ಬೆಂಗಳೂರಿನಲ್ಲಿ ನಡೆದ ಘಟನೆಯೊಂದು ಉದ್ಯಮಿ ಆನಂದ್ ಮಹೀಂದ್ರಾ ಅವರ ಗಮನ ಸೆಳೆದಿದೆ. ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿರುವ ಅವರ ವಿಡಿಯೋ ಕಂಡು ಎಲ್ಲರ ಕಣ್ಣಾಲೆಗಳು ಒದ್ದೆ ಆಗಿದೆ. ಅಂಥದ್ದೇನಿದೆ ಆ ವಿಡಿಯೋದಲ್ಲಿ?
ಬೆಂಗಳೂರು: ಕೆಲವು ಬೀಳ್ಕೊಡುಗೆಗಳು ಕೇವಲ ಸಾಮಾನ್ಯ ವಿದಾಯವಾಗಿರುವುದಿಲ್ಲ. ಅವು ಪ್ರೀತಿ, ಗೌರವ ಮತ್ತು ಬದುಕಿನ ಸಾರ್ಥಕತೆಯ ಸಂಕೇತವಾಗಿರುತ್ತವೆ. ಇಂತಹದ್ದೇ ಒಂದು ಅಪರೂಪದ ಹಾಗೂ ಕಣ್ಣಂಚಲಿ ನೀರು ತರಿಸುವ ಸುಂದರ ಕ್ಷಣದ ವಿಡಿಯೋವನ್ನು ಖ್ಯಾತ ಉದ್ಯಮಿ ಆನಂದ್ ಮಹೀಂದ್ರಾ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು ಸದ್ಯ ಇದು ನೆಟ್ಟಿಗರ ಮನಗೆದ್ದಿದೆ.
ಬೆಂಗಳೂರಿನ ಪ್ರತಿಷ್ಠಿತ ಬಿಷಪ್ ಕಾಟನ್ ಗರ್ಲ್ಸ್ ಶಾಲೆಯಲ್ಲಿ (Bishop Cotton Girls’ School) ಬರೋಬ್ಬರಿ 38 ವರ್ಷಗಳ ಕಾಲ ಸೇವೆ ಸಲ್ಲಿಸಿದ 'ದಾಸ್ ಅಂಕಲ್' ಎಂಬ ಶಾಲಾ ಸಿಬ್ಬಂದಿಗೆ ವಿದ್ಯಾರ್ಥಿನಿಯರು ಮತ್ತು ಶಿಕ್ಷಕರು ನೀಡಿದ ಅದ್ಭುತ ಬೀಳ್ಕೊಡುಗೆ ಇದಾಗಿದೆ.
ಕೊನೆಯ ಗಂಟೆ ಬಾರಿಸಿ ಕಣ್ಮನ ಸೆಳೆದ 'ದಾಸ್ ಅಂಕಲ್'
ವಿದ್ಯಾರ್ಥಿಗಳಿಂದ ಪ್ರೀತಿಯಿಂದ "ದಾಸ್ ಅಂಕಲ್" ಎಂದೇ ಕರೆಯಲ್ಪಡುತ್ತಿದ್ದ ಶಾಲಾ ಅಟೆಂಡೆಂಟ್, 38 ವರ್ಷಗಳ ಸುದೀರ್ಘ ಸೇವೆಯ ನಂತರ ನಿವೃತ್ತರಾಗಿದ್ದರು. ತಮ್ಮ ಕೊನೆಯ ಕೆಲಸದ ದಿನದಂದು, ಅವರು ತಮ್ಮ ವಾಚ್ ನೋಡಿಕೊಂಡು, ಶಾಲೆಯ ಆ ದೊಡ್ಡ ಗಂಟೆಯನ್ನು ಕೊನೆಯ ಬಾರಿಗೆ ಬಾರಿಸುತ್ತಾರೆ.
ಅವರು ಗಂಟೆ ಬಾರಿಸುತ್ತಿದ್ದಂತೆ ಶಾಲೆಯ ನೂರಾರು ವಿದ್ಯಾರ್ಥಿನಿಯರು ಒಟ್ಟಾಗಿ ಕೌಂಟ್‌ಡೌನ್ (ಎಣಿಕೆ) ಮಾಡಿ, ಜೋರಾಗಿ ಚಪ್ಪಾಳೆ ತಟ್ಟಿ, ಹರ್ಷೋದ್ಗಾರ ವ್ಯಕ್ತಪಡಿಸಿದರು. ಶಿಕ್ಷಕರೂ ಸಹ ವಿದ್ಯಾರ್ಥಿಗಳೊಂದಿಗೆ ಸೇರಿ ಚಪ್ಪಾಳೆ ತಟ್ಟುತ್ತಾ ಅವರಿಗೆ ಗೌರವ ಸಲ್ಲಿಸಿದರು. ತಲೆಮಾರುಗಳ ಕಾಲ ವಿದ್ಯಾರ್ಥಿಗಳನ್ನು ಪ್ರೀತಿಯಿಂದ ಕಂಡಿದ್ದ ದಾಸ್ ಅಂಕಲ್ ಅವರ ಮುಖದಲ್ಲಿದ್ದ ಹೆಮ್ಮೆ ಮತ್ತು ಶಾಲೆಯ ಮೇಲಿನ ಅವರ ನಂಟು ವಿಡಿಯೋದಲ್ಲಿ ಎದ್ದು ಕಾಣುತ್ತಿತ್ತು.
ಆನಂದ್ ಮಹೀಂದ್ರಾ ಹೇಳಿದ್ದೇನು?
ಈ ಭಾವನಾತ್ಮಕ ವಿಡಿಯೋವನ್ನು ತಮ್ಮ 'ಎಕ್ಸ್' (ಟ್ವಿಟರ್) ಖಾತೆಯಲ್ಲಿ ಹಂಚಿಕೊಂಡಿರುವ ಆನಂದ್ ಮಹೀಂದ್ರಾ, ವಿದ್ಯಾರ್ಥಿಗಳು ಮತ್ತು ಶಾಲೆಯ ಸಂಸ್ಕೃತಿಯನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.
ಮಹೀಂದ್ರಾ ಅವರ ಮಾತುಗಳಲ್ಲಿ
"ಒಂದು ಕೊನೆಯ ಗಂಟೆ. ಜೀವಮಾನದ ಸೇವೆ.
ಬೆಂಗಳೂರಿನ ಬಿಷಪ್ ಕಾಟನ್ ಗರ್ಲ್ಸ್ ಶಾಲೆಯ ಈ ಹೃದಯಸ್ಪರ್ಶಿ ಕ್ಷಣ ನಡೆದು ಸುಮಾರು ಒಂದು ವರ್ಷದ ನಂತರ ಈಗಷ್ಟೇ ನನ್ನ ಕಣ್ಣಿಗೆ ಬಿತ್ತು.
38 ವರ್ಷಗಳ ಸುದೀರ್ಘ ಸೇವೆಯ ನಂತರ, ಪ್ರೀತಿಯಿಂದ 'ದಾಸ್ ಅಂಕಲ್' ಎಂದೇ ಕರೆಯಲ್ಪಡುವ ಶಾಲಾ ಅಟೆಂಡೆಂಟ್ ನಿವೃತ್ತರಾಗುತ್ತಿದ್ದರು.
ತಮ್ಮ ಕೊನೆಯ ದಿನದಂದು, ಅವರು ವಾಚ್ ನೋಡಿಕೊಂಡು, ಕೊನೆಯ ಬಾರಿಗೆ ಶಾಲೆಯ ದೊಡ್ಡ ಗಂಟೆಯನ್ನು ಬಾರಿಸಿದರು.
ವಿದ್ಯಾರ್ಥಿಗಳು ಪ್ರತಿ ಬಾರಿಯ ಗಂಟೆಯ ನಾದವನ್ನು ಎಣಿಸುತ್ತಾ, ನಂತರ ಶಿಕ್ಷಕರೊಂದಿಗೆ ಸೇರಿ ಸಂಭ್ರಮದಿಂದ ಚಪ್ಪಾಳೆ ತಟ್ಟಿ ಜೈಕಾರ ಹಾಕಿದರು.
ಅವರ ಮುಖದಲ್ಲಿದ್ದ ಹೆಮ್ಮೆ ಮತ್ತು ಶಾಲೆಯೊಂದಿಗಿನ ಅವರ ಬಾಂಧವ್ಯದ ಆಳ ಎದ್ದು ಕಾಣುತ್ತಿತ್ತು. ಇದನ್ನು ನೋಡಿ ನಾನೂ ಭಾವುಕನಾದೆ.
ಯಾವುದೇ ಪಾತ್ರವಿರಲಿ, ನಮ್ಮ ಸಮುದಾಯಕ್ಕೆ ಸೇವೆ ಸಲ್ಲಿಸುವ ಪ್ರತಿಯೊಬ್ಬ ವ್ಯಕ್ತಿಯನ್ನು ಗೌರವಿಸುವುದನ್ನು ಮತ್ತು ಅವರ ಘನತೆಯನ್ನು ಎತ್ತಿಹಿಡಿಯುವುದನ್ನು ನಮ್ಮ ಶಾಲೆಗಳು ಕಲಿಸಿದಾಗ, ನಮ್ಮ ಭವಿಷ್ಯದ ಬಗ್ಗೆ ನಾವು ಆಶಾವಾದಿಗಳಾಗಿರಲು ಎಲ್ಲಾ ಕಾರಣಗಳೂ ಸಿಗುತ್ತವೆ.
ಆನಂದ್ ಮಹೀಂದ್ರಾ, ಉದ್ಯಮಿ
ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಕಾಯಕವೇ ಕೈಲಾಸ. ಕೆಲಸ ಚಿಕ್ಕದಿರಲಿ, ದೊಡ್ಡದಿರಲಿ, ಪ್ರಾಮಾಣಿಕ ಸೇವೆಗೆ ಸಿಗುವ ಇಂತಹ ಗೌರವ ನಿಜಕ್ಕೂ ಅಮೂಲ್ಯ ಎಂದು ಹಲವರು ಕಾಮೆಂಟ್ ಮಾಡಿದ್ದಾರೆ. ಒಬ್ಬ ಅಟೆಂಡೆಂಟ್ 38 ವರ್ಷಗಳ ಕಾಲ ಮಾಡಿದ ನಿಸ್ವಾರ್ಥ ಸೇವೆಗೆ ಆ ಶಾಲೆಯ ಮಕ್ಕಳು ಮತ್ತು ಶಿಕ್ಷಕರು ನೀಡಿದ ಈ ಗೌರವ, ಸಮಾಜಕ್ಕೆ ದೊಡ್ಡ ಸಂದೇಶ ರವಾನಿಸಿದೆ.


