ಪದವಿ ಪ್ರಧಾನ ಸಮಾರಂಭದಲ್ಲಿ ವಿದ್ಯಾರ್ಥಿ ತನ್ನ ಮುದ್ದಿನ ಬೆಕ್ಕು ಹೆಗಲಮೇಲೇರಿಸಿಕೊಂಡು ಬಂದಿದ್ದ. ಪ್ರೊಫೆಸರ್ ಸೇರಿದಂತೆ ಎಲ್ಲರು ಅಚ್ಚರಿಗೊಂಡಿದ್ದರು. ಇಡೀ ಪದವಿಯಲ್ಲಿ ವಿದ್ಯಾರ್ಥಿಯ ಜೊತೆಗಾರನಾಗಿದ್ದ ಬೆಕ್ಕು ಇದೀಗ ಭಾರಿ ಜನಪ್ರಿಯವಾಗಿದೆ.
ಪದವಿ ಪ್ರಧಾನ ಸಮಾರಂಭಗಳಲ್ಲಿ ಹಲವು ಬಾರಿ ವಿದ್ಯಾರ್ಥಿಗಳ ವರ್ತನೆಗಳು ವಿವಾದವಾಗಿ ಮಾರ್ಪಟ್ಟಿದೆ. ಆದರೆ ಇಲ್ಲೊಬ್ಬ ವಿದ್ಯಾರ್ಥಿಯ ನಡೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಪದವಿ ವಿದ್ಯಾಭ್ಯಾಸದ ವೇಳೆ ವಿದ್ಯಾರ್ಥಿಯ ರೂಂನಲ್ಲಿ ಬೆಕ್ಕು ಜೊತೆಗಾರನಾಗಿದ್ದ. ವಿದ್ಯಾರ್ಥಿಯ ಇಡೀ ಓದಿನಲ್ಲಿ ಬೆಕ್ಕು ಜೊತೆಯಾಗಿತ್ತು. ಎಲ್ಲೋ ಹೋದರೂ ಬೆಕ್ಕನ್ನು ಕರೆದುಕೊಂಡು ಹೋಗುತ್ತಿದ್ದ. ಇದೀಗ ಪದವಿ ಪ್ರಧಾನ ಸಮಾರಂಭದಲ್ಲಿ ಬೆಕ್ಕನ್ನು ಹಗಲಮೇರಿಸಿಕೊಂಡು ಪ್ರಮಾಣಪತ್ರ ಪಡೆದ ವಿಶೇಷ ಘಟನೆ ನಡೆದಿದೆ. ವಿದ್ಯಾರ್ಥಿಯ ಹೆಗಲಮೇಲಿದ್ದ ಬೆಕ್ಕು ನೋಡಿ ಪ್ರೊಫೆಸರ್ ಅಚ್ಚರಿಗೊಂಡಿದ್ದಾರೆ. ವೇದಿಕೆಯಲ್ಲೇ ಬೆಕ್ಕನ್ನು ಮುದ್ದಾಡಿದ ಘಟನೆ ನಡೆದಿದೆ.
ಏನಿದು ಬೆಕ್ಕಿನ ಕತೆ?
ನವಲ್ ತಂಬುಲ್ಕರ್ ಈ ಸಂಭ್ರಮದ ವಿಡಿಯೋ ಹಂಚಿಕೊಂಡಿದ್ದಾರೆ. ವಿದ್ಯಾರ್ಥಿಯ ಜೊತೆಗಾರ ಜನಪ್ರಿಯ ತಾರೆಯಾಗಿ ಮಿಂಚಿದೆ. ಪದವಿ ಪ್ರಧಾನ ಸಮಾರಂಭದಲ್ಲಿ ವಿದ್ಯಾರ್ಥಿಯ ಹೆಸರು ಕರೆದಾಗ ವೇದಿಕೆ ಮೇಲೆ ಬಂದಿದ್ದಾನೆ. ಆದರೆ ವಿದ್ಯಾರ್ಥಿಯ ಹೆಗಲಮೇಲೆ ಬಿಳಿ ಬೆಕ್ಕು ಕುಳಿತಿತ್ತು. ಮುದ್ದಾದ ಬೆಕ್ಕು ನೋಡಿ ಎಲ್ಲರೂ ಖುಷಿ ಪಟ್ಟಿದ್ದಾರೆ. ಉಪನ್ಯಾಸಕರು ವೇದಿಕೆಯಲ್ಲಿ ಬೆಕ್ಕನ್ನು ಮುದ್ದಾಡಿದ್ದಾರೆ. ವಿಶೇಷ ಅಂದರೆ ಬೆಕ್ಕು ಕೂಡ ಇಡೀ ಸಭಾಂಗಣ ನೋಡಿ, ವೇದಿಕೆಯಲ್ಲಿನ ಗಣ್ಯರನ್ನು ನೋಡಿ ಗಾಬರಿಯಾಗಲಿಲ್ಲ. ಫೋಟೋಗೆ ಫೋಸ್ ನೀಡಿತ್ತು. ಇತ್ತ ವಿದ್ಯಾರ್ಥಿಗಳು ಚಪ್ಪಾಳೆ ಮೂಲಕ ಸಂಭ್ರಮಿಸಿದ್ದಾರೆ.
ಎ ಫಾರ್ ಆರ್ಕಿಟೆಕ್ಟರ್, ಬಿ ಫಾರ್ ಬಿಲ್ಲಾ ಎಂದು ನವಲ್ ಬರೆದುಕೊಂಡಿದ್ದಾರೆ. ತನ್ನ ಶೈಕ್ಷಣಿಕ ಬದುಕಿನಲ್ಲಿ ಬೆಕ್ಕಿನ ಪಾತ್ರವೂ ಪ್ರಮುಖವಾಗಿತ್ತು. ಇನ್ನು ಈ ಮುದ್ದಾದ ಬೆಕ್ಕು ಈತನ ಜೊತೆಗೆ ಎಲ್ಲಾ ಕಡೆ ತಿರುಗಾಡುತ್ತಿತ್ತು. ಪ್ರತಿ ದಿನ ಕೋಣೆಯಲ್ಲಿ ಅಧ್ಯಯನದ ವೇಳೆ, ವಿಶ್ರಾಂತಿ ವೇಳೆ, ಖುಷಿ, ದುಃಖ ಹೀಗೆ ಎಲ್ಲಾ ಸಂದರ್ಭದಲ್ಲೂ ಬೆಕ್ಕು ಜೊತೆಯಾಗಿತ್ತು. ಹೀಗಾಗಿ ಕಾನ್ವೋಕೇಶನ್ ಸಮಾರಂಭದಲ್ಲಿ ಬೆಕ್ಕನ್ನು ಹಿಡಿದೇ ಪ್ರಮಾಣಪತ್ರ ಸ್ವೀಕರಿಸಿದ್ದಾನೆ.
ಕಾನ್ವೋಕೇಶನ್ ಸಮಾರಂಭವನ್ನೇ ಇಷ್ಟೊಂದು ಇಂಟ್ರೆಸ್ಟಿಂಗ್ ಮಾಡಿದ ವಿದ್ಯಾರ್ಥಿಗೆ ಹ್ಯಾಟ್ಸ್ಆಫ್ ಎಂದು ಹಲವರು ಪ್ರತಿಕ್ರಿಯಿಸಿದ್ದಾರೆ. ಬೆಕ್ಕು ಈಗ ವೈರಲ್ ಆಗಿದೆ. ಇದು ಕ್ಯಾಟ್‌ವೋಕೇಶನ್ ಎಂದು ಕರೆದಿದ್ದಾರೆ. ಬೆಕ್ಕೂ ಕೂಡ ಪದವಿ ಪಡೆಯಿತು ಎಂದು ಹಲವರು ಕಮೆಂಟ್ ಮಾಡಿದ್ದಾರೆ. ಹಲವರು ಮುದ್ದಾದ ಬೆಕ್ಕಿನ ಹೆಸರು ಕೇಳಿದ್ದಾರೆ. ಗಂಭೀರವಾಗಿ ನಡೆಯುತ್ತಿದ್ದ ಪದವಿ ಪ್ರಧಾನ ಸಮಾರಂಭ ಈ ಬೆಕ್ಕಿನ ಕಾರಣದಿಂದ ಉತ್ಸಾಹಭರಿತಗೊಂಡಿತು. ವಿದ್ಯಾರ್ಥಿ ಪ್ರಯತ್ನಕ್ಕೆ, ನಡೆಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.


