ಗುಜರಾತ್‌ನ ಸೂರತ್‌ನಲ್ಲಿ 33 ಗ್ರಾಮಗಳಿಗೆ ನೀರು ಪೂರೈಸಲು 21 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಬೃಹತ್ ನೀರಿನ ಟ್ಯಾಂಕ್, ಉದ್ಘಾಟನೆಗೂ ಮುನ್ನವೇ ಪರೀಕ್ಷೆಯ ವೇಳೆ ಕುಸಿದುಬಿದ್ದಿದೆ. ಈ ಘಟನೆಯಲ್ಲಿ ಮೂವರು ಗಾಯಗೊಂಡಿದ್ದು, ಕಳಪೆ ಕಾಮಗಾರಿ ಮತ್ತು ಭ್ರಷ್ಟಾಚಾರದ ಆರೋಪಗಳು ಕೇಳಿ ಬಂದಿವೆ.

ಸೂರತ್‌: 21 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ ನೀರಿನ ಟ್ಯಾಂಕೊಂದು ಉದ್ಘಾಟನೆಗೂ ಮೊದಲೇ ಕುಸಿದು ಬಿದ್ದ ಪರಿಣಾಮ ಮೂವರು ಗಾಯಗೊಂಡಂತಹ ಘಟನೆ ಗುಜರಾತ್‌ನ ಸೂರತ್‌ನಲ್ಲಿ ನಡೆದಿದೆ. ಈ ನೀರಿನ ಟ್ಯಾಂಕನ್ನು 33 ಗ್ರಾಮಗಳ ಜನರಿಗೆ ನೀರನ್ನು ಪೂರೈಸುವುದಕ್ಕಾಗಿ 21 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿತ್ತು. ಆದರೆ ಈ ನೀರಿನ ಟ್ಯಾಂಕ್ ಉದ್ಘಾಟನೆಗೂ ಮೊದಲೇ ಕುಸಿದು ಬಿದ್ದಿರುವುದರಿಂದ ಈ ಬೃಹತ್ ಟ್ಯಾಂಕಿಯ ನಿರ್ಮಾಣಕ್ಕೆ ಬಳಸಿದ ವಸ್ತುಗಳ ಗುಣಮಟ್ಟದ ಬಗ್ಗೆ ಸಾರ್ವಜನಿಕ ಮಟ್ಟದಲ್ಲಿ ವ್ಯಾಪಕವಾಗಿ ಚರ್ಚೆಯಾಗುತ್ತಿದ್ದು, ಗೋಲ್ ಮಾಲ್ ನಡೆದಿರುವ ಬಗ್ಗೆ ಸಾರ್ವಜನಿಕರು ಆಕ್ರೋಶ ಹೊರ ಹಾಕಿದ್ದಾರೆ.

ರಾಜ್ಯದ ಗೇಪಗ್ಲಾ ಗ್ರೂಪ್ ನೀರು ಪೂರೈಕೆ ಯೋಜನೆಯಡಿ (Gaypagla Group Water Supply Scheme)ಸೂರತ್‌ನ ಮಂಡ್ವಿ ತಾಲೂಕಿನ ತಡ್ಕೇಶ್ವರ್‌ ಗ್ರಾಮದಲ್ಲಿ 11 ಲಕ್ಷ ಲೀಟರ್ ನೀರಿನ ಸಂಗ್ರಹಣ ಸಾಮರ್ಥ್ಯದೊಂದಿಗೆ 15 ಮೀಟರ್ ಎತ್ತರದ ಬೃಹತ್ ನೀರಿನ ಟ್ಯಾಂಕ್‌ನ ನಿರ್ಮಾಣ ಕಾರ್ಯ ನಡೆದಿತ್ತು. ಆದರೆ ಈ ಟ್ಯಾಂಕ್‌ನ ಪರೀಕ್ಷೆ ಸಮಯದಲ್ಲೇ ಈ ಟ್ಯಾಂಕ್ ಕುಸಿದು ಬಿದ್ದಿದೆ. ಈ ಘಟನೆಯಿಂದ ಗ್ರಾಮದಲ್ಲಿ ಭಯ ನಿರ್ಮಾಣವಾಗಿರುವುದರ ಜೊತೆ ಸ್ಥಳೀಯ ನಿವಾಸಿಗಳು ಈ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅಧಿಕಾರಿಗಳ ಪ್ರಕಾರ ಈ ಟ್ಯಾಂಕ್‌ನ ಸಾಮರ್ಥ್ಯ ಪರೀಕ್ಷೆಗಾಗಿ 9ಲಕ್ಷ ಲೀಟರ್ ನೀರನ್ನು ಟ್ಯಾಂಕ್‌ಗೆ ಪಂಪ್ ಮಾಡಿ ತುಂಬಿಸಲಾಗಿತ್ತು. ಆದರೆ ಇದಾಗಿ ಸ್ವಲ್ಪ ಹೊತ್ತಿನಲ್ಲಿ ಅಂದರೆ ಮಧ್ಯಾಹ್ನದ ಸಮಯಕ್ಕೆ ತರಗೆಲೆಯಂತೆ ಟ್ಯಾಂಕ್‌ನ ಇಡೀ ಸಂಕೀರ್ಣವೇ ಕುಸಿದು ಬಿದ್ದಿದೆ. ಘಟನೆಯಲ್ಲಿ ಮಹಿಳೆ ಸೇರಿದಂತೆ ಮೂವರು ಕಾರ್ಮಿಕರಿಗೆ ಗಾಯಗಳಾಗಿದೆ. ಅದೃಷ್ಟವಶಾತ್ ಈ ವಾಟರ್ ಟ್ಯಾಂಕ್‌ನ್ನು ಉದ್ಘಾಟನೆಗೂ ಮೊದಲೇ ಹಾಗೂ ನಿವಾಸಿಗಳಿಗೆ ನೀರು ಪೂರೈಸುವ ಲೈನ್‌ಗಳಿಗೆ ಸಂಪರ್ಕ ಮಾಡದೇ ಹೋಗಿದ್ದರಿಂದ ದೊಡ್ಡ ಅನಾಹುತ ತಪ್ಪಿದೆ.

33 ಗ್ರಾಮಗಳ ಜನರಿಗೆ ಕುಡಿಯುವ ನೀರನ್ನು ಪೂರೈಕೆ ಮಾಡುವ ಯೋಜನೆ ಇದಾಗಿದ್ದರಿಂದ ಊರಿನ ಜನರು ಈ ಘಟನೆ ಬಗ್ಗೆ ತೀವರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ನೀರಿನ ಟ್ಯಾಂಕಿಗಾಗಿ ಸಾರ್ವಜನಿಕ ನಿಧಿಯಲ್ಲಿ 21 ಕೋಟಿ ರೂ.ಗಳಷ್ಟು ಖರ್ಚು ಮಾಡಲಾಗಿದ್ದರೂ, ಕಳಪೆ ಸಾಮಗ್ರಿಗಳನ್ನು ಬಳಸಲಾಗಿದೆ. ಇದು ದೊಡ್ಡ ಪ್ರಮಾಣದ ಭ್ರಷ್ಟಾಚಾರವನ್ನು ಸೂಚಿಸುತ್ತದೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ.

ಕೆಲ ಮಾಧ್ಯಮಗಳ ತಳಮಟ್ಟದ ಪರಿಶೀಲನೆಯ ವೇಳೆ ಕಳಪೆ ನಿರ್ಮಾಣ ಕಾರ್ಯ ನಡೆದಿರುವುದು ಬೆಳಕಿಗೆ ಬಂದಿದೆ. ಸಿಮೆಂಟ್ ಪದರಗಳು ಅವಶೇಷಗಳಿಂದ ಕಿತ್ತು ಬರುತ್ತಿರುವುದು ಕಂಡುಬಂದಿದ್ದು, ಸಿಮೆಂಟ್ ಮತ್ತು ಕಬ್ಬಿಣದ ಬಳಕೆಯಲ್ಲಿ ಅಕ್ರಮಗಳ ಅನುಮಾನಗಳನ್ನು ಬಲಪಡಿಸಿದೆ. ವೆಚ್ಚವನ್ನು ಕಡಿಮೆ ಮಾಡಲು ಮತ್ತು ಹಣವನ್ನು ದುರುಪಯೋಗಪಡಿಸಿಕೊಳ್ಳಲು ಗುತ್ತಿಗೆದಾರರು ವಸ್ತುಗಳ ಗುಣಮಟ್ಟದಲ್ಲಿ ರಾಜಿ ಮಾಡಿಕೊಂಡಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಇದನ್ನೂ ಓದಿ: ಅರುಣಾಚಲ ಪ್ರದೇಶದ ಬುಡಕಟ್ಟು ಸಮುದಾಯದ ಸಂಪ್ರದಾಯಿಕ ನೃತ್ಯಕ್ಕೆ ಹೆಜ್ಜೆ ಹಾಕಿದ ಕೇಂದ್ರ ಸಚಿವ

ಸೂರತ್ ನೀರು ಸರಬರಾಜು ಇಲಾಖೆಯ ಉಪ ಎಂಜಿನಿಯರ್ ಜಯ್ ಸೋಮಭಾಯಿ ಚೌಧರಿ ಈ ಬಗ್ಗೆ ಮಾತನಾಡಿದ್ದು, ಈ ಯೋಜನೆಯನ್ನು ಜಯಂತಿ ಸ್ವರೂಪ ಎಂಬ ಸಂಸ್ಥೆಗೆ 21 ಕೋಟಿ ರೂ. ವೆಚ್ಚದಲ್ಲಿ ನೀಡಲಾಗಿದೆ. ಟ್ಯಾಂಕ್ ಕುಸಿತ ಸಂಭವಿಸಿದಾಗ ಪ್ರಾಯೋಗಿಕ ಪರೀಕ್ಷೆ ನಡೆಯುತ್ತಿತ್ತು ಮತ್ತು ವಿವರವಾದ ತಾಂತ್ರಿಕ ತನಿಖೆ ನಡೆಸಲಾಗುವುದು ಎಂದು ಅವರು ಭರವಸೆ ನೀಡಿದರು.

ಸಾರ್ವಜನಿಕ ನಿಧಿಯ ದುರುಪಯೋಗದ ಹಿಂದಿರುವ ಭ್ರಷ್ಟ ಅಧಿಕಾರಿಗಳು ಮತ್ತು ಗುತ್ತಿಗೆದಾರರ ವಿರುದ್ಧ ಕ್ರಿಮಿನಲ್ ಕ್ರಮದ ಜೊತೆಗೆ ತನಿಖೆ ನಡೆಸಬೇಕೆಂದು ಸ್ಥಳೀಯ ನಿವಾಸಿಗಳು ಒತ್ತಾಯಿಸಿದ್ದು, ಗ್ರಾಮಗಳಿಗೆ ಸುರಕ್ಷಿತ ಮತ್ತು ವಿಶ್ವಾಸಾರ್ಹ ಕುಡಿಯುವ ನೀರು ದೊರೆಯುವಂತೆ ಮಾಡಲು ಉತ್ತಮ ಗುಣಮಟ್ಟದ ವಸ್ತುಗಳನ್ನು ಬಳಸಬೇಕೆಂದು ಅವರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಪ್ರೀತಿಯ ಶ್ವಾನವನ್ನು ಮರೆತು ನೇಣಿಗೆ ಶರಣಾದ ವ್ಯಕ್ತಿ: ಮಾಲೀಕನ ಶವ ಬಿಟ್ಟು ಕದಲದ ಶ್ವಾನ: ಕಣ್ಣಂಚು ತೇವಗೊಳಿಸುತ್ತಿದೆ ವೀಡಿಯೋ