ಮುಟ್ಟು ಆದ ತಕ್ಷಣ ತಲೆಸ್ನಾನ ಮಾಡುವ ಹಲವು ಮಹಿಳೆಯರು ಇದ್ದಾರೆ. ಶುಚಿಗಾಗಿ, ಸಂಪ್ರದಾಯಕ್ಕಾಗಿ, ಮನೆಯವರ ಕಿರಿಕಿರಿಗಾಗಿ ಹೀಗೆ ಕಾರಣ ಹಲವು ಇದ್ದರೂ ಮೊದಲ ದಿನ ತಲೆಸ್ನಾನ ಜೀವಕ್ಕೆ ಭಾರಿ ಅಪಾಯ ತಂದೊಡ್ಡಬಲ್ಲದು. ಇಲ್ಲಿದೆ ನೋಡಿ ಅದರ ಮಾಹಿತಿ...
ಮುಟ್ಟಿನ ಸಮಯದಲ್ಲಿ ಆರಂಭದ ದಿನ ಮತ್ತು ನಾಲ್ಕನೆಯ ದಿನ ತಲೆಸ್ನಾನ ಮಾಡುವ ಹೆಚ್ಚಿನ ಮಹಿಳೆಯರು ಇದ್ದಾರೆ. ಇದು ಸಂಪ್ರದಾಯವೆನ್ನುವ ಕಾರಣಕ್ಕೆ ಕೆಲವರು ಮಾಡುತ್ತಿದ್ದರೂ, ಆ ಸಂದರ್ಭದಲ್ಲಿ ಆಗುವ ಕಿರಿಕಿರಿ ಮತ್ತು ದೇಹದಲ್ಲಿ ಏನೋ ಹಿಂಸೆ ಎನ್ನಿಸುವ ಕಾರಣದಿಂದ ತಲೆಸ್ನಾನ ಮಾಡಿದರೆ ಉಲ್ಲಾಸ ಕಾಣಬಹುದು ಎನ್ನುವ ಕಾರಣಕ್ಕೂ ಹಲವರು ಮಾಡುವುದು ಇದೆ. ಆದರೆ ಮಾಸಿಕ ಋತುಸ್ರಾವದ ಮೊದಲ ದಿನ ತಲೆಸ್ನಾನ ಅದರಲ್ಲಿಯೂ ತಣ್ಣೀರಿನ ಸ್ನಾನ ಮಾಡಲೇಬಾರದು ಎನ್ನುವುದು ಯಾಕೆ ಗೊತ್ತಾ? ಹಲವರು ಮುಟ್ಟು ಮಧ್ಯರಾತ್ರಿ ಆದರೂ ಸರಿ, ಇಲ್ಲವೇ ಈಗಷ್ಟೇ ಸ್ನಾನ ಮಾಡಿ ಬಂದ ತಕ್ಷಣ ಮುಟ್ಟಾದರೂ ಸರಿ ಕೂಡಲೇ ತಲೆಸ್ನಾನ ಮಾಡುವುದು ಇದೆ. ಆದರೆ ಇದರಿಂದ ಹಲವಾರು ಅಪಾಯಗಳು ಇವೆ ಎನ್ನುವುದು ಗೊತ್ತೆ?
ಇದಕ್ಕೆ ಕಾರಣ, ಮುಟ್ಟಿನ ಸಮಯದಲ್ಲಿ ಅಪಾನವಾಯು ಹೆಚ್ಚಾಗಿ ಇರುತ್ತದೆ. ಇದರ ಅರ್ಥ ದೇಹದಲ್ಲಿ ಶಕ್ತಿಯುತ ಗಾಳಿ ಅಥವಾ ಶಕ್ತಿಯ ಹರಿವು ಕೆಳಮುಖವಾಗಿ ಹರಿಯುತ್ತಿರುತ್ತದೆ. ಇದರಿಂದಾಗಿ ದೇಹದಲ್ಲಿನ ಬೇಡದ ರಕ್ತ, ಅನಗತ್ಯವಾಗಿರುವ ನೈರ್ಮಲ್ಯ ಕೆಳಮುಖವಾಗಿ ಹರಿಯುತ್ತಲಿರುತ್ತದೆ. ಅದು ಹರಿದು ನಮ್ಮ ದೇಹದಿಂದ ಹೊರಕ್ಕೆ ಹೋಗುತ್ತದೆ. ದೇಹ ನಿರ್ಮಲವಾಗುತ್ತದೆ. ನೈಸರ್ಗಿಕವಾಗಿ ದೇಹವು ಶುಚಿಯಾಗುತ್ತಲಿರುತ್ತದೆ. ಮುಟ್ಟಿನ ಸಮಯದಲ್ಲಿ ದೇಹವು ತುಂಬಾ ಸೂಕ್ಷ್ಮವಾಗಿರುತ್ತದೆ. ಆದ್ದರಿಂದ ನೈಸರ್ಗಿಕವಾಗಿ ಹೇಗೆ ದೇಹ ತನಗೆ ಬೇಕೋ ಆ ಪ್ರಕ್ರಿಯೆನ್ನು ಮಾಡುತ್ತಲೇ ಇರುತ್ತದೆ. ಮುಟ್ಟಿನ ಮೂಲಕ ದೇಹದಲ್ಲಿ ಅನಗತ್ಯವಾಗಿ ಇರುವ ರಕ್ತವು ಹೋಗುತ್ತಿರುತ್ತದೆ.
ಆದರೆ, ಅದನ್ನೇ ನೀವು ತಡೆದರೆ? ಹೌದು. ಮೊದಲ ದಿನ ತಲೆಸ್ನಾನ ಅದರಲ್ಲಿಯೂ ತಣ್ಣೀರಿನ ಸ್ನಾನ ಮಾಡಿದರೆ, ಪ್ರಾಣವಾಯು ಹೆಚ್ಚಾಗುತ್ತದೆ. ಅದರಿಂದ ಎನರ್ಜಿ ಮೇಲ್ಮುಖವಾಗಿ ಹೋಗುತ್ತದೆ. ಇದರಿಂದ ನೈಸರ್ಗಿಕ ಕ್ರಿಯೆಗೆ ತೊಂದರೆಯಾಗುತ್ತದೆ. ದೇಹವು ತನ್ನದೇ ಆದ ರೀತಿಯಲ್ಲಿ ಚಲನೆ ಮಾಡುತ್ತಿರುತ್ತದೆ. ಆದರೆ ಅದಕ್ಕೆ ನೀವು ಅಡ್ಡಿಯಾಗುತ್ತೀರಿ. ಇದರಿಂದ ಬ್ಲಡ್ ವೆಸಲ್ಸ್ ಮೇಲೆಯೂ ಸಮಸ್ಯೆ ತಂದೊಡ್ಡುತ್ತದೆ. ಇದರಿಂದ ಮುಟ್ಟಿನ ಸಮಯದಲ್ಲಿ ರಕ್ತದ ಫ್ಲೋ ಸರಿಯಾಗಿ ಆಗುವುದಿಲ್ಲ. ಸುಸ್ತಾಗುವುದು, ಹೊಟ್ಟೆನೋವು, ಮುಟ್ಟಿನಲ್ಲಿ ವಿಳಂಬ ಸೇರಿದಂತೆ ಹಲವು ರೀತಿಯ ಸಮಸ್ಯೆ ಉಂಟಾಗುತ್ತದೆ ಎನ್ನುತ್ತಾರೆ ತಜ್ಞರು. ಅದೇ ಇನ್ನೊಂದೆಡೆ, ತಣ್ಣೀರಿನಿಂದ ಸ್ನಾನ ಮಾಡಿದಾಗ ನೆತ್ತಿಯ ಮೇಲಿನ ಉಷ್ಣ ಕಡಿಮೆ ಆಗುತ್ತದೆ. ಜಠರದ ಮೇಲೆ ಇದು ಗಂಭೀರ ಪರಿಣಾಮ ಬೀರುತ್ತದೆ. ಕೈಕಾಲು ಸೆಳೆತ ಉಂಟಾಗುತ್ತದೆ. ಆದ್ದರಿಂದ ಯಾವುದೇ ಕಾರಣಕ್ಕೂ ಮೊದಲ ದಿನವಂತೂ ತಲೆಸ್ನಾನ ಮಾಡಲೇಬೇಡಿ. ಮೊದಲ ಮೂರು ದಿನ ಕೂಡ ತಣ್ಣೀರಿನ ಸ್ನಾನ ಮಾಡದೇ ಇದ್ದರೆ ಇನ್ನೂ ಒಳಿತು ಎನ್ನುವುದು ಬಹುತೇ ತಜ್ಞರ ಅಭಿಪ್ರಾಯ ಕೂಡ. ಆದರೆ ಅದು ಹಲವರಿಗೆ ಸಾಧ್ಯವಾಗದ ಮಾತು. ಆದ್ದರಿಂದ ಮೊದಲ ದಿನವಂತೂ ಮಾಡಿದರೆ ಅಪಾಯವನ್ನು ತಂದುಕೊಳ್ಳುತ್ತಿದ್ದೀರಿ ಎಂದೇ ಅರ್ಥ. ಅಷ್ಟಕ್ಕೂ ಇದೇನು ವರ್ಷಕ್ಕೊಮ್ಮೆ ಆಗುವ ಪ್ರಕ್ರಿಯೆ ಅಲ್ಲ. ಪ್ರತಿ ತಿಂಗಳೂ ಹೀಗೆಯೇ ಮಾಡಿದರೆ, ಕಾಲ ಕ್ರಮೇಣ ದೇಹದ ಮೇಲೆ ಹೇಗೆಲ್ಲಾ ಸಮಸ್ಯೆ ಉಂಟಾಗಬಹುದು ಎನ್ನುವುದನ್ನು ಪ್ರತಿಯೊಬ್ಬರೂ ಅರ್ಥ ಮಾಡಿಕೊಳ್ಳಬೇಕಿದೆ.
ಒಂದು ವೇಳೆ ಸ್ನಾನ ಮಾಡಲೇಬೇಕಾಗಿವುದು ನಿಮ್ಮ ಮನೆಯ ಸಂಪ್ರದಾಯ, ಅತ್ತೆ ಮನೆಯಲ್ಲಿ ಇದನ್ನೆಲ್ಲಾ ಕೇಳುವುದಿಲ್ಲ... ಹೀಗೆ ಕೆಲವರಿಗೆ ಏನೇನೋ ಸಮಸ್ಯೆಗಳು ಇರುತ್ತವೆ. ಅಂಥವರು ತಣ್ಣೀರಿನಿಂದ ಮಾತ್ರ ಮಾಡಲೇಬೇಡಿ, ಉಗುರು ಬೆಚ್ಚಗಿನ ನೀರಿನಿಂದ ಮಾಡಿ. ತಲೆಸ್ನಾನ ಮಾಡಿದ ತಕ್ಷಣ ನೆತ್ತಿಯನ್ನು ಯಾವುದೇ ಕಾರಣಕ್ಕೂ ಹಸಿಯಾಗಿ ಇಡಬೇಡಿ. ಅದನ್ನು ಒಣಗಿಸಿಕೊಳ್ಳಿ, ಬಳಿಕ ಸಂಪೂರ್ಣ ಕೂದಲನ್ನು ಬೇಗನೇ ಒಣಗಿಸಿಕೊಳ್ಳಿ ಎನ್ನುತ್ತಾರೆ ತಜ್ಞರು.
