ಮೀರತ್‌ನಲ್ಲಿ ಬೇರಿಯಾಟ್ರಿಕ್ ಶಸ್ತ್ರಚಿಕಿತ್ಸೆ ವೇಳೆ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ. ಕುಟುಂಬಸ್ಥರು ವೈದ್ಯರ ನಿರ್ಲಕ್ಷ್ಯ ಎಂದು ಆರೋಪಿಸಿದರೆ, ವೈದ್ಯರು ಅನಾರೋಗ್ಯವೇ ಕಾರಣ ಎಂದಿದ್ದಾರೆ. ತನಿಖೆ ನಡೆಯುತ್ತಿದೆ.
ಉತ್ತರ ಪ್ರದೇಶದ ಮೀರತ್‌ನ ಖಾಸಗಿ ಆಸ್ಪತ್ರೆಯಲ್ಲಿ ಬೇರಿಯಾಟ್ರಿಕ್ ಶಸ್ತ್ರಚಿಕಿತ್ಸೆಗೆ ಒಳಗಾದ 55 ವರ್ಷದ ಮಹಿಳೆಯೊಬ್ಬರು ಸಾವನ್ನಪ್ಪಿದ ಘಟನೆ ನಡೆದಿದೆ. ಮೃತ ಮಹಿಳೆಯ ಕುಟುಂಬಸ್ಥರು ವೈದ್ಯರ ನಿರ್ಲಕ್ಷ್ಯವನ್ನೇ ಈ ಘಟನೆಗೆ ಕಾರಣವೆಂದು ಆರೋಪಿಸಿದ್ದು, ವೈದ್ಯರು ಇದನ್ನು ಅಲ್ಲಗಳೆದು ತೀವ್ರ ಅನಾರೋಗ್ಯದ ಕಾರಣ ಹೀಗಾಗಿದೆ ಎಂದು ವಿವರಣೆಯಲ್ಲಿ ತಿಳಿಸಿದ್ದಾರೆ.
ಉದ್ಯಮಿ ಬ್ರಜ್‌ಮೋಹನ್ ಗುಪ್ತಾ ಎಂಬವರ ಪತ್ನಿ ಮತ್ತು ಸದರ್ ಬಜಾರ್ ನಿವಾಸಿ ರಜನಿ ಗುಪ್ತಾ ತೂಕ ಇಳಿಕೆಯ ಶಸ್ತ್ರಚಿಕಿತ್ಸೆಗಾಗಿ ಜುಲೈ 11 ರಂದು ಘರ್ ರಸ್ತೆಯಲ್ಲಿರುವ ನುತಿಮಾ ಆಸ್ಪತ್ರೆಗೆ ದಾಖಲಾಗಿದ್ದರು. 123 ಕೆಜಿ ತೂಕವಿದ್ದ ತಾಯಿ ರಜನಿ ಗುಪ್ತಾ ಜೊತೆಗೆ 120 ಕೆಜಿ ತೂಕವಿದ್ದ ಮಗಳು ಶಿವಾನಿ ಕೂಡ ಶಸ್ತ್ರಚಿಕಿತ್ಸೆಗೆ ಒಳಪಟ್ಟಿದ್ದರು. ಮಗಳ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ ಆದರೆ ತಾಯಿಗೆ ಶಸ್ತ್ರಚಿಕಿತ್ಸೆಯ ನಂತರ ಸೋಂಕು ತಗುಲಿ ಮೃತಪಟ್ಟಿದ್ದಾರೆ.
ಮಗ ಶುಭಂ ಗುಪ್ತಾ ತಾಯಿ ಮತ್ತು ಸಹೋದರಿ ಶಸ್ತ್ರಚಿಕಿತ್ಸೆಗೆ ಒಳಪಟ್ಟಿದ್ದನ್ನು ದೃಢಪಡಿಸಿದ್ದು, ವೈದ್ಯರು 24 ಗಂಟೆಗಳಲ್ಲಿ 30 ಕೆಜಿ ತೂಕ ಇಳಿಸುವುದಾಗಿ ಭರವಸೆ ನೀಡಿದ್ದರು. ಶಸ್ತ್ರಚಿಕಿತ್ಸೆಯ ಮರುದಿನ ತಾಯಿಗೆ ತೀವ್ರವಾಗಿ ಹೊಟ್ಟೆನೋವು ಬರಲು ಆರಂಭವಾಯ್ತು ಎಂದು ಹೇಳಿಕೆ ನೀಡಿದ್ದಾರೆ. ಆದರೆ ವೈದ್ಯರು ಅದನ್ನು ತಳ್ಳಿಹಾಕಿದರು ಎನ್ನಲಾಗಿದೆ.
ಜುಲೈ 13 ರಂದು, ಎಕ್ಸ್-ರೇ ಪರೀಕ್ಷೆಯಲ್ಲಿ ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಹೊಟ್ಟೆಯಲ್ಲಿ ಸೋರಿಕೆ ಕಂಡುಬಂದಿದ್ದು, ಸೋಂಕು ಉಂಟಾಗಿದೆ. ಸರಿಯಾದ ಚಿಕಿತ್ಸೆ ಸಿಗದ ಕಾರಣ ಮಂಗಳವಾರ ಅವರು ಮೃತಪಟ್ಟರು ಎಂದು ಕುಟುಂಬ ಆರೋಪಿಸಿದೆ. ವೈದ್ಯರು ಮತ್ತು ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ರಜನಿಯವರ ಪತಿ ವೈದ್ಯಕೀಯ ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದು. ಈವರೆಗೆ ಇನ್ನೂ ಯಾವುದೇ ಎಫ್‌ಐಆರ್ ದಾಖಲಾಗಿಲ್ಲ ಎನ್ನಲಾಗಿದೆ.
ರಜನಿಯವರ ಪತಿ ನೀಡಿದ ದೂರನ್ನು ಮುಖ್ಯ ವೈದ್ಯಾಧಿಕಾರಿಗೆ ರವಾನಿಸಲಾಗಿದೆ, ಮತ್ತು ಮುಂದಿನ ಕ್ರಮವು ತನಿಖಾ ವರದಿಯನ್ನು ಅವಲಂಬಿಸಿರುತ್ತದೆ ಎಂದು ಎಸ್‌ಎಚ್‌ಒ ಶೈಲೇಶ್ ಕುಮಾರ್ ಮತ್ತು ದೂರು ಇನ್ನೂ ಬಂದಿಲ್ಲ ಮತ್ತು ಅದು ಬಂದ ನಂತರ ಕ್ರಮ ಕೈಗೊಳ್ಳುವುದಾಗಿ ಸಿಎಂಒ ಡಾ. ಅಶೋಕ್ ಕುಮಾರ್ ಕಟಾರಿಯಾ ಪಿಟಿಐಗೆ ನೀಡಿದ ಮಾಹಿತಿಯಲ್ಲಿ ತಿಳಿಸಿದ್ದಾರೆ.
ಆರೋಪಗಳ ಬಗ್ಗೆ ಸ್ಪಷ್ಟನೆ ನೀಡಲು ಡಾ. ರಿಷಿ ಸಿಂಘಾಲ್ ನಿರಾಕರಿಸಿದ್ದಾರೆ.ರಜನಿ ಮತ್ತು ಅವರ ಮಗಳು ಡಿಸೆಂಬರ್ 15, 2024 ರಂದು ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು, ಅದರಲ್ಲಿ ಅವರು ಚಿಕಿತ್ಸೆ ಪಡೆದ 150 ಕ್ಕೂ ಹೆಚ್ಚು ರೋಗಿಗಳು ಭಾಗವಹಿಸಿದ್ದರು. ಫಲಿತಾಂಶಗಳಿಂದ ಪ್ರಭಾವಿತರಾದ ಅವರು ಜುಲೈ 8 ರಂದು ಅವರನ್ನು ಸಂಪರ್ಕಿಸಿ, ಕನ್ವರ್ ಯಾತ್ರೆಯಿಂದಾಗಿ ಅವರ ಕುಟುಂಬದ ವ್ಯವಹಾರಗಳು ಸ್ಥಗಿತಗೊಂಡಿದ್ದಾಗ ಶಸ್ತ್ರಚಿಕಿತ್ಸೆಗೆ ಒಳಗಾಗಲು ವೈದ್ಯರನ್ನು ಭೇಟಿ ಮಾಡಿದ್ದರು ಎಂದು ವೈದ್ಯರು ಹೇಳಿದ್ದಾರೆ.
ರಜನಿಗೆ ಮಧುಮೇಹ, ಅಧಿಕ ರಕ್ತದೊತ್ತಡ, ಥೈರಾಯ್ಡ್ ಸಮಸ್ಯೆಗಳು, ಕೊಬ್ಬಿನ ಪಿತ್ತಜನಕಾಂಗ, ಸ್ಲೀಪ್ ಅಪ್ನಿಯಾ, ಅಧಿಕ ಕೊಲೆಸ್ಟ್ರಾಲ್ ಮತ್ತು ಹೃದಯದ ತೊಂದರೆಗಳು ಸೇರಿದಂತೆ ಹಲವು ಮೊದಲೇ ಕಾಯಿಲೆಗಳು ಇತ್ತು ಎಂದು ವೈದ್ಯರು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಜುಲೈ 11 ರಂದು ರಜನಿ ಯಶಸ್ವಿ ಶಸ್ತ್ರಚಿಕಿತ್ಸೆಗೆ ಒಳಗಾದರು, ನಂತರ ಶಿವಾನಿ ಅವರ ಶಸ್ತ್ರಚಿಕಿತ್ಸೆಯನ್ನು ಜುಲೈ 12 ಕ್ಕೆ ಮಾಡಲು ವಿನಂತಿ ಮಾಡಿಕೊಂಡರು. ಜುಲೈ 13 ರ ಬೆಳಿಗ್ಗೆ ತನಕ ಇಬ್ಬರೂ ಸ್ಥಿರವಾಗಿದ್ದರು. ಆದಾಗ್ಯೂ, ಆ ಸಂಜೆ ರಜನಿ ಅವರು ಆರೋಗ್ಯ ಕ್ಷೀಣಿಸಿತು. ವಿಶ್ವಜೀತ್ ಬೆಂಬಿ, ವಿಶಾಲ್ ಸಕ್ಸೇನಾ, ಅವನೀತ್ ರಾಣಾ, ಮಿತುಲ್ ಜೈನ್, ಹರಿರಾಜ್ ತೋಮರ್ ಮತ್ತು ಸಂದೀಪ್ ಗಾರ್ಗ್ ಸೇರಿದಂತೆ ವೈದ್ಯರ ತಂಡ ತಕ್ಷಣ ಚಿಕಿತ್ಸೆಗೆ ಮುಂದಾಯ್ತು ಆದರೆ ಹೃದಯಾಘಾತದಿಂದ ಮೃತಪಟ್ಟರು ಎಂದು ವೈದ್ಯರು ಹೇಳಿದ್ದಾರೆ,
ಜನರು ಬೇರಿಯಾಟ್ರಿಕ್ ಶಸ್ತ್ರಚಿಕಿತ್ಸೆಯನ್ನು ತಕ್ಷಣ ತೂಕ ಇಳಿಸಿಕೊಳ್ಳುವ ಮಾಯಾಜಾಲದಂತೆ ಭಾವಿಸುತ್ತಾರೆ. ಆದರೆ ಶಸ್ತ್ರಚಿಕಿತ್ಸೆಗೂ ಮೊದಲು ದೇಹದ ಸ್ಥಿತಿಯನ್ನು ಪರಿಗಣಿಸಬೇಕು. ಸರಿಯಾದ ಸೂಚನೆಗಳನ್ನು ಅನುಸರಿಸಿದರೆ ಈ ವಿಧಾನವು ಸುರಕ್ಷಿತವಾಗಿದೆ ಎಂದು ಡಾ. ಆಶಿಷ್ ಗೌತಮ್ (ಮ್ಯಾಕ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ದೆಹಲಿ) ಅವರು ಹೇಳಿಕೆ ನೀಡಿದ್ದಾರೆ.
ಯಾರು ಬೇರಿಯಾಟ್ರಿಕ್ ಶಸ್ತ್ರಚಿಕಿತ್ಸೆಗೆ ಅರ್ಹರು?
ಬೊಜ್ಜು ತಗ್ಗಿಸಲು ಆಹಾರ, ವ್ಯಾಯಾಮ, ಜೀವನಶೈಲಿಯ ಬದಲಾವಣೆಗಳ ಮೂಲಕ ಪ್ರಯತ್ನಿಸಿದ್ದರೂ ಫಲಿತಾಂಶ ಕಂಡಿಲ್ಲದವರು. BMI (ಬಾಡಿ ಮಾಸ್ ಇಂಡೆಕ್ಸ್) 32 ಕ್ಕಿಂತ ಹೆಚ್ಚು ಮತ್ತು ಮಧುಮೇಹ, ಹೃದಯದ ಬಡಿತ ಸಮಸ್ಯೆ, ಉಸಿರಾಟದ ತೊಂದರೆ ಅಥವಾ ಅಸ್ಥಿಸಂಧಿವಾತ ಇರುವವರು. BMI 35 ಕ್ಕಿಂತ ಅಧಿಕವಾಗಿದ್ದು, ತೀವ್ರ ಬೊಜ್ಜಿನಿಂದ ಬಳಲುವವರು.
ಯಾರು ಈ ಶಸ್ತ್ರಚಿಕಿತ್ಸೆಗೆ ಅರ್ಹರಾಗಿಲ್ಲ?
ಮದ್ಯಪಾನ ಅಥವಾ ಮಾದಕ ವಸ್ತುಗಳ ಅತಿಯಾದ ಬಳಕೆ. ಚಿಕಿತ್ಸೆ ಇಲ್ಲದ ತೀವ್ರ ಖಿನ್ನತೆಗೆ ಒಳಗಾದವರು. ಗರ್ಭಧಾರಣೆ – ಭ್ರೂಣಕ್ಕೆ ಅಪಾಯ ಇರುವವರು. ಮುಂದುವರಿದ ಹೃದಯ ವೈಫಲ್ಯ ಅಥವಾ ತೀವ್ರ ರಕ್ತನಾಳದ ಕಾಯಿಲೆ ಇರುವವರು. ಕೊನೆಯ ಹಂತದ ಶ್ವಾಸಕೋಶದ ಕಾಯಿಲೆ ಇರುವವರು. ಕ್ರಿಯ ಕ್ಯಾನ್ಸರ್ ಚಿಕಿತ್ಸೆ ಪಡೆಯುತ್ತಿರುವವರು.
ಶಸ್ತ್ರಚಿಕಿತ್ಸೆಗೆ ಮುನ್ನ ಬೇಕಾದ ತಪಾಸಣೆಗಳು
- ಪೂರ್ಣ ರಕ್ತ ಪರೀಕ್ಷೆಗಳು: ಹಿಮೋಗ್ರಾಮ್, ಲಿವರ್ ಫಂಕ್ಷನ್ ಟೆಸ್ಟ್, ಕಿಡ್ನಿ ಫಂಕ್ಷನ್ ಟೆಸ್ಟ್.
- ಮೇಲ್ಭಾಗದ ಜಠರ ಗರ್ಬುಲಿಯ ಎಂಡೋಸ್ಕೋಪಿ – ಹೊಟ್ಟೆಯೊಳಗಿನ ಸಮಸ್ಯೆಗಳ ಪತ್ತೆಗಾಗಿ.
- ಅರಿವಳಿಕೆ ಮುನ್ನ ಪರಿಶೀಲನೆ – ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಸುರಕ್ಷತೆ ದೃಢಪಡಿಸಲು.
- ಕೋಗುಲೋಪತಿ (ರಕ್ತದ ಗಟ್ಟುಗಟ್ಟುವಿಕೆಗೆ ಸಂಬಂಧಿಸಿದ ಸಮಸ್ಯೆ) ಇದ್ದರೆ, ಅದನ್ನು ಶಸ್ತ್ರಚಿಕಿತ್ಸೆಗೆ ಮೊದಲು ನಿರ್ವಹಿಸಬೇಕು.
- ನಿಯಂತ್ರಣದಲ್ಲಿಲ್ಲದ ಹೈಪೋಥೈರಾಯ್ಡಿಸಮ್ ಇದ್ದರೆ ಮುಂಚಿತ ಚಿಕಿತ್ಸೆಗೆ ಒಳಪಡಬೇಕು.
- ಶಸ್ತ್ರಚಿಕಿತ್ಸೆಗೆ ಮುನ್ನವಿರುವ ಸೂಚನೆಗಳು
- ಕೊಬ್ಬಿಲ್ಲದ ಆಹಾರ ಸೇವನೆ – ಬೊಜ್ಜು ಕಡಿಮೆ ಮಾಡಲು.
- ಉಸಿರಾಟದ ತೊಂದರೆ ಇದ್ದರೆ CPAP ಬಳಕೆ – ಶ್ವಾಸಕೋಶದ ಕಾರ್ಯ ಸುಧಾರಣೆಗೆ.
ಶಸ್ತ್ರಚಿಕಿತ್ಸೆಯ ನಂತರದ ಅವಧಿ
ಬೇರಿಯಾಟ್ರಿಕ್ ಶಸ್ತ್ರಚಿಕಿತ್ಸೆ ಆರೋಗ್ಯಕರ ಜೀವನಕ್ಕೆ ಉತ್ತಮ ಆರಂಭವನ್ನಿತ್ತರೂ, ಶಸ್ತ್ರಚಿಕಿತ್ಸೆಯ ನಂತರದ ಹಂತಗಳಲ್ಲಿ ನಿಯಮಿತ ಪಾಲನೆ ಅಗತ್ಯ. ಶಸ್ತ್ರಚಿಕಿತ್ಸೆಯ ನಂತರ ಸುಮಾರು ನಾಲ್ಕು ತಿಂಗಳಲ್ಲಿ ರೋಗಿಯು ಪುನಃ ವೈದ್ಯರ ಫಾಲೋ-ಅಪ್‌ಗೆ ಹಾಜರಾಗಬೇಕು. ಈ ಸಮಯದಲ್ಲಿ ಶರೀರದ ಸ್ಥಿತಿ, ಚೇತರಿಕೆ ಪ್ರಕ್ರಿಯೆ ಹಾಗೂ ನವೀಕರಿತ ಆಹಾರ ಮಾರ್ಗಸೂಚಿಗಳ ಬಗ್ಗೆ ವೈದ್ಯರಿಂದ ಸಲಹೆ ಪಡೆಯುವುದು ಅಗತ್ಯ.
