ಡ್ರೈವಿಂಗ್ ಲೈಸೆನ್ಸ್‌ನಲ್ಲಿನ ದೋಷಗಳ ಕಾರಣ ನೀಡಿ ವಾಹನ ವಿಮಾ ಕ್ಲೇಮ್‌ಗಳನ್ನು ಏಕಾಏಕಿ ತಿರಸ್ಕರಿಸಲು ಸಾಧ್ಯವಿಲ್ಲ ಎಂದು ಪಶ್ಚಿಮ ಬಂಗಾಳ ಗ್ರಾಹಕ ಆಯೋಗ ಮಹತ್ವದ ತೀರ್ಪು ನೀಡಿದೆ. ಚಾಲಕನ ಬಳಿ ಎರಡು ಲೈಸೆನ್ಸ್‌ಗಳಿದ್ದ ಪ್ರಕರಣವೊಂದರಲ್ಲಿ, ವಿಮಾ ಕಂಪನಿಯ ವಾದವನ್ನು ತಳ್ಳಿಹಾಕಿದ ಆಯೋಗ, ಪಾಲಿಸಿದಾರರಿಗೆ ₹3.5 ಲಕ್ಷ ಪರಿಹಾರ ಮತ್ತು ಬಡ್ಡಿ ಪಾವತಿಸುವಂತೆ ಆದೇಶಿಸಿದೆ.

ಡ್ರೈವಿಂಗ್ ಲೈಸೆನ್ಸ್‌ಗೆ ಸಂಬಂಧಿಸಿದ ಕಾರಣಗಳನ್ನು ಮುಂದಿಟ್ಟುಕೊಂಡು, ವಾಹನ ವಿಮೆಯ ಎಲ್ಲಾ ಕ್ಲೇಮ್‌ಗಳನ್ನು ಏಕಾಏಕಿ ತಿರಸ್ಕರಿಸಲು ಇನ್ಶೂರೆನ್ಸ್ ಕಂಪನಿಗಳಿಗೆ ಸಾಧ್ಯವಿಲ್ಲ ಅಂತ ಪಶ್ಚಿಮ ಬಂಗಾಳ ರಾಜ್ಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ ಒಂದು ಮಹತ್ವದ ಆದೇಶದಲ್ಲಿ ಹೇಳಿದೆ. ಒಂದು ಪ್ರಕರಣದಲ್ಲಿ ವಿಮಾ ಕಂಪನಿಯ ಮೇಲ್ಮನವಿಯನ್ನು ವಜಾಗೊಳಿಸಿದ ಆಯೋಗ, ಪಾಲಿಸಿದಾರರಿಗೆ 3.5 ಲಕ್ಷ ರೂಪಾಯಿ ಮತ್ತು ಮಾನಸಿಕ ಸಂಕಟಕ್ಕಾಗಿ ಒಂದು ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಆದೇಶಿಸಿದೆ.

ಅಸಲಿಗೆ ನಡೆದಿದ್ದೇನು?

2026ರ ಜುಲೈ 8ರಂದು ಆಯೋಗ ಈ ಆದೇಶ ಹೊರಡಿಸಿದೆ. ಈ ಪ್ರಕರಣದಲ್ಲಿ, ಎಚ್‌ಡಿಎಫ್‌ಸಿ ಜನರಲ್ ಇನ್ಶೂರೆನ್ಸ್ ಕಂಪನಿಯು ಪಾಲಿಸಿದಾರರೊಬ್ಬರ ಮೋಟಾರ್ ಇನ್ಶೂರೆನ್ಸ್ ಕ್ಲೇಮ್ ಅನ್ನು ತಿರಸ್ಕರಿಸಿತ್ತು. ಅಪಘಾತದ ಸಮಯದಲ್ಲಿ ಕಾರು ಚಲಾಯಿಸುತ್ತಿದ್ದ ವ್ಯಕ್ತಿಗೆ ಸರಿಯಾದ ಡ್ರೈವಿಂಗ್ ಲೈಸೆನ್ಸ್ ಇರಲಿಲ್ಲ ಅನ್ನೋದು ಕಂಪನಿಯ ವಾದವಾಗಿತ್ತು. ಚಾಲಕನ ಬಳಿ ಇನ್ನೊಂದು ಲೈಸೆನ್ಸ್ ಕೂಡ ಇತ್ತು ಮತ್ತು ಅದು ನಕಲಿ ಎಂದು ವಿಮಾ ಕಂಪನಿ ಆರೋಪಿಸಿತ್ತು. ಇದು ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 6ರ ಉಲ್ಲಂಘನೆ ಅಂತಾನೂ ಕಂಪನಿ ಹೇಳಿತ್ತು.

2014ರಲ್ಲಿ ನಡೆದಿದ್ದ ಅಪಘಾತ

ಪಾಲಿಸಿದಾರರ ಬಳಿ ಇದ್ದದ್ದು ಸ್ಕೋಡಾ ನ್ಯೂ ಲಾರಾ ಆ್ಯಂಬಿಯೆಂಟ್ 1.8 ಟಿಎಸ್‌ಐ ಕಾರು. ಈ ವಾಹನಕ್ಕೆ ₹6.95 ಲಕ್ಷ ರೂಪಾಯಿ IDV (ವಿಮಾ ಘೋಷಿತ ಮೌಲ್ಯ) ಒಳಗೊಂಡ ಇನ್ಶೂರೆನ್ಸ್ ಪಾಲಿಸಿ ಇತ್ತು. 2014ರ ಮಾರ್ಚ್ 9ರಿಂದ 2015ರ ಮಾರ್ಚ್ 9ರವರೆಗೆ ಪಾಲಿಸಿಯ ಅವಧಿಯಾಗಿತ್ತು. ಇದಕ್ಕಾಗಿ ಪಾಲಿಸಿದಾರರು ₹11,233 ಪ್ರೀಮಿಯಂ ಕೂಡ ಪಾವತಿಸಿದ್ದರು.

2014ರ ಅಕ್ಟೋಬರ್ 12ರಂದು ಈ ಕಾರು ಅಪಘಾತಕ್ಕೆ ಈಡಾಗಿತ್ತು. ನಂತರ ಸ್ಕೋಡಾ ಸರ್ವಿಸ್ ಸೆಂಟರ್‌ಗೆ ತೆಗೆದುಕೊಂಡು ಹೋದಾಗ, ರಿಪೇರಿ ಮಾಡಲು ಸುಮಾರು ₹5.28 ಲಕ್ಷ ಖರ್ಚಾಗುತ್ತೆ ಅಂತ ಅಂದಾಜಿಸಲಾಗಿತ್ತು. ಇದರ ಬೆನ್ನಲ್ಲೇ ಪಾಲಿಸಿದಾರರು ಇನ್ಶೂರೆನ್ಸ್ ಕ್ಲೇಮ್ ಸಲ್ಲಿಸಿದ್ದರು. ಆದರೆ, ಚಾಲಕನ ಲೈಸೆನ್ಸ್ ಸಮಸ್ಯೆಯ ಕಾರಣ ನೀಡಿ ವಿಮಾ ಕಂಪನಿ ಕ್ಲೇಮ್ ತಿರಸ್ಕರಿಸಿತ್ತು.

ಎರಡು ಲೈಸೆನ್ಸ್ ಇದ್ರೆ ಕ್ಲೇಮ್ ಸಿಗಲ್ವಾ?

ಒಂದಕ್ಕಿಂತ ಹೆಚ್ಚು ಡ್ರೈವಿಂಗ್ ಲೈಸೆನ್ಸ್‌ಗಳನ್ನು ಹೊಂದಿರುವುದು ಮೋಟಾರು ವಾಹನ ಕಾಯ್ದೆಯ ಉಲ್ಲಂಘನೆ ಹೌದು ಎಂದು ಗ್ರಾಹಕ ಆಯೋಗ ಒಪ್ಪಿಕೊಂಡಿದೆ. ಇದಕ್ಕೆ ಕಾನೂನು ಕ್ರಮ ಮತ್ತು ದಂಡಗಳು ಇರಬಹುದು. ಆದರೆ, ಚಾಲಕ ಕಾನೂನು ಮುರಿದಿದ್ದಾನೆ ಅನ್ನೋ ಒಂದೇ ಕಾರಣಕ್ಕೆ ವಿಮಾ ಕಂಪನಿಯು ಪಾಲಿಸಿದಾರರ ಕ್ಲೇಮ್ ಅನ್ನು ತಿರಸ್ಕರಿಸುವಂತಿಲ್ಲ ಎಂದು ಆಯೋಗ ಸ್ಪಷ್ಟಪಡಿಸಿದೆ. ಚಾಲಕನ ಕಾನೂನು ಉಲ್ಲಂಘನೆಗೂ, ವಾಹನದ ಮಾಲೀಕ ಪಾಲಿಸಿ ನಿಯಮಗಳನ್ನು ಮುರಿದಿರುವುದಕ್ಕೂ ವ್ಯತ್ಯಾಸವಿದೆ ಎಂದು ಆಯೋಗ ಹೇಳಿದೆ. ಚಾಲಕ ಕಾನೂನು ಮುರಿದಿದ್ದರೆ, ಆತನ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬಹುದು. ಆದರೆ ಅದರಿಂದ ವಿಮಾ ಕಂಪನಿಯ ಒಪ್ಪಂದದ ಜವಾಬ್ದಾರಿ ತಾನಾಗಿಯೇ ರದ್ದಾಗುವುದಿಲ್ಲ.

ಕಂಪನಿ ಕಟ್ಟಬೇಕಿದೆ 4.5 ಲಕ್ಷ

ಪಾಲಿಸಿದಾರರಿಗೆ ₹3.5 ಲಕ್ಷ ನೀಡುವಂತೆ ಆಯೋಗವು ವಿಮಾ ಕಂಪನಿಗೆ ಸೂಚಿಸಿದೆ. 2016ರ ಸೆಪ್ಟೆಂಬರ್ 7ರಿಂದ ಈ ಮೊತ್ತಕ್ಕೆ ವಾರ್ಷಿಕ 6% ಬಡ್ಡಿ ಕೂಡ ಪಾವತಿಸಬೇಕು. 45 ದಿನಗಳಲ್ಲಿ ಹಣ ಪಾವತಿಸದಿದ್ದರೆ, ಬಡ್ಡಿ ದರ ವಾರ್ಷಿಕ 9%ಕ್ಕೆ ಏರಿಕೆಯಾಗಲಿದೆ. ಇದರ ಜೊತೆಗೆ, ಮಾನಸಿಕ ಸಂಕಟ ಅನುಭವಿಸಿದ್ದಕ್ಕಾಗಿ ಪಾಲಿಸಿದಾರರಿಗೆ ₹1 ಲಕ್ಷ ಪರಿಹಾರ ನೀಡಬೇಕು. ಆದರೆ, ಪಾಲಿಸಿದಾರರು ಕೇಳಿದ್ದ ಪೂರ್ತಿ IDV ಮೊತ್ತವಾದ ₹6.95 ಲಕ್ಷವನ್ನು ನೀಡುವಂತೆ ಆಯೋಗ ಆದೇಶಿಸಲಿಲ್ಲ.

ವಾಹನ ಮಾಲೀಕರು ಗಮನಿಸಬೇಕಾದ ಅಂಶಗಳು

ಡ್ರೈವಿಂಗ್ ಲೈಸೆನ್ಸ್ ನಕಲಿ ಅಥವಾ ಅಮಾನ್ಯವಾಗಿದೆ ಎಂಬ ಕಾರಣಕ್ಕೆ ಎಲ್ಲಾ ಮೋಟಾರ್ ಇನ್ಶೂರೆನ್ಸ್ ಕ್ಲೇಮ್‌ಗಳನ್ನು ತಿರಸ್ಕರಿಸಲು ಸಾಧ್ಯವಿಲ್ಲ ಎನ್ನುವುದು ಈ ತೀರ್ಪಿನ ಪ್ರಮುಖ ಸಂದೇಶ. ವಾಹನ ಮಾಲೀಕರು ತಮ್ಮ ವಾಹನವನ್ನು ಬೇರೆಯವರಿಗೆ ನೀಡುವಾಗ ಚಾಲಕನ ಲೈಸೆನ್ಸ್ ಪರಿಶೀಲಿಸಿ, ಅದು ಸರಿಯಾಗಿದೆಯೇ ಎಂದು ಖಚಿತಪಡಿಸಿಕೊಳ್ಳಬೇಕು. ಒಂದು ವೇಳೆ ವಿಮಾ ಕಂಪನಿ ಕ್ಲೇಮ್ ತಿರಸ್ಕರಿಸಿದರೆ, ಕಂಪನಿ ನೀಡಿದ ತಿರಸ್ಕಾರ ಪತ್ರ, ಸರ್ವೇಯರ್ ವರದಿ ಮತ್ತು ಪಾಲಿಸಿಯ ನಿಯಮಗಳನ್ನು ಸರಿಯಾಗಿ ಪರಿಶೀಲಿಸಬೇಕು. ಕ್ಲೇಮ್ ತಿರಸ್ಕಾರಕ್ಕೆ ಕಂಪನಿ ನೀಡುತ್ತಿರುವ ಕಾರಣ ನಿಜವಾಗಿಯೂ ಪಾಲಿಸಿ ನಿಯಮಗಳ ಉಲ್ಲಂಘನೆಯೇ ಎಂಬುದನ್ನು ಪರಿಶೀಲಿಸುವುದು ಮುಖ್ಯ.