Online Romance Fraud: ಬೆಂಗಳೂರಿನ ಯುವಕನೊಬ್ಬ ಮ್ಯಾಟ್ರಿಮೋನಿಯಲ್ ಸೈಟ್‌ನಲ್ಲಿ ಪರಿಚಯವಾದ ಲಂಡನ್ ಮೂಲದ ಯುವತಿಯನ್ನು ನಂಬಿ ಮೋಸ ಹೋಗಿದ್ದು, 24 ಲಕ್ಷ ಕಳೆದುಕೊಂಡಿದ್ದಾನೆ. ಮ್ಯಾಟ್ರಿಮೋನಿಯಲ್ ಸೈಟ್‌ನಲ್ಲಿ ಹೆಂಡ್ತಿಯಾಗುವವಳ ಹುಡುಕಲು ಹೋಗಿ ಈ ದುರಂತ ನಡೆದಿದೆ.
ಆನ್‌ಲೈನ್‌ನಲ್ಲಿ ಹುಡುಗಿ ಹುಡುಕಲು ಹೋಗಿ ಬರ್ಬಾದ್ ಆದ ಯುವಕ
ಬೆಂಗಳೂರು: ಆನ್‌ಲೈನ್‌ನಲ್ಲಿ ಹಿಂದೆ ಮುಂದೆ ಗೊತ್ತಿಲ್ಲದೇ ಅಪರಿಚಿತರ ಜೊತೆ ಸಂಬಂಧ ಬೆಳೆಸುವುದಕ್ಕೆ ಹೋಗಿ ಅನೇಕರು ಈಗಾಗಲೇ ಮೋಸ ಹೋಗಿ ಲಕ್ಷಾಂತರ ರೂಪಾಯಿ ಕಳೆದುಕೊಂಡಿದ್ದಾರೆ. ಆದರೂ ಯುವಕರಿಗೆ ಮಾತ್ರ ಬುದ್ಧಿಬರುವುದಿಲ್ಲ, ಆನ್‌ಲೈನ್‌ನಲ್ಲಿ ಬಾಳ ಸಂಗಾತಿಯನ್ನು ಹುಡುಕಲು ಹೋಗಿ ಮಾಯಾಂಗನೆಯ ಬೆನ್ನು ಬಿದ್ದ ಯುವಕನೋರ್ವ ಲಕ್ಷಾಂತರ ರೂಪಾಯಿಯನ್ನು ಕಳೆದುಕೊಂಡಿದ್ದಾನೆ. ಮ್ಯಾಟ್ರಿಮೋನಿಯಲ್ ಸೈಟ್‌ನಲ್ಲಿ ಹೆಂಡ್ತಿಯಾಗುವವಳ ಹುಡುಕಲು ಹೋಗಿ ಈ ದುರಂತ ನಡೆದಿದೆ. ಬೆಂಗಳೂರಿನ ಕಂಟೋನ್ಮೆಂಟ್ ನಿವಾಸಿ 31ರ ಹರೆಯದ ಯುವಕ ಹೀಗೆ ಮೋಸ ಹೋದವ.
ಮ್ಯಾಟ್ರಿಮೋನಿಯಲ್ ಸೈಟಲ್ಲಿ ಬಂತು ಭಾರತೀಯ ಮೂಲದ ಲಂಡನ್ ಯುವತಿಯ ಪ್ರಪೋಸಲ್..!
ಪೊಲೀಸರ ಪ್ರಕಾರ ಅಜಯ್(ಹೆಸರು ಬದಲಾಯಿಸಲಾಗಿದೆ) ಕೆಲವು ತಿಂಗಳ ಹಿಂದೆ ಮದ್ವೆಯಾಗುವ ಆಸೆಯಿಂದ ಬಾಳ ಸಂಗಾತಿಯನ್ನು ಹುಡುಕುವುದಕ್ಕೆ ಆನ್‌ಲೈನ್ ಮ್ಯಾಟ್ರಿಮೋನಿಯಲ್ ಸೈಟ್‌ನಲ್ಲಿ ನೋಂದಣಿ ಮಾಡಿಕೊಂಡಿದ್ದ. ಜುಲೈನಲ್ಲಿ ಈತನಿಗೆ ತಾರಣಿ ಶ್ರಿನಿವಾಸನ್ ಎಂಬ ಪ್ರೊಫೈಲ್‌ನಿಂದ ವಿವಾಹದ ಪ್ರಪೋಸಲ್ ಬಂದಿದೆ. ಆಕೆ ತಾನು ಲಂಡನ್‌ನಲ್ಲಿ ನೆಲೆಸಿರುವ ಉದ್ಯಮ ವ್ಯವಹಾರಗಳನ್ನು ಹೊಂದಿರುವ ಮಹಿಳೆಯಾಗಿದ್ದು, ತನ್ನ ಮೂಲ ತಮಿಳುನಾಡು ಎಂದು ಹೇಳಿದ್ದಾಳೆ. ಅಲ್ಲದೇ ತನ್ನ ಸಂಬಂಧಿಗಳು ಕುಟುಂಬಸ್ಥರು ತಮಿಳುನಾಡಿನ ಚೆನ್ನೈನಲ್ಲಿ ನೆಲೆಸಿದ್ದು, ಪ್ರಸ್ತುತ ತಾನು ಮದುವೆಯಾಗಲು ಆಸಕ್ತಿ ಹೊಂದಿದ್ದೇನೆ ಎಂದು ಹೇಳಿಕೊಂಡಿದ್ದಾಳೆ.
ಇದಾದ ನಂತರ ಇಬ್ಬರು ವಾಟ್ಸಾಪ್ ಕರೆ ಹಾಗೂ ಮೆಸೇಜ್‌ಗಳ ಮೂಲಕ ನಿರಂತರ ಸಂಪರ್ಕದಲ್ಲಿದ್ದರು, ತಾರಣಿ ಯುಕೆ ಮೂಲದ ಫೋನ್ ನಂಬರನ್ನು ಬಳಸುತ್ತಿದ್ದಳು, ಇದರಲ್ಲಿ ಆಕೆಯ ಹೆಸರು ಶ್ರೀ ದೇವಿ ಬಾಲಾ ಎಂದು ಕಾಣಿಸುತ್ತಿತ್ತು. ಪರಿಚಯವಾಗಿ ಕೆಲ ದಿನಗಳಲ್ಲಿ ಈಕೆ ಅಜಯ್‌ಗೆ ತಾನು ಮದುವೆಯಾಗುವ ನಿಜವಾದ ಉದ್ದೇಶವನ್ನು ಹೊಂದಿದ್ದು, ತಮ್ಮ ಮದುವೆಯ ವಿಚಾರವನ್ನು ಖಚಿತಪಡಿಸಿಕೊಳ್ಳುವುದಕ್ಕಾಗಿ ಶೀಘ್ರದಲ್ಲೇ ಭಾರತಕ್ಕೆ ಬರುವುದಾಗಿ ಹೇಳಿ ಅಜಯ್ ಮನವೊಲಿಸಿದ್ದಾಳೆ.
ಬಿಟ್‌ಕಾಯಿನ್ ಕ್ರಿಫ್ಟೋ ಕರೆನ್ಸಿಯಲ್ಲಿ ಹಣ ಹೂಡಲು ಮನವೊಲಿಕೆ: 24 ಲಕ್ಷ ಹಣ ವರ್ಗಾವಣೆ ಮಾಡಿದ ಯುವಕ
ಒಮ್ಮೆ ಅಜಯ್‌ಗೆ ಆಕೆಯ ಮೇಲೆ ನಂಬಿಕೆ ಬಂದ ಮೇಲೆ ಆಕೆ ತನ್ನ ನಿಜವಾದ ಆಟ ಶುರು ಮಾಡಿದ್ದಾಳೆ. ಆಕೆ ತಮ್ಮ ಆರ್ಥಿಕ ಭವಿಷ್ಯವನ್ನು ಭದ್ರಪಡಿಸಿಕೊಳ್ಳುವುದಕ್ಕಾಗಿ ಕ್ರಿಪ್ಟೋಕರೆನ್ಸಿಯಲ್ಲಿ ಹಣ ಹುಡುವಂತೆ ಸಲಹೆ ನೀಡಿದ್ದಾಳೆ. ಅಲ್ಲದೇ m.bitcoin-on.com ಹಾಗೂ m.bitcoin-av.com. ಎಂಬ ಅನುಮಾನಾಸ್ಪದ ಸೈಟ್‌ಗಳಲ್ಲಿ ಖಾತೆ ತೆರೆದ ಹಣ ಹೂಡಿಕೆ ಮಾಡುವಂತೆ ಆಕೆ ಭರವಸೆ ನೀಡಿದ್ದಾಳೆ. ಆಕೆಯ ಬಣ್ಣದ ಮಾತಿಗೆ ಬೆರಗಾದ ಅಜಯ್ ಆಕೆ ಹೇಳಿದಂತೆ ಮಾಡಿದ್ದಾನೆ. ಹಲವು ಅನುಮಾನಾಸ್ಪದ ಸೈಟ್‌ಗಳಲ್ಲಿ ತನ್ನ ಹೆಸರಿನಲ್ಲಿ ಖಾತೆ ತೆರೆದು ಜುಲೈನಿಂದ ಸೆಪ್ಟೆಂಬರ್ ನಡುವೆ 12 ಬಾರಿ ಆ ಖಾತೆಗಳಲ್ಲಿ ತನ್ನ ಉಳಿತಾಯದ ಹಣವನ್ನೆಲ್ಲಾ ಹೂಡಿಕೆ ಮಾಡಿದ್ದಾನೆ. ಒಟ್ಟು 24 ಲಕ್ಷ ಹಣವನ್ನು ಆತ ಆ ಖಾತೆಗಳಿಗೆ ಟ್ರಾನ್ಸ್‌ಫಾರ್ ಮಾಡಿದ್ದಾನೆ.
ಯುವತಿ ಸಂಪರ್ಕ ಕಡಿತಗೊಳಿಸಿದ ನಂತರವೇ ಮೋಸದ ಖೆಡ್ಡಾಗೆ ಬಿದ್ದಅರಿವಾಯ್ತು..!
ಆರಂಭದಲ್ಲಿ ಈತನಿಗೆ ಖಾತೆಯಲ್ಲಿ ಪ್ರಾಫಿಟ್(ಆದಾಯ) ತೋರಿಸುತ್ತಿತ್ತು. ಆದರೆ ಪ್ರತಿಬಾರಿಯೂ ಈತ ಹಣ ಡ್ರಾ ಮಾಡಲು ಮುಂದಾದಾಗ ಹೆಚ್ಚುವರಿ ಶುಲ್ಕ ಹಾಗೂ ಟ್ಯಾಕ್ಸ್ ಕಟ್ಟುವಂತೆ ಈ ನಕಲಿ ಸೈಟ್ ಬೇಡಿಕೆ ಇಡುತ್ತಿದ್ದವು. ಆದರೆ ಆತ ಮತ್ತಷ್ಟು ಹಣ ಪಾವತಿ ಮಾಡಲು ನಿರಾಕರಿಸಿದಾಗ ಯುವತಿ ಆತನ ಜೊತೆಗಿನ ಎಲ್ಲಾ ಸಂಪರ್ಕಗಳನ್ನು ಕಡಿತಗೊಳಿಸಿದ್ದಾಳೆ. ಯುವತಿಯ ಸಂಪರ್ಕ ಕಡಿತಗೊಂಡ ನಂತರವೇ ಆತನಿಗೆ ತಾನು ದೊಡ್ಡ ಮೋಸದ ಜಾಲಕ್ಕೆ ಬಿದ್ದಿದ್ದೇನೆ ಎಂಬುದರ ಅರಿವಾಗಿದೆ. ನಂತರವೇ ಆತ ಪೂರ್ವ ಕೇಂದ್ರ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾನೆ. ನಂತರ ಪೊಲೀಸರು ಭಾರತೀಯ ನ್ಯಾಯ ಸಂಹಿತೆಯ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 318ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಇದನ್ನೂ ಓದಿ: ಶಿಕ್ಷಕಿ ಹೊಡೆದ ಏಟಿಗೆ ಬಾಲಕಿಯ ತಲೆಬುರುಡೆಯೇ ಜಖಂ: ಸಿಟಿ ಸ್ಕ್ಯಾನ್ ಮಾಡಿಸಿದ ಪೋಷಕರಿಗೆ ಆಘಾತ..!
ಇದನ್ನೂ ಓದಿ: ಅಮೆರಿಕಾದಲ್ಲಿ ಪೊಲೀಸರಿಂದಲೇ ಭಾರತೀಯ ಯುವಕನಿಗೆ ಗುಂಡಿಕ್ಕಿ ಹತ್ಯೆ
ಇದನ್ನೂ ಓದಿ: ನನ್ನ ಪತ್ನಿ ಮಹಿಳೆ ಹೆಣ್ಣು ಹೆಣ್ಣು ಹೆಣ್ಣು.. ಫ್ರಾನ್ಸ್ ಅಧ್ಯಕ್ಷ : ಮ್ಯಾಕ್ರಾನ್‌ಗೆ ಇಂಥಾ ಸ್ಥಿತಿ ಬಂದಿದ್ದೇಕೆ?
ಇದನ್ನೂ ಓದಿ: ಬೋನಿನಲ್ಲಿ ಕರು ಕಟ್ಟಿದ ಅರಣ್ಯ ಇಲಾಖೆ: ಬೋನಿಗೆ ಬಿದ್ದರೂ ಕರುವನ್ನು ತಿನ್ನದೇ ಬಿಟ್ಟ ಚಿರತೆ
