ಜಗತ್ತಿನ ದೊಡ್ಡಣ್ಣ ಖ್ಯಾತಿಯ ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕರ್ನಾಟಕ ಗ್ಯಾರಂಟಿ ಯೋಜನೆ ಕಾಪಿ ಮಾಡಿದ್ದಾರೆ. ಅಮೆರಿಕ ಮಧ್ಯಂತರ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷ ಗೆದ್ದರೆ ಪ್ರತಿ ವಯಸ್ಕರಿಗೆ 5,000 ಡಾಲರ್ (₹4.77 ಲಕ್ಷ) ನೀಡುವುದಾಗಿ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ. ಈ ಗ್ಯಾರಂಟಿ ಆರ್ಥಿಕ ಹೊರೆಯ ಬಗ್ಗೆ ತೀವ್ರ ಚರ್ಚೆ ಹುಟ್ಟುಹಾಕಿದೆ.
ವಾಷಿಂಗ್ಟನ್: ಭಾರತದ ಚುನಾವಣೆ ಮಾದರಿಯಲ್ಲಿ (ಕರ್ನಾಟಕದಲ್ಲಿ ಮೊಟ್ಟ ಮೊದಲ ಬಾರಿಗೆ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳು) ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇದೀಗ ಹೊಸ ಗ್ಯಾರಂಟಿ ಘೋಷಿಸಿದ್ದಾರೆ. ನವೆಂಬರ್‌ನಲ್ಲಿ ನಡೆಯಲಿರುವ ಅಮೆರಿಕ ಕಾಂಗ್ರೆಸ್ (ಸಂಸತ್) ಮಧ್ಯಂತರ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷವು ಸಂಸತ್ತಿನ ಮೇಲ್ಮನೆ ಮತ್ತು ಕೆಳಮನೆಯಲ್ಲಿ ಬಹುಮತಗಳಿಸಿದರೆ ಅಮೆರಿಕದ ಪ್ರತಿಯೊಬ್ಬ ವಯಸ್ಕರಿಗೂ 5 ಸಾವಿರ ಡಾಲರ್ (4.77 ಲಕ್ಷ ರು.) ನೀಡುವುದಾಗಿ ಪ್ರಕಟಿಸಿದ್ದಾರೆ.
ಕಾರ್ಪೊರೇಟ್ ಕಂಪನಿಯೊಂದು ಷೇರುದಾರರಿಗೆ ನೀಡುವ ಲಾಭಾಂಶದ ರೂಪದಲ್ಲಿ ಈ ಹಣ ಪಾವತಿಸುವುದಾಗಿ ಟ್ರಂಪ್ ಹೇಳಿಕೊಂಡಿದ್ದಾರೆ.
ಆದರೆ ಬಳಿಕ ಈ ಕುರಿತು ಸ್ಪಷ್ಟನೆ ನೀಡಿರುವ ಉಪಾಧ್ಯಕ್ಷ ಜೆ.ಡಿ.ವ್ಯಾನ್ಸ್ ಅವರು ಈ ಹಣ ಶ್ರೀಮಂತರಿಗೆ ನೀಡುವುದಿಲ್ಲ. ಜತೆಗೆ, ಅಮೆರಿಕವು ವಿಧಿಸುವ ಸುಂಕದ ಮೂಲಕ ಸಂಗ್ರಹಿಸಿದ ಆದಾಯದಿಂದ ಪಾವತಿಸಲಾಗುವುದು ಎಂದಿದ್ದಾರೆ. ಆದರೆ, ಟ್ರಂಪ್ ಘೋಷಿಸಿರುವ 5 ಸಾವಿರ ಡಾಲರ್ ಕೊಡುಗೆಯ ಒಟ್ಟಾರೆ ಮೊತ್ತ ಸುಂಕದ ಆದಾಯವನ್ನೂ ಮೀರಲಿದೆ ಎಂದು ಹೇಳಲಾಗಿದೆ.
ಹಣ ಹೊಂದಿಕೆ ಕಷ್ಟ:
ಟ್ರಂಪ್ ಈ ಘೋಷಣೆ ನಿಜವಾಗಿಯೂ ಕಾರ್ಯರೂಪಕ್ಕೆ ಬಂದರೆ ಅಮೆರಿಕದ ಖಜಾನೆಗೆ 9,540 ಲಕ್ಷ ಕೋಟಿ ರು. ಹೊರೆಬೀಳಲಿದೆ. ಈಗಾಗಲೇ ಅಮೆರಿಕವು 17,172 ಲಕ್ಷ ಕೋಟಿ ರು.ನಷ್ಟು ವಾರ್ಷಿಕ ಬಜೆಟ್ ಕೊರತೆ ಎದುರಿಸುತ್ತಿದೆ.
ಅಮೆರಿಕದ ರಾಷ್ಟ್ರೀಯ ಸಾಲವು ಇದೇ ಮೊದಲ ಬಾರಿಗೆ 3,81,600 ಲಕ್ಷ ಕೋಟಿ ತಲುಪಿದೆ. ಇದೀಗ ಪ್ರತಿ ವ್ಯಕ್ತಿಗೂ 5 ಸಾವಿರ ಡಾಲರ್ ನೀಡುವ ಘೋಷಣೆಯಿಂದ ಬಜೆಟ್ ಮೇಲಿನ ಹೊರೆ ಮತ್ತಷ್ಟು ಏರಿಕೆಯಾಗಲಿದೆ ಎಂದು ಹೇಳಲಾಗಿದೆ.


