ಹಸ್ತವನ್ನೇ ದೇಹವಾಗಿಸಿದ ನೃತ್ಯ ಈಗ ವೈರಲ್! ನಾಜೂಕಾಗಿ ಆಡಿದ ಕೈಗಳ ಒಡತಿ ಇವರು
- ಕೃಷ್ಣಮೋಹನ ತಲೆಂಗಳ, ಮಂಗಳೂರು
ನೃತ್ಯ ವಿದುಷಿ, ಗುರು, ನಟಿ, ನಿರ್ದೇಶಕಿ, ನೃತ್ಯ ಸಂಯೋಜಕಿ, ಸಂಗೀತ ನಿರ್ದೇಶಕಿ ದಕ್ಷಿಣ ಕನ್ನಡದ ಪುತ್ತೂರಿನ ಮಂಜುಳಾ ಸುಬ್ರಹ್ಮಣ್ಯ “ನೀನೆಲ್ಲಿದೇ ನನಗೇನಿದೆ ಹಾಡಿಗೆ...” ಸಂಯೋಜಿಸಿದ ಮುದ್ರೆಗಳ ಸುಮಾರು 1.49 ನಿಮಿಷಗಳ ಅವಧಿಯ ವಿಡಿಯೋ ತುಣುಕನ್ನು ಸಾವಿರಾರು ಮಂದಿ ವೀಕ್ಷಿಸಿದ್ದು, ಅಷ್ಟೇ ಪ್ರಮಾಣದಲ್ಲಿ ಶೇರುಗಳಾಗಿವೆ. ಯೂಟ್ಯೂಬಿನಲ್ಲೂ ಈ ಪ್ರಯೋಗ ಸದ್ದು ಮಾಡುತ್ತಿದೆ.
ನೃತ್ಯ ವಿದುಷಿ, ಗುರು, ನಟಿ, ನಿರ್ದೇಶಕಿ, ನೃತ್ಯ ಸಂಯೋಜಕಿ, ಸಂಗೀತ ನಿರ್ದೇಶಕಿ ದಕ್ಷಿಣ ಕನ್ನಡದ ಪುತ್ತೂರಿನ ಮಂಜುಳಾ ಸುಬ್ರಹ್ಮಣ್ಯ ಹಸ್ತ ಮುದ್ರೆಗಳ ಮೂಲಕವೇ ಭಾವಗೀತೆಗೆ ದೃಶ್ಯ ರೂಪ ಕೊಟ್ಟು ಗಮನ ಸೆಳೆದಿದ್ದಾರೆ.
ಫೇಸ್ಬುಕ್ಕಿನಲ್ಲಿ ಅವರು ಪೋಸ್ಟು ಮಾಡಿದ “ನೀನೆಲ್ಲಿದೇ ನನಗೇನಿದೆ ಹಾಡಿಗೆ...” ಸಂಯೋಜಿಸಿದ ಮುದ್ರೆಗಳ ಸುಮಾರು 1.49 ನಿಮಿಷಗಳ ಅವಧಿಯ ವಿಡಿಯೋ ತುಣುಕನ್ನು ಸಾವಿರಾರು ಮಂದಿ ವೀಕ್ಷಿಸಿದ್ದು, ಅಷ್ಟೇ ಪ್ರಮಾಣದಲ್ಲಿ ಶೇರುಗಳಾಗಿವೆ. ಯೂಟ್ಯೂಬಿನಲ್ಲೂ ಈ ಪ್ರಯೋಗ ಸದ್ದು ಮಾಡುತ್ತಿದೆ.
ಲಾಕ್ಡೌನ್ ಅವಧಿಯಲ್ಲಿ ಮನೆಯಲ್ಲೇ ಕುಳಿತಿರುವ ಸಂದರ್ಭ ಅವರಿಗೆ ಹೊಳೆದ ಐಡಿಯಾ ಇದು. ಉಡುಪಿಯ ನೃತ್ಯಗುರು ಪ್ರತಿಭಾ ಸಾಮಗ ಪ್ರೋತ್ಸಾಹದಿಂದ ಅವರು ಕಳುಹಿಸಿದ ಹಿಂದಿ ಹಾಡಿನ ಹಸ್ತ ಅಭಿನಯದ ತುಣುಕಿನಿಂದ ಪ್ರೇರಣೆ ಪಡೆದು ಮಂಜುಳಾ ಈ ವಿಡಿಯೋ ಸಂಯೋಜಿಸಿದ್ದಾರೆ.
ಎಂ.ಎನ್.ವ್ಯಾಸರಾವ್ ರಚನೆಯ ಜನಪ್ರಿಯ ಭಾವಗೀತೆ “ನೀನಿಲ್ಲದೆ ನನಗೇನಿದೆ...” ಈ ಹಾಡನ್ನು ನೆರಳು ಬೆಳಕಿನ ಸಂಯೋಜನೆಯಿಂದ ಹಸ್ತ ಮುದ್ರಿಕೆ ಮೂಲಕ ಪ್ರದರ್ಶಿಸಿ ಸೈ ಎನಿಸಿದ್ದಾರೆ.
ನಂಬಿದರೆ ನಂಬಿ, ಇದಕ್ಕೆ ಅವರು ಬಳಸಿದ್ದು ಕೇವಲ ಎಲ್ಇಡಿ ಟಾರ್ಚ್ ಲೈಟ್ ಮಾತ್ರ! ಇಷ್ಟು ಪುಟ್ಟ ವಿಡಿಯೋದ ಚಿತ್ರೀಕರಣ ಹಿಂದೆ ಸುಮಾರು ಮೂರು ದಿನಗಳ ಶ್ರಮ ಇದೆ. ಅವರ ಅಣ್ಣ ಗಣೇಶ್ ಕುಮಾರ್ ಅವರು ನಿಕಾನ್ ಡಿ3200 ಕ್ಯಾಮೆರಾದಲ್ಲಿ ಇದನ್ನು ಚಿತ್ರೀಕರಿಸಿದ್ದಾರೆ. “ಹಸ್ತಾಭಿನಯ” ಹೆಸರಿನಲ್ಲಿ ಮಂಜುಳಾ ಅದನ್ನು ಅಳುಕಿನಿಂದಲೇ ಫೇಸ್ಬುಕ್ಕಿನಲ್ಲಿ ಹಂಚಿಕೊಂಡಿದ್ದು, ಒಂದೇ ದಿನದಲ್ಲಿ ನೂರಾರು ಮಂದಿ ಶೇರ್ ಮಾಡಿ, ಸಾರ್ವತ್ರಿಕವಾಗಿ ವೈರಲ್ ಆಗಿದೆ.
ನೃತ್ಯದಲ್ಲಿ ಇಡೀ ದೇಹ ಬಳಸಿ ಭಾವಾಭಿವ್ಯಕ್ತಿಯನ್ನು ಪರಿಣಾಮಕಾರಿಯಾಗಿ ತೋರಿಸಬಹುದು. ಆದರೆ ಖಾಲಿ ಕೈಯ್ಯನ್ನೇ ದೇಹವಾಗಿಸಿ ಪ್ರೇಕ್ಷಕರಿಗೆ ತೋರಿಸುವುದು ಸವಾಲಿನ ಕೆಲಸ. ಸಂಪೂರ್ಣ ಕತ್ತಲಿನಲ್ಲಿ ನಿಂತು ಬದಿಯಿಂದ ಟಾರ್ಚ್ ಲೈಟಿನ ಬೆಳಕಿನಲ್ಲಿ ಅಭಿನಯಿಸಿದ್ದು, ಜನ ಹೇಗೆ ಸ್ವೀಕರಿಸುತ್ತಾರೋ ಎಂಬ ಆತಂಕ ಇತ್ತು. ಮೆಚ್ಚುಗೆಗೆ ಪಾತ್ರವಾಗಿದ್ದು ಖುಷಿ ಕೊಟ್ಟಿದೆ ಎನ್ನುತ್ತಾರೆ ಅವರು. ಮುಂದೆ ವೈವಿಧ್ಯಮಯ ಬೆಳಕಿನ ಸಾಧ್ಯತೆಗಳನ್ನು ಬಳಸಿ ಪ್ರದರ್ಶನ ಉತ್ತಮಗೊಳಿಸುವ ಚಿಂತನೆಗೆ ಈ ವೈರಲ್ ವಿಡಿಯೋ ಪ್ರೇರಣೆ ಆಗಿದೆಯಂತೆ.
ಅಂದ ಹಾಗೆ ಮಂಜುಳಾ ಅವರ ಜನಪ್ರಿಯ ನೃತ್ಯ ಭಂಗಿಯನ್ನು ಪತ್ರಿಕಾ ಛಾಯಾಗ್ರಾಹಕ ಸುಧಾಕರ ಜೈನ್ ಹೊಸಬೆಟ್ಟು ಸೆರೆ ಹಿಡಿದಿದ್ದು, ಈ ಫೋಟವನ್ನು ಬೆಂಗಳೂರು ವಸಂತನಗರದ ಬಹುರೂಪಿ ಬುಕ್ ಹಬ್ ಮಳಿಗೆಯ ಗೋಡೆಯಲ್ಲಿ ತಿಂಗಳ ಫೋಟೋ ಹೆಸರಿನಲ್ಲಿ ಪ್ರದರ್ಶಿಸಲಾಗಿತ್ತು. ಇದು ನೃತ್ಯಗಾರ್ತಿಯೊಬ್ಬರಿಗೆ ಪುಸ್ತಕ ಮಳಿಗೆಯವರು ನೀಡಿದ ಗೌರವವೂ ಹೌದು. ಈ ಫೋಟವೂ ಸಾಕಷ್ಟು ವೈರಲ್ ಆಗಿತ್ತು.
ಮೂಲತಃ ಪ್ರಸಿದ್ಧ ಪುಣ್ಯ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ಮೂಲದವರು ಮಂಜುಳಾ. ನೃತ್ಯ ಬದುಕಿಗೆ ಎರಡು ದಶಕಗಳೇ ಸಂದಿವೆ. 20 ವರ್ಷಗಳಿಂದ ವೃತ್ತಿಪರವಾಗಿ ನೃತ್ಯ, ಬೋಧನೆ ಹಾಗೂ ರಂಗಚಟುವಟಿಕೆಗಳಲ್ಲಿ ಸಕ್ರಿಯರು. ಸಹಸ್ರಾರು ವೇದಿಕೆ ಪ್ರದರ್ಶನಗಳನ್ನು ನೀಡಿದ್ದಾರೆ. ಐದು ವರ್ಷಗಳಿಂದ ಶಿಷ್ಯರಿಗೂ ತರಬೇತಿ ನೀಡುತ್ತಿದ್ದು 100ಕ್ಕೂ ಅಧಿಕ ಶಿಷ್ಯರು ಮಂಜುಳಾ ಅವರಿಂದ ನೃತ್ಯ ಶಿಕ್ಷಣ ಪಡೆದಿದ್ದಾರೆ.
ಸಾಂಪ್ರದಾಯಿಕ ನಾಟ್ಯ ಹಾಗೂ ಆಧುನಿಕ ಸಂವೇದನೆಯ ರಂಗಭೂಮಿ ಈ ಎರಡೂ ಕ್ಷೇತ್ರಗಳಲ್ಲಿ ಅನುಸಂಧಾನ ನಡೆಸಿದ ಕೆಲವೇ ಪ್ರಮುಖರಲ್ಲಿ ಮಂಜುಳಾ ಸುಬ್ರಹ್ಮಣ್ಯ ಒಬ್ಬರು. ಸೃಜನಶೀಲ ಪ್ರಯೋಗಗಳಿಂದಲೇ ಅವರು ಸಾಕಷ್ಟು ಸಂದರ್ಭ ಗಮನ ಸೆಳೆದಿದ್ದಾರೆ.
ಈ ಹಿಂದೆ ಮಂಜುಳಾ ಅಭಿನಯಿಸಿದ ಊರ್ಮಿಳಾ ಹಾಗೂ ರಾಧಾ ಎರಡು ಪ್ರತ್ಯೇಕ ಏಕವ್ಯಕ್ತಿ ಪ್ರದರ್ಶನಗಳು ರಾಜ್ಯಾದ್ಯಂತ ಹೆಸರುವಾಸಿಯಾಗಿದ್ದು, ವಿಮರ್ಶಕರ ಮೆಚ್ಚುಗೆಗೂ ಪಾತ್ರವಾಗಿವೆ. ವಿದ್ದು ಉಚ್ಚಿಲ್ ನಿರ್ದೇಶನದ ಊರ್ಮಿಳಾ 30ಕ್ಕೂ ಅಧಿಕ ಪ್ರದರ್ಶನ ಕಂಡಿದೆ. ಸುಧಾ ಅಡುಕಳ ಅವರ ಸಾಹಿತ್ಯವನ್ನು ಡಾ.ಶ್ರೀಪಾದ ಭಟ್ ನಿರ್ದೇಶನದಲ್ಲಿ ರಾಧಾ ಹೆಸರಿನಲ್ಲಿ ಪ್ರಸ್ತುತ ಪಡಿಸಿದ್ದ ಮಂಜುಳಾ ಅವರು ಎರಡು ವರ್ಷಗಳ ಅವಧಿಯಲ್ಲಿ ಸುಮಾರು 24 ಪ್ರಯೋಗಗಳನ್ನು ಯಶಸ್ವಿಯಾಗಿ ಪ್ರದರ್ಶಿಸಿದ್ದಾರೆ.
ಬಾಲಕಿ, ತರುಣಿ, ವಯಸ್ಕ ರಾಧೆ ಸಹಿತ ಸುಮಾರು 15 ಆಯಾಮಗಳಲ್ಲಿ ರಾಧೆಯನ್ನು ಒಂದು ಗಂಟೆಯ ಅಧಿಯ ಈ ಪ್ರದರ್ಶನದಲ್ಲಿ ಕಟ್ಟಿಕೊಟ್ಟಿದ್ದು ಸಾಕಷ್ಟು ಜನಪ್ರಿಯತೆಯನ್ನು ಪಡೆದಿವೆ. ಸ್ತ್ರೀಪರ ಸಂವೇದನ ಚೆನ್ನಾಗಿ ಅಭಿವ್ಯಕ್ತಿಗೊಂಡಿದೆ ಎಂದು ವಿಮರ್ಶಕರೂ ಮೆಚ್ಚಿಕೊಂಡಿದ್ದಾರೆ.
ಅವರು ಕನ್ನಡ ಸ್ನಾತಕೋತ್ತರ ಪದವೀಧರೆ. 13ನೇ ವಯಸ್ಸಿನಲ್ಲಿಯೇ ನೃತ್ಯದ ಅಭ್ಯಾಸದಲ್ಲಿ ತೊಡಗಿಸಿಕೊಂಡರು. ಕುದ್ಕಾಡಿ ವಿಶ್ವನಾಥ ರೈ, ನಯನಾ ಶಿವರಾಂ ಇವರಲ್ಲಿ ಪ್ರಾಥಮಿಕ ಹೆಜ್ಜೆಗಳನ್ನು ಕಲಿತರು. ನಂತರ ಮಂಗಳೂರಿನ ಶ್ರೀ ಸನಾತನ ನಾಟ್ಯಾಲಯದ ಗುರು ವಿದುಷಿ ಶ್ರೀಮತಿ ಶಾರದಾಮಣೀ ಮಾರ್ಗದರ್ಶನದಲ್ಲಿ ವಿದ್ವತ್ ಪರೀಕ್ಷೆ ಪಡೆದು ವಿದುಷಿ ಎನಿಸಿಕೊಂಡಿದ್ದಾರೆ.
ನೃತ್ಯ ಕ್ಷೇತ್ರದ ಪ್ರಮುಖ ಹೆಸರಾದ ಭೃಗಾ ಬಸೆಲ್, ಮೀನಾಕ್ಷಿ ಶ್ರೀನಿವಾಸನ್, ರಮಾ ವೈದ್ಯನಾಥನ್ ಮುಂತಾ ಕಲಾವಿದರ ನೃತ್ಯ ಕಾರ್ಯಾಗಾರಗಳಲ್ಲಿ ಭಾಗವಹಿಸಿದ್ದಾರೆ. ಕೇರಳದ ಸಮರಕಲೆ ಕಳರಿಪಯಟ್ಟುವನ್ನು ಸಹಾ ಕಲಿತಿದ್ದು, ತಿರುವನಂತಪುರದ ಗೋಪಿನಾಥ ಇವರ ಗುರು.
ಭರತನಾಟ್ಯದಲ್ಲಿ ದೂರದರ್ಶನದ "ಬಿ" ಗ್ರೇಡ್ ಕಲಾವಿದೆ ಹಾಗೂ ನಾಟಕದಲ್ಲಿ ಆಕಾಶವಾಣಿ "ಬಿ" ಗ್ರೇಡ್ ಕಲಾವಿದೆಯಾಗಿರುತ್ತಾರೆ. ನೃತ್ಯ ಕ್ಷೇತ್ರವನ್ನು ವೃತ್ತಿಯಾಗಿ ಸ್ವೀಕರಿಸುವುದಕ್ಕೂ ಮೊದಲು ಈಟಿವಿ ಚಾನೆಲ್, ಬೆಂಗಳೂರು ದೂರದರ್ಶನ (ಚಂದನ),ಗಳಲ್ಲಿ ನಿರೂಪಕಿಯಾಗಿ ಹೆಸರು ಮಾಡಿದ್ದಾರೆ. ಪ್ರಸ್ತುತ ಮಂಗಳೂರು ಆಕಾಶವಾಣಿಯಲ್ಲಿ ಈಗಲೂ ತಾತ್ಕಾಲಿಕ ಕಾರ್ಯಕ್ರಮ ನಿರ್ವಾಹಕಿಯಾಗಿದ್ದಾರೆ.
ಮಂಜುಳಾ ಅವರ ಭರತಗಾಥಾ, ಯಶೋಧರೆ, ಕೃಷ್ಣಸಖಿ, ಜಯದೇವ ಕವಿಯ ಗೀತಗೋವಿಂದದ ಅಷ್ಟಪದಿಯ ಪ್ರಯೋಗಾಭಿನಯ, ರಸನಿಷ್ಪತ್ತಿ. ಈ ಎಲ್ಲವೂ ನಾಡಿನ ಪ್ರತಿಷ್ಠಿತ ವೇದಿಕೆಗಳಲ್ಲಿ ಪ್ರದರ್ಶನ ಕಂಡು ಪ್ರಶಂಸೆಗೆ ಒಳಗಾಗಿವೆ.
ದಕ್ಷಿಣ ಕನ್ನಡದ ಪುತ್ತೂರಿನಲ್ಲಿ 'ನಾಟ್ಯರಂಗ' ಸಾಂಸ್ಕೃತಿಕ ಸಂಸ್ಥೆಯನ್ನು ಸ್ಥಾಪಿಸಿ ನಾಟ್ಯ ಹಾಗೂ ರಂಗಭೂಮಿ ಎರಡರಲ್ಲಿಯೂ ತರಬೇತಿ ನೀಡುತ್ತಾ ಹೊಸ ಸಾಧ್ಯತೆಗಳ ಅನ್ವೇಷಣೆ ನಡೆಸುತ್ತಿದ್ದಾರೆ.