ಅರ್ಜೈಂಟೈನಾದ ಮಿಸ್ ರೊಸಾರಿಯೋ ಸೌಂದರ್ಯ ಸ್ಪರ್ಧೆಯಲ್ಲಿ, ಹಿಂದಿನ ವರ್ಷದ ವಿಜೇತೆ ಹೊಸ ವಿನ್ನರ್‌ಗೆ ಕಿರೀಟ ತೊಡಿಸುವಾಗ ಅದನ್ನು ಬೀಳಿಸಲು ಯತ್ನಿಸಿ ವಿವಾದ ಸೃಷ್ಟಿಸಿದ್ದಾರೆ. ಈ ಘಟನೆಯ ವೀಡಿಯೋ ವೈರಲ್ ಆಗಿದ್ದು, ಮಾಜಿ ಸುಂದರಿಯ ಅಸೂಯೆಯ ವರ್ತನೆಗೆ ನೆಟ್ಟಿಗರಿಂದ ತೀವ್ರ ಟೀಕೆ ವ್ಯಕ್ತವಾಗಿದೆ.
ಹೆಣ್ಮಕ್ಕಳಿಗೆ ಹೊಟ್ಟೆ ಉರಿ ಜಾಸ್ತಿ ಎಂಬ ಮಾತಿದೆ. ನಮ್ಮ ಬಹುತೇಕ ಸೀರಿಯಲ್‌ಗಳ ಕಥಾವಸ್ತುವೇ ಹೆಣ್ಮಕ್ಕಳ ಹೊಟ್ಟೆಉರಿ. ಆದ್ರೆ ಇಲ್ಲೊಂದು ಕಡೆ ಈ ಅಸೂಯೆಯಿಂದಾಗಿ ಸೊಗಸಾದ ಕಾರ್ಯಕ್ರಮವೊಂದು ವಿವಾದದ ಸ್ವರೂಪ ಪಡೆದುಕೊಂಡ ಘಟನೆ ನಡೆದಿದೆ. ಅಂದಹಾಗೆ ಇದು ನಡೆದಿರುವುದು ಅರ್ಜೈಂಟೈನಾದ ಸೌಂದರ್ಯ ಸ್ಪರ್ಧೆಯಲ್ಲಿ. ಇಲ್ಲಿನ ರೊಸಾರಿಯೋ ನಗರದಲ್ಲಿ ಮಿಸ್ ರೊಸಾರಿಯೋ ಸೌಂದರ್ಯ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಆದರೆ ಮಿಸ್ ರೊಸಾರಿಯೋ 2025ರ ವಿಜಯಶಾಲಿಗೆ ಕಿರೀಟ ತೊಡಿಸುವುದಕ್ಕೆ ಈ ಹಿಂದಿನ ವರ್ಷದ ವಿನ್ನರ್ ವಯೋಲೆಟ್ಟಾ ಅರೆವಾಲೋಸ್ ನಿರಾಕರಿಸಿ ಆ ಕಿರೀಟವನ್ನು ಬೀಳಿಸಲು ಯತ್ನಿಸಿದ ಘಟನೆ ನಡೆದಿದೆ. ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದ್ದು, ಜನ ಸಾಕಷ್ಟು ಕಾಮೆಂಟ್ ಮಾಡ್ತಿದ್ದಾರೆ.
ಮಿಸ್ ರೊಸಾರಿಯೋ ಕಿರೀಟ ಕೆಳಗೆ ಬೀಳಿಸಲು ಯತ್ನಿಸಿದ ಹಳೇ ಬ್ಯೂಟಿ
2024ರ ಮಿಸ್ ರೊಸಾರಿಯೋ ವಿನ್ನರ್ ವಯೋಲೆಟ್ಟಾ ಅರೆವಾಲೋಸ್ ಅವರು ಮಿಸ್ ರೊಸಾರಿಯೋ 2025 ಸೌಂದರ್ಯ ಸ್ಪರ್ಧೆಯ ವಿಜಯಶಾಲಿಯಾದ ಮಾರಿಯಾ ಲುಜಾನ್ ಡೆಟ್ಟೆಜ್ ಆಗಸ್ಟೊಗೆ ಕಿರೀಟ ಮುಡಿಗೇರಿಸಬೇಕಿತ್ತು. ಆದರೆ ವಯೋಲೆಟ್ಟಾ ಆಕೆಗೆ ಕಿರೀಟ ಧಾರಣೆ ಮಾಡದೇ ಆ ಕಿರೀಟವನ್ನು ಕೆಳಗೆ ಬೀಳಿಸಲು ಹಲವು ಭಾರಿ ಯತ್ನಿಸಿದ ಘಟನೆ ನಡೆದಿದೆ. ಈ ಘಟನೆಯ ವೀಡಿಯೋಗಳು ಸಾಮಾಜಿಕ ಜಾಲತಾಣಗಳಾದ ಟಿಕ್‌ಟಾಕ್, ಇನ್ಸ್ಟಾಗ್ರಾಮ್, ಥ್ರೆಡ್ ಮೂಲಕ ಪ್ರಪಂಚದೆಲ್ಲೆಡೆ ವೈರಲ್ ಆಗ್ತಿದ್ದು, ಲಕ್ಷಾಂತರ ಜನ ಈ ವೀಡಿಯೋಗೆ ಕಾಮೆಂಟ್ ಮಾಡ್ತಿದ್ದಾರೆ. ಜೊತೆಗೆ ವಯೋಲೆಟ್ಟಾ ಅರೆವಾಲೋಸ್ ಅವರ ವರ್ತನೆ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ವೀಡಿಯೋ ವೈರಲ್ ಆಗ್ತಿದ್ದಂತೆ ಹಲವು ಕಾಮೆಂಟ್ ಮಾಡಿದ ಜನ
ಆದರೆ ಈ ವೇಳೆ ಮಾರಿಯಾ ಲುಜಾನ್ ಡೆಟ್ಟೆಜ್ ಆಗಸ್ಟೊ ಅವರು ಯಾವುದೇ ಪ್ರತಿರೋಧವೊಡ್ಡದೇ ಗೌರವಯುತವಾಗಿ ನಡೆದುಕೊಂಡು ತಮ್ಮ ಸ್ಥಾನದ ಘನತೆ ಕಾಯ್ದುಕೊಂಡಿದ್ದಾರೆ. ಆದರೆ ಅಸೂಯೆ ತೋರಿದ ಹಳೆಯ ವಿನ್ನರ್ ವಯೋಲೆಟ್ಟಾ ಅರೆವಾಲೋಸ್ ಅವರು ಹಲವು ಬಾರಿ ಕಿರೀಟವನ್ನು ಬೀಳಿಸಲು ಯತ್ನಿಸಿದ್ದನ್ನು ವೀಡಿಯೋದಲ್ಲಿ ಕಾಣಬಹುದು. ಈ ವೀಡಿಯೋ ನೋಡಿದ ಅನೇಕರು ಆಕೆಗೆ ಅಸೂಯೆ, ಹೊಟ್ಟೆಉರಿ ಎಂದು ಕಾಮೆಂಟ್ ಮಾಡಿದ್ದಾರೆ. ಆಕೆ ಉದ್ದೇಶಪೂರ್ವಕವಾಗಿ ಕಿರೀಟವನ್ನು ಬೀಳಿಸುವುದಕ್ಕೆ ಪ್ರಯತ್ನಿಸಿದಳು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ನಿಜವಾದ ರಾಣಿ ಈ ರೀತಿ ಮಾಡುವುದಿಲ್ಲ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಅವಳು ವಿಜಯಶಾಲಿಯ ಒಳ್ಳೆಯ ಕ್ಷಣವನ್ನು ಹಾಳು ಮಾಡುವುದಕ್ಕೆ ಹೋಗಿ ವಿನ್ನರ್ ಮತ್ತಷ್ಟು ಮಿಂಚುವಂತೆ ಮಾಡಿದಳು ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ. ಈಕೆ ಆಕೆಯ ಕಿವಿಯಲ್ಲಿ ಏನು ಗುಸುಗುಟ್ಟಿರಬಹುದು ಎಂದು ಕುತೂಹಲವಾಗುತ್ತಿದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
ಸ್ಥಳೀಯ ಮಾಧ್ಯಮಗಳ ಪ್ರಕಾರ, ಮಾಜಿ ಸುಂದರಿಯ ಈ ಅಸೂಯೆಯ ನಡವಳಿಕೆಯು ಇದಕ್ಕೂ ಹಿಂದೆ ನಡೆದ ಕೆಲವು ಘಟನೆಗಳಿಂದ ಪ್ರೇರಿತವಾಗಿದೆ ಎಂದು ವರದಿಯಾಗಿದೆ. ಹೊಸ ಸುಂದರಿಯ ಸಹೋದರಿಯೊಬ್ಬರು ಸಮಾರಂಭದ ಸಮಯದಲ್ಲಿ ಅವರ ಮೇಲೆ ನೀರಿನ ಬಾಟಲಿಯನ್ನು ಎಸೆದಿದ್ದಾರೆ ಎಂದು ವರದಿಯಾಗಿದೆ. ಆದರೆ ಈ ವಿಚಾರಕ್ಕೆ ಸಂಬಂಧಿಸಿದಂತೆ ಇದುವರೆಗೆ ಈ ಸೌಂದರ್ಯ ಸ್ಪರ್ಧೆ ಏರ್ಪಡಿಸಿದ ಸಂಸ್ಥೆ ಯಾವುದೇ ಅಧಿಕೃತ ಹೇಳಿಕೆಯನ್ನು ನೀಡಿಲ್ಲ, ಕೆಲವರು ಹೊಸ ವಿನ್ನರ್ ಬಗ್ಗೆ ಕರುಣೆ ತೋರಿ ಭಾವನಾತ್ಮಕ ಬೆಂಬಲಕೋರಿದರೆ, ಇತರರು ರಾಣಿಗೆ ತನ್ನ ಸ್ಥಾನದಿಂದ ಯಾವಾಗ ಕೆಳಗಿಳಿಯಬೇಕೆಂದು ತಿಳಿದಿರಬೇಕು ಎಂದು ಹೇಳಿದ್ದಾರೆ. ಅದೇನೇ ಇರಲಿ ಸೌಂದರ್ಯಕ್ಕೆ ತೂಕ ಬರುವುದು ನಿಮ್ಮ ಒಳ್ಳೆಯ ಗುಣಗಳಿಂದಲೇ ವ್ಯಕ್ತಿತ್ವದಿಂದಲೇ ಹೊರತು ಬಣ್ಣದಿಂದಲ್ಲ ಅನ್ನೋದು ಎಲ್ಲರೂ ಅರ್ಥ ಮಾಡಿಕೊಳ್ಳಬೇಕಿದೆ. ಈ ಬಗ್ಗೆ ನಿಮ್ಮ ಅಭಿಪ್ರಾಯವೇನು ಕಾಮೆಂಟ್ ಮಾಡಿ...
ಇದನ್ನೂ ಓದಿ: ಶಿಕ್ಷಕಿ ಹೊಡೆದ ಏಟಿಗೆ ಬಾಲಕಿಯ ತಲೆಬುರುಡೆಯೇ ಜಖಂ: ಸಿಟಿ ಸ್ಕ್ಯಾನ್ ಮಾಡಿಸಿದ ಪೋಷಕರಿಗೆ ಆಘಾತ..!
ಇದನ್ನೂ ಓದಿ: ಅಮೆರಿಕಾದಲ್ಲಿ ಪೊಲೀಸರಿಂದಲೇ ಭಾರತೀಯ ಯುವಕನಿಗೆ ಗುಂಡಿಕ್ಕಿ ಹತ್ಯೆ
ಇದನ್ನೂ ಓದಿ: ನನ್ನ ಪತ್ನಿ ಮಹಿಳೆ ಹೆಣ್ಣು ಹೆಣ್ಣು ಹೆಣ್ಣು.. ಫ್ರಾನ್ಸ್ ಅಧ್ಯಕ್ಷ : ಮ್ಯಾಕ್ರಾನ್‌ಗೆ ಇಂಥಾ ಸ್ಥಿತಿ ಬಂದಿದ್ದೇಕೆ?
ಇದನ್ನೂ ಓದಿ: ಬೋನಿನಲ್ಲಿ ಕರು ಕಟ್ಟಿದ ಅರಣ್ಯ ಇಲಾಖೆ: ಬೋನಿಗೆ ಬಿದ್ದರೂ ಕರುವನ್ನು ತಿನ್ನದೇ ಬಿಟ್ಟ ಚಿರತೆ
ಇದನ್ನೂ ಓದಿ: ಮ್ಯಾಟ್ರಿಮೋನಿಯಲ್ ಸೈಟಲ್ಲಿ ಬಂತು ಲಂಡನ್ ಯುವತಿಯ ಪ್ರಪೋಸಲ್: ಮದ್ವೆಯಾಗುವ ಕನಸಲ್ಲಿದ್ದ ಯುವಕನಿಗೆ ದೊಡ್ಡ ನಾಮ...
