ಮಂಡ್ಯ ತಾಲೂಕಿನ ಮಾರಸಿಂಗನಹಳ್ಳಿ ಗ್ರಾಮದ ತೋಟವೊಂದರಲ್ಲಿ ರಾಜ್ಯದಲ್ಲೇ ಅಪರೂಪದ 'ಏಷ್ಯನ್ ಟಾಡಿ ಬೆಕ್ಕು' ಪತ್ತೆಯಾಗಿದೆ. ನಿಶಾಚಾರಿ ಪ್ರಾಣಿಯಾದ ಇದು ರೈತ ಸ್ನೇಹಿಯಾಗಿದ್ದು, ಸಣ್ಣಪುಟ್ಟ ಹುಳುಗಳು ಮತ್ತು ಹಣ್ಣುಗಳನ್ನು ತಿಂದು ಬದುಕುತ್ತದೆ.
ಮಂಡ್ಯ (ಜು.26): ರಾಜ್ಯದಲ್ಲಿ ಅಪರೂಪ ಎನ್ನಲಾದ ‘ಏಷ್ಯನ್ ಟಾಡಿ ಬೆಕ್ಕು’ ಮಂಡ್ಯ ತಾಲೂಕಿನಲ್ಲಿ ಪತ್ತೆಯಾಗಿದೆ. ಕಾಡು ಬೆಕ್ಕಿನ ಆಕಾರವನ್ನು ಹೋಲುವ ಈ ಪ್ರಾಣಿಯ ಬಾಲ ಉದ್ದವಾಗಿದ್ದು, ಗಟ್ಟಿಮುಟ್ಟಾದ ದೇಹವನ್ನು ಹೊಂದಿದೆ. ಒರಟಾದ ಶಾಗ್ಗಿ ಕೂದಲಿನಿಂದ ಆವೃತವಾದ ಈ ಬೆಕ್ಕು ಮಂಡ್ಯ ತಾಲೂಕಿನ ಮಾರಸಿಂಗನಹಳ್ಳಿ ಗ್ರಾಮದ ಸಬ್ಬನಹಳ್ಳಿಯ ಶಂಭುಲಿಂಗೇಗೌಡ ಎಂಬುವರ ತೋಟದಲ್ಲಿ ಕಂಡುಬಂದಿದೆ.
ಅಪರೂಪದ ಬೆಕ್ಕು ಪತ್ತೆ ಹಚ್ಚಿದ್ದು ಹೇಗೆ?
ಕಳೆದ ಹಲವಾರು ದಿನಗಳಿಂದಲೂ ಈ ಏಷ್ಯನ್ ಟಾಡಿ ಬೆಕ್ಕು ತೋಟದಲ್ಲಿ ಸಂಚರಿಸುತ್ತಿದ್ದು, ಇದನ್ನು ಸ್ಥಳೀಯರು ನೋಡಿದ್ದಾರೆ. ಆದರೆ, ಇದು ಯಾವ ಪ್ರಾಣಿ ಎಂಬುದರ ಬಗ್ಗೆ ಅವರಿಗೆ ಮಾಹಿತಿ ಇರಲಿಲ್ಲ. ಹಾಗಾಗಿ ಇದರ ಬಳಿಗೆ ಹೋಗಲು ಭಯಪಡುತ್ತಿದ್ದರು. ತೋಟದ ಮಾಲೀಕ ಶಂಭುಲಿಂಗೇಗೌಡರು ಶುಕ್ರವಾರ ಈ ಪ್ರಾಣಿಯ ಸಂಚಾರ ಗಮನಿಸಿ ಮೊಬೈಲ್ ಕ್ಯಾಮೆರಾದಲ್ಲಿ ಫೋಟೊ ಸೆರೆ ಹಿಡಿದಿದ್ದಾರೆ. ಪಶುವೈದ್ಯರೊಬ್ಬರ ಬಳಿ ಈ ಪ್ರಾಣಿಯ ಬಗ್ಗೆ ವಿವರಣೆ ಕೇಳಿದಾಗ, ಆಗ ಅದು ಏಷ್ಯನ್ ಟಾಡಿ ಕ್ಯಾಟ್ ಎಂದು ತಿಳಿದು ಬಂದಿದೆ. ಇತ್ತೀಚಿನ ದಿನಗಳಲ್ಲಿ ಈ ಪ್ರಾಣಿಯ ಸಂತತಿ ಕಡಿಮೆಯಾಗುತ್ತಿದೆ. ಈ ಪ್ರಾಣಿ ಭಾರತ, ನೇಪಾಳ, ಭೂತಾನ್, ಶ್ರೀಲಂಕಾ, ಥೈಲ್ಯಾಂಡ್, ಚೀನಾ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಕಂಡುಬರುತ್ತದೆ ಎಂದು ಪಶುವೈದ್ಯರು ತಿಳಿಸಿದ್ದಾರೆ.
ಈ ನಿಶಾಚಾರಿ ಪ್ರಾಣಿ ರಾಜ್ಯದಲ್ಲಿ ಅಪರೂಪ
ಕೆಲ ವರ್ಷಗಳ ಹಿಂದೆ ಚೆನ್ನೈನ ವಂಡಲೂರಿನ ಅಣ್ಣಾ ಪ್ರಾಣಿ ಶಾಸ್ತ್ರೀಯ ಉದ್ಯಾನದಲ್ಲಿ ಏಷ್ಯನ್ ಟಾಡಿ ಬೆಕ್ಕೊಂದು ೪ ಮರಿಗಳಿಗೆ ಜನ್ಮ ನೀಡಿತ್ತು. ದಕ್ಷಿಣ ಮತ್ತು ಆಗ್ನೇಯ ಏಷ್ಯಾಕ್ಕೆ ಸ್ಥಳೀಯವಾಗಿರುವ ಈ ಉದ್ಯಾನ ರಾತ್ರಿ ಪ್ರಾಣಿಗಳ ಸಂಗ್ರಹ ಭಾಗವಾಗಿದೆ. ಈ ಪ್ರಾಣಿ ರಾತ್ರಿಯ ಹೊತ್ತು ಸಂಚಾರ ಮಾಡುತ್ತದೆ. ಅಂದರೆ, ಕತ್ತಲು ಕವಿದ ವಾತಾವರಣದಲ್ಲಿ ಸಂಚರಿಸುತ್ತದೆ.
ಅಂತಾರಾಷ್ಟ್ರೀಯ ಪ್ರಕೃತಿ ಸಂರಕ್ಷಣಾ ಒಕ್ಕೂಟವು ಈ ಬೆಕ್ಕಿನ ಜಾತಿಯನ್ನು ‘ಕಡಿಮೆ ಕಾಳಜಿ’ ಎಂದು ವರ್ಗೀಕರಿಸಿದೆ, ಏಕೆಂದರೆ ಇದು ಹಲವಾರು ಪ್ರದೇಶಗಳಲ್ಲಿ ಕಂಡುಬರುತ್ತದೆ. ಕೆಲವು ಪ್ರದೇಶಗಳಲ್ಲಿ ಇದನ್ನು ಹತ್ಯೆ ಮಾಡಿ ಮಾಂಸ ತಿನ್ನುವುದು, ಮಾರಾಟ ಮಾಡುವಂತಹ ಕ್ರಮಗಳನ್ನು ಅನುಸರಿಸಲಾಗುತ್ತಿತ್ತು. ಹಾಗಾಗಿ ಇದರ ಸಾಕಾಣಿಕೆ, ಕೊಲ್ಲುವುದನ್ನು ಸ್ಥಳೀಯ ಸರ್ಕಾರಗಳು ನಿಷೇಧಿಸಿವೆ. ಇನ್ನು ಕೆಲವು ಕಡೆಗಳಲ್ಲಿ ಸಾಮಾನ್ಯ ಬೆಕ್ಕಿನ ರೀತಿಯಲ್ಲೇ ಸಾಕಾಣಿಕೆ ಮಾಡಲಾಗುತ್ತಿದೆ. ಆದರೆ, ಈ ಪ್ರಾಣಿ ಕೆಂಪು ಪಟ್ಟಿ ಕಾಳಜಿ ಹೊಂದಿರುವ ಕಾರಣ ಕೊಲ್ಲುವುದನ್ನು ನಿಷೇಧಿಸಲಾಗಿದೆ.
ಸಾಮಾನ್ಯವಾಗಿ ಏಷ್ಯನ್ ಪಾಮ್ ಸಿವೆಟ್ ಎಂದು ಕರೆಯಲಾಗುವ ಈ ಪ್ರಾಣಿ ರೈತನ ಸ್ನೇಹಿತನ ರೀತಿಯಲ್ಲಿರುತ್ತದೆ. ಇದು ಸಣ್ಣ ಪುಟ್ಟ ಹುಳುಗಳು, ಬೀಜಗಳು, ಹಣ್ಣುಗಳನ್ನು ತಿಂದು ಬದುಕುತ್ತದೆ. ಇದು ಯಾರಿಗೂ ತೊಂದರೆ ಮಾಡುವುದಿಲ್ಲ.
-ಶಿವರಾಮು, ಅರಣ್ಯಾಧಿಕಾರಿ, ನಾಗಮಂಗಲ


