Asianet Suvarna News Asianet Suvarna News

ಯಾದಗಿರಿ: ಪ್ರತಿಭಾವಂತ ಮಕ್ಕಳ ‘ಗುಳೆ’!

ಮೂಲಸೌಲಭ್ಯ ಹಾಗೂ ಶಿಕ್ಷಕರ ಕೊರತೆಯಿಂದ ಯಾದಗಿರಿ ಜಿಲ್ಲೆಯ ಶೈಕ್ಷಣಿಕ ಗುಣಮಟ್ಟ ಕುಸಿದಿದೆ. ಹೀಗಾಗಿ, ಸ್ಥಳೀಯವಾಗಿ ಮಕ್ಕಳ ಶಿಕ್ಷಣ ಮುಂದುವರಿಸಲು ಹಿಂಜರಿಯುತ್ತಿರುವ ಪಾಲಕರು, ಮಕ್ಕಳ ಭವಿಷ್ಯ ರೂಪಿಸಲು ದೊಡ್ಡ ನಗರಗಳ ಶಿಕ್ಷಣ ಸಂಸ್ಥೆಗಳತ್ತ ಎಡತಾಕುತ್ತಿದ್ದಾರೆ. 
 

Yadgir  Talented Children who Migrated to Big Cities in Karnataka grg
Author
First Published May 11, 2024, 6:01 AM IST

ಆನಂದ್ ಎಂ.ಸೌದಿ

ಯಾದಗಿರಿ(ಮೇ.11):  ಉದ್ಯೋಗ ಅರಸಿ ಜಿಲ್ಲೆಯ ಸಾವಿರಾರು ಕೃಷಿ ಕಾರ್ಮಿಕರು ಹೊರ ಜಿಲ್ಲೆಗಳಿಗೆ ವಲಸೆ ಹೋದಂತೆ, ಗುಣಮಟ್ಟದ ಶಿಕ್ಷಣ ಅರಸಿ ಇಲ್ಲಿನ ಸಾವಿರಾರು ಮಕ್ಕಳು ಉಡುಪಿ, ಮಂಗಳೂರು, ಬೀದರ್, ಬೆಂಗಳೂರಿನಂತಹ ನಗರಗಳತ್ತ ಈಗ ಮುಖ ಮಾಡುತ್ತಿದ್ದಾರೆ. ಆ ಮೂಲಕ ಗುಣಮಟ್ಟದ ಶಿಕ್ಷಣಕ್ಕಾಗಿ ಜಿಲ್ಲೆಯ ಪ್ರತಿಭಾವಂತ ಮಕ್ಕಳ ಮಹಾನಗರಗಳ ‘ಗುಳೆ’ಆರಂಭವಾಗಿದೆ.

ಮೂಲಸೌಲಭ್ಯ ಹಾಗೂ ಶಿಕ್ಷಕರ ಕೊರತೆಯಿಂದ ಯಾದಗಿರಿ ಜಿಲ್ಲೆಯ ಶೈಕ್ಷಣಿಕ ಗುಣಮಟ್ಟ ಕುಸಿದಿದೆ. ಹೀಗಾಗಿ, ಸ್ಥಳೀಯವಾಗಿ ಮಕ್ಕಳ ಶಿಕ್ಷಣ ಮುಂದುವರಿಸಲು ಹಿಂಜರಿಯುತ್ತಿರುವ ಪಾಲಕರು, ಮಕ್ಕಳ ಭವಿಷ್ಯ ರೂಪಿಸಲು ದೊಡ್ಡ ನಗರಗಳ ಶಿಕ್ಷಣ ಸಂಸ್ಥೆಗಳತ್ತ ಎಡತಾಕುತ್ತಿದ್ದಾರೆ. ಇದಕ್ಕೆ ಪೂರಕವಾಗಿ, ಈಗಾಗಲೇ ಶಿಕ್ಷಣ ಸಂಸ್ಥೆಗಳು ಕೂಡ ಜಾಹೀರಾತು ಪ್ರಕಟಿಸುತ್ತಿವೆ. ಇದಕ್ಕೆಂದೇ ನೇಮಿಸಲಾಗುವ ಆಯಾ ಶಾಲಾ-ಕಾಲೇಜುಗಳ ಸಾರ್ವಜನಿಕ ಸಂಪರ್ಕಾಧಿಕಾರಿಗಳು ಇಲ್ಲಿನ ಅನೇಕ ಪಾಲಕರು-ಪೋಷಕರನ್ನು ಸಂಪರ್ಕಿಸುತ್ತಿದ್ದಾರೆ.

ಎಸ್‌ಎಸ್‌ಎಲ್‌ಸಿ ರಿಸಲ್ಟ್‌: ಯಾದಗಿರಿಯಲ್ಲಿ 675 ಶಿಕ್ಷಕರ ಕೊರತೆ ಮಧ್ಯೆಯೂ ಉತ್ತಮ ಫಲಿತಾಂಶ

ಮೂಡಬಿದಿರೆ, ಬೀದರ್‌, ಮಂಗಳೂರು, ಉಡುಪಿ, ಬೆಂಗಳೂರು, ಗಂಗಾವತಿ, ಧಾರವಾಡ, ವಿಜಯಪುರ, ಬೆಳಗಾವಿ, ಮೈಸೂರು ಮುಂತಾದ ಕಡೆಗಳ ಶಿಕ್ಷಣ ಸಂಸ್ಥೆಗಳು ತಮ್ಮ, ತಮ್ಮ ಸಂಸ್ಥೆಗಳ ‘ಸಾಧನೆ-ಸಾಧಕರ’ ಫೋಟೊ ವಿವರಗಳ ಸಮೇತ ಜಿಲ್ಲೆಯ ಮಕ್ಕಳ ಗಮನ ಸೆಳೆಯುತ್ತಿವೆ.

ಎಸ್ಸೆಸ್ಸೆಲ್ಸಿ ನಂತರ ಶೇ.30-35 ರಷ್ಟು ಮಕ್ಕಳ ವಲಸೆ:

ಒಂದು ಅಂದಾಜಿನ ಪ್ರಕಾರ, ಪ್ರತಿವರ್ಷ ಹತ್ತನೇ ತರಗತಿಯ ಫಲಿತಾಂಶದ ನಂತರ ಶೇ.30-35ರಷ್ಟು ಮಕ್ಕಳು ಜಿಲ್ಲೆ ತೊರೆದು ಮುಂದಿನ ಶಿಕ್ಷಣಕ್ಕಾಗಿ ಬೇರೆಡೆ ತೆರಳುತ್ತಾರೆ. ಯಾದಗಿರಿ ಜಿಲ್ಲೆಯಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ಸಿಗುವುದಿಲ್ಲ ಎನ್ನುವ ಭಾವನೆಯಿಂದ ಏಳನೇ ತರಗತಿ ನಂತರ ಹೈಸ್ಕೂಲ್‌ ಶಿಕ್ಷಣಕ್ಕಾಗಿ, ಹತ್ತನೇ ತರಗತಿ ನಂತರ ಪಿಯು ವ್ಯಾಸಂಗಕ್ಕಾಗಿ ಅನೇಕರು ಇಲ್ಲಿಂದ ತೆರಳುವುದು ಸಹಜವಾದ ಪ್ರಕ್ರಿಯೆ ಆದಂತಿದೆ.

ಕಾಯಂ ಪ್ರಾಂಶುಪಾಲರು, ಉಪನ್ಯಾಸಕರೇ ಇಲ್ಲ:

ಕಾಲೇಜು ಶಿಕ್ಷಣ ಇಲಾಖೆಯ ಅಧಿಕಾರಿಗಳ ಮಾಹಿತಿಯಂತೆ, ಯಾದಗಿರಿ ಜಿಲ್ಲೆಯಲ್ಲಿ 23 ಸರ್ಕಾರಿ ಪಿಯು, 6 ಅನುದಾನಿತ ಹಾಗೂ 61 ಅನುದಾನರಹಿತ ಕಾಲೇಜುಗಳಿವೆ. 23 ಸರ್ಕಾರಿ ಪಿಯು ಕಾಲೇಜುಗಳ ಪೈಕಿ ಕಾಯಂ ಪ್ರಾಂಶುಪಾಲರು ಇರುವುದು 2 ಕಾಲೇಜುಗಳಲ್ಲಿ ಮಾತ್ರ. ಉಳಿದ 21 ಸರ್ಕಾರಿ ಪಿಯು ಕಾಲೇಜುಗಳಲ್ಲಿ ಇರುವವರು ಪ್ರಭಾರಿಗಳು.

ದೊಡ್ಡ, ದೊಡ್ಡ ಬ್ಯಾನರ್‌ಗಳಲ್ಲಿ ಕಣ್ಸೆಳೆಯುವ ಜಾಹೀರಾತು ಫಲಕಗಳು ಹಾಗೂ ಸಾಧಕ ವಿದ್ಯಾರ್ಥಿಗಳ ಫೋಟೋಗಳು ಪಾಲಕರ ಮನ ಸೆಳೆಯುತ್ತಿವೆ. ಕೇರಳ, ತಮಿಳುನಾಡು, ದೆಹಲಿ ಮುಂತಾದ ಕಡೆಯಿಂದ ಬಂದಿರುವ ಉಪನ್ಯಾಸಕರ ತಂಡಗಳು ಕೂಡ ಮಕ್ಕಳಿಗೆ ಈ ಬಗ್ಗೆ ಸೂಕ್ತ ಸಲಹೆ-ಸೂಚನೆ ನೀಡುತ್ತಿವೆ ಎಂಬುದು ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳ ಹೇಳಿಕೆ. ಮೂಲಸೌಕರ್ಯ ಹಾಗೂ ಶಿಕ್ಷಕರ ಕೊರತೆಯಿಂದಾಗಿ ಯಾದಗಿರಿ ಜಿಲ್ಲೆಯಲ್ಲಿ ಗುಣಮಟ್ಟದ ಶಿಕ್ಷಣ ಸಿಗಲಿಕ್ಕಿಲ್ಲ ಎಂದರಿತ ಅನೇಕ ಪಾಲಕರು ಮಕ್ಕಳ ‘ವಲಸೆ’ಗೆ ಆಸಕ್ತಿ ತೋರುತ್ತಿದ್ದಾರೆ.

ಬೆಂಗಳೂರು: ಬಿಬಿಎಂಪಿ ಶಾಲೆಗಳಲ್ಲಿ ಶೇ. 68.78ರಷ್ಟು ಫಲಿತಾಂಶ

ನಮ್ಮ ಸರ್ಕಾರಿ ಕಾಲೇಜುಗಳಲ್ಲಿ ಮೂಲಸೌಕರ್ಯಗಳ ವ್ಯವಸ್ಥೆ ಖಾಸಗಿ ಕಾಲೇಜುಗಳನ್ನೂ ಮೀರಿಸುವಂತಿವೆ. ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಹಾಗೂ ಇನ್ನಿತರ ಸರ್ಕಾರಿ ಅನುದಾನದಡಿಯಲ್ಲಿ ತಾಂತ್ರಿಕ-ವಿಜ್ಞಾನದ ಅನೇಕ ಸೌಕರ್ಯಗಳಿವೆ. ಆದರೆ, 21 ಕಾಲೇಜುಗಳಲ್ಲಿ ಕಾಯಂ ಪ್ರಾಂಶುಪಾಲರು ಹಾಗೂ ಶೇ.40 ರಷ್ಟು ಕಾಯಂ ಉಪನ್ಯಾಸಕರ ಕೊರತೆಯಿಂದ ಮಕ್ಕಳು ಬೇರೆಡೆ ಮುಖ ಮಾಡುವಂತಾಗಿದೆ ಎಂದು ಡಿಡಿಪಿಯು ಚೆನ್ನಬಸಪ್ಪ ಕುಳಗೇರಿ ‘ಕನ್ನಡಪ್ರಭ’ಕ್ಕೆ ತಿಳಿಸಿದರು.

ಜಿಲ್ಲೆಯಲ್ಲಿ ಶಿಕ್ಷಕರ ಕೊರತೆ ಎಸ್ಸೆಸ್ಸೆಲ್ಸಿ ಫಲಿತಾಂಶದ ಕುಸಿತಕ್ಕೆ ಕಾರಣವಾದಂತೆ, ಪದವಿ ಪೂರ್ವ ಕಾಲೇಜುಗಳಲ್ಲಿಯೂ ಇದೇ ಸಮಸ್ಯೆ ಪ್ರತಿಭಾವಂತ ಮಕ್ಕಳ ಗುಳೇ ಗೆ ಕಾರಣವಾಗುತ್ತಿದೆ. ಹೀಗೆ ವಲಸೆ ಹೋಗಿರುವ ನಮ್ಮದೇ ಜಿಲ್ಲೆಯ ಪ್ರತಿಭಾವಂತ ಮಕ್ಕಳು ರ್‍ಯಾಂಕ್‌ ಬಂದಿರುವುದು ಹೆಮ್ಮೆ ಮೂಡಿಸುತ್ತಾದರೂ, ನಮ್ಮದೇ ಜಿಲ್ಲೆಗೆ ಬರಬೇಕಾಗಿದ್ದ ಗರಿಯನ್ನು ಬೇರೆಡೆ ಇಟ್ಟು ಬಂದಂತೆ ಅಂತಾರೆ ಇಲ್ಲಿನ ಶಿಕ್ಷಣ ತಜ್ಞರು.

Latest Videos
Follow Us:
Download App:
  • android
  • ios