Mumbai cyber fraud: ವ್ಯಕ್ತಿಯೊಬ್ಬರು, ಹಳೆಯ 5 ರೂಪಾಯಿಯ ನೋಟಿನ ಬದಲಾಗಿ, ಕೈತುಂಬಾ ಲಕ್ಷ ಲಕ್ಷ ಪಡೆಯುವ ಆಸೆಗೆ ಬಲಿಯಾಗಿ, ಸೈಬರ್ ವಂಚನೆಯಲ್ಲಿ 3.03 ಲಕ್ಷ ರೂಪಾಯಿಗಳನ್ನು ಕಳೆದುಕೊಂಡಿದ್ದಾರೆ. ಇನ್‌ಸ್ಟಾಗ್ರಾಮ್ ರೀಲ್ ನೋಡಿ ಹಣದ ವ್ಯಾಮೋಹಕ್ಕೆ ಒಳಗಾಗಿ ಕೂಡಿಟ್ಟದ್ದನ್ನೆಲ್ಲಾ ವ್ಯಕ್ತಿ ಕಳೆದುಕೊಂಡ ಘಟನೆ ನಡೆದಿದೆ.

₹5ರ ಹಳೆಯ ನೋಟಿಗೆ ₹51 ಲಕ್ಷ!

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುವ ಆಕರ್ಷಕ ರೀಲ್ಸ್ ಮತ್ತು ಭಾರೀ ಲಾಭದ ಆಸೆಯ ನಡುವೆ ಮುಂಬೈನಲ್ಲಿ ಸೈಬರ್ ವಂಚನೆಯ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ವರ್ಲಿ ನಿವಾಸಿಯೊಬ್ಬರಿಗೆ ₹5ರ ಹಳೆಯ ನೋಟುಗಳಿಗೆ ಬದಲಾಗಿ ₹51 ಲಕ್ಷ ಸಿಗಲಿದೆ ಎಂದು ನಂಬಿಸಿ, ವಂಚಕರು ಲಕ್ಷಾಂತರ ರೂಪಾಯಿ ಕಳೆದುಕೊಳ್ಳುವಂತೆ ಮಾಡಿದ್ದಾರೆ. Instagramನಲ್ಲಿ ಕಂಡ ಜಾಹೀರಾತನ್ನು ನೋಡಿ ತನ್ನ ಖಾತೆಯನ್ನು ವ್ಯಕ್ತಿ ಬರಿದು ಮಾಡಿಕೊಂಡಿದ್ದಾರೆ.

Instagram ರೀಲ್ಸ್‌ನಿಂದ ಶುರುವಾಯ್ತು ವಂಚನೆಯ ಆಟ

ಪೊಲೀಸರ ಪ್ರಕಾರ, ಮುಂಬೈ ವ್ಯಕ್ತಿ ಸಾಮಾಜಿಕ ಜಾಲತಾಣ Instagramನಲ್ಲಿ ಒಂದು ರೀಲ್ಸ್ ನೋಡಿದ್ದರು. ಅದರಲ್ಲಿ ಹಳೆಯ ₹5ರ ನೋಟುಗಳಿಗೆ ಬದಲಾಗಿ ದೊಡ್ಡ ಮೊತ್ತದ ಹಣ ಸಿಗಲಿದೆ. ವಿಶೇಷ ಸರಣಿ ಸಂಖ್ಯೆ ಹೊಂದಿರುವ ಅಥವಾ ಹಳೆಯ ನೋಟುಗಳಿಗೆ ಭಾರೀ ಬೆಲೆ ಸಿಗುತ್ತದೆ ಎಂದು ಜಾಹೀರಾತಿನಲ್ಲಿ ಆಮಿಷವೊಡ್ಡಲಾಗಿತ್ತು. ರೀಲ್ಸ್‌ನಿಂದ ಪ್ರಭಾವಿತರಾದ ವ್ಯಕ್ತಿ ಜಾಹೀರಾತಿನಲ್ಲಿ ನೀಡಲಾಗಿದ್ದ ಮೊಬೈಲ್ ಸಂಖ್ಯೆಗೆ WhatsApp ಮೂಲಕ ಸಂಪರ್ಕಿಸಿದ್ದಾರೆ. ಬಳಿಕ ವಂಚಕರು ಅವರ ಬಳಿ ಇದ್ದ ₹5ರ ಹಳೆಯ ನೋಟುಗಳ ಫೋಟೋಗಳನ್ನು ಕಳುಹಿಸುವಂತೆ ಸೂಚಿಸಿದ್ದಾರೆ.

₹5ರ ಐದು ನೋಟುಗಳಿಗೆ ₹51 ಲಕ್ಷದ ಆಮಿಷ!

ಸಂತ್ರಸ್ತರು ತಮ್ಮ ಬಳಿ ಇದ್ದ ₹5ರ ಐದು ಹಳೆಯ ನೋಟುಗಳ ಫೋಟೋಗಳನ್ನು ಕಳುಹಿಸಿದ್ದಾರೆ. ಇದಾದ ಬಳಿಕ, ಈ ನೋಟುಗಳಿಗೆ ಬದಲಾಗಿ ₹51 ಲಕ್ಷ ನೀಡುವುದಾಗಿ ವಂಚಕರು ತಿಳಿಸಿದ್ದಾರೆ. ವಿಶ್ವಾಸ ಮೂಡಿಸುವ ಉದ್ದೇಶದಿಂದ ಆರಂಭದಲ್ಲಿ ಆರೋಪಿಗಳು QR ಕೋಡ್ ಕಳುಹಿಸಿ, ಪ್ರೊಸೆಸಿಂಗ್ ಶುಲ್ಕದ ಹೆಸರಿನಲ್ಲಿ ₹11,000 ಪಾವತಿಸುವಂತೆ ಹೇಳಿದ್ದಾರೆ.

ಬೇರೆ ಬೇರೆ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾವಣೆ

ದೊಡ್ಡ ಮೊತ್ತದ ಹಣ ಸಿಗಲಿದೆ ಎಂಬ ಆಸೆ ತೋರಿಸಿ ವಂಚಕರು ಸಂತ್ರಸ್ತರಿಂದ ಹಲವು ಬಾರಿ ಹಣ ಪಾವತಿಸುವಂತೆ ಮಾಡಿದ್ದಾರೆ. ಜೂನ್ 4ರಿಂದ ಜೂನ್ 12, 2026ರ ಅವಧಿಯಲ್ಲಿ ವಿವಿಧ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾವಣೆ ಮಾಡುವಂತೆ ಸೂಚಿಸಲಾಗಿದೆ. ಈ ಅವಧಿಯಲ್ಲಿ ವ್ಯಕ್ತಿ ಒಟ್ಟು ₹3,03,231 ಹಣ ಪಾವತಿಸಿದ್ದಾರೆ. ಆದರೆ ಪದೇಪದೇ ಹಣ ಪಾವತಿಸಿದರೂ ₹51 ಲಕ್ಷ ಸಿಗದಿದ್ದಾಗ, ತಾವು ವಂಚನೆಗೆ ಒಳಗಾಗಿರುವುದು ಅವರಿಗೆ ತಿಳಿದುಬಂದಿದೆ.

ವರ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ಇದೀಗ ವಂಚನೆಗೆ ಒಳಗಾದ ವ್ಯಕ್ತಿಯ ದೂರಿನ ಆಧಾರದ ಮೇಲೆ ವರ್ಲಿ ಪೊಲೀಸ್ ಠಾಣೆಯಲ್ಲಿ ಅಪರಿಚಿತ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 66(C) ಮತ್ತು 66(D) ಜೊತೆಗೆ ಭಾರತೀಯ ನ್ಯಾಯ ಸಂಹಿತೆ (BNS)ಯ ಸೆಕ್ಷನ್ 318(4) ಮತ್ತು 319(2) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿದೆ. ಬಳಸಲಾಗಿರುವ ಬ್ಯಾಂಕ್ ಖಾತೆಗಳು ಮತ್ತು ಮೊಬೈಲ್ ಸಂಖ್ಯೆಗಳಿಗೆ ಸಂಬಂಧಿಸಿದ ಮಾಹಿತಿಯನ್ನು ತನಿಖಾ ಸಂಸ್ಥೆಗಳು ಸಂಗ್ರಹಿಸುತ್ತಿವೆ.

ಇಂತಹ ಜಾಹೀರಾತುಗಳಿಗೆ ಎಚ್ಚರ!

ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಹಳೆಯ ನೋಟುಗಳು ಮತ್ತು ನಾಣ್ಯಗಳಿಗೆ ಬದಲಾಗಿ ಲಕ್ಷಾಂತರ ರೂಪಾಯಿ ಸಿಗುತ್ತದೆ ಎಂಬ ಜಾಹೀರಾತುಗಳು ಸಾಮಾನ್ಯವಾಗಿ ವಂಚನೆಯಾಗಿರುತ್ತದೆ. ಇಂತಹ ಜಾಹೀರಾತುಗಳ ಮೂಲಕ ಸೈಬರ್ ವಂಚಕರು ಜನರನ್ನು ಹಣದ ಆಸೆಗೆ ಸಿಲುಕಿಸಿ, ನಂತರ ಪ್ರೊಸೆಸಿಂಗ್ ಫೀಸ್, GST, ರಿಜಿಸ್ಟ್ರೇಷನ್ ಶುಲ್ಕ ಅಥವಾ ಇತರ ಕಾರಣಗಳನ್ನು ಮುಂದಿಟ್ಟು ಹಣ ವಸೂಲಿ ಮಾಡುತ್ತಾರೆ. ಆದ್ದರಿಂದ ಇಂತಹ ಭಾರೀ ಲಾಭದ ಆಮಿಷಗಳಿಗೆ ತಕ್ಷಣ ಸ್ಪಂದಿಸದೆ, ಜಾಹೀರಾತಿನ ಸತ್ಯಾಸತ್ಯತೆಯನ್ನು ಪರಿಶೀಲಿಸುವುದು ಮತ್ತು ಅಪರಿಚಿತ ವ್ಯಕ್ತಿಗೆ ಹಣ ವರ್ಗಾವಣೆ ಮಾಡದಿರುವುದು ಮುಖ್ಯ ಎಂದು ಪೊಲೀಸರು ಎಚ್ಚರಿಸಿದ್ದಾರೆ.