ಹೆಚ್‌ಡಿ ಕೋಟೆಯಲ್ಲಿ ಚಿರತೆ ಹಿಡಿಯಲು ಅರಣ್ಯ ಇಲಾಖೆಯು ಬೋನಿನಲ್ಲಿ ಕರುವನ್ನು ಕಟ್ಟಿತ್ತು. ಆದರೆ, ಬೋನಿಗೆ ಬಿದ್ದ ಚಿರತೆಯು ಕರುವಿಗೆ ಹಾನಿ ಮಾಡದೆ ಅದರ ಪಕ್ಕದಲ್ಲೇ ಕುಳಿತಿತ್ತು, ಈ ಘಟನೆಯು ಪುಣ್ಯಕೋಟಿಯ ಕಥೆಯನ್ನು ನೆನಪಿಸಿದ್ದು, ವಿಡಿಯೋ ವೈರಲ್ ಆಗಿದೆ
ಹೆಚ್‌ಡಿ ಕೋಟೆಯಲ್ಲಿ ನಡೆಯಿತು ಪುಣ್ಯಕೋಟಿಯ ಹೋಲುವ ಕತೆ
ನೀವು ಪುಣ್ಯಕೋಟಿಯ ಕತೆಯನ್ನು ಕೇಳಿರಬಹುದು, ಹುಲಿಯ ಬಾಯಿಗೆ ಸಿಕ್ಕ ಹಸುವೊಂದು ಕರುವಿಗೆ ಹಾಲುಕೊಟ್ಟು ಬರುವೆ ನಂತರ ನನ್ನ ತಿಂದು ಬಿಡು ಎಂದು ಹುಲಿಗೆ ಮಾತು ಕೊಟ್ಟು ಬಂದು ಕೊಟ್ಟ ಮಾತಿನಂತೆಯೇ ಕರುವಿಗೆ ಹಾಲುಣಿಸಿ ಹುಲಿಯ ಬಳಿ ಬರುತ್ತದೆ. ಆದರೆ ಹಸುವಿನ ಪ್ರಾಮಾಣಿಕತೆಗೆ ಮೆಚ್ಚಿದ ಹುಲಿ ಹಸುವನ್ನು ಸಾಯಿಸಿ ತಿನ್ನುವ ಬದಲು ತಾನೇ ಬಾವಿಗೆ ಹಾರಿ ಪ್ರಾಣ ಬಿಡುತ್ತದೆ. ಈ ಕತೆಯನ್ನು ಬಹುತೇಕ ಎಲ್ಲರೂ ಕೇಳಿರಬಹುದು. ಆದರೆ ಇದನ್ನು ಹೋಲುವ ಘಟನೆಯೊಂದು ಮೈಸೂರು ಜಿಲ್ಲೆಯ ಹೆಚ್ ಡಿ ಕೋಟೆಯಲ್ಲಿ ನಡೆದಿದ್ದು, ವೀಡಿಯೋ ವೈರಲ್ ಆಗಿದೆ.
ಬೋನ್‌ನಲ್ಲಿ ಹಸುವಿನ ಕರುವನ್ನು ಕಟ್ಟಿದ ಅರಣ್ಯ ಇಲಾಖೆ
ಹೆಚ್‌ಡಿ ಕೋಟೆಯಲ್ಲಿ ಚಿರತೆ ಹಾವಳಿಯಿಂದ ಬೇಸತ್ತ ಗ್ರಾಮಸ್ಥರು ಅರಣ್ಯ ಇಲಾಖೆಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯವರು ಚಿರತೆಯನ್ನು ಹಿಡಿಯಲು ಅಲ್ಲಿ ಬೋನ್ ಇಟ್ಟಿದ್ದು, ಬೋನಿಗೆ ಪುಟ್ಟ ಕರುವೊಂದನ್ನು ಕಟ್ಟಿದ್ದರು. ಆದರೆ ಬೋನಿಗೆ ಬಿದ್ದ ಚಿರತೆ ಕರುವನ್ನು ತಿನ್ನದೇ ಹಾಗೆಯೇ ಸುಮ್ಮನೆ ಕುಳಿತು ಗುರಾಯಿಸುತ್ತಾ ಗುರುಗುರುಡುತ್ತಿದ್ದ ದೃಶ್ಯ ಈಗ ವೈರಲ್ ಆಗಿದೆ. ವೀಡಿಯೋ ನೋಡಿದ ಅನೇಕರು ಬೋನಿನಲ್ಲಿ ಕರುವನ್ನು ಕಟ್ಟಿದ್ದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕರುವಿನ ಮೇಲೆ ದಾಳಿ ಮಾಡದೇ ಜನರತ್ತ ಗುರಾಯಿಸಿದ ಚಿರತೆ
gandhadagudi_namana ಎಂಬ ಇನ್ಸ್ಟಾಗ್ರಾಮ್ ಪೇಜ್‌ನಿಂದ ಈ ವೀಡಿಯೋ ಪೋಸ್ಟ್ ಆಗಿದ್ದು, H.D.ಕೋಟೆಯ ಬಳಿ ಚಿರತೆಯನ್ನು ಸೆರೆಹಿಡಿಯಲು ಬೋನಿನಲ್ಲಿ ಕರುವನ್ನು ಕಟ್ಟಲಾಗಿತ್ತು. ಆದರೆ ಕರುವಿಗೆ ಒಂದಿಷ್ಟು ಕೂಡ ಹಾನಿ ಮಾಡದ ಚಿರತೆ ಎಂದು ಬರೆದು ಈ ವೀಡಿಯೋವನ್ನು ಪೋಸ್ಟ್ ಮಾಡಲಾಗಿದ್ದು, ವೈರಲ್ ಆಗಿದೆ. ವೀಡಿಯೋದಲ್ಲಿ ಬಿಳಿ ಮತ್ತು ಕಂದು ಮಿಶ್ರಿತ ಬಣ್ಣದ ಪುಟ್ಟ ಕರು ಚಿರತೆಯನ್ನು ನೋಡಿ ಭಯಗೊಂಡಿದ್ದರೆ, ಅತ್ತ ಚಿರತೆ ಅದರ ಪಕ್ಕದಲ್ಲೇ ಕುಳಿತುಕೊಂಡು ಜನರತ್ತ ಆಕ್ರೋಶದಿಂದ ಗುರುಗುಡುತ್ತಾ ನೋಡುವುದನ್ನು ಕಾಣಬಹುದಾಗಿದೆ.
ಚಿರತೆ ಹಿಡಿಯುವುದಕ್ಕೆ ಕರು ಕಟ್ಟಿದ್ದಕ್ಕೆ ಭಾರಿ ಆಕ್ರೋಶ...
ಆದರೆ ವೀಡಿಯೋ ನೋಡಿದ ಅನೇಕರು ಏಕೆ ಕರುವನ್ನು ಕಟ್ಟಿದ್ದೀರಾ ಎಂದು ಪ್ರಶ್ನೆ ಮಾಡಿ ಆಕ್ರೋಶ ಹೊರಹಾಕಿದ್ದಾರೆ. ಚಿರತೆಯನ್ನು ಹಿಡಿಯಲು ಬೋನಿನಲ್ಲಿ ಕರುವನ್ನು ಕಟ್ಟಿದವನನ್ನೇ ಒಳಗೆ ಕಟ್ಟಬೇಕಿತ್ತು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಅದಕ್ಕೂ ಅನ್ನಿಸಿರಬೇಕು ಇದಕ್ಕಿಂತ ಕ್ರೂರ ಮೃಗ ಹೊರಗಡೆ ಇರೋವಾಗ ನಾನ್ಯಾಕೆ ಇಂತಹ ಮುಗ್ಧ ಕರುನಾ ತಿನ್ಬೇಕು ಅಂತಾ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ. ಪುಣ್ಯಕೋಟಿ ಕಥೆ ಕೇಳಿದೀವಿ ಆದರೆ ನೋಡರಲಿಲ್ಲ ಇವತ್ತು ನೋಡಿಬಿಟ್ವಿವಿ, ಆ ಮುಗ್ಧ ಕರುವನ್ನು ಕಟ್ಟಿದ್ದಾನಲ್ಲಾ ಅವನ ಈ ಪಾಪ ಕರ್ಮಕ್ಕೆ ಫಲ ಕಟ್ಟಿಟ್ಟ ಬುತ್ತಿ ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ. ಗಂಡು ಕರು ಅಂತ ಕಟ್ಟಿದ್ದಾರೆ ಅಂತವರಿಗೆ ಒಳ್ಳೆಯದಾಗಲ್ಲ ಎಂದು ಮತ್ತೊಬ್ಬರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕೆಲ ದಿನಗಳ ಹಿಂದೆ ಚಾಮರಾಜನಗರದ ಗುಂಡ್ಲುಪೇಟೆ ತಾಲೂಕಿನ ಬೊಮ್ಮಲಾಪುರದಲ್ಲಿ ಕಳೆದೊಂದು ತಿಂಗಳಿಂನಿಂದ ಹಾವಳಿ ನೀಡುತ್ತಿರು ಹುಲಿಯನ್ನು ಸೆರೆ ಹಿಡಿಯಲು ವಿಫಲರಾದ ಅರಣ್ಯ ಇಲಾಖೆ ಸಿಬ್ಬಂದಿಯನ್ನೇ ಜನ ಬೋನಿಗೆ ಹಾಕಿ ಬಂಧಿಸಿದಂತಹ ಘಟನೆ ನಡೆದಿತ್ತು.ಕಾಡಿನಿಂದ ನಾಡಿಗೆ ಬಂದು ಜನರಲ್ಲಿ ಭೀತಿ ಹುಟ್ಟಿಸಿರುವ ಹುಲಿಯನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿ, ಅರಣ್ಯ ಸಿಬ್ಬಂದಿಯನ್ನೇ ಬೋನಿನಲ್ಲಿ ಕೂಡಿಹಾಕಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದರು. ಘಟನೆಯ ನಂತರ ಈ ಕೃತ್ಯವೆಸಗಿದ ಗ್ರಾಮಸ್ಥರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಇದನ್ನೂ ಓದಿ: ಜೇಸಿಬಿ ಬಳಸಿ ತಯಾರಿಸಿದ್ರು ಉತ್ತರ ಭಾರತದ ಸ್ವಾದಿಷ್ಟ ಆಹಾರ: ವೀಡಿಯೋ ಭಾರಿ ವೈರಲ್
ಇದನ್ನೂ ಓದಿ: ಬ್ಲಿಂಕಿಟ್‌ನಲ್ಲಿ ಆರ್ಡರ್ ಮಾಡಿದ್ರೆ ಲಕ್ಸುರಿ ಥಾರ್ ಗಾಡಿಲಿ ಬಂದ ಡೆಲಿವರಿ ಬಾಯ್ ನೋಡಿ ಯುವತಿ ಶಾಕ್..!
