Asianet Suvarna News

ಲಾಕ್‌ಡೌನ್ ತಡೆ ನಡುವೆ ಪುಟಾಣಿಗಳ ಮನ ಗೆದ್ದ ಹಳ್ಳಿಯ ಕನ್ನಡ ಟೀಚರ್!

ಈ ಮೇಡಂ ಅಪ್ಪಟ ಹಳ್ಳಿ ಪ್ರತಿಭೆ. ಇವರು ಗುರು ಮುಖೇನ ಸಂಗೀತ, ನೃತ್ಯ ಕಲಿತವರಲ್ಲ, ಇವರ ಬಳಿ ಅತ್ಯುನ್ನತ ಕ್ಯಾಮೆರಾವಾಗಲಿ, ಎಡಿಟಿಂಗ್ ಸಾಫ್ಟ್ ವೇರ್ ಆಗಲಿ ಇಲ್ಲ, ಆದರೂ ಇವರು ಕುಣಿದು ಕುಪ್ಪಳಿಸಿ, ನಗು ನಗುತ್ತಾ ಮಾಡುವ ಅಭಿನಯ ಗೀತೆಯ ವಿಡಿಯೋ ಪಾಠಗಳು ರಾಜ್ಯ, ದೇಶ, ಹೊರದೇಶಗಳಲ್ಲೂ ಜನಪ್ರಿಯ. ಇವರ ವಿಡಿಯೋ ಪಾಠಗಳು ಫೇಸ್ಬುಕ್ಕಿನಲ್ಲಿ ಪೋಸ್ಟ್ ಆದ ಗಂಟೆಗಳಲ್ಲಿ ಸಾವಿರಾರು ಶೇರ್ ಗಳನ್ನು ಕಾಣುತ್ತವೆ, ಲಕ್ಷಾಂತರ ಮಂದಿ ವೀಕ್ಷಿಸುತ್ತಾರೆ. ನಮಗೂ ಪಾಠ ಮಾಡಿ ಮೇಡಂ ಎಂಬ ಬೇಡಿಕೆ ಎಲ್ಲೆಡೆಯಿಂದ ಇವರಿಗೆ ಬರುತ್ತದೆ... ವರ್ಷದ ಹಿಂದೆ ಫೇಸ್ಬುಕ್ಕು, ಯೂಟ್ಯೂಬ್ ಅಂದರೆ ಏನು, ಎಷ್ಟು ಎಂಬುದೂ ಗೊತ್ತಿಲ್ಲದ ಇವರೀಗ ಮಕ್ಕಳು ಹಾಗೂ ಹೆತ್ತವರ ಪಾಲಿನ ನೆಚ್ಚಿನ ಮೇಡಂ ಅಂತೂ ಹೌದು.

 

Primary school teacher Vandana Rai Karkala becomes social media sensation for her simple teaching method vcs
Author
Bangalore, First Published Jun 19, 2021, 12:04 PM IST
  • Facebook
  • Twitter
  • Whatsapp

ಕೃಷ್ಣಮೋಹನ ತಲೆಂಗಳ, ಮಂಗಳೂರು.

ಇವರು ವಂದನಾ ರೈ. ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ನಲ್ಲೂರಿನವರು. ಕಾರ್ಕಳದ ಜೇಸಿಸ್ ಆಂಗ್ಲ ಮಾಧ್ಯಮ ಶಾಲೆಯ ಪೂರ್ವ ಪ್ರಾಥಮಿಕ ಶಿಕ್ಷಕಿ. ಎಲ್ ಕೆಜಿ, ಯುಕೆಜಿ ವಿದ್ಯಾರ್ಥಿಗಳಿಗೆ ಪಾಠ ಮಾಡ್ತಾರೆ. ಪದವಿಧರೆ, ಮದುವೆಯಾಗಿ ಇಬ್ಬರು ಮಕ್ಕಳು ಜನಿಸಿದ ಬಳಿಕ, ನಾಲ್ಕು ವರ್ಷಗಳ ಹಿಂದೆಯಷ್ಟೇ ಶಿಕ್ಷಕ ವೃತ್ತಿಗೆ ಪಾದಾರ್ಪಣೆ ಮಾಡಿದರು. ಅವಿಭಕ್ತ ಕೂಡು ಕುಟುಂಬದಿಂದ ಬಂದವರು. ಕಾರ್ಕಳದಂತಹ ಗ್ರಾಮೀಣ ಭಾಗದಲ್ಲಿ ಬೆಳೆದವರು. ಹಾಡು, ನೃತ್ಯ, ಏಕಪಾತ್ರಾಭಿನಯ, ಯಕ್ಷಗಾನದಂತಹ ಚಟುವಟಿಕೆಗಳಲ್ಲಿ ಇವರಿಗಿದ್ದ ಆಸಕ್ತಿ ಕೋವಿಡ್ ಲಾಕ್ಡೌನ್ ಸಂಕಟದಲ್ಲಿ ನೆರವಿಗೆ ಬಂತು.


......
ಇವರು ಸಂಗೀತವನ್ನಾಗಲೀ, ನೃತ್ಯವನ್ನಾಗಲಿ ಶಾಸ್ತ್ರೀಯವಾಗಿ ಕಲಿತವರಲ್ಲ. ಜಾಲತಾಣಗಳ ಕುರಿತೂ ಇವರಿಗೆ ಅಂತಹ ಜ್ಞಾನ ಇರಲಿಲ್ಲ. ಶಾಲೆಯೊಂದರಲ್ಲಿ ಸಾಮಾನ್ಯ ಶಿಕ್ಷಕಿಯಾಗಿದ್ದರು. ಕಳೆದ ವರ್ಷ ಮೇ ತಿಂಗಳಲ್ಲಿ ದೇಶ ಅನ್ಲಾಕ್ ಆದ ಬಳಿಕ ಪುಟ್ಟ ಪುಟ್ಟ ಮಕ್ಕಳಿಗೂ ಆನ್ ಲೈನ್ ಮೂಲಕ ಪಾಠ ಮಾಡಬೇಕಾದ ಅನಿವಾರ್ಯತೆ ಒದಗಿತು. ಆಗ ಅವರಿಗೆ ಎಳವೆಯಲ್ಲಿ ಕಲಿತ ವಿದ್ಯೆಗಳು ನೆರವಿಗೆ ಬಂದವು. ಅಭಿನಯ, ನೃತ್ಯಗಳ ಮೂಲಕ ಅಗತ್ಯ ಪ್ರಾಪರ್ಟಿಗಳನ್ನು ಬಳಸಿ ಮಕ್ಕಳಿಗೆ ಆಕರ್ಷಕ ವಿಡಿಯೋ ಮೂಲಕ ಪಾಠ ಮಾಡಲು ತೀರ್ಮಾನಿಸಿದರು.

"

ಶಾಲೆಯ ಸಹ ಶಿಕ್ಷಕಿಯರ ನೆರವು ಸಿಕ್ಕಿತು. ಆರಂಭದಲ್ಲಿ ಶಾಲೆಯಲ್ಲಿ ಎರಡು ದಿನ ಶೂಟಿಂಗ್ ಮಾಡಿ ಎಬಿಸಿಡಿ ಅಕ್ಷರ ಮಾಲೆಯ ಪಾಠ ತಯಾರು ಮಾಡಿದ್ರು. ಮೊಬೈಲಿನಲ್ಲೇ ಮಾಡಿದ ಈ ವಿಡಿಯೋ ಎಡಿಟಿಂಗ್ ಬಳಿಕ ಜನಪ್ರಿಯವಾಯಿತು. ತಮ್ಮ ಶಾಲೆಯ ಮಕ್ಕಳಿಗೆ ಇಷ್ಟವಾದ ಈ ವಿಡಿಯೋ ಬೇರೆ ಮಕ್ಕಳಿಗೂ ತಲುಪಲಿ ಎಂಬ ಉದ್ದೇಶದಿಂದ ಅವರು ಅಧನ್ನು
ಫೇಸ್ಬುಕ್ಕಿನಲ್ಲಿ ಹಂಚಿಕೊಂಡರು. ಅದು ಸಾಕಷ್ಟು ವೈರಲ್ ಆಯ್ತು. ಇದಕ್ಕೂ ಮೊದಲು ಅವರು, ಟಿಕ್ ಟಾಕ್ ವಿಡಿಯೋವನ್ನು ಶೈಕ್ಷಣಿಕವಾಗಿ ಹೇಗೆ ಬಳಸಬಹುದು ಎಂಬ ಕುರಿತು ಫೇಸ್ಬುಕ್ಕಿನಲ್ಲಿ ಹಾಕಿದ್ದ ವಿಡಿಯೋ ಸಾಕಷ್ಟು ವೈರಲ್ ಆಗಿತ್ತು. ಅದೇ ಪ್ರಯೋಗ ಈಗ ನೆರವಿಗೆ ಬಂತು. ನಂತರ ಅವರು “ಅ..ಆ..ಇ...ಈ...ಕನ್ನಡದ ಅಕ್ಷರ ಮಾಲೆ” ಹಾಡನ್ನು ಬಳಸಿ ಕನ್ನಡ ವರ್ಣಾಕ್ಷರಗಳ ಪಾಠದ ವಿಡಿಯೋ ಮಾಡಿದ್ರು. ಅದೂ ವೈರಲ್ ಆಯ್ತು. ಫೇಸ್ಬುಕ್ ಹಾಗೂ ವಾಟ್ಸಪ್ ಗ್ರೂಪುಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಶೇರ್ ಆಯಿತು. ಸ್ಥಳೀಯ ಚಾನೆಲ್ಲುಗಳಲ್ಲಿ ಹಾಡು ಪ್ರಸಾರ ಆಯ್ತು. ಹಲವರು ಡೌನ್ಲೋಡ್ ಮಾಡಿ ತಮ್ಮ ಯೂಟ್ಯೂಬ್ ವಾಹಿನಿಗಳಲ್ಲೂ ಹಂಚಿಕೊಂಡರು. ವಂದನಾ ರೈ ಅವರ ಶಿಕ್ಷಕಿ ಸಹಿತ ಹಲವರು ಕರೆ ಮಾಡಿ ಪ್ರೋತ್ಸಾಹ ನೀಡಿದರು. ಹೀಗೆ ರಾಜ್ಯಾದ್ಯಂತ ಸಹಸ್ರಾರು ಮಂದಿಯ ಮನ ಗೆದ್ದವು ವಂದನಾ ಟೀಚರ್ ಅವರ ಆರಂಭಿಕ ವಿಡಿಯೋಗಳು.

 

ಅಕ್ಷರ ಮಾಲೆ ಹಾಡನ್ನು ಬಳಸಿ ಬೋರ್ಡಿನಲ್ಲಿ ಬರೆದು ಪ್ರತಿ ಅಕ್ಷರಕ್ಕೂ ಅವರು ನಿದರ್ಶನ ಕೊಡ್ತಾ ಹೋಗಿದ್ದು. ಈಟಿ, ಏಣಿ, ಈಶ ಇತ್ಯಾದಿ ಪದಗಳಿಗೆ ಪೂರಕ ಚಿತ್ರ ಅಥವಾ ವಸ್ತುಗಳನ್ನೇ ಎದುರಿಗಿರಿಸಿ ವಿಡಿಯೋ ಮಾಡಿದ್ದು, ನಟನೆ ಮಾಡಿದ್ದು, ಹಾಡಿ, ಕುಣಿದದ್ದು ಮಕ್ಕಳಿಗೆ ತುಂಬ ಇಷ್ಟವಾಯಿತು. ನಂತರ ಮಗ್ಗಿಯ ಬಗ್ಗೆ, ತರಕಾರಿ ಬಗ್ಗೆ, ಹಣ್ಣುಗಳ ಬಗ್ಗೆ ಮಾಡಿದ ವಿಡಿಯೋಗಳೆಲ್ಲ ಸಾಲು ಸಾಲಾಗಿ ವೈರಲ್ ಆಗ್ತಾ ಹೋದವು.

ಹಸ್ತವನ್ನೇ ದೇಹವಾಗಿಸಿದ ನೃತ್ಯ ಈಗ ವೈರಲ್! ನಾಜೂಕಾಗಿ ಆಡಿದ ಕೈಗಳ ಒಡತಿ ಇವರು
......
ಈ ಪ್ರೋತ್ಸಾಹದಿಂದ ನಿಬ್ಬೆರಗಾದ ಅವರು 2020 ಜೂನಿನಲ್ಲಿ ತಮ್ಮದೇ ಆದ ಫೇಸ್ಬುಕ್ ಪುಟ ಹಾಗೂ ಯೂಟ್ಯೂಬ್ ಚಾನೆಲ್ಶುರು ಮಾಡಿದ್ರು. ಅವುಗಳಲ್ಲಿ ಒಂದಾದ ಮೇಲೆ ಒಂದರಂತೆ ಈ ಒಂದು ವರ್ಷದಲ್ಲಿ 97 ಶೈಕ್ಷಣಿಕ ವಿಡಿಯೋಗಳನ್ನು ತಮ್ಮದೇ ಮುಂದಾಳತ್ವದಲ್ಲಿ ನಿರ್ಮಿಸಿ ಶೇರ್ ಮಾಡಿದ್ದಾರೆ. ನಂಬಿದರೆ ನಂಬಿ ಈಗ ಅವರ ಫೇಸ್ಬುಕ್ ಪುಟಕ್ಕೆ 76 ಸಾವಿರಕ್ಕೂ ಅಧಿಕ ಫಾಲೋವರ್ಸ್ ಇದ್ದಾರೆ, ಯೂಟ್ಯೂಬ್ ಚಾನೆಲ್ಲಿಗೆ 15 ಸಾವಿರಕ್ಕೂ ಅಧಿಕ ಸಬ್ ಸ್ಕ್ರೈಬರ್ ಗಳಿದ್ದಾರೆ. ಅವರ ಹೊಸ ವಿಡಿಯೋಗಳು ಶೇರ್ ಆದ ಗಂಟೆಗಳಲ್ಲಿ ಆರೇಳು ಸಾವಿರ ಶೇರ್ ಗಳನ್ನು ಕಾಣುತ್ತಿವೆ. ಸರಾಸರಿ ಒಂದು ಮಿಲಿಯನ್ ನಷ್ಟು ವ್ಯೂಸ್ ಫೇಸ್ಬುಕ್ಕಿನಲ್ಲಿ ಸಿಗುತ್ತಿವೆ!

ಇಷ್ಟಕ್ಕೂ ಅವರಲ್ಲಿ ವಿಡಿಯೋ ಕ್ಯಾಮೆರಾ, ಡಿಎಸ್ಎಲ್ಆರ್ ಕ್ಯಾಮೆರಾ, ಟ್ರೈಪಾಯ್ಡ್, ಎಕ್ಸ್ ಟರ್ನಲ್ ಮೈಕ್ ಯಾವುದೂ ಇಲ್ಲ. ಸಾಮಾನ್ಯ ಮೊಬೈಲ್ ಫೋನ್ ಎದುರಿಗಿಟ್ಟು ತಾವೇ ಶೂಟಿಂಗ್ ಮಾಡ್ತಾರೆ. ಅದನ್ನು ಎಡಿಟ್ ಮಾಡಿಸಿ ಅಪ್ಲೋಡ್ ಮಾಡ್ತಾರೆ. ಅವರ ಪ್ರಯತ್ನಕ್ಕೆ ಎಡಿಟಿಂಗ್ ನಲ್ಲಿ ಧೀರಜ್ ಶೆಟ್ಟಿ ಅಜೆಕಾರು, ಶ್ರೀಶ್ ಎಳ್ಳಾರೆ, ಶಾಲೆಯಲ್ಲಿ ಸಿಬ್ಬಂದಿ ಉದಯ್, ಬಂಧು ಸಮೀಕ್ಷಾ ಮತ್ತಿತರರು ಸಹಾಯ ಮಾಡ್ತಾರೆ, ಮನೆಯವರು ಹಾಗೂ ಶಾಲೆಯವರ ಪ್ರೋತ್ಸಾಹ ಇದ್ದೇ ಇದೆ. ನನಗೆ ಕಳೆದ ವರ್ಷದ ವರೆಗೆ ಫೇಸ್ಬುಕ್ ಬಳಕೆಯೇ ಸರಿಯಾಗಿ ಗೊತ್ತಿರಲಿಲ್ಲ. ಈಗ ದೇಶ, ವಿದೇಶಗಳಿಂದಲೂ ಸಾವಿರಗಟ್ಟಲೆ ಕಮೆಂಟುಗಳು, ಶೇರುಗಳು, ಪ್ರೋತ್ಸಾಹದ ಮಾತುಗಳು ಬರುವಾಗ ನಿಜಕ್ಕೂ ಆಶ್ಚರ್ಯವಾಗುತ್ತಿದೆ ಎನ್ನುತ್ತಾರೆ ಅವರು.

ಇಸ್ರೇಲ್‌ ಸೈನ್ಯದಲ್ಲಿ ಧೂಳೆಬ್ಬಿಸುತ್ತಿರುವ ಗುಜರಾತಿ ಯುವತಿ! 

----

ತರಕಾರಿ, ಸೊಪ್ಪುಗಳ ಹಾಡು ಜನಪ್ರಿಯವಾದ ಬಳಿಕ ಅವರೇ ಹಣ್ಣುಗಳ ಕುರಿತು ಹಾಡು ರಚಿಸಿ ರಾಗ ಸಹಿತ ವಿಡಿಯೋ ಮಾಡಿದ್ರು. ಅದಕ್ಕೋಸ್ಕರ ಪೇಟೆಗೆ ಹೋಗಿ ವಿವಿಧ ಹಣ್ಣುಗಳನ್ನು ತಂದು ತೋರಿಸಿ, ಮಕ್ಕಳಿಗೆ ಮನದಟ್ಟಾಗುವ ವಿಡಿಯೋ ಮಾಡಿದ್ದು ತುಂಬ ಜನಪ್ರಿಯವಾಯಿತು. ವಿಡಿಯೋದಲ್ಲಿ ಅಣ್ಣನ ಮಗಳನ್ನು ಕೂರಿಸಿ ತೋರಿಸಿದ್ರು. ಈ ವಿಡಿಯೋಗ ಒಂದು ದಿನದಲ್ಲಿ ಒಂದು ಮಿಲಿಯನ್ ವ್ಯೂ ಸಿಕ್ಕಿತು!


.........................
ಅವರ ಹಾಡುಗಳ ಜನಪ್ರಿಯತೆ ಕಂಡು ಬೆಂಗಳೂರಿನ ಅಶ್ವಿನಿ ಅಡಿಯೋದವರು ಹಣ್ಣಿನ ಹಾಡನ್ನು ನಿರ್ಮಿಸಲು ಅವರಿಗೆ ಆಫರ್ ನೀಡಿದ್ದಾರೆ. ಅದರ ರೆಕಾರ್ಡಿಂಗ್ ಇನ್ನಷ್ಟೇ ನಡೆಯಬೇಕಿದೆ. ಉಡುಪಿಯ ಶಿಕ್ಷಣ ಇಲಾಖೆಯವರು ವಂದನಾ ರೈ ಅವರನ್ನು ನಲಿ ಕಲಿ ಪಠ್ಯಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ನಿಯೋಜಿಸಿ ಅವರ ಸೇವೆಯನ್ನು ಬಳಸುತ್ತಿದ್ದಾರೆ. ಶಿಕ್ಷಣ ಇಲಾಖೆಯವರು ಈ ವರ್ಷ ತಮ್ಮ ಆನ್ ಲೈನ್ ಪಠ್ಯ ಬೋಧನೆಯಲ್ಲಿ ವಂದನಾ ರೈ ಅವರ ವಿಡಿಯೋಗಳನ್ನು ಬಳಸುವ ಸಾಧ್ಯತೆಯೂ ಇದೆ. ಹೀಗೆ ಕಾರ್ಕಳದಂತಹ ಪುಟ್ಟ ಊರಿನ ಶಾಲೆಯ ಶಿಕ್ಷಕಿ ಮಾಡಿದ ವಿಡಿಯೋ ಇಂದು ಗಡಿಗಳ ಸೀಮೆ ದಾಟಿ ಇಡೀ ರಾಜ್ಯವನ್ನು, ಗಲ್ಫ್ ಸಹಿತ ಹೊರ ದೇಶದ ಕನ್ನಡಿಗರನ್ನೂ ತಲುಪಿದೆ, ಎಲ್ಲರೂ ಅವರ ಪ್ರತಿಭೆಯನ್ನು ಮೆಚ್ಚುವಂತೆ ಮಾಡಿದೆ.

ಕಷ್ಟದಲ್ಲಿರುವವರಿಗೆ 200 ಮನೆ ಕಟ್ಟಿಕೊಟ್ಟ ನಿವೃತ್ತ ಉಪನ್ಯಾಸಕಿ 

.....
ತುಳು ಮಾತೃಭಾಷೆಯ ವಂದನಾ ಅವರು ಹಾಡಿದ “ಯಾನ್ ಎಲ್ಯಾತಿನಿ ಯಾನ್ ಎಲ್ಯಾತಿನಿ...”. ಎಂಬ ಹಳೆಯ ತುಳು ಚಿತ್ರಗೀತೆ ತುಂಬಾ ವೈರಲ್ ಆಗಿದೆ. ಅನೇಕರ ಸ್ಟೇಟಸ್ಸುಗಳಲ್ಲಿ ರಾರಾಜಿಸುತ್ತಿವೆ. ಚಂದಿರನೇತಕೆ ಓಡುವನಮ್ಮ, ಎಲ್ಲೋ ಜೋಗಪ್ಪ ನಿನ್ನರಮನೆ, ಹತ್ತು ಹತ್ತು ಇಪ್ಪತ್ತು, ತೋಟಕ್ಕೆ ಹೋದನು ಸಂಪತ್ತು… ಸಹಿತ ಬಹಳಷ್ಟು ಜನಪ್ರಿಯ ಹಾಡುಗಳು ಅವರ ಅಭಿನಯದಲ್ಲಿ, ಅವರು ಮಾಡಿದ ವಿಡಿಯೋಗಳಲ್ಲಿ ಹೊಸ ಸ್ವರೂಪ ಪಡೆದಿವೆ. ಸರಳವಾಗಿ, ಸುಲಭವಾಗಿ ವಿಚಾರಗಳನ್ನು ಪುಟಾಣಿಗಳಿಗೆ ತಲುಪಿಸುವಲ್ಲಿ ಯಶಸ್ವಿಯಾಗಿದೆ.

ಅವರ ಹಾಡನ್ನು ಅದೇ ಥರ ಬಾಯಿಪಾಠ ಮಾಡಿ ಹಾಡಿ ತುಂಬ ಮಕ್ಕಳು ಮಾರನೇ ದಿನವೇ ಅವರಿಗೆ ವಾಟ್ಸಪ್ ಮಾಡ್ತಾರೆ, ಅದು ಅವರಿಗೆ ತುಂಬ ಖುಷಿ ಕೊಡುತ್ತದೆ. ಪೋಷಕರು “ದಯವಿಟ್ಟು ನಮ್ಮ ಮಗುವಿಗೆ ಸ್ಪೆಷಲ್ ಕ್ಲಾಸ್ ತಗೊಳ್ಳಿ” ಅಂತ ಬೇಡಿಕೆ ಸಲ್ಲಿಸುತ್ತಿದ್ದಾರೆ. ಆದರೆ ಆರ್ಥಿಕವಾಗಿ ವಂದನಾ ಅವರಿಗೆ ಇದರಿಂದ ಲಾಭವೇನೂ ಇಲ್ಲ. ಶಿಕ್ಷಣ ಇಲಾಖೆಯಾಗಲೀ, ಸರ್ಕಾರದಿಂದಾಗಲೀ, ಅಥವಾ ಇವರ ವಿಡಿಯೋಗಳನ್ನು ಕದ್ದು ತಮ್ಮ ಚಾನೆಲ್ಲುಗಳಲ್ಲಿ ಹಾಕುವವರಿಂದಾಗಲಿ ಅವರಿಗೆ ಯಾವ ಆದಾಯವೂ ಇಲ್ಲ. ಅವರೇ ಎಡಿಟಿಂಗ್ ಗೆ ಕೈಯ್ಯಿಂದ ಖರ್ಚು ಮಾಡಬೇಕಾಗಿದೆ. ನಾಲ್ಕೈದು ನಿಮಿಷದ ವಿಡಿಯೋಗೆ ಅವರಿಗೆ ಕನಿಷ್ಠ ಎರಡು ದಿನದ ತಯಾರಿ ಬೇಕಾಗುತ್ತದೆ. ಅವರಿಗೆ ಪ್ರತ್ಯೇಕ ಕ್ಯಾಮೆರಾ ಮ್ಯಾನ್ ಕೂಡಾ ಇಲ್ಲ. ಕುಟುಂಬ ನಿರ್ವಹಣೆ, ಮಕ್ಕಳ ಪಾಲನೆ ಜೊತೆಗೆ ಇವನ್ನೂ ಮಾಡಬೇಕು.

ಸ್ಟ್ರಾಂಗ್ ಹೆಣ್ಣು ಮಗಳು ಎಂದಿಗೂ ಈ ತಪ್ಪುಗಳನ್ನು ಮಾಡೋದಿಲ್ಲ! 
....
ಲಾಕ್ಡೌನ್ ಆಗುವ ಮೊದಲು ಕಾರ್ಕಳ ಪರಿಸರದಲ್ಲಿ ಅವರು ನೃತ್ಯ ತರಗತಿಗಳನ್ನು ನಡೆಸುತ್ತಿದ್ದರು. ಲಾಕ್ಡೌನ್ ಆದ ಬಳಿಕ ಆನ್ ಲೈನ್ ಮೂಲಕ (ವಾಟ್ಸಪ್ ಬಳಸಿ) ನೃತ್ಯ ತರಗತಿಗಳನ್ನು ಬ್ಯಾಚ್ ವೈಸ್ ನಡೆಸುತ್ತಿದ್ದಾರೆ. ಅದು ಅವರಿಗೆ ಆರ್ಥಿಕ ಸಂಪನ್ಮೂಲವೂ ಹೌದು. ಅನುದಾನರಹಿತ ಶಾಲೆಯಲ್ಲಿ ಅವರಿಗೆ ಕಳೆದ ಐದಾರು ತಿಂಗಳುಗಳಿಂದ ಸಂಬಳವೇ ಆಗಿಲ್ಲ! ಅವರ ವಿಡಿಯೋಗಳನ್ನು ಲಕ್ಷಾಂತರ ಮಂದಿ ನೋಡಿದ್ದಾರೆ. ಶೇರ್ ಆದ ಗಂಟೆಗಳಲ್ಲಿ ಒಂದೆರಡು ಸಾವಿರ ಮಂದಿ ಶೇರ್ ಮಾಡ್ತಾರೆ. ಜನಪ್ರಿಯ ವಿಡಿಯೋಗಳು ಫೇಸ್ಬುಕ್ಕಿನಲ್ಲಿ 8ರಿಂದ 10 ಸಾವಿರದಷ್ಟು ಸಂಖ್ಯೆಯಲ್ಲಿ ಶೇರ್ ಆಗಿವೆ. ಹಣ್ಣುಗಳ ಹಾಡು 13 ಸಾವಿರ ಶೇರ್ ಕಂಡಿತ್ತು. ಒಂದು ಮಿಲಿಯನ್ ಗಿಂತ ಜಾಸ್ತಿ ವ್ಯೂಸ್ ಸಿಕ್ಕಿದೆ. ವಾಟ್ಸಪ್ ಹಾಗೂ ಟೂಟ್ಯೂಬ್ ಗಳಲ್ಲಿ ಶೇರ್ ಆಗಿದ್ದಕ್ಕೆ ಅಂಕಿ ಸಂಖ್ಯೆಗಳು ಸಿಗುವುದಿಲ್ಲ.

ಮುಂದೆ ತುಳು ನಾಡಿನ ಜಾನಪದ ಹಾಡು ಪಾಡ್ದನವನ್ನು ತಮ್ಮ ಅಮ್ಮನಲ್ಲಿ ಹಾಡಿಸಿ ಯೂಟ್ಯೂಬ್ ಗೆ ಅಪ್ಲೋಡ್ ಮಾಡುವ ಯೋಜನೆ ಇದೆ. ತುಳು ನಾಡಿನ ಗ್ರಾಮೀಣ ಸೊಗಡಿನ ಬಗ್ಗೆ ತಾವೇ ಸ್ವತಃ ವಿಡಿಯೋ ಹಾಡು ನಿರ್ಮಿಸುವ ಕನಸು ಅವರಿಗಿದೆ.

 

.....
ಅಂದ ಹಾಗೆ ಅವರು ಖಾಸಗಿ ವಾಹಿನಿಗಳ ನಾನೇ ರಾಜಕುಮಾರಿ, ರಾಣಿ ಮಹಾರಾಣಿ ಮತ್ತಿತರ ರಿಯಾಲಿಟಿ ಶೋಗಳಲ್ಲಿ ಮದುವೆ ಆದ ಮೇಲೆ ಹೋಗಿ ಪಾಲ್ಗೊಂಡಿದ್ದರು. ತಮ್ಮ ಶಾಲೆಯಲ್ಲಿ ಪ್ರತಿಭಾ ಕಾರಂಜಿ ಕೋ ಆರ್ಡಿನೇಟರ್ ಆಗಿದ್ದು ನೃತ್ಯ ವಿಭಾಗದ ಮಕ್ಕಳನ್ನು ಭೋಪಾಲ್ ನಲ್ಲಿ ನಡೆದ ರಾಷ್ಟ್ರೀಯ ಸ್ಪರ್ಧೆ ತನಕ ಕರೆದೊಯ್ದದ್ದು ಅವರು ಸಾಧನೆಯೂ ಹೌದು.

ಕೊರೋನಾ ಸಂದರ್ಭ ಚಿಣ್ಣರು ಮೊಬೈಲಿಗೆ ಅಡಿಕ್ಟ್ ಆಗದೆ, ಒಳ್ಳೆಯ ವಿಷಯ ನೋಡಲಿ ಅಂತ ಈ ಪ್ರಯೋಗ ಶುರು ಮಾಡಿದೆ. ಈಗ ಪೇರಂಟ್ಸ್ ಕೂಡಾ ನನ್ನ ಹಾಡುಗಳಿಗೆ ಅಭಿಮಾನಿಗಳಾಗಿದ್ದಾರೆ. ನನ್ನ ಶಿಶು ಗೀತೆಗಳನ್ನು ನೋಡಲೆಂದೇ ಮಕ್ಕಳು ಹಠ ಮಾಡಿ ಮೊಬೈಲ್ ಪಡೆದುಕೊಂಡು ಉದಾಹರಣೆಗಳೂ ಇವೆ. ಕೊರೋನಾದಿಂದ ತುಂಬ ಕಲ್ತಿದ್ದೇನೆ. ನನ್ನ ಥರ ತುಂಬ ಶಿಕ್ಷಕರು ಇದ್ದಾರೆ. ಮೈಚಳಿ ಬಿಟ್ಟು ಇಂತಹ ಚಟುವಟಿಕೆ ಮಾಡಿದರೆ ಮುಂದೆ ಬರ್ತಾರೆ. ಮಕ್ಕಳು ನಾಳೆ ಅಂತಹ ಶಿಕ್ಷಕರನ್ನು ನೆನಪಿಡ್ತಾರೆ. ಇವತ್ತು ಎಲ್ಲ ಶಿಕ್ಷಕರು ಮುಂದೆ ಬರಬೇಕು. ಕ್ರೀಡೆ,ನಾಟಕ ಮತ್ತಿತರ ಚಟುವಟಿಕೆಗಳ ಮುಖಾಂತರ ವಿಭಿನ್ನವಾಗಿ ಆನ್ಲೈನ್ ಪಾಠ ಮಾಡಬಹುದು. ಶಿಕ್ಷಕರಲ್ಲೂ ಪ್ರತಿಭೆ ಇರ್ತಾದೆ, ಉಪಯೋಗಿಸಿಕೊಳ್ಳಬೇಕು. -ವಂದನಾ ರೈ, ಶಿಕ್ಷಕಿ, ಕಾರ್ಕಳ.

Follow Us:
Download App:
  • android
  • ios