ಇರಾನ್‌ನ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂಬ ವರದಿಗಳ ನಂತರ, ಮುಂದಿನ ನಾಯಕ ಯಾರು ಎಂಬ ಚರ್ಚೆ ಶುರುವಾಗಿದೆ. ಸಂವಿಧಾನದ ಪ್ರಕಾರ, 'ತಜ್ಞರ ಸಭೆ'ಯು ಹೊಸ ನಾಯಕನನ್ನು ಆಯ್ಕೆ ಮಾಡಲಿದ್ದು, ಈ ರೇಸ್‌ನಲ್ಲಿ ಹಲವು ಪ್ರಮುಖರಿದ್ದಾರೆ. ಈ ರಾಜಕೀಯ ಅಸ್ಥಿರತೆಯಲ್ಲಿ ಸೇನಾಪಡೆ IRGCಯ ಪಾತ್ರವೂ ನಿರ್ಣಾಯಕವಾಗುವ ಸಾಧ್ಯತೆಯಿದೆ.

ಇರಾನ್‌ನ ಸರ್ವೋಚ್ಚ ನಾಯಕ (Supreme Leader) ಮೊಜ್ತಬಾ ಖಮೇನಿ ಆರೋಗ್ಯ ಸ್ಥಿತಿ ಅತ್ಯಂತ ಗಂಭೀರವಾಗಿದೆ ಎಂಬ ವರದಿಗಳು ಹೊರಬಿದ್ದಿದ್ದು, ಪಶ್ಚಿಮ ಏಷ್ಯಾದಲ್ಲಿ ಭಾರಿ ಸಂಚಲನ ಸೃಷ್ಟಿಸಿವೆ. ಅಮೆರಿಕ ಮತ್ತು ಇಸ್ರೇಲ್ ನಡೆಸಿದ ಜಂಟಿ ದಾಳಿಯಲ್ಲಿ ಅವರ ತಂದೆ ಅಯತೊಲ್ಲಾ ಅಲಿ ಖಮೇನಿ ಹತ್ಯೆಯಾದ ನಂತರ, ಮೊಜ್ತಬಾ ಇರಾನ್‌ನ ನಾಯಕತ್ವ ವಹಿಸಿಕೊಂಡಿದ್ದರು. ಆದರೆ, ಅಧಿಕಾರಕ್ಕೆ ಬಂದಾಗಿನಿಂದ ಅವರು ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ. ಇಸ್ರೇಲಿ ಮಾಧ್ಯಮ ಚಾನೆಲ್ 14 ವರದಿ ಪ್ರಕಾರ ಅವರ ಪರಿಸ್ಥಿತಿ ತೀರ ಹದಗೆಟ್ಟಿದ್ದು, ಸಾವು ಸನ್ನಿಹಿತವಾಗಿದೆ ಎಂದೂ ಹೇಳಲಾಗುತ್ತಿದೆ. ಆದಾಗ್ಯೂ, ಈ ವರದಿಗಳನ್ನು ಇರಾನ್ ಸರ್ಕಾರ ಅಧಿಕೃತವಾಗಿ ಇನ್ನೂ ದೃಢಪಡಿಸಿಲ್ಲ. ಒಂದು ವೇಳೆ ಮೊಜ್ತಬಾ ಖಮೇನಿ ಅವರು ನಿಧನರಾದರೆ ಅಥವಾ ನಾಯಕತ್ವ ವಹಿಸಲು ಅಸಮರ್ಥರಾದರೆ ಇರಾನ್ ಆಡಳಿತ ಯಾರ ಕೈಗೆ ಹೋಗುತ್ತದೆ? ಹೊಸ ನಾಯಕನನ್ನು ಹೇಗೆ ಆಯ್ಕೆ ಮಾಡಲಾಗುತ್ತದೆ? ಎಂಬ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.

ಸಾಂವಿಧಾನಿಕ ಪ್ರಕ್ರಿಯೆ!

ಇರಾನ್ ಸಂವಿಧಾನದ ವಿಧಿ 111 ರ ಪ್ರಕಾರ, ಸರ್ವೋಚ್ಚ ನಾಯಕ ನಿಧನರಾದರೆ, ರಾಜೀನಾಮೆ ನೀಡಿದರೆ ಅಥವಾ ಹುದ್ದೆಯಿಂದ ವಜಾಗೊಂಡರೆ ತಕ್ಷಣವೇ ಮೂವರು ಸದಸ್ಯರನ್ನೊಳಗೊಂಡ 'ಮಧ್ಯಂತರ ನಾಯಕತ್ವ ಮಂಡಳಿ' ಅಧಿಕಾರಕ್ಕೆ ಬರುತ್ತದೆ. ನೂತನ ನಾಯಕನ ಆಯ್ಕೆಯಾಗುವವರೆಗೆ ಈ ಮಂಡಳಿಯೇ ದೇಶದ ಆಡಳಿತ ಮತ್ತು ನಿರ್ಧಾರಗಳನ್ನು ನೋಡಿಕೊಳ್ಳುತ್ತದೆ.

ಈ ತಾತ್ಕಾಲಿಕ ಮಂಡಳಿ;

1. ಇರಾನ್ ದೇಶದ ಅಧ್ಯಕ್ಷರು (ಪ್ರಸ್ತುತ ಮಸೌದ್ ಪೆಜೆಶ್ಕಿಯಾನ್).

2. ದೇಶದ ನ್ಯಾಯಾಂಗ ವಿಭಾಗದ ಮುಖ್ಯಸ್ಥರು (ಪ್ರಸ್ತುತ ಘೋಲಮ್-ಹೊಸೇನ್ ಮೊಹ್ಸೆನಿ-ಎಜೆಯ್).

3. 'ಗಾರ್ಡಿಯನ್ ಕೌನ್ಸಿಲ್' ನಿಂದ ಆಯ್ಕೆಯಾದ ಹಿರಿಯ ಧಾರ್ಮಿಕ ನ್ಯಾಯಶಾಸ್ತ್ರಜ್ಞ ಇರುತ್ತಾರೆ.

ಮುಂದಿನ ಸರ್ವೋಚ್ಚ ನಾಯಕನನ್ನು ಯಾರು ಆಯ್ಕೆ ಮಾಡುತ್ತಾರೆ?

ಇರಾನ್‌ನಲ್ಲಿ ನೂತನ ಸುಪ್ರೀಂ ಲೀಡರ್ ಅನ್ನು ಆಯ್ಕೆ ಮಾಡುವ ಪೂರ್ಣ ಅಧಿಕಾರ 88 ಸದಸ್ಯರ 'ತಜ್ಞರ ಸಭೆ'ಗೆ ಇರುತ್ತದೆ. ಈ ಸಭೆಯು ಸಭೆ ಸೇರಿ, ಅರ್ಹ ಧಾರ್ಮಿಕ ನಾಯಕನನ್ನು ಆರಿಸಬೇಕಾಗುತ್ತದೆ. ಇರಾನ್‌ನ ಮಿಲಿಟರಿ, ವಿದೇಶಾಂಗ ನೀತಿ ಮತ್ತು ನ್ಯಾಯಾಂಗದ ಮೇಲೆ ಸರ್ವೋಚ್ಚ ನಾಯಕನಿಗೆ ಸಂಪೂರ್ಣ ಅಧಿಕಾರವಿರುವುದರಿಂದ ಈ ಆಯ್ಕೆಯು ದೇಶದ ಭವಿಷ್ಯಕ್ಕೆ ಅತ್ಯಂತ ನಿರ್ಣಾಯಕವಾಗಿದೆ.

ಸುಪ್ರೀಂ ಲೀಡರ್ ರೇಸ್‌ನಲ್ಲಿರುವ ಪ್ರಮುಖ ನಾಯಕರು!

1. ಅಯತೊಲ್ಲಾ ಅಲಿರೆಜಾ ಅರಾಫಿ; ಇವರು ಗಾರ್ಡಿಯನ್ ಕೌನ್ಸಿಲ್‌ನ ಸದಸ್ಯ ಹಾಗೂ ಹಿರಿಯ ಧರ್ಮಗುರು. ಅಲಿ ಖಮೇನಿ ನಿಧನದ ನಂತರ ಮಧ್ಯಂತರ ನಾಯಕತ್ವದಲ್ಲೂ ಪ್ರಮುಖ ಪಾತ್ರ ವಹಿಸಿದ ಅನುಭವ ಹೊಂದಿದ್ದಾರೆ.

2. ಅಯತೊಲ್ಲಾ ಹಶೀಮ್ ಹೊಸೇನಿ ಬುಶೆಹ್ರಿ; ಧಾರ್ಮಿಕ ಕೇಂದ್ರವಾದ 'ಕೋಮ್' ಜೊತೆ ಬಲವಾದ ನಂಟು ಹೊಂದಿರುವ ಇವರು, ತಜ್ಞರ ಸಭೆಯಲ್ಲಿ ಭಾರಿ ಪ್ರಭಾವ ಹೊಂದಿದ್ದಾರೆ.

3. ಘೋಲಮ್-ಹೊಸೇನ್ ಮೊಹ್ಸೇನಿ-ಎಜೆಯ್; ಪ್ರಸ್ತುತ ನ್ಯಾಯಾಂಗ ಮುಖ್ಯಸ್ಥರಾಗಿರುವ ಇವರು, ಕಠಿಣ ನಿಲುವಿನ ಭದ್ರತಾ ಅಧಿಕಾರಿಯಾಗಿ ಗುರುತಿಸಿಕೊಂಡಿದ್ದಾರೆ.

4. ಹಸನ್ ಖೊಮೇನಿ; ಇರಾನ್ ದೇಶದ ಸಂಸ್ಥಾಪಕ ಅಯತೊಲ್ಲಾ ರುಹೊಲ್ಲಾ ಖೊಮೇನಿಯವರ ಮೊಮ್ಮಗ. ಆದರೆ, ಇವರ ಸಾಫ್ಟ್ ಅಥವಾ ಉದಾರವಾದಿ ರಾಜಕೀಯ ನಿಲುವು ಕಠಿಣ ನಿರ್ಧಾರದ ಧರ್ಮಗುರುಗಳಿಗೆ ಇಷ್ಟವಿಲ್ಲದಿರಬಹುದು.

ಸಾಮೂಹಿಕ ನಾಯಕತ್ವ ಮತ್ತು IRGC ಮಿಲಿಟರಿ ಪ್ರಭಾವ!

ಒಂದೊಮ್ಮೆ ತಜ್ಞರ ಸಭೆಗೆ ಒಬ್ಬ ನಿರ್ದಿಷ್ಟ ನಾಯಕನನ್ನು ಆಯ್ಕೆ ಮಾಡಲು ಸಾಧ್ಯವಾಗದಿದ್ದರೆ, 'ಸಾಮೂಹಿಕ ನಾಯಕತ್ವ ಮಂಡಳಿ' ರಚನೆಯಾಗುವ ಸಾಧ್ಯತೆಯಿದೆ. ಅಂದರೆ, ಒಬ್ಬ ವ್ಯಕ್ತಿಯ ಬದಲಿಗೆ ನಾಯಕರ ಗುಂಪೊಂದು ದೇಶವನ್ನು ಆಳಲಿದೆ. ಇದು ಇರಾನ್ ಸಾಂಪ್ರದಾಯಿಕ ರಾಜಕೀಯ ವ್ಯವಸ್ಥೆಯಲ್ಲಿ ದೊಡ್ಡ ಬದಲಾವಣೆಯಾಗಲಿದೆ. ಇನ್ನೊಂದೆಡೆ, ಈ ರಾಜಕೀಯ ಅಸ್ಥಿರತೆಯ ಲಾಭವನ್ನು ಇರಾನ್‌ನ ಅತ್ಯಂತ ಶಕ್ತಿಶಾಲಿ ಸೇನಾ ಪಡೆ 'ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್' (IRGC) ಪಡೆದುಕೊಳ್ಳಬಹುದು. ದೇಶದ ಆರ್ಥಿಕತೆ ಮತ್ತು ಭದ್ರತೆಯ ಮೇಲೆ ಭಾರಿ ಹಿಡಿತ ಹೊಂದಿರುವ IRGC, ತಮಗೆ ಅನುಕೂಲವಾಗುವಂತಹ ನಾಯಕನನ್ನು ಪೀಠದ ಮೇಲೆ ಕುಳ್ಳಿರಿಸಲು ತನ್ನ ಸಂಪೂರ್ಣ ಶಕ್ತಿಯನ್ನು ಬಳಸುವ ಸಾಧ್ಯತೆಯಿದೆ.