ಒಂದು ನಗರದ ಪ್ರಬುದ್ಧತೆಯನ್ನು ಅಳೆಯುವುದು ಅಲ್ಲಿನ ಕಟ್ಟಡಗಳಿಂದಲ್ಲ, ಬದಲಿಗೆ ಹಿರಿಯ ನಾಗರಿಕರನ್ನು ನಡೆಸಿಕೊಳ್ಳುವ ರೀತಿಯಿಂದ. ಬೆಂಗಳೂರಿನಂತಹ ಮಹಾನಗರಗಳಲ್ಲಿ, ಹದಗೆಟ್ಟ ರಸ್ತೆ ಮತ್ತು ಸುರಕ್ಷತೆಯ ಕೊರತೆಯಿಂದಾಗಿ ವೃದ್ಧರು ಪ್ರತಿನಿತ್ಯ ಆತಂಕದಲ್ಲಿ ಬದುಕುತ್ತಿದ್ದರೆ ಸೇಫ್ ಸಿಟಿ ಎನ್ನಬಹುದೇ?
ಒಂದು ನಗರ ಎಷ್ಟು ಪ್ರಬುದ್ಧವಾಗಿದೆ, ಎಷ್ಟು ದೊಡ್ಡದಾಗಿ ಬೆಳೆದಿದೆ ಎಂದು ಅಳೆಯುವುದು ಹೇಗೆ? ಅಲ್ಲಿನ ಬಾನೆತ್ತರದ ಕಟ್ಟಡಗಳು, ಅಗಲವಾದ ರಸ್ತೆಗಳಿಂದಲ್ಲ. ಒಂದು ನಗರ ಉತ್ತಮ ಸಿಟಿ ಎನಿಸಲು ಮಾನದಂಡ ಇವುಗಳಲ್ಲ. ಬದಲಾಗಿದೆ ಆ ನಗರ ತನ್ನ ಹಿರಿಯ ನಾಗರಿಕರನ್ನು ಹೇಗೆ ನಡೆಸಿಕೊಳ್ಳುತ್ತದೆ ಎಂಬುದರಲ್ಲಿದೆ.
ಸುರಕ್ಷತೆ ಹೆಸರಲ್ಲಿ ಹಿರಿಯರನ್ನ ಕೋಣೆಯಲ್ಲಿ ಕೂಡಿ ಹಾಕೋದು ಸರಿಯೇ?
ನಗರಗಳಲ್ಲಿ ಹಿರಿಯರು ಓಡಾಡುವುದೇ ಕಷ್ಟ. ಸುರಕ್ಷತೆ ನೆಪದಲ್ಲಿ ಮನೆಯ ನಾಲ್ಕು ಗೋಡೆಗಳ ಮಧ್ಯೆ ಕೂಡಿಹಾಕುವುದು ಒಂದು ಪ್ರಬುದ್ಧ ಸಮಾಜದ ಲಕ್ಷಣವಲ್ಲ. ಅದು ಹಿರಿಯರ ಸ್ವಾತಂತ್ರ್ಯ ಕಸಿದುಕೊಂಡಂತೆ. ನಿಜವಾದ ಸುರಕ್ಷತೆ ಎಂದರೆ ವೃದ್ಧರನ್ನ ಮನೆಯಲ್ಲಿ ಕೂಡಿಹಾಕುವುದಲ್ಲ, ವಯಸ್ಸಾದವರೂ ಕೂಡ ಯಾವುದೇ ಆತಂಕವಿಲ್ಲದೆ ಸಾಮಾನ್ಯ ಜೀವನ ನಡೆಸುವಂತಹ ಬೇಕಾದ ವಾತಾವರಣ ಕಲ್ಪಿಸುವದಾಗಿದೆ.
ಆತಂಕದಲ್ಲಿ ಬದುಕುತ್ತಿದ್ದಾರೆ ಹಿರಿಯ ನಾಗರಿಕರು
ಇವತ್ತು ಬೆಂಗಳೂರಿನಂತಹ ಮಹಾನಗರಗಳಲ್ಲಿ ವಯಸ್ಸಾದವರು ಓಡಾಡುವುದೇ ಕಷ್ಟವಾಗಿದೆ. ಅವರಿಗಾಗಿ ಯಾವುದೇ ಪ್ರತ್ಯೇಕ ಸುರಕ್ಷತಾ ವ್ಯವಸ್ಥೆಗಳಿಲ್ಲ, ವಯಸ್ಸಾದ ವ್ಯಕ್ತಿಗಳು ಸಂಜೆ ಹೊತ್ತು ಪಾರ್ಕ್‌ಗೆ ನಡೆದುಕೊಂಡು ಹೋಗಿ ಅಲ್ಲಿನ ಬೆಂಚ್ ಮೇಲೆ ಸ್ವಲ್ಪ ಹೊತ್ತು ಕುಳಿತು ಬಳಿಕ ಅಲ್ಲಿಂದ ಎಟಿಎಂನಿಂದ ಹಣ ಡ್ರಾ ಮಾಡಿಕೊಂಡು ಮನೆಗೆ ವಾಪಸ್ ಆಗಲು ಸಾಧ್ಯವಾಗಬೇಕು. ಈ ಎಲ್ಲ ಕೆಲಸಗಳು ಮಾಡಿಕೊಳ್ಳುವಾಗ ಯಾವುದಾದರೂ ಬೈಕ್ ಡಿಕ್ಕಿ ಹೊಡೆಯುವುದೋ, ಕಳ್ಳರು ಹಣ ಕಿತ್ತುಕೊಳ್ಳುವವರೋ ಎಂಬ ಸಣ್ಣ ಆತಂಕವೂ ಅವರಲ್ಲಿ ಬರಬಾರದು. ಬೆಂಗಳೂರಿನಂತಹ ಮಹಾನಗರಗಳಲ್ಲಿ ಇಂಥ ವಾತಾವರಣ ಇದೆಯೇ? ವಯಸ್ಸಾದವರು ಬಿಡಿ ಯುವಕರೇ ರಸ್ತೆ ದಾಟುವುದು ಕಷ್ಟ. ಸ್ವಲ್ಪ ಯಾಮಾರಿದರು ಅಪಘಾತ ಸಾಧ್ಯತೆ. ಇದಕ್ಕೆ ಉದಾಹರಣಗಳು ಸಾಕಷ್ಟು ಇವೆ. ಅಂತದ್ದರಲ್ಲಿ ವಯಸ್ಸಾದವರು ಬೆಂಗಳೂರಿನಲ್ಲಿ ಯಾವುದೇ ಆತಂಕವಿಲ್ಲದೆ ಬದುಕುತ್ತಿದ್ದಾರೆಯೇ?
ಬೆಂಗಳೂರು ಹಿರಿಯರಿಗೆ ಸೇಫ್ ಸಿಟಿಯೇ?
ಸಂಜೆ ಪಾರ್ಕ್‌ಗೆ ಹೋಗುವ ದಾರಿಯಲ್ಲಿ ಹದಗೆಟ್ಟ ರಸ್ತೆ, ಕಿತ್ತು ಹೋಗಿರುವ ಫುಟ್ಪಾತ್, ವೇಗವಾಗಿ ನುಗ್ಗುವ ವಾಹನಗಳು, ಎಟಿಎಂ ಬಳಿ ಹಣ ಕಳೆದುಕೊಳ್ಳುವ ಭಯ, ಅಪರಿಚಿತರು ಬಾಗಿಲು ತಟ್ಟಿದಾಗ ತೆರೆಯಬೇಕೇ ಬೇಡವೇ ಎಂಬ ಗೊಂದಲ ಆತಂಕ, ರಸ್ತೆ ದಾಟುವಾಗ ಎದುರಾಗುವ ಅಪಾಯ.. ಹೀಗೆ ಪ್ರತಿಯೊಂದು ಹೆಜ್ಜೆ ಇಡುವಾಗಲೂ ವಯಸ್ಸಾದವರಿಗೆ ಆತಂಕವೇ ಎದುರಾಗುತ್ತೆ. ಇದು ಒಂದು ರೀತಿ ದೈನಂದಿನ ಜೀವನ, ಬದುಕಿನ ಮೇಲೆ ಮಾನಸಿಕ ಹಿಂಸೆ ಅನುಭವಿಸುವಂತಾಗುತ್ತೆ. ಇಷ್ಟೆಲ್ಲ ಆತಂಕ ಎದುರಿಸುವಾಗ ಒಂದು ನಗರ ಸೇಫ್ ಸಿಟಿ ಎನಿಸಿಕೊಳ್ಳೂತ್ತದೆಯೇ?
ಯಾವುದೇ ಒಂದು ನಗರ ಸೇಫ್ ಸಿಟಿ ಎನಿಸಿಕೊಳ್ಳಬೇಕಾದರೆ, ನಗರದ ಶ್ರೇಷ್ಠತೆಯನ್ನು ಅಳೆಯಬೇಕಾದರೆ, ಅಲ್ಲಿನ ಹಿರಿಯ ನಾಗರಿಕರು ಎಷ್ಟು ಸ್ವತಂತ್ರವಾಗಿ, ನಿರ್ಭಯವಾಗಿ ಬದುಕುತ್ತಿದ್ದಾರೆ ಎಂಬುದನ್ನು ಗಮನಿಸಬೇಕು. ಪ್ರತಿಯೊಂದು ಸಾಮಾನ್ಯ ಕೆಲಸವೂ ಅವರಿಗೆ ಒಂದು ದೊಡ್ಡ ಸವಾಲಾಗಿ ಪರಿಣಮಿಸವುದಾದರೆ ಅಂತಹ ನಗರ ಎಷ್ಟೇ ಅಭಿವೃದ್ಧಿ ಹೊಂದಿದ್ದರೂ ಅದು ಅಪೂರ್ಣವೇ ಸರಿ. ಇದು ಕೇವಲ ಸೌಲಭ್ಯದ ಪ್ರಶ್ನೆಯಲ್ಲ, ನಮ್ಮೆಲ್ಲರ ನಾಗರಿಕ ಪ್ರಜ್ಞೆಯ ಪ್ರಶ್ನೆಯೂ ಹೌದು.
ಬೆಂಗಳೂರು ಸೇಫ್ ಸಿಟಿ ಎನಿಸುತ್ತದೆಯೇ? ಕಾಮೆಂಟ್ ಮಾಡಿ


