Asianet Suvarna News Asianet Suvarna News

ಶಾಂಘೈನಲ್ಲಿ ಹಸಿವಿನಿಂದ ಸಾಯುತ್ತಿರುವ ಜನ : ಅಂಗಡಿಗಳಿಗೆ ನುಗ್ಗಿ ಆಹಾರ ಲೂಟಿ

  • 2.6 ಕೋಟಿ ಜನಕ್ಕೆ ತಿನ್ನಲು ಆಹಾರವಿಲ್ಲ, ನಿರ್ಬಂಧ ಉಲ್ಲಂಘಿಸಿ ಬೀದಿಗೆ ಬಂದ ಜನ
  • ಅಂಗಡಿಗಳಿಗೆ ನುಗ್ಗಿ ಆಹಾರ ಲೂಟಿ, ಭದ್ರತಾಪಡೆಗಳ ಜತೆ ಮಾರಾಮಾರಿ
  • ಭಾರತದ ಕೋವಿಡ್‌ ನಿರ್ವಹಣೆಗೆ ಹೋಲಿಸಿದರೆ ಚೀನಾ ಸಂಪೂರ್ಣ ವಿಫಲ
  • ಕೋವಿಡ್‌ ಬದಲಾಗಿ ಹಸಿವಿನಿಂದಲೇ ಅನೇಕರು ಸಾವಿನಂಚಿನಲ್ಲಿ
  • ಮನೆ ಬಾಗಿಲಿಗೆ ಆಹಾರ ತಲುಪಿಸುತ್ತೇವೆ ಎಂದು ಹೇಳಿ ಮಾತು ತಪ್ಪಿದ ಚೀನಾ
Shanghai Lockdown people starving for food looted food in shops akb
Author
Bangalore, First Published Apr 11, 2022, 5:00 AM IST

ಬೀಜಿಂಗ್‌: ಚೀನಾದ ಪ್ರಮುಖ ವಾಣಿಜ್ಯ ನಗರಿ ಶಾಂಘೈಯಲ್ಲಿ (Shanghai) ಕಠಿಣ ಕೋವಿಡ್‌ ಲಾಕ್‌ಡೌನ್‌ ಘೋಷಣೆಯಾಗಿ ಹಲವು ದಿನಗಳೇ ಕಳೆದಿವೆ. ಈ ವೇಳೆ ಸರ್ಕಾರ ಅಗತ್ಯ ವಸ್ತುಗಳಿಗೆ ಸೂಕ್ತ ವ್ಯವಸ್ಥೆ ಮಾಡಲು ವಿಫಲವಾಗಿದ್ದು, ಜನರು ಆಹಾರ, ನೀರು ಸೇರಿ ಅಗತ್ಯವಸ್ತುಗಳಿಲ್ಲದೇ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ ಹಸಿವಿನಿಂದ ಕಂಗೆಟ್ಟಜನತೆ ಕೋವಿಡ್‌ ನಿರ್ಬಂಧಗಳನ್ನು ಉಲ್ಲಂಘಿಸಿ ಮನೆಯಿಂದ ಹೊರಬಂದಿದ್ದು, ಆಹಾರ ಪದಾರ್ಥಗಳನ್ನು ಮಾರಾಟ ಮಾಡುವ ಅಂಗಡಿಗಳನ್ನು ಲೂಟಿ ಮಾಡತೊಡಗಿದ್ದಾರೆ. ರಸ್ತೆಯಲ್ಲೇ ಭದ್ರತಾ ಪಡೆಗಳ ಜತೆ ಮಾರಾಮಾರಿ ನಡೆಯುತ್ತಿದೆ.

ಚೀನಾದಲ್ಲಿನ ಚಿತ್ರಣ ಭಾರತಕ್ಕಿಂತ ತೀರಾ ವಿಭಿನ್ನವಾಗಿದೆ. ಭಾರತದಲ್ಲಿ ಕೋವಿಡ್‌ ಲಾಕ್‌ಡೌನ್‌ ಹಾಕಲಾದ ವೇಳೆಯಲ್ಲಿ ಸರ್ಕಾರವು ಬಡವರಿಗೆ 199 ಲಕ್ಷ ಟನ್‌ ಆಹಾರ ಧಾನ್ಯವನ್ನು ಉಚಿತವಾಗಿ ಬಡವರಿಗೆ ಒದಗಿಸಿತ್ತು. ಸುಮಾರು 80 ಕೋಟಿ ಫಲಾನುಭವಿಗಳಿಗೆ ತಲಾ 5 ಕೇಜಿ ಆಹಾರ ಧಾನ್ಯ ಒದಗಿಸಲಾಗಿತ್ತು. ಅಗತ್ಯ ವಸ್ತುಗಳ ಅಂಗಡಿ ಮುಂಗಟ್ಟುಗಳನ್ನು ದಿನದ ಕೆಲ ಗಂಟೆ ಕಾಲ ತೆರೆದು, ಖರೀದಿಸಲು ಜನರಿಗೆ ಅನುವು ಮಾಡಲಾಗಿತ್ತು. ಕೆಲವು ಸ್ವಯಂಸೇವಕರೂ, ಸಂಘಟನೆಗಳೂ ತಮ್ಮ ನೆರೆಹೊರೆಯಲ್ಲಿ ಯಾವೊಬ್ಬ ನಾಗರಿಕ, ಅಲ್ಲದೇ ಪ್ರಾಣಿಗಳು ಕೂಡಾ ಹಸಿವಿನಿಂದ ಬಳಲದಂತೆ ಸ್ವಯಂಪ್ರೇರಣೆಯಿಂದ ಈ ಕಾರ್ಯದಲ್ಲಿ ಕೈ ಜೋಡಿಸಿದ್ದರು. ಅಲ್ಲದೇ ವಲಸೆ ಬಂದ ಕಾರ್ಮಿಕರಿಗೆ ನೆರವಾಗಲು ಸರ್ಕಾರ ವಿಶೇಷ ರೈಲು ಶ್ರಮಿಕ್‌ ಎಕ್ಸ್‌ಪ್ರೆಸ್‌ ಸಂಚಾರ ಕೂಡಾ ಆರಂಭಿಸಿತ್ತು. ಈ ಹಿನ್ನೆಲೆಯಲ್ಲಿ ಕೋವಿಡ್‌ ಬಿಕ್ಕಟ್ಟನ್ನು ಭಾರತವು ಬಹುಮಟ್ಟಿಗೆ ಯಶಸ್ವಿಯಾಗಿ ನಿಭಾಯಿಸಿತ್ತು. ಆದರೆ ಚೀನಾದ ಸರ್ಕಾರ ಇಂತಹ ಯಾವುದೇ ಕ್ರಮ ಕೈಗೊಳ್ಳಲು ಮುಂದಾಗಿಲ್ಲ ಎಂಬುದು ಇದರಿಂದ ಗೊತ್ತಾಗಿದೆ.

ಕೋವಿಡ್‌ನಿಂದ ಚೀನಾದ ಶಾಂಘೈ ಲಾಕ್‌ಡೌನ್: ಆಹಾರವಿಲ್ಲದೇ ಕಂಗೆಟ್ಟ ಜನ

ಶಾಂಘೈನಲ್ಲಿ ಹಾಹಾಕಾರ, ಲೂಟಿ:

ಚೀನಾದ ಶಾಂಘೈನಲ್ಲಿ ನಿತ್ಯ ಸುಮಾರು 30 ಸಾವಿರ ಕೋವಿಡ್‌ ಕೇಸು ದಾಖಲಾಗುತ್ತಿವೆ. ಈ ಹಿನ್ನೆಲೆಯಲ್ಲಿ ‘ಶೂನ್ಯ ಸಹಿಷ್ಣುತೆ’ ನೀತಿಯನ್ನು ಚೀನಾ ಸರ್ಕಾರ ಘೋಷಿಸಿತ್ತು ಹಾಗೂ ಶಾಂಘೈ ನಗರದ ಸುಮಾರು 2.6 ಕೋಟಿ ಜನರನ್ನು ಕಡ್ಡಾಯವಾಗಿ ಮನೆಯಲ್ಲೇ ಕ್ವಾರೆಂಟೈನ್‌ ಆಗುವಂತೆ ಸೂಚಿಸಿ, ಮನೆ ಬಾಗಿಲಿಗೆ ಆಹಾರ ತಲುಪಿಸುವುದಾಗಿ ಹೇಳಿತ್ತು. ಆದರೆ ಕೋವಿಡ್‌ ನಿರ್ವಹಣಾ ವ್ಯವಸ್ಥೆಯಲ್ಲಿ ಚೀನಾ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ. ಮನೆಯಲ್ಲೇ ಬಂಧಿಯಾಗಿರುವ ಜನರು ಆಹಾರ, ನೀರು ಸೇರಿದಂತೆ ಅಗತ್ಯ ವಸ್ತುಗಳನ್ನು ಒದಗಿಸುವಂತೆ ಮನೆಯ ಬಾಲ್ಕನಿ, ಕಿಟಕಿಗಳಿಂದ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕೋವಿಡ್‌ ಬದಲಾಗಿ ಹಲವರು ಹಸಿವಿನಿಂದಾಗಿಯೇ ಸಾವಿನ ಅಂಚಿನಲ್ಲಿದ್ದಾರೆ ಎನ್ನಲಾಗಿದೆ. ಶಾಂಘೈನಲ್ಲಿ ಆಹಾರ ಮಾತ್ರವಲ್ಲದೇ ಔಷಧಿಗಳಿಗೂ ಭಾರೀ ಕೊರತೆಯಾಗಿದೆ. ಚೀನಾದ ಅವ್ಯವಸ್ಥೆಯಿಂದಾಗಿ ಕಂಗೆಟ್ಟ ಜನರು ಬೀದಿಗಿಳಿದಿದ್ದು, ಹಲವೆಡೆ ಪ್ರತಿಭಟನೆಗಳು ಆರಂಭವಾಗಿವೆ. ಹಲವಾರು ಜನರು ಪಿಪಿಇ ಸೂಟ್‌ ಅನ್ನು ಧರಿಸಿಯೇ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತ ಸೂಪರ್‌ ಮಾರ್ಕೆಟ್‌ಗಳನ್ನು ಲೂಟಿ ಮಾಡಿದ್ದಾರೆ.

ಲಾಕ್‌ಡೌನ್‌ :ಶಾಂಘೈನ ಖಾಲಿ ಬೀದಿಯಲ್ಲಿ ಗಸ್ತು ತಿರುಗುತ್ತಿರುವ ರೋಬೋ ನಾಯಿ

ಕೋವಿಡ್‌ ಪ್ರಕರಣ ಏರಿಕೆ:

ಇನ್ನೊಂದೆಡೆ ಕಠಿಣ ಲಾಕ್‌ಡೌನ್‌ ಕ್ರಮಗಳ ನಡುವೆಯೂ ಕೋವಿಡ್‌ ಪ್ರಕರಣಗಳ ಸಂಖ್ಯೆಯಲ್ಲಿ ದಿನೇ ದಿನೇ ಭಾರೀ ಏರಿಕೆ ಕಂಡುಬಂದಿದೆ. ಭಾನುವಾರ ಚೀನಾದಲ್ಲಿ 24,944 ಹೊಸ ಕೇಸುಗಳು ದಾಖಲಾಗಿದ್ದು, ಸತತ 9ನೇ ದಿನಗಳಿಂದಲೂ ಅತಿ ಹೆಚ್ಚು ಪ್ರಕರಣಗಳ ಹೊಸ ದಾಖಲೆ ಸೃಷ್ಟಿಯಾಗುತ್ತಿದೆ. ಕೇವಲ 11 ಸಾವಿರ ಜನ ಮಾತ್ರ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆಗಿದ್ದಾರೆ. ಇದು ಚೀನಾದ (China) ಕೋವಿಡ್‌ ನಿರ್ವಹಣಾ ನೀತಿ ವೈಫಲ್ಯವನ್ನು ಎತ್ತಿ ತೋರಿಸಿದೆ.


ಶಾಂಘೈನಲ್ಲಿ ಏನಾಗಿದೆ?

1 ಕೋವಿಡ್‌ ವಿರುದ್ಧ ಜೀರೋ ಟಾಲರೆನ್ಸ್‌ ನೀತಿ ಹೊಂದಿರುವ ಚೀನಾ ಶಾಂಘೈನಲ್ಲಿ ಲಾಕ್‌ಡೌನ್‌ ಹೇರಿದೆ.

2 ನಾಯಿ ಜತೆಗೂ ಹೊರ ಬರುವಂತಿಲ್ಲ. ಪತಿ, ಪತ್ನಿ ಕೂಡ ಪಕ್ಕ ಕೂರಬಾರದು, ಮುತ್ತು ನೀಡಬಾರದು ಎಂಬಂತ ಕಠಿಣ ನಿಯಮ ಹೇರಿದೆ

3 ಆಹಾರ ಮನೆಗೆ ಪೂರೈಸುತ್ತೇವೆಂದು ಹೇಳಿದ ಚೀನಾ ಮಾತು ತಪ್ಪಿದೆ.

4 ಪರಿಣಾಮ ರೋಸಿ ಹೋದ ಜನ ಬೀದಿಗೆ ಬಂದಿದ್ದಾರೆ. ಲೂಟಿ ಮಾಡುತ್ತಿದ್ದಾರೆ.

ಭಾರತ ಹೇಗೆ ನಿರ್ವಹಿಸಿತ್ತು?

199 ಲಕ್ಷ ಟನ್‌ ಆಹಾರ ಧಾನ್ಯವನ್ನು (foodgrains) ಉಚಿತವಾಗಿ ಬಡವರಿಗೆ ಭಾರತ ಒದಗಿಸಿತ್ತು

ಸುಮಾರು 80 ಕೋಟಿ ಫಲಾನುಭವಿಗಳಿಗೆ ತಲಾ 5 ಕೇಜಿ ಆಹಾರ ಧಾನ್ಯ ನೀಡಿತ್ತು.

ಅಗತ್ಯ ವಸ್ತುಗಳ ಖರೀದಿಗೆ ಕೆಲವು ಗಂಟೆಗಳ ಕಾಲ ಅವಕಾಶ ನೀಡಲಾಗಿತ್ತು.

ಭಾರತದ ಆಹಾರ ಪೂರೈಕೆಗೆ ವಿಶ್ವ ಹಣಕಾಸು ಸಂಸ್ಥೆ (World Finance Organization)ಮೆಚ್ಚುಗೆ ವ್ಯಕ್ತಪಡಿಸಿದೆ.
 

Follow Us:
Download App:
  • android
  • ios