ಸುಪ್ರೀಂಕೋರ್ಟ್ ಚಾಲನಾ ಪರವಾನಗಿ (DL) ಕುರಿತು ಮಹತ್ವದ ತೀರ್ಪು ನೀಡಿದ್ದು, ಪರವಾನಗಿ ಅವಧಿ ಮುಗಿದ ನಂತರ ನವೀಕರಣಕ್ಕೆ ಲಭ್ಯವಿದ್ದ 30 ದಿನಗಳ ಅವಕಾಶವನ್ನು ರದ್ದುಪಡಿಸಿದೆ. ಈ ಹೊಸ ನಿಯಮದ ಪ್ರಕಾರ, ಲೈಸೆನ್ಸ್ ಅವಧಿ ಮುಗಿದ ಮರುದಿನದಿಂದಲೇ ಅದು ಅಮಾನ್ಯವಾಗಲಿದೆ.
ಚಾಲನಾ ಪರವಾನಗಿ (Driving Licence-DL) ಕುರಿತು ಸುಪ್ರೀಂಕೋರ್ಟ್ ಬಹು ಮಹತ್ವದ ತೀರ್ಪೊಂದನ್ನು ಪ್ರಕಟಿಸಿದೆ. ಇನ್ನು ವಾಹನ ಮಾಲೀಕರು ಇದನ್ನು ಪಾಲಿಸುವುದು ಕಡ್ಡಾಯವಾಗಿದೆ. ಆ ತೀರ್ಪು ಏನೆಂದರೆ, ಚಾಲನಾ ಪರವಾನಗಿ ಅವಧಿ ಮುಗಿದ ಮರುದಿನವೇ ಅದನ್ನು ನವೀಕರಣ ಮಾಡಬೇಕು. ಈ ಮೊದಲು ಇದ್ದ 30 ದಿನಗಳ ನವೀಕರಣ ಅವಕಾಶ ಇನ್ನು ಇರುವುದಿಲ್ಲ. ಲೈಸೆನ್ಸ್ ಅವಧಿ ಮುಗಿದ ಮರುದಿನವೇ ವಾಹನವನ್ನು ಚಾಲನೆ ಮಾಡುವ ಕಾನೂನಾತ್ಮಕ ಅವಕಾಶವನ್ನು ವಾಹನ ಚಾಲಕರು ಕಳೆದುಕೊಳ್ಳಲಿದ್ದಾರೆ. ನಿನ್ನೆಯಷ್ಟೇ ಡೇಟ್ ಎಕ್ಸ್ಪೈರ್ ಆಗಿದೆ. ಇವತ್ತೊಂದು ದಿನ ಬಿಟ್ಟುಬಿಡಿ ಎನ್ನುವ ಹಾಗಿಲ್ಲ. ಪರವಾನಗಿ ಮುಗಿದ ತಕ್ಷಣವೇ ಅದನ್ನು ರಿನ್ಯೂ ಮಾಡಿಸಿಕೊಳ್ಳುವುದು ಕಡ್ಡಾಯವಾಗಿದೆ.
ಮರುದಿನದಿಂದಲೇ ಅಮಾನ್ಯ
ಮೋಟಾರ್ ವಾಹನ ಕಾಯ್ದೆಯಡಿ ಚಾಲನಾ ಪರವಾನಗಿ ಅವಧಿ ಮುಗಿದ ತಕ್ಷಣ ಅದನ್ನು ನವೀಕರಿಸದಿದ್ದರೆ ಅದು ಮಾನ್ಯವಾಗಿರುವುದಿಲ್ಲ ಎಂದು ನ್ಯಾಯಮೂರ್ತಿಗಳಾದ ಅಹ್ಸಾನುದ್ದೀನ್ ಅಮಾನುಲ್ಲಾ ನೇತೃತ್ವದ ಪೀಠ ಸ್ಪಷ್ಟಪಡಿಸಿದೆ. ಈ ಮೊದಲು ಇದ್ದ ನವೀಕರಣೆ 30 ದಿನಗಳವರೆಗೆ ವಾಹನ ಚಾಲನೆ ಅವಕಾಶ ಇನ್ನು ಇರುವುದಿಲ್ಲ. 2019ರ ತಿದ್ದುಪಡಿಯ ನಂತರ ಈ ನಿಯಮ ಬದಲಾಗಿದೆ. ಆದ್ದರಿಂದ ತಕ್ಷಣವೇ ಅದನ್ನು ರಿನೀವಲ್ ಮಾಡಿಸಿಕೊಳ್ಳಬೇಕು. ಇಲ್ಲದಿದ್ದರೆ ದಂಡ ಕಟ್ಟಬೇಕಾಗುತ್ತದೆ ಎಂದು ಕೋರ್ಟ್ ಹೇಳಿದೆ.
ಕಾನೂನುಬದ್ಧವಾಗಿ ಅನರ್ಹರು
ಡಿಎಲ್ ಅನ್ನು ರಿನೀವಲ್ ಮಾಡಿಸದೇ ಹೋದರೆ, ಅದು ಈ ಮೊದಲಿನಂತೆ ಸ್ವಯಂಚಾಲಿತವಾಗಿ ವಿಸ್ತರಿಸಲು ಸಾಧ್ಯವಿಲ್ಲ. ಪರವಾನಗಿ ಅವಧಿ ಮುಗಿದ ಮರುದಿನದಿಂದಲೇ ಪರವಾನಗಿ ಹೊಂದಿರುವವರು ವಾಹನ ಚಲಾಯಿಸಲು ಕಾನೂನುಬದ್ಧವಾಗಿ ಅನರ್ಹರು ಎಂದು ಕೋರ್ಟ್ ಸ್ಪಷ್ಟಪಡಿಸಿದೆ. ಪ್ರಸ್ತುತ ಕಾನೂನು ಸ್ಥಿತಿಯನ್ನು ವಿವರಿಸಿರುವ ಕೋರ್ಟ್, ತಿದ್ದುಪಡಿ ಮಾಡಿದ ಕಾನೂನು ಪರವಾನಗಿ ಅವಧಿ ಮುಗಿದ ನಂತರ ಯಾವುದೇ ಹೆಚ್ಚುವರಿ ಅವಧಿಯನ್ನು ಒದಗಿಸುವುದಿಲ್ಲ ಎಂದು ನ್ಯಾಯಮೂರ್ತಿಗಳು ಹೇಳಿದ್ದಾರೆ.
ವಾಹನಾ ಚಾಲನಾ ಪರವಾನಗಿಯ ಸೆಕ್ಷನ್ 15 (1) ಅಡಿಯಲ್ಲಿ, ಒಬ್ಬ ವ್ಯಕ್ತಿಗೆ ತನ್ನ ಅಸ್ತಿತ್ವದಲ್ಲಿರುವ ಪರವಾನಗಿಯನ್ನು ನವೀಕರಿಸಲು ಅವಕಾಶ ನೀಡುತ್ತದೆ. ಇದು ಪರವಾನಗಿ ಅವಧಿ ಮುಗಿಯುವ ದಿನಾಂಕಕ್ಕೆ ಒಂದು ವರ್ಷ ಮೊದಲು ಪ್ರಾರಂಭವಾಗುತ್ತದೆ. ಅವಧಿ ಮುಗಿದ ನಂತರ ಒಂದು ವರ್ಷದವರೆಗೆ ಇದು ಮುಂದುವರಿಯುತ್ತದೆ. ಒಮ್ಮೆ ಪರವಾನಗಿಯನ್ನು ನವೀಕರಿಸಿದ ನಂತರ ನವೀಕರಣವು ಹಿಂದಿನ ದಿನಾಂಕದಿಂದ ಕಾರ್ಯನಿರ್ವಹಿಸುತ್ತದೆ. ಪರವಾನಗಿಯು ಆಗ ಮಾನ್ಯವಾಗಿರುತ್ತದೆ ಎಂದು ಕೋರ್ಟ್ ತಿಳಿಸಿದೆ.


