ಉತ್ತರ ಪ್ರದೇಶದ ಫತೇಪುರ್‌ನಲ್ಲಿ 5G ನೆಟ್‌ವರ್ಕ್ ಸಮಸ್ಯೆಯಿಂದ ಕೋಪಗೊಂಡ ಗ್ರಾಮಸ್ಥರು, ಜಿಯೋ ನೌಕರನೊಬ್ಬನನ್ನು ಟವರ್ ಕಂಬಕ್ಕೆ ಕಟ್ಟಿಹಾಕಿ ಹಲ್ಲೆ ನಡೆಸಿದ್ದಾರೆ. ಈ ಘಟನೆಯ ವಿಡಿಯೋ ವೈರಲ್ ಆಗಿದ್ದು, ಪೊಲೀಸರು ನೌಕರನನ್ನು ರಕ್ಷಿಸಿ, ಗ್ರಾಮಸ್ಥರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಫತೇಪುರ್ (ಉತ್ತರ ಪ್ರದೇಶ); ಮೊಬೈಲ್‌ನಲ್ಲಿ ನೆಟ್‌ವರ್ಕ್ ಸಿಗುತ್ತಿಲ್ಲ, ಕರೆಗಳು ಸರಿಯಾಗಿ ಸಂಪರ್ಕಗೊಳ್ಳುತ್ತಿಲ್ಲ ಅಥವಾ ಇಂಟರ್ನೆಟ್ ವೇಗ ಕಡಿಮೆಯಾಗಿದೆ ಎಂದು ಕಂಪನಿಯ ಕಸ್ಟಮರ್ ಕೇರ್‌ಗೆ ಕರೆ ಮಾಡಿ ದೂರು ನೀಡುವುದನ್ನು ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ಹೊರಹಾಕುವುದನ್ನು ನಾವು ನೋಡಿದ್ದೇವೆ. ಆದರೆ, 5G ನೆಟ್‌ವರ್ಕ್ ಸಿಗುತ್ತಿಲ್ಲ ಎಂಬ ಸಿಟ್ಟಿಗೆ ಗ್ರಾಮಸ್ಥರೆಲ್ಲರೂ ಸೇರಿ ಟೆಲಿಕಾಂ ಕಂಪನಿಯ ನೌಕರನೊಬ್ಬನನ್ನು ಟವರ್ ಕಂಬಕ್ಕೆ ಕಟ್ಟಿಹಾಕಿ ಹಲ್ಲೆ ನಡೆಸಿದ ವಿಚಿತ್ರ ಮತ್ತು ಆಘಾತಕಾರಿ ಘಟನೆಯೊಂದು ಉತ್ತರ ಪ್ರದೇಶದ ಫತೇಪುರ್ ಜಿಲ್ಲೆಯಲ್ಲಿ ನಡೆದಿದೆ.

5G ನೆಟ್‌ವರ್ಕ್ ಕೈಕೊಟ್ಟಿದ್ದೇ ಸಿಟ್ಟಿಗೆ ಕಾರಣ!

ಉತ್ತರ ಪ್ರದೇಶದ ಫತೇಪುರ್ ಜಿಲ್ಲೆಯ ಗ್ರಾಮವೊಂದರಲ್ಲಿ ರಿಲಯನ್ಸ್ ಜಿಯೋ (Jio) ಕಂಪನಿಯ 5G ಸೇವೆ ಕಳೆದ ಕೆಲವು ದಿನಗಳಿಂದ ತೀವ್ರ ತಾಂತ್ರಿಕ ತೊಂದರೆಗೊಳಗಾಗಿತ್ತು. ಗ್ರಾಮಸ್ಥರು ದಿನನಿತ್ಯದ ಕರೆಗಳಿಗೆ, ಆನ್‌ಲೈನ್ ಪಾವತಿಗಳಿಗೆ ಹಾಗೂ ನೆಟ್‌ವರ್ಕ್ ಆಧಾರಿತ ಕೆಲಸಗಳಿಗೆ ತೀವ್ರ ತೊಂದರೆ ಅನುಭವಿಸುತ್ತಿದ್ದರು. ಹಲವು ಬಾರಿ ಕಂಪನಿಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ.

ತರಾಟೆಗೆ ತೆದುಕೊಂಡ ಯುವ ಸಮೂಹ!

ಇದೇ ಸಂದರ್ಭದಲ್ಲಿ, ಜಿಯೋ ಕಂಪನಿಯ ತಾಂತ್ರಿಕ ಸಿಬ್ಬಂದಿಯೊಬ್ಬರು ಟವರ್‌ನ ರಿಪೇರಿ ಮತ್ತು ಪರಿಶೀಲನೆಗಾಗಿ ಗ್ರಾಮಕ್ಕೆ ಆಗಮಿಸಿದ್ದರು. ಇದನ್ನು ಗಮನಿಸಿದ ಸ್ಥಳೀಯ ಯುವಕರು ಹಾಗೂ ನೆಟ್ಟಿಗರು, ಸಿಬ್ಬಂದಿಯನ್ನು ಸುತ್ತುವರೆದು ನೆಟ್‌ವರ್ಕ್ ಸಮಸ್ಯೆಯ ಕುರಿತು ತೀವ್ರ ತರಾಟೆಗೆ ತೆಗೆದುಕೊಂಡರು. ಮಾತಿಗೆ ಮಾತು ಬೆಳೆದು, ಆಕ್ರೋಶಗೊಂಡ ಗ್ರಾಮಸ್ಥರು ಆ ಸಿಬ್ಬಂದಿಯನ್ನು ಸ್ಥಳದಲ್ಲೇ ಇದ್ದ ಟವರ್ ಕಂಬಕ್ಕೆ ಹಗ್ಗದಿಂದ ಬಿಗಿದು ಕಟ್ಟಿಹಾಕಿದ್ದಾರೆ.

ಕಂಬಕ್ಕೆ ಕಟ್ಟಿಹಾಕಿ ಹಲ್ಲೆ, ವಿಡಿಯೋ ವೈರಲ್!

ನೆಟ್‌ವರ್ಕ್ ಬಾರದ ಕೋಪದಲ್ಲಿದ್ದ ಜನರು ಸಿಬ್ಬಂದಿಗೆ ಮನಬಂದಂತೆ ಥಳಿಸಿದ್ದಾರೆ. "ನಾವು ಪ್ರತಿ ತಿಂಗಳು ಸಾವಿರಾರು ರೂಪಾಯಿ ರೀಚಾರ್ಜ್ ಮಾಡುತ್ತೇವೆ. ಆದರೆ ನಿಮ್ಮ 5G ನೆಟ್‌ವರ್ಕ್ ಮಾತ್ರ ಎಲ್ಲೂ ಸಿಗುವುದಿಲ್ಲ" ಎಂದು ಆಕ್ರೋಶ ಹೊರಹಾಕಿದ್ದಾರೆ. ಈ ಇಡೀ ಘಟನೆಯನ್ನು ಸ್ಥಳೀಯರು ತಮ್ಮ ಮೊಬೈಲ್‌ನಲ್ಲಿ ವಿಡಿಯೋ ಮಾಡಿದ್ದು, ಪ್ರಸ್ತುತ ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ಸಕತ್ ವೈರಲ್ ಆಗಿದೆ. ವಿಡಿಯೋದಲ್ಲಿ ನೌಕರನು ತಾನು ಕೇವಲ ತಾಂತ್ರಿಕ ನೌಕರನೆಂದು, ಸಮಸ್ಯೆ ಬಗೆಹರಿಸಲು ಬಂದಿರುವುದಾಗಿ ಮನವಿ ಮಾಡಿಕೊಳ್ಳುತ್ತಿದ್ದರೂ, ಆಕ್ರೋಶಿತ ಗ್ರಾಮಸ್ಥರು ಆತನ ಮಾತನ್ನು ಕೇಳುವ ಸ್ಥಿತಿಯಲ್ಲಿರಲಿಲ್ಲ.

ಪೊಲೀಸರ ಪ್ರವೇಶ ಮತ್ತು ರಕ್ಷಣೆ!

ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ದೌಡಾಯಿಸಿದ ಸ್ಥಳೀಯ ಪೊಲೀಸರು, ಕಂಬಕ್ಕೆ ಕಟ್ಟಲಾಗಿದ್ದ ಜಿಯೋ ಸಿಬ್ಬಂದಿಯನ್ನು ರಕ್ಷಿಸಿ ತಕ್ಷಣವೇ ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದಾರೆ. ನೌಕರನ ದೂರಿನ ಆಧಾರದ ಮೇಲೆ ಕಾಯ್ದೆಯನ್ನು ಕೈಗೆತ್ತಿಕೊಂಡ ಮತ್ತು ಹಲ್ಲೆ ನಡೆಸಿದ ಗ್ರಾಮಸ್ಥರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕಾನೂನನ್ನು ಕೈಗೆತ್ತಿಕೊಳ್ಳುವುದು ಅಪರಾಧವಾಗಿದ್ದು, ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿದೆ. ಒಂದು ಕಡೆ ನೆಟ್ಟಿಗರು "ನೆಟ್‌ವರ್ಕ್ ತೊಂದರೆಯಿಂದ ಜನರು ಎಷ್ಟರಮಟ್ಟಿಗೆ ಬೇಸತ್ತಿದ್ದಾರೆ ಎಂಬುದಕ್ಕೆ ಇದು ಉದಾಹರಣೆ" ಎಂದು ಕಮೆಂಟ್ ಮಾಡುತ್ತಿದ್ದರೆ, ಇನ್ನೊಂದೆಡೆ "ಸೇವೆಯಲ್ಲಿ ಲೋಪವಿದ್ದರೆ ಕಂಪನಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೇ ಹೊರತು, ಸಣ್ಣ ಸಂಬಳಕ್ಕೆ ಕೆಲಸ ಮಾಡುವ ಕೆಳಹಂತದ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸುವುದು ತೀರಾ ಖಂಡನೀಯ" ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.