ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಕೇಸ್: 2ನೇ ರೇಪ್ ಕೇಸಿನಲ್ಲೂ ಜಡ್ಜ್ ಮುಂದೆ ಸಂತ್ರಸ್ತೆಯ ಹೇಳಿಕೆ
ಹೊಳೆನರಸೀಪುರದ ಸಂಸದರ ಮನೆಯಲ್ಲಿ ಮೈಸೂರು ಜಿಲ್ಲೆ ಕೆ.ಆರ್.ನಗರ ತಾಲೂಕಿನ ಸಂತ್ರಸ್ತೆ ಕೆಲಸ ಮಾಡುತ್ತಿದ್ದರು. ಆಗ ತಮ್ಮ ಮೇಲೆ ಪ್ರಜ್ವಲ್ ನಿರಂತರ ಅತ್ಯಾಚಾರ ಎಸಗಿದ್ದಾರೆ ಎಂದು ಸಂತ್ರಸ್ತೆ ಹೇಳಿಕೆ ಕೊಟ್ಟಿದ್ದಾರೆ ಎನ್ನಲಾಗಿದೆ.
ಬೆಂಗಳೂರು(ಮೇ.11): ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣದ ಸಂಬಂಧ ನ್ಯಾಯಾಲಯದ ಮುಂದೆ ಸಿಆರ್‌ಪಿಸಿ 164ರಡಿ ಮತ್ತೊಬ್ಬ ಸಂತ್ರಸ್ತೆಯ ಹೇಳಿಕೆಯನ್ನು ವಿಶೇಷ ತನಿಖಾ ದಳ (ಎಸ್‌ಐಟಿ) ಶುಕ್ರವಾರ ದಾಖಲಿಸಿದೆ. ಹೊಳೆನರಸೀಪುರದ ಸಂಸದರ ಮನೆಯಲ್ಲಿ ಮೈಸೂರು ಜಿಲ್ಲೆ ಕೆ.ಆರ್.ನಗರ ತಾಲೂಕಿನ ಸಂತ್ರಸ್ತೆ ಕೆಲಸ ಮಾಡುತ್ತಿದ್ದರು. ಆಗ ತಮ್ಮ ಮೇಲೆ ಪ್ರಜ್ವಲ್ ನಿರಂತರ ಅತ್ಯಾಚಾರ ಎಸಗಿದ್ದಾರೆ ಎಂದು ಸಂತ್ರಸ್ತೆ ಹೇಳಿಕೆ ಕೊಟ್ಟಿದ್ದಾರೆ ಎನ್ನಲಾಗಿದೆ.
ಅಲ್ಲದೆ ಸಂತ್ರಸ್ತೆ ದೂರು ಆಧರಿಸಿ ಸಿಐಡಿಯಲ್ಲಿ ಎಸ್‌ಐಟಿ ಅತ್ಯಾಚಾರ ಪ್ರಕರಣ ದಾಖಲಿಸಿತ್ತು. ಬಳಿಕ ನ್ಯಾಯಾಲಯದ ಅನುಮತಿ ಪಡೆದು ಎಸ್‌ಐಟಿ ಅಧಿಕಾರಿಗಳು, ನ್ಯಾಯಾಧೀಶರ ಮುಂದೆ ಹೇಳಿಕೆ ದಾಖಲಿಸಿಕೊಂಡಿದ್ದಾರೆ ಎಂದು ಮೂಲಗಳು ಹೇಳಿವೆ.
ಸಂಸದ ಪ್ರಜ್ವಲ್, ನಿತ್ಯಾನಂದ ಸ್ವಾಮಿ ದೇಶಕ್ಕೆ ಸೇರಲು ಪ್ರಯತ್ನಿಸುತ್ತಿದ್ದಾರೆ; ಮೈಸೂರು ಲಕ್ಷ್ಮಣ್!
ಇದೇ ಸಂತ್ರಸ್ತೆಯನ್ನು ಅಪಹರಿಸಿದ ಆರೋಪದ ಮೇರೆಗೆ ಸಂಸದರ ತಂದೆ ಹಾಗೂ ಮಾಜಿ ಸಚಿವ ಎಚ್.ಡಿ.ರೇವಣ್ಣ ಜೈಲು ಸೇರಿದ್ದಾರೆ. ಹಾಗೆಯೇ ಸಂತ್ರಸ್ತ ಮಹಿಳೆಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿಲ್ಲ ಎಂದು ಎಸ್‌ಐಟಿ ಅಧಿಕಾರಿಗಳ ವಿರುದ್ಧ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ಜೆಡಿಎಸ್ ನಾಯಕರು ಆರೋಪಿಸಿದ್ದರು. ಈಗ ನ್ಯಾಯಾಲಯದ ಮುಂದೆ ಸಂತ್ರಸ್ತೆಯನ್ನು ಅಧಿಕಾರಿಗಳು ಕರೆತಂದಿದ್ದಾರೆ. ಈ ಮೂಲಕ ಜೆಡಿಎಸ್ ನಾಯಕರಿಗೆ ಪರೋಕ್ಷವಾಗಿ ಪ್ರಬಲವಾದ ತಿರುಗೇಟು ಕೊಟ್ಟಿದ್ದಾರೆ.
ಸಂತ್ರಸ್ತೆ ಕುಟುಂಬ ಸದಸ್ಯರ ಹೇಳಿಕೆ:
ಇನ್ನೊಂದೆಡೆ ಹಾಸನ ಸಂಸದರ ವಿರುದ್ಧ ಲೈಂಗಿಕ ದೌರ್ಜನ್ಯ ಕೃತ್ಯದ ಸಂತ್ರಸ್ತ ಮಹಿಳೆ ಅಪಹರಣ ಪ್ರಕರಣ ಸಂಬಂಧ ಆಕೆಯ ಕುಟುಂಬದ ಇಬ್ಬರು ಸದಸ್ಯರ ಹೇಳಿಕೆಯನ್ನೂ ಕೋರ್ಟ್‌ನಲ್ಲಿ ಎಸ್‌ಐಟಿ ದಾಖಲಿಸಿದೆ ಎಂದು ತಿಳಿದು ಬಂದಿದೆ.
ಈ ಪ್ರಕರಣದಲ್ಲಿ ಸಂತ್ರಸ್ತೆಯ ಕುಟುಂಬದ ಸದಸ್ಯರನ್ನು ಸಾಕ್ಷಿದಾರನ್ನು ಪರಿಗಣಿಸಿರುವ ಎಸ್‌ಐಟಿ ಅಧಿಕಾರಿಗಳು, ಆ ಇಬ್ಬರಿಂದ ಸಿಆರ್‌ಪಿಸಿ 164ರಡಿ ನ್ಯಾಯಾಧೀಶರ ಮುಂದೆ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಹೀಗಾಗಿ ಅಪಹರಣ ಪ್ರಕರಣದಲ್ಲಿ ಮಾಜಿ ಸಚಿವ ಎಚ್.ಡಿ.ರೇವಣ್ಣ ಹಾಗೂ ಅವರ ಬೆಂಬಲಿಗರಿಗೆ ಮತ್ತಷ್ಟು ಸಂಕಷ್ಟ ಎದುರಾಗಿದೆ.