ್ರಮ ಮತ್ತು ಸಮನ್ಸ್ ಜಾರಿ

'ಪಟ್ಟೆ ತಲೆ ಹೆಬ್ಬಾತು' ಹಕ್ಕಿಗಳನ್ನು ಭಾರತೀಯ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಸಂರಕ್ಷಿತ ಪ್ರಭೇದಗಳ ಪಟ್ಟಿಗೆ ಸೇರಿಸಲಾಗಿದ್ದು, ಇವುಗಳನ್ನು ಖಾಸಗಿಯಾಗಿ ಪಂಜರದಲ್ಲಿಡುವುದು ಅಥವಾ ಸಾಕುವುದು ಶಿಕ್ಷಾರ್ಹ ಅಪರಾಧವಾಗಿದೆ. ಈ ಹಿನ್ನೆಲೆಯಲ್ಲಿ ಟಿ. ನರಸೀಪುರ ಅರಣ್ಯ ಅಧಿಕಾರಿಗಳು ದರ್ಶನ್, ವಿಜಯಲಕ್ಷ್ಮಿ ಮತ್ತು ನಾಗರಾಜ್ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆ 1972 ರ ಸೆಕ್ಷನ್ 9, 39, ಮತ್ತು 51 ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿ, ಸ್ಥಳೀಯ ನ್ಯಾಯಾಲಯಕ್ಕೆ ಖಾಸಗಿ ದೂರು (Charge Sheet) ಸಲ್ಲಿಸಿದ್ದರು.

ನಂತರ ನಡೆದ ಬೆಳವಣಿಗೆಯಾಗಿ, ಟಿ. ನರಸೀಪುರದ ನ್ಯಾಯಾಲಯವು ಈ ಅಕ್ರಮ ಪಕ್ಷಿ ಸಾಕಾಣಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್, ಅವರ ಪತ್ನಿ ಹಾಗೂ ಮ್ಯಾನೇಜರ್‌ಗೆ ಖುದ್ದಾಗಿ ಹಾಜರಾಗುವಂತೆ ಸಮನ್ಸ್ ಜಾರಿಗೊಳಿಸಿತ್ತು.

ಹೈಕೋರ್ಟ್‌ಗೆ ಅರ್ಜಿ ಸಲ್ಲಿಕೆ

ಸ್ಥಳೀಯ ನ್ಯಾಯಾಲಯ ಜಾರಿಗೊಳಿಸಿದ ಸಮನ್ಸ್ ಹಾಗೂ ತಮ್ಮ ವಿರುದ್ಧದ ಪ್ರಕರಣವನ್ನು ಪ್ರಶ್ನಿಸಿ ನಟ ದರ್ಶನ್, ವಿಜಯಲಕ್ಷ್ಮಿ ಮತ್ತು ನಾಗರಾಜ್ ಅವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ನಾವು ಈ ನಾಲ್ಕು ಪಟ್ಟೆ ತಲೆ ಹೆಬ್ಬಾತುಗಳನ್ನು ಸಾಕಿಲ್ಲ. ಇವು ಸ್ವಯಂಪ್ರೇರಿತವಾಗಿ ಫಾರ್ಮ್‌ಹೌಸ್‌ಗೆ ಬಂದಿದ್ದವು. ಆದ್ದರಿಂದ ನಮ್ಮ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ದಾಖಲಾಗಿರುವ ಪ್ರಕರಣವನ್ನು ಹಾಗೂ ನ್ಯಾಯಾಲಯ ನೀಡಿದ ಸಮನ್ಸ್ ಅನ್ನು ರದ್ದುಗೊಳಿಸಬೇಕು ಎಂದು ಅವರು ತಮ್ಮ ಅರ್ಜಿಯಲ್ಲಿ ಮನವಿ ಮಾಡಿಕೊಂಡಿದ್ದಾರೆ. ಈ ಅರ್ಜಿಯ ವಿಚಾರಣೆ ಶೀಘ್ರವೇ ನಡೆಯಲಿದೆ ಎಂದು ವರದಿ ತಿಳಿಸಿದೆ.