ವಿವಾಹದ ಬಳಿಕ ಬಹುತೇಕ ಮಹಿಳೆಯರು ತಮ್ಮ ಕನಸುಗಳನ್ನು ಕೈಬಿಡುತ್ತಾರೆ. ಅಷ್ಟೇ ಅಲ್ಲ,ಪ್ರತಿ ವಿಷಯಕ್ಕೂ ಪತಿಯನ್ನು ಅವಲಂಬಿಸುತ್ತಾರೆ. ಈ ಮೂಲಕ ತಮ್ಮ ಅಸ್ತಿತ್ವವನ್ನೇ ಮರೆತವರಂತೆ ಬದುಕುತ್ತಾರೆ. ಆದ್ರೆ ಪ್ರಬಲ ಮಹಿಳೆ ಎಂದಿಗೂ ಈ ತಪ್ಪುಗಳನ್ನು ಮಾಡೋದಿಲ್ಲ.

ಮದುವೆಯಾದ ತಕ್ಷಣ ಕೆಲವು ಮಹಿಳೆಯರು ಪ್ರತಿ ವಿಚಾರಕ್ಕೂ ಗಂಡನನ್ನುಅವಲಂಬಿಸುತ್ತಾರೆ. ಕೈಯಲ್ಲಿ ಒಳ್ಳೆಯ ಡಿಗ್ರಿ,ಉದ್ಯೋಗವಿರೋ ಮಹಿಳೆಯರು ಕೂಡ ತನ್ನ ಇಷ್ಟ-ಹವ್ಯಾಸಗಳ ಕುರಿತು ನಿರ್ಧಾರ ಕೈಗೊಳ್ಳುವಾಗ ಪತಿ ಅಪ್ಪಣೆ ಕೋರುತ್ತಾರೆ.ಆದ್ರೆ ಇಂಥ ಅಭ್ಯಾಸಗಳು ಮಹಿಳೆಯನ್ನು ದುರ್ಬಲಗೊಳಿಸುತ್ತವೆ. ಸಂಸಾರದಲ್ಲಿ ಹೊಂದಾಣಿಕೆ, ಸಹಕಾರವಿರಬೇಕು ನಿಜ,ಆದ್ರೆ ಅತಿಯಾದ ಅವಲಂಬನೆ ಖಂಡಿತಾ ಒಳ್ಳೆಯದ್ದಲ್ಲ.ಸ್ವ ಸಾಮರ್ಥ್ಯವನ್ನು ಅರಿಯದೆ ಪ್ರತಿ ವಿಚಾರಕ್ಕೂ ಪತಿಯನ್ನೇ ಅವಲಂಬಿಸುತ್ತ, ಗೊತ್ತು ಗುರಿಯಿಲ್ಲದೆ ಆತ ಹೇಳಿದಂತೆ ಮಾಡುತ್ತ, ದಿನ ಕಳೆಯುತ್ತ ಆತನೇ ಜಗತ್ತು ಎಂದು ಭಾವಿಸಿ ಬದುಕೋ ಮಹಿಳೆ ತನ್ನತನ ಕಳೆದುಕೊಳ್ಳುತ್ತಾಳೆ. ಮಹಿಳೆ ಮದುವೆ ಬಳಿಕ ಗಂಡ, ಮನೆ, ಮಕ್ಕಳು ಎಂದು ತನ್ನ ವ್ಯಕ್ತಿತ್ವ, ಕೌಶಲ್ಯ, ವೃತ್ತಿ ಬದುಕನ್ನು ತ್ಯಾಗ ಮಾಡಬೇಕಾದ ಅಗತ್ಯವಿಲ್ಲ. ಸಂಸಾರದ ಜೊತೆ ಸ್ವಾವಲಂಬನೆ ಬದುಕನ್ನು ಕೂಡ ಕಟ್ಟಿಕೊಳ್ಳಬಹುದು.ಇದ್ರಿಂದ ಆತ್ಮವಿಶ್ವಾಸ ಹಾಗೂ ಆರ್ಥಿಕ ಸ್ವಾವಲಂಬನೆ ಜೊತೆ ನೆಮ್ಮದಿಯ ಬದುಕು ಕಂಡುಕೊಳ್ಳಬಹುದು. ಸ್ವಾವಲಂಬನೆ ಬದುಕು ಬಯಸೋ ಪ್ರಬಲ ಮಹಿಳೆ ನೀವಾಗಿದ್ದರೆ,ಮದುವೆ ಬಳಿಕ ಈ ತಪ್ಪುಗಳನ್ನು ಮಾಡೋದಿಲ್ಲ.

40ರ ಮಹಿಳೆ ಸಂಗಾತಿಯಿಂದ ಬಯಸೋದು ಏನ್ ಗೊತ್ತಾ?

ಗಂಡ ಹೇಳಿದ ಮಾತ್ರಕ್ಕೆ ಬದಲಾಗೋದಿಲ್ಲ
ಪತಿ ಹೇಳಿದರು ಅಥವಾ ಬಯಸಿದರೆಂಬ ಕಾರಣಕ್ಕೆ ನಿಮ್ಮನ್ನು ನೀವು ಬದಲಾಯಿಸಿಕೊಳ್ಳಬೇಕಾದ ಅಗತ್ಯವಿಲ್ಲ. ನಿಮ್ಮ ಹೇರ್‌ಸ್ಟೈಲ್‌ ಚೆನ್ನಾಗಿಲ್ಲ,ಮಾರ್ಡನ್‌ ಡ್ರೆಸ್‌ ಹಾಕೋಂಗಿಲ್ಲ,ಬೇರೆಯವರ ಜೊತೆ ಮಾತನಾಡೋದಕ್ಕೆ,ಬೆರೆಯೋದಕ್ಕೆ ಬರಲ್ಲ ಅನ್ನೋದ್ರಿಂದ ಹಿಡಿದು ತನ್ನ ಅಪ್ಪ-ಅಮ್ಮ ಏನೇ ಹೇಳಿದ್ರೂ ಅದನ್ನು ಚಾಚೂ ತಪ್ಪದೆ ಪಾಲಿಸಬೇಕು ಎಂಬ ಷರತ್ತೂ ಹಾಕ್ಬಹುದು.ಆದ್ರೆ ಪತಿ ಹೇಳಿದ ಎಂಬ ಕಾರಣಕ್ಕೆ ನೀವು ನಿಮ್ಮ ವೇಷಭೂಷಣ, ವರ್ತನೆಗಳನ್ನು ಬದಲಾಯಿಸಿಕೊಳ್ಳಬೇಕಾದ ಅಗತ್ಯವಿಲ್ಲ.ಬದಲಾಗೋದು ಅಗತ್ಯವೆಂದು ನಿಮ್ಮ ಮನಸ್ಸಿಗೆ ಅನ್ನಿಸಿದ್ರೆ ಅಥವಾ ಅದ್ರಿಂದ ನಿಮ್ಗೆ ಖುಷಿ ಸಿಗುತ್ತೆ ಅಂತಾದ್ರೆ ಮಾತ್ರ ಬದಲಾಗಿ. ಸ್ವಂತಿಕೆ,ಸ್ವಾಭಿಮಾನ ಹೊಂದಿರೋ ಹೆಣ್ಣು ಇನ್ನೊಬ್ಬರನ್ನು ಖುಷಿಪಡಿಸಲು ತಾನು ಬದಲಾಗಲ್ಲ. 

ಲುಕ್‌ ಬದಲಾಯಿಸಿಕೊಳ್ಳೋದಿಲ್ಲ
ನಿಮ್ಮ ದೇಹ ನಿಮ್ಮ ಹೆಮ್ಮೆ.ನೀವು ದೇವತೆ, ನಿಮ್ಮ ದೇಹ ದೇವಾಲಯ. ನಿಮ್ಮ ದೇಹದ ಸ್ವರೂಪ ಹೇಗೆಯೇ ಇರಬಹುದು. ಆದ್ರೆ ಅದು ನಿಮ್ಮದು. ನೀವು ನಿಮ್ಮ ದೇಹವನ್ನು ಪ್ರೀತಿಸುತ್ತೀರಿ, ಕಾಳಜಿ ವಹಿಸುತ್ತೀರಿ. ಹೀಗಿರೋವಾಗ ನಿಮಗೆ ಯಾವ ರೀತಿ ಡ್ರೆಸ್‌ ಹಾಕಿದ್ರೆ ಕಂಫರ್ಟ್‌ ಅನಿಸುತ್ತೋ ಅದನ್ನೇ ಧರಿಸಿ. ಪತಿ ಹೇಳಿದರು ಎಂಬ ಕಾರಣಕ್ಕೆ ನಿಮ್ಮ ಡ್ರೆಸ್ಸಿಂಗ್‌, ಹೇರ್‌ಸ್ಟೈಲ್‌ ಅಥವಾ ಮೇಕಪ್‌ನಲ್ಲಿ ಬದಲಾವಣೆ ಮಾಡಿಕೊಳ್ಳಬೇಕಾದ ಅಗತ್ಯವಿಲ್ಲ. ಒಂದು ವೇಳೆ ನಿಮ್ಮ ಪತಿ ಪದೇಪದೆ ನಿಮ್ಮ ಡ್ರೆಸ್‌, ಲುಕ್‌ ಬಗ್ಗೆ ನೆಗೆಟಿವ್‌ ಕಮೆಂಟ್ಸ್‌ ಮಾಡುತ್ತ ಬದಲಾಯಿಸಿಕೊಳ್ಳಲು ಹೇಳಿದ್ರೆ ಆತ ನಿಮ್ಮನ್ನು ನೀವಿರುವಂತೆಯೇ ಪ್ರೀತಿಸಲು ಸಿದ್ಧನಿಲ್ಲ ಎಂದರ್ಥ. 

ಮಕ್ಕಳಿಗೆ ಯಾವ ವಯಸ್ಸಿನಲ್ಲಿ ಲೈಂಗಿಕ ಶಿಕ್ಷಣ ನೀಡಬೇಕು

ಅನುಮತಿಗಾಗಿ ಕಾಯೋದಿಲ್ಲ
ನೀವು ದುಡಿದ ಹಣ ಖರ್ಚು ಮಾಡಲು, ಸ್ನೇಹಿತರ ಭೇಟಿ, ಉದ್ಯೋಗ ಬದಲಾವಣೆ ಮುಂತಾದ ಕೆಲಸಗಳಿಗೆ ಪತಿ ಅನುಮತಿಯನ್ನು ಕಾಯುತ್ತ ಕೂರಬೇಕಾದ ಅಗತ್ಯವಿಲ್ಲ. ನೀವು ಸ್ಮಾರ್ಟ್‌, ಬುದ್ಧಿವಂತೆ ಹಾಗೂ ಪ್ರಬುದ್ಧ ಮಹಿಳೆ. ಬದುಕಿನಲ್ಲಿ ಯಾವುದು ಸರಿ, ಯಾವುದು ತಪ್ಪು ಎಂಬುದು ಚೆನ್ನಾಗಿ ಗೊತ್ತಿರುತ್ತೆ. ಪ್ರತಿ ಚಿಕ್ಕಪುಟ್ಟ ಕೆಲಸಗಳಿಗೂ ಪತಿ ಅನುಮತಿ ಕಾಯುತ್ತ ಕುಳಿತರೆ, ನಿಮ್ಮತನ ಕಳೆದುಕೊಳ್ಳುತ್ತೀರಿ. ಪ್ರಬಲ ಮಹಿಳೆ ತನ್ನಿಷ್ಟದ ಕೆಲಸಗಳನ್ನು ಮಾಡಲು ಪತಿ ಅಪ್ಪಣೆ ಕೇಳೋದಿಲ್ಲ. 

ಪ್ಲ್ಯಾನ್‌ ಬದಲಾಯಿಸೋದಿಲ್ಲ
ಶಾಪಿಂಗ್‌, ಪಾರ್ಟಿ, ಡಿನ್ನರ್‌ ಅಥವಾ ಇನ್ಯಾವುದೇ ಕಾರ್ಯಕ್ರಮಗಳಿರಲಿ, ಅವುಗಳಿಗೆ ನೀವು ಹೋಗಬೇಕೋ, ಬೇಡವೋ ಎಂಬುದನ್ನು ಪತಿಯೇ ನಿರ್ಧರಿಸೋದಾದ್ರೆ ಅಲ್ಲಿ ನಿಮ್ಮ ಭಾವನೆಗಳಿಗೆ ಬೆಲೆಯಿಲ್ಲ ಎಂದೇ ಅರ್ಥ. ಪ್ರಬಲ ಮಹಿಳೆ ತನ್ನಿಷ್ಟದ ಕಾರ್ಯಕ್ರಮ, ಸ್ನೇಹಿತರು ಅಥವಾ ಬಂಧುಗಳ ಭೇಟಿಗಾಗಿ ಪತಿ ಅನುಮತಿ ಕೇಳೋದಿಲ್ಲ. ಬದಲಿಗೆ ಅವಳೇ ಸಮಯ ನಿರ್ಧರಿಸಿ ಹೊರಡುತ್ತಾಳೆ. ಒಂದು ವೇಳೆ ನಿಮ್ಮ ಪತಿ ಪದೇಪದೆ ಆತ್ಮೀಯರ ಭೇಟಿ ವೇಳಾಪಟ್ಟಿ ಬದಲಾಯಿಸುವಂತೆ ಒತ್ತಡ ಹೇರುತ್ತಿದ್ದರೆ, ಆತ ನಿಮ್ಮ ಸಮಯಕ್ಕೆ ಬೆಲೆ ನೀಡುತ್ತಿಲ್ಲ ಎಂದರ್ಥ. 

ಡೇಟಿಂಗ್‌ ಟಿಪ್ಸ್: ಮೊದಲ ಭೇಟಿ ಮಧುರವಾಗಿಸಲು ಹಿಂಗ್‌ ಮಾಡಿ

ಕನಸಿನೊಂದಿಗೆ ರಾಜೀ ಮಾಡಿಕೊಳ್ಳಲ್ಲ
ನಿಮ್ಮ ಗುರಿಗಳು, ಕನಸಿನ ಉದ್ಯೋಗ ಇವೆಲ್ಲವೂ ನಿಮ್ಮ ಕಠಿಣ ಪರಿಶ್ರಮ, ದೃಢ ನಿರ್ಧಾರ ಹಾಗೂ ತಾಳ್ಮೆಯ ಫಲ. ಆದ್ರೆ ಮದುವೆ ಬಳಿಕ ಸಂಸಾರದ ಜಂಜಾಟಗಳಿಗಾಗಿ ಅಥವಾ ಪತಿ ಹೇಳಿದ್ರು ಎಂಬ ಕಾರಣಕ್ಕೆ ಉದ್ಯೋಗ ಅಥವಾ ನಿಮ್ಮ ಕನಸುಗಳಿಗೆ ತಿಲಾಂಜಲಿ ನೀಡೋದು ಎಷ್ಟು ಸರಿ? ನಿಮ್ಮ ಕನಸು ಅಥವಾ ಉದ್ಯೋಗಕ್ಕೆ ಪತಿ ಬೆಂಬಲ ನೀಡೋದಿಲ್ಲ ಎಂಬ ಕಾರಣಕ್ಕೆ ಅವುಗಳಿಂದ ದೂರ ಸರಿಯೋ ಅಗತ್ಯವಿಲ್ಲ. ಒಂದು ವೇಳೆ ಹಾಗೆ ಮಾಡಿದ್ರೆ ನೀವು ದುರ್ಬಲ ಮಹಿಳೆ ಅನಿಸಿಕೊಳ್ಳುತ್ತೀರಿ. ಏಕೆಂದ್ರೆ ಪ್ರಬಲ ಮಹಿಳೆಗೆ ತನ್ನ ಸಾಮರ್ಥ್ಯ ಏನೆಂಬುದು ತಿಳಿದಿರುತ್ತದೆ. ಆಕೆಗೆ ತನ್ನ ಮೇಲೆ ಸಂಪೂರ್ಣ ನಂಬಿಕೆಯೂ ಇರುತ್ತದೆ. ಹೀಗಾಗಿ ಆಕೆ ಇನ್ನೊಬ್ಬರಿಗೋಸ್ಕರ ತನ್ನ ಕನಸುಗಳೊಂದಿಗೆ ಎಂದಿಗೂ ರಾಜೀ ಮಾಡಿಕೊಳ್ಳೋದಿಲ್ಲ.