ನಟಿ ಭಾವನಾ ಅವರ ಐವಿಎಫ್ ಮೂಲಕ ತಾಯ್ತನದ ನಿರ್ಧಾರಕ್ಕೆ ರಾಗಿಣಿ ದ್ವಿವೇದಿ ಬೆಂಬಲ ವ್ಯಕ್ತಪಡಿಸಿದ್ದಾರೆ. ಮಹಿಳೆಯರ ಮೇಲಿನ ಅನಗತ್ಯ ಟ್ರೋಲ್‌ಗಳನ್ನು ಖಂಡಿಸಿ, ಮಹಿಳೆಯರಿಗೆ ತಮ್ಮ ಬದುಕಿನ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಹಕ್ಕಿದೆ ಎಂದು ಪ್ರತಿಪಾದಿಸಿದ್ದಾರೆ.

'ಪ್ರತಿಯೊಂದು ಹೆಣ್ಣಿಗೂ ಯಾವಾಗ ಹೆರಬೇಕು, ಯಾವ ಬಟ್ಟೆ ಹಾಕಿಕೊಳ್ಳಬೇಕು, ತನ್ನ ಬದುಕು ಹೇಗಿರಬೇಕು ಅನ್ನೋದನ್ನು ನಿರ್ಧರಿಸುವ ಅಧಿಕಾರ ಇದೆ. ಇದನ್ನು ಪ್ರಶ್ನಿಸುವ ಹಕ್ಕು ಯಾರಿಗೂ ಇಲ್ಲ. ದಯಮಾಡಿ ಟ್ರೋಲ್‌ ಮಾಡೋದನ್ನು ನಿಲ್ಲಿಸಿ'.

- ಹೀಗೆ ಹೇಳಿದ್ದು ನಟಿ ರಾಗಿಣಿ ದ್ವಿವೇದಿ.

ಈ ಮೂಲಕ ರಾಗಿಣಿ ಐವಿಎಫ್‌ ಮೂಲಕ ಮಗುವನ್ನು ಪಡೆಯುತ್ತಿರುವ ಭಾವನಾ ಅವರ ಬೆಂಬಲಕ್ಕೆ ನಿಂತಿದ್ದಾರೆ.

ಈ ಕುರಿತು ಮಾತನಾಡಿರುವ ಅವರು, ‘ತಾಯ್ತನ ಅನ್ನುವುದು ಮಧುರ ಅನುಭವ. ಆಕೆ ಹೇಗೆ ತಾಯಿ ಆಗುತ್ತಾಳೆ ಅನ್ನುವುದು ಮುಖ್ಯ ಅಲ್ಲ. ಅದು ಆಕೆಯ ಆಯ್ಕೆ. ಭಾವನಾ ಅವರು ಉತ್ತಮ ಅಭಿನೇತ್ರಿ. ಆಕೆ ಇದೀಗ ತಾಯಿಯಾಗುತ್ತಿರುವುದು ನನಗಂತೂ ಬಹಳ ಖುಷಿ ಕೊಟ್ಟಿದೆ. ಏಕೆಂದರೆ ಅವರ ಬದುಕಿನಲ್ಲಿ ಒಂದು ಸೊಗಸಾದ ಅಧ್ಯಾಯ ಆರಂಭವಾಗುತ್ತಿದೆ. ಇದಕ್ಕೆ ಅವರನ್ನು ಅಭಿನಂದಿಸೋಣ.

ಈ ವಿಚಾರಕ್ಕೆ ಅವರನ್ನು ಜಡ್ಜ್‌ ಮಾಡೋದು ಬೇಡ. ಹೆಣ್ಣಿನ ಮೇಲೆ ಅನಾವಶ್ಯಕ ಅಧಿಕಾರ ಚಲಾಯಿಸುವುದು, ಆಕೆಯ ಯಾವುದೋ ನಿರ್ಧಾರವನ್ನೇ ಇಟ್ಟುಕೊಂಡು ಅವಳನ್ನು ಹೀಗೆ ಅಂತ ಜಡ್ಜ್‌ ಮಾಡುವುದು ಇದೆಲ್ಲ ಯಾರಿಗೂ ಒಳ್ಳೆಯದಲ್ಲ. ತಾನು ಯಾವಾಗ ತಾಯಿ ಆಗಬೇಕು ಅನ್ನುವುದು ಅವರಿಗೆ ತಿಳಿದಿದೆ. ಆಕೆ ಯಾವಾಗ ಹೆರಬೇಕು, ಯಾವ ಬಟ್ಟೆ ಹಾಕಿಕೊಳ್ಳಬೇಕು ಅನ್ನೋದನ್ನೆಲ್ಲ ಅವಳೇ ನಿರ್ಧರಿಸುತ್ತಾಳೆ. ಅದನ್ನು ಮೂರನೆಯವರು ಪಾಠ ಮಾಡುವ ಅಗತ್ಯ ಇಲ್ಲ’ ಎಂದೂ ರಾಗಿಣಿ ಹೇಳಿದ್ದಾರೆ.