ಭಾವನಾ ಪ್ರೆಗ್ನೆಂಟ್ ಆಗಿರುವ ವಿಷಯ ಎಲ್ಲರ ಗಮನ ಸೆಳೆದಿದೆ. ಅವರ ಧೈರ್ಯ ಮೆಚ್ಚುವಂಥದು. ಇದರ ನಡುವೆ, ಕೃತಕ ಫಲವಂತಿಕೆಗಾಗಿ ಬರುವ ದಂಪತಿಗಳಿಗೆ ಬೇರೆಯವರ ವೀರ್ಯ ಮತ್ತು ಅಂಡಾಣುಗಳನ್ನು ಬಳಸಿ ಮೋಸ ಮಾಡಲಾಗುತ್ತಿರುವುದೂ ಗಮನ ಸೆಳೆದಿದೆ.
ಭಾರತದಲ್ಲಿ ಫರ್ಟಿಲಿಟಿ ಕ್ಲಿನಿಕ್‌ಗಳು ಹೆಚ್ಚುತ್ತಿವೆ. ಗಂಡನಿಲ್ಲದಿದ್ದರೂ ಸರಿ, ಮಗು ಬೇಕು ಎನ್ನುವ ಮಹಿಳೆಯರ ಸಂಖ್ಯೆ ಏರುತ್ತಿದೆ. ಉದಾಹರಣೆಗೆ ಕನ್ನಡದ ನಟಿ ಭಾವನಾ. ತನಗೆ ಮಗು ಬೇಕು, ಮಗುವಿಗೆ ತಂದೆ ಇಲ್ಲದಿದ್ದರೂ ಸರಿ ಮಗುವನ್ನು ಚೆನ್ನಾಗಿ ಬೆಳೆಸುತ್ತೇನೆ ಎನ್ನುವ ಅವರ ದಿಟ್ಟತನ ಮೆಚ್ಚುವಂಥದ್ದೇ. ಈ ನಡುವೆ ಬಾಡಿಗೆ ತಾಯ್ತನ ಮಾಡಿಕೊಡುವವರ ಸಂಖ್ಯೆ ಹೆಚ್ಚುತ್ತಿದೆ. ದಂಪತಿಗಳಲ್ಲಿಯೂ ಮಕ್ಕಳನ್ನು ಪಡೆಯುವ ಸಾಮರ್ಥ್ಯ ಇಲ್ಲದವರ ಸಂಖ್ಯೆ ಏರುತ್ತಿದೆ. ಇಂಥ ಸಂದರ್ಭಗಳಲ್ಲಿ ಹೆಚ್ಚಾಗಿ ದಂಪತಿಗೆ ಹೇಗಾದರೂ ಸರಿ, ಮಗು ಬೇಕು ಎಂಬ ಇರಾದೆ ಇರುತ್ತದೆ. ಈ ಸನ್ನಿವೇಶಗಳನ್ನು ಬಹಳ ಫರ್ಟಿಲಿಟಿ ಕ್ಲಿನಿಕ್‌ಗಳು ದುರ್ಬಳಕೆ ಮಾಡಿಕೊಳ್ಳುತ್ತಿವೆ ಎಂಬ ದೂರುಗಳಿವೆ. ಅದು ಹೇಗೆ ಅನ್ನುತ್ತೀರಾ?
ಸಾಮಾನ್ಯವಾಗಿ ಕೃತಕ ಫಲವಂತಿಕೆ ಕ್ಲಿನಿಕ್‌ಗಳ ಕೆಲಸ ಎಂದರೆ, ದಂಪತಿಗಳ ಫಲವತ್ತತೆಯನ್ನು ಪರೀಕ್ಷಿಸುವುದು. ಯಾರಿಗೆ ಪ್ರಜನನ ಸಾಮರ್ಥ್ಯ ಇಲ್ಲವೋ ಅವರಿಗೆ ನೈಸರ್ಗಿಕವಾಗಿ ಅದು ಸಾಧ್ಯವಾಗುವಂತೆ ಔಷಧಗಳ ಮೂಲಕ ಪ್ರಯತ್ನಿಸಲಾಗುತ್ತದೆ. ಅದು ಸಾಧ್ಯವಾಗದಿದ್ದರೆ, ಪತಿಯ ವೀರ್ಯವನ್ನು ತೆಗೆದುಕೊಂಡು ಅದನ್ನ ಸಂರಕ್ಷಿಸಿ, ಪತ್ನಿಯ ಅಂಡದ ಜೊತೆಗೆ ಲ್ಯಾಬ್‌ನಲ್ಲಿ ಕೂಡಿಸಿ, ಭ್ರೂಣ ಉಂಟಾಗುವಂತೆ ಮಾಡುವುದು. ನಂತರ ಅದನ್ನು ಪತ್ನಿಯ ಗರ್ಭಕ್ಕೆ ಸೇರಿಸುವುದು. ಪತ್ನಿಯ ಗರ್ಭಕ್ಕೆ ಮಗು ಹೆರುವ ಸಾಮರ್ಥ್ಯ ಇಲ್ಲದಿದ್ದರೆ, ಬಾಡಿಗೆ ತಾಯಿಯ ಗರ್ಭದಲ್ಲಿ ಭ್ರೂಣವನ್ನು ಸೇರಿಸಿ ಅದು ನೈಸರ್ಗಿಕವಾಗಿ ಜನಿಸುವಂತೆ ಮಾಡುವುದು. ಇದು ಕಾನೂನುಬದ್ಧ ದಾರಿ.
ಆದರೆ ಭಾರತದಲ್ಲಿ, ಕಾಸು ಮಾಡುವ ದಂಧೆಯಲ್ಲಿ ತೊಡಗಿರುವ ಅನೇಕ ಫರ್ಟಿಲಿಟಿ ಕ್ಲಿನಿಕ್‌ಗಳು ಕಾನೂನುಬಾಹಿರ ದಾರಿ ಹಿಡಿದಿವೆಯಂತೆ. ಅದೇನು ಎಂದರೆ, ಪತಿ- ಪತ್ನಿಗೆ ಮಗುವೇ ಮುಖ್ಯವಾಗಿರುವಾಗ, ಪತಿಯ ವೀರ್ಯದಲ್ಲಿ ಸಾಕಷ್ಟು ಸಾಮರ್ಥ್ಯ ಇಲ್ಲದಿದ್ದರೆ, ಬೇರೊಬ್ಬರ ವೀರ್ಯವನ್ನು ತಂದು ಪತಿಯ ವೀರ್ಯ ಎಂದೇ ನಂಬಿಸಿ ಭ್ರೂಣ ಸೃಷ್ಟಿಸಿಕೊಡಲಾಗುತ್ತದೆ. ಈ ವೀರ್ಯ ತಪಾಸಣೆಗಾಗಿ ಬಂದ ಬೇರೊಬ್ಬ ದಂಪತಿಯ ವೀರ್ಯವೂ ಇರಬಹುದು, ಅಥವಾ ಲ್ಯಾಬ್ ಟೆಕ್ನೀಶಿಯನ್ ವೀರ್ಯವೂ ಇರಬಹುದು! ಹಾಗೆಯೇ ಪತ್ನಿಯ ಅಂಡ ಎಂದೇ ನಂಬಿಸಿ ಬೇರೊಬ್ಬ ಮಹಿಳೆಯ ಅಂಡವನ್ನೂ ಬಳಸಿ ಭ್ರೂಣ ಸೃಷ್ಟಿಸಿಕೊಡಲಾಗುತ್ತದೆ. ಇದು ಫರ್ಟಿಲಿಟಿ ಕ್ಲಿನಿಕ್‌ಗಳು ಹಣ ಮಾಡುವುದಕ್ಕೆಂದೇ ಮಾಡುತ್ತಿರುವ ದಂಧೆ. ವಾಸ್ತವವಾಗಿ ಬೇರ್ಯಾರದೋ ವೀರ್ಯ ಅಥವಾ ಅಂಡದಿಂದ ಮಗು ಪಡೆಯಬೇಕಿದ್ದರೆ, ಕಾನೂನುಬದ್ಧ ವೀರ್ಯ- ಅಂಡ ಬ್ಯಾಂಕ್‌ಗಳಲ್ಲಿ ಅವನ್ನು ಪಡೆಯಬೇಕು. ಇದಕ್ಕೆ ಸಾಕಷ್ಟು ಹಣ ಖರ್ಚಾಗುತ್ತದೆ. ಇದಕ್ಕಿರುವ ಕಾನೂನು ಪ್ರಕ್ರಿಯೆಯೂ ಬಹಳ. ಹೀಗಾಗಿಯೇ ಕ್ಲಿನಿಕ್‌ಗಳು ಸುಲಭದ ದಾರಿಯನ್ನು ಕಂಡುಕೊಂಡಿರುವುದು. ದಂಪತಿಗಳಿಗೆ ವೀರ್ಯ- ಅಂಡ ಯಾರದು ಎಂದು ಹೇಳದಿದ್ದರಾಯಿತು!
ಇಂಥ ಮಕ್ಕಳು ನಿಜಕ್ಕೂ ಯಾರು ಮಕ್ಕಳು? ದಂಪತಿಯೇನೋ ಅದು ತಮ್ಮ ಮಗುವೆಂದೇ ಭಾವಿಸಿ ಪ್ರೀತಿಯಿಂದ ಸಾಕುತ್ತಾರೆ. ಕ್ಲಿನಿಕ್‌ಗಳು ಮಾಡಿದ ಮೋಸ ಅವರ ಅರಿವಿಗೆ ಬರದಿದ್ದರೆ ತೊಂದರೆಯಿಲ್ಲ. ಆದರೆ ಕೆಲವೊಮ್ಮೆ, ಬಳಸಿದ ವೀರ್ಯ ಅಥವಾ ಅಂಡವು ಜೆನೆಟಿಕಲೀ ಅಥವಾ ವಂಶವಾಹಿಯಾಗಿ ಯಾವುದಾದರೂ ಸಮಸ್ಯೆಗಳನ್ನು ಹೊಂದಿದ್ದರೆ (ಉದಾಹರಣೆಗೆ- ಸ್ಕಿಜೋಫ್ರೇನಿಯಾ ಇತ್ಯಾದಿ ಮಾನಸಿಕ ಸಮಸ್ಯೆ), ಆಗ ಅನ್ಯಾಯವಾಗಿ ತಮ್ಮ ವಂಶದ್ದಲ್ಲದ ಕಾಯಿಲೆಯ ಗುಣಾಣುವನ್ನು ಮಗು ಹೊಂದುವ ಸಾಧ್ಯತೆಯಿದೆ. ಇದು ಭವಿಷ್ಯದಲ್ಲಿ ಕೆಟ್ಟದು.
ವಾಣಿಜ್ಯ ಬಾಡಿಗೆ ತಾಯ್ತನವನ್ನು ತಡೆಗಟ್ಟಲು ಕೇಂದ್ರ ಸರಕಾರ ಇತ್ತೀಚೆಗೆ ಎರಡು ಕಾನೂನುಳನ್ನು ತಂದಿದೆ. ಒಂದು, ಸಂತಾನೋತ್ಪಾದನೆ ತಂತ್ರಜ್ಞಾನ ನಿಯಂತ್ರಣ ಸಹಕಾರ ಕಾಯಿದೆ- ೨೦೨೧ ಹಾಗೂ ಸರೊಗಸಿ ಕಾಯಿದೆ- ೨೦೨೧. ಇವುಗಳ ಪ್ರಕಾರ ಫರ್ಟಿಲಿಟಿ ಕ್ಲಿನಿಕ್‌ಗಳ ದುರ್ಬಳಕೆ, ವಾಣಿಜ್ಯ ಉದ್ದೇಶದ ಬಾಡಿಗೆ ತಾಯ್ತನ, ಭ್ರೂಣಲಿಂಗ ಪತ್ತೆ ಇತ್ಯಾದಿಗಳನ್ನು ನಿಷೇಧಿಸಲಾಗಿದೆ. ಕಾಯಿದೆಗಳೇನೋ ಇವೆ. ಆದರೆ ಸರಕಾರ ಚಾಪೆ ಕೆಳಗೆ ತೂರಿದರೆ, ಈ ದಂಧೆಯಲ್ಲಿ ಇರುವವರು ರಂಗೋಲಿ ಕೆಳಗೆ ತೂರುತ್ತಾರೆ. ಹೀಗಾಗಿಯೇ ಮೇಲೆ ಹೇಳಿದಂಥ ದಂಧೆಗಳು ನಡೆಯುತ್ತಿವೆ.
ತೂಕ ಇಳಿಕೆಗೆ ಬೇರಿಯಾಟ್ರಿಕ್ ಶಸ್ತ್ರಚಿಕಿತ್ಸೆ ಪಡೆದ ಉದ್ಯಮಿ ಪತ್ನಿ ದುರಂತ ಸಾವು !
ತುಂಬಾ ಮಂದಿ, ವೀರ್ಯವೇನೋ ನಲ್ಲಿಯ ನೀರಿನಂತೆ ಸುಲಭವಾಗಿ ಲಭ್ಯವಾಗುತ್ತದೆ ಎಂದುಕೊಂಡಿದ್ದಾರೆ! ಆದರೆ ಗುಣಮಟ್ಟದ ವೀರ್ಯ ಯಾವತ್ತೂ ಸಿಗುವುದು ಕಷ್ಟವೇ. ತುಂಬ ಎಳೆಯರೂ ಅಲ್ಲ, ತುಂಬ ವಯಸ್ಸಾದವರೂ ಅಲ್ಲದವರ ವೀರ್ಯ ದಾನ ಪಡೆಯಬೇಕು. ಅದರಲ್ಲಿ ಫಲವತ್ತಿಕೆ ಗುಣಮಟ್ಟ ಇರಬೇಕು. ಆ ದಾನಿಗೆ ರಕ್ತದ ಕಾಯಿಲೆಗಳಾಗಲೀ, ಮನೋದೈಹಿಕ ಕಾಯಿಲೆಗಳ ಫ್ಯಾಮಿಲಿ ಹಿಸ್ಟರಿಯಾಗಲೀ ಇರಬಾರದು. ಇಂತಿದ್ದರೆ ಮಾತ್ರ ವೀರ್ಯ ದಾನ ಪಡೆಯಲಾಗುತ್ತದೆ. ಅಂಡ ಸಿಗುವುದು ಇನ್ನಷ್ಟು ಕಷ್ಟ. ಇವುಗಳನ್ನು ಸಂರಕ್ಷಿಸಿಡುವುದೂ ಕಷ್ಟವೇ. ಹೀಗಾಗಿ ವೀರ್ಯದಾನ ಎಂಬುದು ಪಡ್ಡೆ ಹುಡುಗರ ಕಲ್ಪನೆಯಲ್ಲಿ ಇರುವ ಕಚಗುಳಿ ಇಡುವ ಕಲ್ಪನೆಗೆ ಪೂರಕವಾಗಿಲ್ಲ!
ಮುಟ್ಟಿನ ಮೊದಲ ದಿನ ತಲೆಸ್ನಾನ ಮಾಡಲೇಬೇಡಿ! ತಜ್ಞರು ಹೇಳೋದೇನು? ವೈಜ್ಞಾನಿಕ ಕಾರಣವೇನು?
