ನಾಸಾದ 'ಆರ್ಟೆಮಿಸ್ II' ಚಂದ್ರಯಾನ ಮಿಷನ್‌ನಲ್ಲಿದ್ದ ಕಮಾಂಡರ್ ರೀಡ್ ವೈಸ್‌ಮನ್ ಮತ್ತು ಪೈಲಟ್ ವಿಕ್ಟರ್ ಗ್ಲೋವರ್ ಸಕ್ರಿಯ ಸೇವೆಯಿಂದ ನಿವೃತ್ತರಾಗಿದ್ದಾರೆ. ಇನ್ನು ಮುಂದೆ ಇವರು 'ಆಸ್ಟ್ರೋನಾಟ್ ಎಮೆರಿಟಸ್' ಆಗಿ ಹೊಸ ಗಗನಯಾತ್ರಿಗಳಿಗೆ ಮಾರ್ಗದರ್ಶನ ನೀಡಲಿದ್ದಾರೆ.

ವಾಷಿಂಗ್ಟನ್ (ಸೆ.10): ನಾಸಾದ 'ಆರ್ಟೆಮಿಸ್ II' ಮಿಷನ್‌ನಲ್ಲಿದ್ದ ನಾಲ್ವರು ಗಗನಯಾತ್ರಿಗಳು ಚಂದ್ರನ ಸುತ್ತ ಸಂಚರಿಸುವ ಮೂಲಕ ಮಾನವ ಇತಿಹಾಸದಲ್ಲೇ ಒಂದು ದೊಡ್ಡ ಹೆಜ್ಜೆ ಇಟ್ಟಿದ್ದರು. ಅದೂವರೆಗೆ ನೋಡದ, ಹಿಂದೆಂದೂ ಕಂಡಿರದಂತಹ ದೂರದಿಂದ ಭೂಮಿ ದೃಶ್ಯ ಸೆರೆಹಿಡಿದು ಸಾಹಸ ಮೆರೆದಿದ್ದರು.

'ಆರ್ಟೆಮಿಸ್-2' (Artemis II) ಮಿಷನ್‌ನಲ್ಲಿದ್ದ ನಾಲ್ವರು ಗಗನಯಾತ್ರಿಗ ಪೈಕಿ ಇದೀಗ ಇಬ್ಬರು ಪ್ರಮುಖ ಗಗನಯಾತ್ರಿಗಳು ಸಕ್ರಿಯ ಸೇವೆಯಿಂದ ನಿವೃತ್ತಿ ಪಡೆದಿದ್ದಾರೆ. ಮಿಷನ್‌ನ ಕಮಾಂಡರ್ ರೀಡ್ ವೈಸ್‌ಮನ್ ಮತ್ತು ಪೈಲಟ್ ವಿಕ್ಟರ್ ಗ್ಲೋವರ್ ನಿವೃತ್ತಿಯಾದವರು.

ಇನ್ನು ಮುಂದೆ ಇವರಿಬ್ಬರೂ 'ಆಸ್ಟ್ರೋನಾಟ್ ಎಮೆರಿಟಸ್' (Astronaut Emeritus) ಅನ್ನೋ ಗೌರವ ಪದವಿಯಲ್ಲಿ ನಾಸಾ ಜೊತೆ ಕೆಲಸ ಮಾಡಲಿದ್ದಾರೆ. ಭವಿಷ್ಯದ ಚಂದ್ರಯಾನಗಳಿಗೆ ಹೊಸ ತಲೆಮಾರಿನ ಗಗನಯಾತ್ರಿಗಳು ಮತ್ತು ಅಧಿಕಾರಿಗಳಿಗೆ ತರಬೇತಿ ನೀಡುವುದು ಹಾಗೂ ಮಾರ್ಗದರ್ಶನ ಮಾಡುವುದು ಇವರ ಹೊಸ ಜವಾಬ್ದಾರಿಯಾಗಿದೆ.

ಅರ್ಟೆಮಿಸ್-2 ತಂಡದಲ್ಲಿ ನಾಲ್ವರ ಪೈಕಿ ಈಗ ಒಬರೇ!

ನಾಲ್ಕು ಜನರಿದ್ದ ಆರ್ಟೆಮಿಸ್-2 ತಂಡದಲ್ಲಿ ಈಗ ನಾಸಾದ ಸಕ್ರಿಯ ಸೇವೆಯಲ್ಲಿ ಉಳಿದಿರುವ ಏಕೈಕ ಸದಸ್ಯರೆಂದರೆ ಮಿಷನ್ ಸ್ಪೆಷಲಿಸ್ಟ್ ಕ್ರಿಸ್ಟಿನಾ ಕೋಚ್ ಮಾತ್ರ. ಈ ಮಿಷನ್‌ನಲ್ಲಿ ಕೆನಡಾವನ್ನು ಪ್ರತಿನಿಧಿಸಿದ್ದ ಜೆರೆಮಿ ಹ್ಯಾನ್ಸನ್, ಈಗಾಗಲೇ ಕೆನಡಿಯನ್ ಸ್ಪೇಸ್ ಏಜೆನ್ಸಿಯ ಸಕ್ರಿಯ ಸೇವೆಯಿಂದ ನಿವೃತ್ತಿ ಹೊಂದುವುದಾಗಿ ಘೋಷಿಸಿದ್ದರು.