ಸುಮಾರು 300ಕ್ಕೂ ಹೆಚ್ಚು ಹೆರಿಗೆಗಳನ್ನು ಮಾಡಿಸಿದ್ದ ನರ್ಸ್ ಒಬ್ಬರು ತಮ್ಮದೇ ಸ್ವಂತ ಮಗುವಿನ ಜನನದ ವೇಳೆ ಉಂಟಾದ ಆರೋಗ್ಯ ಸಮಸ್ಯೆಯಿಂದಾಗಿ ಸಾವನ್ನಪ್ಪಿದಂತಹ ಆಘಾತಕಾರಿ ಘಟನೆ ನಡೆದಿದೆ.
ಮಗುವಿನ ಜನನ ಹೆಣ್ಣಿನ ಪಾಲಿಗೆ ಪುನರ್ಜನ್ಮವಿದ್ದಂತೆ. ಹೆರಿಗೆಯ ಸಮಯದ ಪ್ರತಿಕ್ಷಣವೂ ಆತಂಕ ಹಾಗೂ ಭಯಾನಕಕಾರಿ ಯಾವ ಕ್ಷಣ ಏನಾಗಬಹುದು ಎಂದು ಹೇಳಲು ಸಾಧ್ಯವಿಲ್ಲ. ಕೆಲವು ಸಂದರ್ಭಗಳಲ್ಲಿ ವೈದ್ಯರು ನಿರೀಕ್ಷೆಯೂ ಮಾಡದಂತಹ ಆರೋಗ್ಯ ಸಮಸ್ಯೆಗಳು ಧುತ್ತನೇ ಎದುರಾಗಬಹುದು. ತಾಯಿ ಅಥವಾ ಮಗು ಇಬ್ಬರಲ್ಲಿ ಒಬ್ಬರನ್ನು ಮಾತ್ರ ಉಳಿಸಬಹುದಾದಂತಹ ಸಂದರ್ಭ ಬರಬಹುದು ಅಥವಾ ಇಬ್ಬರ ಬದುಕು ಕೊನೆಯಾಗುವಂತಹ ಸಾಧ್ಯತೆಗಳಿರುತ್ತವೆ. ಇದೇ ಕಾರಣಕ್ಕೆ ಮತ್ತೊಂದು ಜೀವಕ್ಕೆ ಜೀವ ನೀಡುವ ಪ್ರಕ್ರಿಯೆ ಹೆಣ್ಣಿನ ಪಾಲಿಗೆ ಪುನರ್ಜನ್ಮವೇ ಆಗಿದೆ. ಪತ್ನಿಯೋ ಅಕ್ಕನೋ ತಂಗಿಯೋ ಯಾರಾದರು ಮನೆಯ ಸದಸ್ಯರು ಹೆರಿಗೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದಾದರೆ ಎದೆಯಲ್ಲಿ ಢವ ಢವ ಶುರುವಾಗುತ್ತದೆ. ಆಸ್ಪತ್ರೆಯಲ್ಲಿ ಕೆಲಸ ಮಾಡುವ ನರ್ಸ್‌ಗಳು ವೈದ್ಯರುಗಳಿಗೆ ಇದೆಲ್ಲಾ ನೋಡಿ ನೋಡಿ ಸಾಮಾನ್ಯ ಎಂಬಂತಿರುತ್ತಾರೆ. ಅವರು ಇದರ ಬಗ್ಗೆ ಹೆಚ್ಚು ಭಯಪಡುವುದಿಲ್ಲ, ಆದರೂ ಕೆಲವೊಮ್ಮೆ ಗ್ರಹಚಾರ ಕೆಟ್ಟಾಗ ಏನು ಬೇಕಾದರೂ ಆಗಬಹುದು. ಅದೇ ರೀತಿ ಇಲ್ಲೊಂದು ಕಡೆ 200ಕ್ಕೂ ಹೆಚ್ಚು ಗರ್ಭಿಣಿಯರಿಗೆ ಸಹಜವಾಗಿ ಹೆರಿಗೆ ಆಗುವುದಕ್ಕೆ ಸಹಾಯ ಮಾಡಿದ್ದ ನರ್ಸ್‌ವೊಬ್ಬರು ತಮ್ಮದೇ ಮೊದಲ ಮಗುವಿನ ಹೆರಿಗೆಯ ನಂತರ ಉಂಟಾದ ಅನಾರೋಗ್ಯ ಸ್ಥಿತಿಯಿಂದಾಗಿ ಈಗ ಪ್ರಾಣ ಬಿಟ್ಟಿದ್ದು, ಅವರ ಸಾವಿಗೆ ಅನೇಕರು ಮರುಗುತ್ತಿದ್ದಾರೆ.
ಅವರ ಸಾವಿನ ವಿಚಾರ ಈಗ ಇಂಟರ್‌ನೆಟ್‌ನಲ್ಲಿ ಭಾರಿ ವೈರಲ್ ಆಗುತ್ತಿದ್ದು, ಅನೇಕರು ನರ್ಸ್ ಹಾಗೂ ವೈದ್ಯೆ ಡಾ ಜಾನೆಲ್ ಗ್ರೀನ್ ಸ್ಮಿತ್ ಅವರ ಸಾವಿಗೆ ಶೋಕ ವ್ಯಕ್ತಪಡಿಸಿದ್ದಾರೆ. ಕಳೆದ ಬೇಸಿಗೆಯಲ್ಲಿ ಜಾನೆಲ್ ಗ್ರೀನ್ ಸ್ಮಿತ್ ತಾವು ಗರ್ಭಿಣಿಯಾಗಿರುವುದಾಗಿ ಘೋಷಿಸಿದಾಗ ಅವರ ಕುಟುಂಬದವರು ಬಹಳ ಸಂಭ್ರಮಪಟ್ಟಿದ್ದರು. ಅಮೆರಿಕಾದ ಕೆರೋಲಿನಾದ ಪ್ರಮಾಣೀಕೃತ ನರ್ಸ್-ಮಿಡ್‌ವೈಫ್ ಮತ್ತು ನರ್ಸಿಂಗ್ ಪ್ರಾಕ್ಟೀಸ್‌ನ ವೈದ್ಯರಾಗಿ 300 ಕ್ಕೂ ಹೆಚ್ಚು ಹೆರಿಗೆಗಳನ್ನು ಮಾಡಿಸಿದ್ದ ಜಾನೆಲ್ ಅವರು ಕಪ್ಪು ವರ್ಣೀಯ ಮಹಿಳೆಯರು ಸುರಕ್ಷಿತವಾಗಿ ಹೆರಿಗೆ ಮಾಡಲು ಸಹಾಯ ಮಾಡುವತ್ತ ನಿರ್ದಿಷ್ಟ ಗಮನ ಹರಿಸಿದ್ದರು. 2024ರಲ್ಲಿ ವಿವಾಹವಾಗಿದ್ದ ಅವರು ತಮ್ಮ ಪತಿ ಡೈಕ್ವಾಲ್ ಜೊತೆ ತಮ್ಮದೇ ಮಗುವನ್ನು ಸ್ವಾಗತಿಸಲು ಎದುರು ನೋಡುತ್ತಿದ್ದರು.
ಆದರೆ ಕ್ರಿಸ್‌ಮಸ್ ಮುನ್ನಾದಿನದಂದು, 31 ವರ್ಷದ ಗ್ರೀನ್ ಸ್ಮಿತ್ ಅವರಿಗೆ ತೀವ್ರ ಪ್ರಿಕ್ಲಾಂಪ್ಸಿಯಾ ಸಮಸ್ಯೆ ಕಾಣಿಸಿಕೊಂಡ ನಂತರ ಅವರನ್ನುಆಸ್ಪತ್ರೆಗೆ ದಾಖಲಿಸಲಾಯಿತು, ಇದು ಗರ್ಭಧಾರಣೆಗೆ ಸಂಬಂಧಿಸಿದ ರಕ್ತದೊತ್ತಡದ ಅಸ್ವಸ್ಥತೆಯಾಗಿದ್ದು, ಇದು ತಾಯಿ ಮತ್ತು ಮಗುವಿಗೆ ಮಾರಕವಾಗುತ್ತದೆ. ಇದಾಗಿ ಎರಡು ದಿನಕ್ಕೆ ಮಗು ಅವಧಿ ತುಂಬುವ ಮೊದಲೇ ಬೇಗನೆ ಜನಿಸಿದ್ದು, ಸುರಕ್ಷಿತವಾಗಿತ್ತು. ಆದರೆ ನಂತರ ತಾಯಿಯ ಪರಿಸ್ಥಿತಿ ಬಿಗಡಾಯಿಸಿದ್ದು, ಮಗು ಜನಿಸಿದ ಒಂದೇ ವಾರದಲ್ಲಿ ಜಾನೆಲ್ ಗ್ರೀನ್ ಸ್ಮಿತ್ ಮೃತಪಟ್ಟಿದ್ದಾರೆ.
ಇದನ್ನೂ ಓದಿ: ಉದ್ಘಾಟನೆಗೂ ಮೊದಲೇ ಕುಸಿದು ಬಿತ್ತು 21 ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ನೀರಿನ ಟ್ಯಾಂಕ್: ಕಳಪೆ ಕಾಮಗಾರಿ ಆರೋಪ
ಗ್ರೀನ್ ಸ್ಮಿತ್ ಸಾವಿಗೆ ನಿಖರವಾದ ಕಾರಣ ಏನೆಂದು ತಿಳಿದಿಲ್ಲ, ಆದರೆ ಆಂಗ್ಲ ಮಾಧ್ಯಮ ಸಿಎನ್ಎನ್ ವರದಿಯ ಪ್ರಕಾರ, ಬೇರೆ ಸಮುದಾಯದವರಿಗೆ ಹೋಲಿಸಿದರೆ ಕೃಷ್ಣ ವರ್ಣದ ಮಹಿಳೆಯರು(ಕಪ್ಪು ವರ್ಣಿಯ) ಜನಾಂಗದ ಮಹಿಳೆಯರಿಗೆ ಹೆರಿಗೆ ಸಮಯದಲ್ಲಿ ಸಂಭವಿಸುವ ಆರೋಗ್ಯ ಸಮಸ್ಯೆಯಿಂದ ಸಾಯುವ ಸಾಧ್ಯತೆ ಹೆಚ್ಚು ಎಂದು ವರದಿಯಾಗಿದೆ. ಅಲ್ಲಿನ ರಾಷ್ಟ್ರೀಯ ತಾಯಂದಿರ ಮರಣದ ಇತ್ತೀಚಿನ ದತ್ತಾಂಶದ ಪ್ರಕಾರ 100,000 ಜೀವಂತ ಜನನಗಳಿಗೆ 18.3 ಸಾವುಗಳು ಸಂಭವಿಸಿವೆ. ಆದರೆ ಕಪ್ಪು ಮಹಿಳೆಯರಲ್ಲಿ, ಆ ಸಂಖ್ಯೆ 100,000 ಜೀವಂತ ಜನನಗಳಿಗೆ 47.4 ಸಾವುಗಳನ್ನು ತೋರಿಸಿದೆ. ಈ ಅಂಕಿಅಂಶವು ಜನನದ ನಂತರದ 42 ದಿನಗಳವರೆಗಿನ ಸಾವುಗಳನ್ನು ಒಳಗೊಂಡಿದೆ.
ಇದನ್ನೂ ಓದಿ: ಅರುಣಾಚಲ ಪ್ರದೇಶದ ಬುಡಕಟ್ಟು ಸಮುದಾಯದ ಸಂಪ್ರದಾಯಿಕ ನೃತ್ಯಕ್ಕೆ ಹೆಜ್ಜೆ ಹಾಕಿದ ಕೇಂದ್ರ ಸಚಿವ
ಆದರೆ ಸ್ಮಿತ್ ಅವರ ಸಾವಿಗೆ ಈಗ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಬೇಸರ ವ್ಯಕ್ತವಾಗುತ್ತಿದೆ. ಅನೇಕರು ಆಕೆಯ ಕಾರ್ಯವನ್ನು ಸ್ಮರಿಸಿದ್ದಾರೆ.


