'NAZA' ಸಾಕ್ಷ್ಯಚಿತ್ರದ ಪ್ರಕಾರ, ಇಸ್ರೇಲ್ ಸೇನೆಯು ಹಮಾಸ್ ನಾಯಕರನ್ನು ಗುರಿಯಾಗಿಸಲು 'ಲ್ಯಾವೆಂಡರ್' ಮತ್ತು 'ಹೆಬೆಸೊರಾ' ಎಂಬ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವನ್ನು ಬಳಸಿದೆ. ಫೋನ್ ಡೇಟಾವನ್ನು ಆಧರಿಸಿ ದಾಳಿ ನಡೆಸುವ ಈ ವ್ಯವಸ್ಥೆಯು ಅಮಾಯಕ ನಾಗರಿಕರ ಸಾವಿಗೆ ಕಾರಣವಾಗುತ್ತಿದೆ ಎಂಬ ಆರೋಪಗಳು ಕೇಳಿಬಂದಿದ್ದು, ಇಸ್ರೇಲ್ ಇದನ್ನು ನಿರಾಕರಿಸಿದೆ.

ಗಾಜಾದಲ್ಲಿ ಮಗುವೊಂದು ಫೋನ್‌ನಲ್ಲಿ "ಅಪ್ಪ ಇಲ್ಲಿದ್ದಾರೆ" ಎಂದು ಹೇಳಿದ ಕೆಲವೇ ಕ್ಷಣಗಳಲ್ಲಿ ಆ ಮನೆಯ ಮೇಲೆ ಕ್ಷಿಪಣಿಯೊಂದು ಆ ಅಪ್ಪನನ್ನೂ ಸೇರಿ ಇಡೀ ಕುಟುಂಬವನ್ನು ಬಲಿ ತೆಗೆದುಕೊಂಡಿತು! ಈ ಭೀಕರ ಘಟನೆಯ ಹಿಂದಿದ್ದಿದ್ದು ಕೇವಲ ಯಾದೃಚ್ಛಿಕ ದಾಳಿಯಲ್ಲ, ಬದಲಿಗೆ ಅತ್ಯಂತ ಭೀಕರ ಎಐ (ಕೃತಕ ಬುದ್ಧಿಮತ್ತೆ) ತಂತ್ರಜ್ಞಾನ ಎನ್ನುವ ರಹಸ್ಯ ಈಗ ಜಗತ್ತಿನಾದ್ಯಂತ ಸಂಚಲನ ಮೂಡಿಸಿದೆ. ಇಸ್ರೇಲಿ ಪತ್ರಕರ್ತರೊಬ್ಬರು ನಿರ್ಮಿಸಿದ 'NAZA' ಎಂಬ ಸಾಕ್ಷ್ಯಚಿತ್ರದಲ್ಲಿ ಈ ಆಘಾತಕಾರಿ ಸಂಗತಿಯನ್ನು ಬಿಚ್ಚಿಡಲಾಗಿದ್ದು, ಇದು ಪ್ರಸ್ತುತ ಜಾಗತಿಕ ಮಟ್ಟದಲ್ಲಿ ದೊಡ್ಡ ವಿವಾದಕ್ಕೆ ಕಾರಣವಾಗಿದೆ.

‘NAZA’ ಸಾಕ್ಷ್ಯಚಿತ್ರ ಬಿಚ್ಚಿಟ್ಟ ರಹಸ್ಯವೇನು?

ಇಸ್ರೇಲ್ ಮಿಲಿಟರಿ (IDF) ಹಮಾಸ್ ನಾಯಕರನ್ನು ನಿರ್ಮೂಲನೆ ಮಾಡಲು ಕೇವಲ ಮಾನವ ಗೂಢಚಾರರನ್ನು ನೆಚ್ಚಿಕೊಳ್ಳದೆ, ಭಾರಿ ಪ್ರಮಾಣದಲ್ಲಿ ಕೃತಕ ಬುದ್ಧಿಮತ್ತೆ ಬಳಸಿದೆ ಎಂದು ಈ ಸಾಕ್ಷ್ಯಚಿತ್ರ ಹೇಳುತ್ತದೆ. ಸಾವಿರಾರು ಫೋನ್‌ಗಳನ್ನು ಹ್ಯಾಕ್ ಮಾಡಿ, ಪ್ರತಿಯೊಂದು ಫೋನ್‌ನ ಡೇಟಾವನ್ನು ಎಐ ತಂತ್ರಜ್ಞಾನಕ್ಕೆ ನೀಡಲಾಗಿತ್ತು. ಅಪ್ಪ ಮನೆಯಲ್ಲಿದ್ದಾರೆ ಎನ್ನುವ ಧ್ವನಿಯನ್ನು ಎಐ ಗುರುತಿಸಿದ ತಕ್ಷಣವೇ ಆ ಸ್ಥಳದ ಮೇಲೆ ವೈಮಾನಿಕ ದಾಳಿ ನಡೆಸಲು ಮಿಲಿಟರಿಗೆ ಸಂಕೇತ ತಲುಪುತ್ತಿತ್ತು. ಆದರೆ ಇಸ್ರೇಲ್ ಸರ್ಕಾರ ಮತ್ತು ಸೇನೆ ಈ ಎಲ್ಲ ಆರೋಪಗಳನ್ನು ಸಂಪೂರ್ಣವಾಗಿ ನಿರಾಕರಿಸಿವೆ.

ಎಐ ಬಳಸಿ ಇಸ್ರೇಲ್ ಗುರಿಗಳನ್ನು ಲಾಕ್ ಮಾಡಿದ್ದು ಹೇಗೆ?

ಇಸ್ರೇಲ್‌ನ ಈ ಗೂಢಚಾರ ವ್ಯವಸ್ಥೆಯು ಅತ್ಯಂತ ಕಠಿಣವಾಗಿ ಕೆಲಸ ಮಾಡುತ್ತಿತ್ತು ಎನ್ನಲಾಗಿದೆ.

ಡೇಟಾ ಸಂಗ್ರಹಣೆ; ವ್ಯಕ್ತಿಯೊಬ್ಬನ ಫೋನ್ ಎಲ್ಲಿದೆ, ಆತ ಯಾರೊಂದಿಗೆ ಮಾತನಾಡುತ್ತಿದ್ದಾನೆ, ಆ ಸ್ಥಳದಲ್ಲಿ ಯಾವ ರೀತಿಯ ಚಟುವಟಿಕೆ ನಡೆಯುತ್ತಿದೆ ಮತ್ತು ಡ್ರೋನ್ ಮೂಲಕ ಪಡೆದ ಚಿತ್ರಗಳನ್ನು AI ಕಲೆಹಾಕುತ್ತಿತ್ತು.

ವಿಶ್ಲೇಷಣೆ; ಈ ಎಲ್ಲಾ ಬೃಹತ್ ಡೇಟಾವನ್ನು AI ಮಿಲಿಸೆಕೆಂಡುಗಳಲ್ಲಿ ಪರಿಶೀಲಿಸಿ, ಯಾರು ಶಂಕಿತ ಹಮಾಸ್ ನಾಯಕ ಎಂಬುದನ್ನು ಗುರುತಿಸುತ್ತಿತ್ತು.

ಸ್ಥಳೀಯ ತನಿಖೆ; ಡೇಟಾ ವಿಶ್ಲೇಷಣೆ ಮುಗಿದ ನಂತರ ದೈಹಿಕ ಪರಿಶೀಲನೆ ನಡೆಸಿ ಅಂತಿಮ ದಾಳಿಗೆ ಯೋಜನೆ ರೂಪಿಸಲಾಗುತ್ತಿತ್ತು.

ಲ್ಯಾವೆಂಡರ್ ಮತ್ತು ಹೆಬೆಸೊರಾ ಎಐ ವ್ಯವಸ್ಥೆಗಳು!

ವರದಿಗಳ ಪ್ರಕಾರ, ಇಸ್ರೇಲ್ ಮುಖ್ಯವಾಗಿ ಎರಡು ರೀತಿಯ ಎಐ ವ್ಯವಸ್ಥೆಗಳನ್ನು ಬಳಸಿತ್ತು.

1. ಲ್ಯಾವೆಂಡರ್ (Lavender); ಇದು ಹಮಾಸ್ ಮತ್ತು ಪ್ಯಾಲೆಸ್ಟೀನಿಯನ್ ಇಸ್ಲಾಮಿಕ್ ಜಿಹಾದ್ ಸಂಘಟನೆಗಳಿಗೆ ಸೇರಿದ ವ್ಯಕ್ತಿಗಳನ್ನು ಗುಪ್ತಚರ ಡೇಟಾ ಆಧಾರದ ಮೇಲೆ ಗುರುತಿಸುವ ಕೆಲಸ ಮಾಡುತ್ತಿತ್ತು.

2. ಹೆಬೆಸೊರಾ ಅಥವಾ ಗಾಸ್‌ಪೆಲ್ (H gospel); ಲ್ಯಾವೆಂಡರ್ ವ್ಯವಸ್ಥೆಯು ಶಂಕಿತ ವ್ಯಕ್ತಿಗಳನ್ನು ಗುರುತಿಸಿದರೆ, ಈ ಹೆಬೆಸೊರಾ ವ್ಯವಸ್ಥೆಯು ಯಾವ ನಿರ್ದಿಷ್ಟ ಕಟ್ಟಡ ಅಥವಾ ಸ್ಥಳದ ಮೇಲೆ ದಾಳಿ ನಡೆಸಬೇಕು ಎಂಬುದನ್ನು ನಿಖರವಾಗಿ ನಿರ್ಧರಿಸುತ್ತಿತ್ತು. ಇದರಿಂದ ದಾಳಿಗಳ ವೇಗ ನೂರು ಪಟ್ಟು ಹೆಚ್ಚಾಗಿತ್ತು.

AI ತಂತ್ರಜ್ಞಾನ ಮತ್ತು ಎದುರಾಗಿರುವ ಭೀಕರ ಅಪಾಯಗಳು!

ಎಐ ತಂತ್ರಜ್ಞಾನಕ್ಕೆ ನಿಜವಾದ ಶಕ್ತಿ ಸಿಗುವುದೇ ಡೇಟಾದಿಂದ. ಉಪಗ್ರಹ ಚಿತ್ರಗಳು, ಫೋನ್ ಸಂಭಾಷಣೆಗಳು, ಕಣ್ಗಾವಲು ಡ್ರೋನ್‌ಗಳು ಮತ್ತು ಸೆನ್ಸಾರ್‌ಗಳಿಂದ ಬರುವ ಅಪಾರ ಪ್ರಮಾಣದ ಮಾಹಿತಿಯನ್ನು AI ಕ್ಷಣಮಾತ್ರದಲ್ಲಿ ಸಂಸ್ಕರಿಸುತ್ತದೆ.

ಜೀವ ಕಳೆದುಕೊಳ್ಳುವ ಬೀತಿಯಲ್ಲಿ ಅಮಾಯಕ!

ಆದರೆ, ಈ ರೀತಿ AI ಬಳಸಿ ದಾಳಿ ಮಾಡುವುದು ದೊಡ್ಡ ಬೆದರಿಕೆಯಾಗುತ್ತಿದೆ. ಉದಾಹರಣೆಗೆ, ಒಬ್ಬ ನಾಗರಿಕ ಅಥವಾ ಮಗು ಆಕಸ್ಮಿಕವಾಗಿ ಶಂಕಿತ ಭಯೋತ್ಪಾದಕನ ಫೋನ್ ಬಳಸಿದರೆ, AI ಅದನ್ನು 'ಬೆದರಿಕೆ' ಎಂದೇ ಗುರುತಿಸಿ ದಾಳಿಗೆ ಸೂಚನೆ ನೀಡಬಹುದು. ಇದರಿಂದ ಅಮಾಯಕ ನಾಗರಿಕರು ಜೀವ ಕಳೆದುಕೊಳ್ಳುವ ಅಪಾಯ ಹೆಚ್ಚಿರುತ್ತದೆ. ಆದರೆ ಇಸ್ರೇಲ್ ಸ್ಪಷ್ಟನೆ ನೀಡಿದ್ದು, "AI ಕೇವಲ ಮಾಹಿತಿ ನೀಡುವ ಸಾಧನವಷ್ಟೇ, ಅಂತಿಮ ದಾಳಿಯ ನಿರ್ಧಾರವನ್ನು ನಮ್ಮ ಸೇನಾಧಿಕಾರಿಗಳೇ ತೆಗೆದುಕೊಳ್ಳುತ್ತಾರೆ" ಎಂದಿದೆ.