ಹೇಗಿದೆ ನೋಡಿ ರೋಬೋ ನಾಯಿ ಖಾಲಿ ಬೀದಿಯಲ್ಲಿ ಗಸ್ತು ತಿರುಗುತ್ತಿರು ನಾಯಿ ಕೋವಿಡ್‌ನಿಂದಾಗಿ ಲಾಕ್‌ಡೌನ್‌ಗೆ ಒಳಗಾಗಿರುವ ಚೀನಾದ ಶಾಂಘೈ ನಗರ

ಚೀನಾ(ಏ.4): ಪ್ರಪಂಚದ ವಿವಿಧ ಭಾಗಗಳಲ್ಲಿ, ಜನರು ತಮ್ಮ ಕೋವಿಡ್‌ ನಂತರದ ಸಹಜ ಜೀವನಕ್ಕೆ ಸರಾಗವಾಗಿ ಮರಳಿದ್ದರೂ, ಕೋವಿಡ್‌ ಸಾಂಕ್ರಾಮಿಕವನ್ನು ಜಗತ್ತಿಗೆ ಹಂಚಿದ ಚೀನಾದಲ್ಲಿ ಮಾತ್ರ ಕೋವಿಡ್ ಪ್ರಕರಣಗಳು ಉಲ್ಬಣ ಗೊಂಡಿದ್ದು, ನಾಗರಿಕರಿಗೆ ಮತ್ತೆ ಲಾಕ್‌ಡೌನ್‌ ಹೇರಲಾಗಿದೆ. ತಂತ್ರಜ್ಞಾನದ ವಿಷಯದಲ್ಲಿ ಸಾಕಷ್ಟು ಮುಂದುವರೆದಿರುವ ಚೀನಾ ಲಾಕ್‌ಡೌನ್‌ನಿಂದ ಖಾಲಿಯಾದ ರಸ್ತೆಗಳಲ್ಲಿ ಈಗ ಜನರಿಗೆ ಪ್ರಕಟಣೆಗಳನ್ನು ತಿಳಿಸಲು ರೊಬೊ ನಾಯಿಯೊಂದನ್ನು ಕಳುಹಿಸುತ್ತಿದೆ. ಲಾಕ್‌ಡೌನ್‌ಗೆ ಒಳಗಾಗಿರುವ ಚೀನಾದ ವಾಣಿಜ್ಯ ನಗರಿ ಶಾಂಘೈ ರಸ್ತೆಗಳಲ್ಲಿ ರೊಬೊ ಓಡಾಡುತ್ತಿರುವ ದೃಶ್ಯ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದು ಬೀದಿಗಳಲ್ಲಿ ಸಂಚರಿಸುತ್ತಾ ಪ್ರಮುಖ ಆರೋಗ್ಯ ಪ್ರಕಟಣೆಗಳು ಮತ್ತು ಕೋವಿಡ್ ಪ್ರೋಟೋಕಾಲ್‌ಗಳ ಬಗ್ಗೆ ನಾಗರಿಕರಿಗೆ ನೆನಪಿಸುತ್ತಿದೆ.

ಶಾಂಘೈ, ಚೀನಾದ ಅತಿದೊಡ್ಡ ನಗರ ಹಾಗೂ ಆರ್ಥಿಕ ಶಕ್ತಿ ಕೇಂದ್ರವಾಗಿದೆ. ಆದರೆ ಪ್ರಸ್ತುತ ಇಲ್ಲಿ ಕೋವಿಡ್‌ ಉಲ್ಬಣಗೊಂಡಿದ್ದು, ಲಾಕ್‌ಡೌನ್‌ ಹೇರಲಾಗಿದೆ. ಇಲ್ಲಿನ ನಿವಾಸಿಗಳು ದೇಶದ ಕಟ್ಟುನಿಟ್ಟಾದ ಶೂನ್ಯ ಕೋವಿಡ್ ನೀತಿಯಿಂದಾಗಿ ತಮ್ಮ ಮನೆಗಳಲ್ಲಿ ಇನ್ನೂ 10 ದಿನಗಳ ಕಾಲ ಪ್ರತ್ಯೇಕವಾಗಿ ಇರುವಂತಹ ಸ್ಥಿತಿ ನಿರ್ಮಾಣವಾಗಿದೆ. ಇತ್ತ ಈ ಕಪ್ಪು ಬಣ್ಣದ ರೊಬೊಟ್‌ ನಾಯಿ ಬೋಸ್ಟನ್ ಡೈನಾಮಿಕ್ಸ್ ಸ್ಪಾಟ್‌ಗಳನ್ನು ಹೋಲುತ್ತಿದ್ದು ನಾಲ್ಕು ಕಾಲಿದೆ. ತನ್ನ ತಲೆಯ ಬಳಿ ಮೆಗಾಫೋನ್ ಸ್ಪೀಕರ್ ಅನ್ನು ಜೋಡಿಸಿ ಖಾಲಿ ಬೀದಿಗಳಲ್ಲಿ ಇದು ತಿರುಗುತ್ತಿರುವುದು ಕಂಡುಬಂದಿದೆ.

Scroll to load tweet…

ಇದು ಪ್ರಮುಖ ಆರೋಗ್ಯ ಪ್ರಕಟಣೆಗಳನ್ನು ಮಾಡುವುದು ಮತ್ತು ಕೋವಿಡ್ ಪ್ರೋಟೋಕಾಲ್‌ಗಳ ಬಗ್ಗೆ ನಾಗರಿಕರಿಗೆ ನೆನಪಿಸುವ ಕೆಲಸ ಮಾಡುತ್ತಿದೆ. ಖಾಲಿ ಬೀದಿಯಲ್ಲಿ ಪುಟುಪುಟು ಓಡುತ್ತಿರುವ ಈ ನಾಯಿಯನ್ನು ನೋಡಿ ನೆಟ್ಟಿಗರು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ. ಮುಖದ ಮಾಸ್ಕ್‌ ಧರಿಸಿ, ನಿಮ್ಮ ಕೈಗಳನ್ನು ಆಗಾಗ್ಗೆ ತೊಳೆಯಿರಿ, ಅಗತ್ಯ ತಾಪಮಾನವನ್ನು ತೆಗೆದುಕೊಳ್ಳಿ ಮತ್ತು ನಿಮ್ಮ ಫ್ಲಾಟ್ ಅನ್ನು ಸೋಂಕು ರಹಿತಗೊಳಿಸಿ ಎಂದು ಹೇಳುತ್ತಾ ನಾಯಿಯಂತಹ ರೋಬೋಟ್ ರಸ್ತೆಯಲ್ಲಿ ಹೋಗುತ್ತಿರುವ ವಿಡಿಯೋ ಆನ್‌ಲೈನ್‌ನಲ್ಲಿ ನೆಟಿಜನ್‌ಗಳನ್ನು ರಂಜಿಸಿದೆ ಎಂದು ಕ್ಸುವಾಂಚೆಂಗ್ ಡೈಲಿ ವರದಿ ಮಾಡಿದೆ.

ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನೀಡಲಿದೆ ರೊಬೋಟ್‌..!

ಅಲ್ಲಲ್ಲಿ ಹೆಚ್ಚು ಗುಂಪು ಸೇರಬೇಡಿ ಮತ್ತು ಒಳಾಂಗಣ ಗಾಳಿಯನ್ನು ಸುಧಾರಿಸಿ, ವಿಜ್ಞಾನದೊಂದಿಗೆ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಿ ಮತ್ತು ಹೊರಾಂಗಣದಲ್ಲಿ ನಾಗರಿಕತೆ ಪಾಲಿಸಿ ಎಂದು ರೊಬೊ ನಾಯಿ ಪ್ರಕಟಣೆ ತಿಳಿಸುತ್ತಿದೆ ಎಂದು ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ವರದಿ ಮಾಡಿದೆ. ನಾಯಿಯ ವಿಡಿಯೋ ನೋಡಿದ ಜನ ಇದು ವಿಜ್ಞಾನ ಸಂಬಂಧಿತ ಸಿನಿಮಾದ ದೃಶ್ಯ ಎಂದು ಭಾವಿಸಿದ್ದರು. 

ಕೋವಿಡ್‌ನಿಂದ ಚೀನಾದ ಶಾಂಘೈ ಲಾಕ್‌ಡೌನ್: ಆಹಾರವಿಲ್ಲದೇ ಕಂಗೆಟ್ಟ ಜನ 

ಪಶ್ಚಿಮ ಭಾಗದ ಚೀನಾದ ಅತಿದೊಡ್ಡ ನಗರ ಮತ್ತು ಆರ್ಥಿಕ ರಾಜಧಾನಿಯಾಗಿರುವ ಶಾಂಘೈನಲ್ಲಿ ಸುಮಾರು 16 ಮಿಲಿಯನ್ ನಿವಾಸಿಗಳನ್ನು ಲಾಕ್‌ಡೌನ್‌ನ ಎರಡನೇ ಹಂತದಲ್ಲಿ ಪರೀಕ್ಷಿಸಲಾಗುತ್ತಿದೆ. ಏತನ್ಮಧ್ಯೆ, ನಾಲ್ಕು ದಿನಗಳ ಐಸೋಲೇಷನ್‌ನಿಂದ ಬಿಡುಗಡೆಯಾಗಬೇಕಿದ್ದ ಶಾಂಘೈನ ಪೂರ್ವ ಜಿಲ್ಲೆಗಳ ನಿವಾಸಿಗಳು ತಮ್ಮ ವಸತಿ ಸಮುಚ್ಚಯಗಳಲ್ಲಿ ಮತ್ತೆ ಕೋವಿಡ್‌ ಪ್ರಕರಣಗಳು ಕಂಡುಬಂದರೆ ಅವರ ಲಾಕ್‌ಡೌನ್‌ಗಳನ್ನು ವಿಸ್ತರಿಸಬಹುದು ಎಂದು ತಿಳಿಸಲಾಗಿದೆ ಎಂದು ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ. ಶಾಂಘೈನ ಸಂಪೂರ್ಣ ಜನಸಂಖ್ಯೆಯನ್ನು ಪರೀಕ್ಷೆ ನಡೆಸಲು ಎಂಟು ದಿನಗಳಲ್ಲಿ ಎರಡು ಹಂತಗಳಲ್ಲಿ ಲಾಕ್‌ಡೌನ್‌ ಮಾಡಲಾಗುತ್ತಿದೆ. ಇದು ಜಾಗತಿಕ ಮಾರುಕಟ್ಟೆಗಳನ್ನು ಅಲುಗಾಡಿಸಿದೆ ತಜ್ಞರು ಅದರ ಆರ್ಥಿಕ ಪರಿಣಾಮವನ್ನು ಲೆಕ್ಕ ಮಾಡುತ್ತಿದ್ದಾರೆ.